ಕಾರ್ಪೊರೇಟ್ ಉದ್ಯೋಗ ಕಳೆದುಕೊಂಡ 29 ವರ್ಷದ ಯುವಕ, ನಿರುದ್ಯೋಗದಿಂದ ಉಂಟಾದ ಮಾನಸಿಕ ಒತ್ತಡವನ್ನು ನಿವಾರಿಸಿಕೊಳ್ಳಲು ಅಚ್ಚರಿಯ ಹಾದಿ ಹಿಡಿದಿದ್ದಾನೆ. ಆರ್ಥಿಕವಾಗಿ ಸದೃಢನಾಗಿದ್ದರೂ, ಕಳೆದುಹೋದ ದಿನಚರಿ ಮತ್ತು ಮಾನಸಿಕ ನೆಮ್ಮದಿಗಾಗಿ ಆತ ಗಂಟೆಗೆ ಸುಮಾರು 1,000 ರೂಪಾಯಿ ಸಂಬಳದ ಪಾತ್ರೆ ತೊಳೆಯುವ ಕೆಲಸವನ್ನು ಆರಿಸಿಕೊಂಡನು.
ಸಾಮಾನ್ಯವಾಗಿ ಕಾರ್ಪೊರೇಟ್ ವಲಯದಲ್ಲಿ ಕೈತುಂಬ ಸಂಬಳ ಪಡೆಯುವ ಉದ್ಯೋಗಿಯೊಬ್ಬರು ಅಕಸ್ಮಾತ್ ಕೆಲಸ ಕಳೆದುಕೊಂಡರೆ ಮತ್ತೊಂದು ಕಾರ್ಪೊರೇಟ್ ಹುದ್ದೆಗಾಗಿ ಕಾಯುವುದು, ತೀವ್ರ ಹುಡುಕಾಟ ನಡೆಸುವುದು ಸಹಜ. ಆದರೆ, ಉದ್ಯೋಗಕ್ಕಾಗಿ 200 ಕ್ಕೂ ಹೆಚ್ಚು ಅರ್ಜಿಗಳನ್ನು ಸಲ್ಲಿಸಿ, 15 ಕ್ಕೂ ಹೆಚ್ಚು ಸಂದರ್ಶನಗಳಲ್ಲಿ ಭಾಗವಹಿಸಿದರೂ ಕೆಲಸ ಸಿಗದಿದ್ದಾಗ 29 ವರ್ಷದ ಯುವಕನೊಬ್ಬ ಕಂಡುಕೊಂಡ ಹಾದಿ ಸಂಪೂರ್ಣ ಭಿನ್ನವಾಗಿದೆ. ನಾಲ್ಕು ತಿಂಗಳ ಸುದೀರ್ಘ ನಿರುದ್ಯೋಗದ ನಂತರ, ಆತ ಗಂಟೆಗೆ ಸುಮಾರು 1,000 ರೂಪಾಯಿ ವೇತನದ ಅರೆಕಾಲಿಕ ಪಾತ್ರೆ ತೊಳೆಯುವ ಕೆಲಸಕ್ಕೆ ಸೇರಿದ್ದಾನೆ.
ವಿಶೇಷವೆಂದರೆ, ಆತ ಈ ನಿರ್ಧಾರವನ್ನು ಹಣಕಾಸಿನ ಮುಗ್ಗಟ್ಟಿನಿಂದಾಗಿ ತೆಗೆದುಕೊಳ್ಳಲಿಲ್ಲ. ಬದಲಿಗೆ, ನಿರುದ್ಯೋಗದಿಂದ ಉಂಟಾಗಿದ್ದ ನಿರಾಸಕ್ತಿ, ಮಾನಸಿಕ ಒತ್ತಡ ಹಾಗೂ ಕಳೆದುಹೋಗಿದ್ದ ದೈನಂದಿನ ದಿನಚರಿಯನ್ನು ಮತ್ತೆ ಮರಳಿ ಪಡೆಯಲು ಈ ಕೆಲಸವನ್ನು ಆಯ್ಕೆ ಮಾಡಿಕೊಂಡಿದ್ದಾರೆ.
ರೆಡ್ಡಿಟ್‌ನಲ್ಲಿ ವೈರಲ್ ಆದ ಯುವಕನ ಅನುಭವ
ಕಳೆದ ಏಪ್ರಿಲ್ ತಿಂಗಳಿನಲ್ಲಿ ಕಾರ್ಪೊರೇಟ್ ಉದ್ಯೋಗದಿಂದ ವಜಾಗೊಂಡಿದ್ದ ಈ ಯುವಕ, ರೆಡ್ಡಿಟ್ ನಲ್ಲಿ "ಕಾರ್ಪೊರೇಟ್‌ನಿಂದ ಗಂಟೆಗೆ $11 ಡಾಲರ್ ಪಾತ್ರೆ ತೊಳೆಯುವ ಕೆಲಸ" ಎಂಬ ಶೀರ್ಷಿಕೆಯಡಿ ತಮ್ಮ ಭಾವನಾತ್ಮಕ ಅನುಭವವನ್ನು ಹಂಚಿಕೊಂಡಿದ್ದಾನೆ. ಅದರ ಸಾರಾಂಶ ಈ ಕೆಳಗಿನಂತಿದೆ.
"ಏಪ್ರಿಲ್‌ನಲ್ಲಿ ನನ್ನನ್ನು ಕೆಲಸದಿಂದ ತೆಗೆದುಹಾಕಲಾಯಿತು. ಕಂಪನಿಯು 9 ತಿಂಗಳ ಉತ್ತಮ ಪ್ಯಾಕೇಜ್ (Severance Package) ನೀಡಿದ್ದರಿಂದ ಮತ್ತು ನವೆಂಬರ್‌ವರೆಗೆ ನಿರುದ್ಯೋಗ ಭತ್ಯೆ ಸಿಗುತ್ತಿರುವುದರಿಂದ ನನಗೆ ಆರ್ಥಿಕವಾಗಿ ಯಾವುದೇ ತೊಂದರೆಯಿರಲಿಲ್ಲ. ಜೊತೆಗೆ ಕಳೆದ 5 ವರ್ಷಗಳಿಂದ ಸಣ್ಣ ಮಟ್ಟದ ಉಳಿತಾಯವೂ ಇತ್ತು. ಆದರೆ, 4 ತಿಂಗಳ ನಿರುದ್ಯೋಗವು ನನ್ನ ಮಾನಸಿಕ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರಿತು. ದಿನವಿಡೀ ಯಾವುದೇ ಕೆಲಸವಿಲ್ಲದೆ ನಿಷ್ಪ್ರಯೋಜಕ ಎಂಬ ಭಾವನೆ ನನ್ನನ್ನು ಕಾಡತೊಡಗಿತು"
"ನಾನು ಹಣಕ್ಕಾಗಿ ಈ ಕೆಲಸ ಮಾಡುತ್ತಿಲ್ಲ. ಕನಿಷ್ಠ ದಿನದಲ್ಲಿ ಕೆಲವು ಗಂಟೆಗಳ ಕಾಲ ಆತಂಕದಿಂದ ಹೊರಬರಲು, ಖುಷಿ ಅನುಭವಿಸಲು ಹಾಗೂ ಜೀವನಕ್ಕೆ ಒಂದು ನಿರ್ದಿಷ್ಟ ಸ್ವರೂಪ ನೀಡಲು ಈ ಕೆಲಸಕ್ಕೆ ಸೇರಿಕೊಂಡೆ. ಒಂದು ವೇಳೆ ನಾನು ಆರ್ಥಿಕವಾಗಿ ಸ್ವತಂತ್ರನಾಗಿ ಬೇಗ ನಿವೃತ್ತಿ ಹೊಂದಿದ್ದರೂ ಸಹ, ನನ್ನ ಸಮಯವನ್ನು ಏನು ಮಾಡಬೇಕೆಂದು ತಿಳಿಯದೆ ಇದೇ ರೀತಿ ಆತಂಕಕ್ಕೊಳಗಾಗುತ್ತಿದ್ದೆನೇನೋ? ಉದ್ಯೋಗದ ಮೂಲಕ ಸಮಯವನ್ನು ತುಂಬಿಕೊಳ್ಳುವ ಈ ನಿರಂತರ ಹತಾಶೆ ನನ್ನನ್ನು ಕಾಡುತ್ತಿತ್ತು"ಎಂದು ಭಾವನಾತ್ಮಕವಾಗಿ ಬರೆದುಕೊಂಡಿದ್ದಾನೆ.
ನೆಟ್ಟಿಗರ ಸಾಂತ್ವನ
ಈ ರೆಡ್ಡಿಟ್ ಪೋಸ್ಟ್ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದ್ದು, ಉದ್ಯೋಗ ಕಳೆದುಕೊಂಡು ಮಾನಸಿಕ ಸವಾಲು ಎದುರಿಸುತ್ತಿರುವ ಹಲವರು ತಮ್ಮ ಅನುಭವಗಳನ್ನು ಹಂಚಿಕೊಳ್ಳುವ ಮೂಲಕ ಯುವಕನ ನಿರ್ಧಾರಕ್ಕೆ ಬೆಂಬಲ ಸೂಚಿಸಿದ್ದಾರೆ.
ಮನೆಯಲ್ಲಿ ಮಗುವಿನ ಆರೈಕೆ ಮಾಡಿದ ಉದ್ಯೋಗಿ:
"ದೀರ್ಘಕಾಲ ಕಾರ್ಪೊರೇಟ್ ವಲಯದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿ ತಕ್ಷಣಕ್ಕೆ ಕೆಲಸ ಕಳೆದುಕೊಂಡಾಗ ಈ ರೀತಿಯ ಸವಾಲು ಎದುರಾಗುವುದು ಸಹಜ. ನಾನು ಕೆಲಸ ಕಳೆದುಕೊಂಡಾಗ ಮನೆಯಲ್ಲಿ ಮಗುವಿನ ಆರೈಕೆಯಲ್ಲಿ ನಿರತನಾದೆ. ಇಲ್ಲದಿದ್ದರೆ ನಾನೂ ಮಾನಸಿಕ ಸ್ಥಿಮಿತ ಕಳೆದುಕೊಳ್ಳುತ್ತಿದ್ದೆ. ಕನಿಷ್ಠ ನೀವು ಒಂದು ಕೆಲಸದ ಕಡೆಗೆ ಗಮನಹರಿಸಿ ದಿನಚರಿಯನ್ನು ಕಾಯ್ದುಕೊಳ್ಳುತ್ತಿದ್ದೀರಲ್ಲ, ಅದು ಶ್ಲಾಘನೀಯ." ಎಂದು ಒಬ್ಬರು ಬರೆದುಕೊಂಡಿದ್ದಾರೆ
ಕಾಯಕವೇ ಕೈಲಾಸ:
"ನಿಮ್ಮ ಬಳಿ 5 ವರ್ಷಗಳ ತುರ್ತು ನಿಧಿ ಇದೆಯೆಂದರೆ ಅದು ದೊಡ್ಡ ಆಸ್ತಿ. ಯಾವುದೇ ಸಣ್ಣ ಕೆಲಸದಲ್ಲೂ ಅದರದ್ದೇ ಆದ ಘನತೆ ಇರುತ್ತದೆ. ಇಂತಹ ಸಣ್ಣ ಅರೆಕಾಲಿಕ ಕೆಲಸಗಳು ಕಾರ್ಪೊರೇಟ್ ಉದ್ಯೋಗದಷ್ಟು ಒತ್ತಡವನ್ನು ತರುವುದಿಲ್ಲ." ಎಂದು ಮತ್ತೊಬ್ಬರು ಬರೆದುಕೊಂಡಿದ್ದಾರೆ.
ನೆಮ್ಮದಿ ಅನುಭವ :
"ಪಾತ್ರೆ ತೊಳೆಯುವ ಕೆಲಸವು ನಿಜಕ್ಕೂ ಮಾನಸಿಕ ಶಮನ ನೀಡಬಲ್ಲದು . ನಾನು ಉಚಿತ ಅನ್ನದಾಸೋಹ ಕೇಂದ್ರಗಳಲ್ಲಿ ಸ್ವಯಂಸೇವಕನಾಗಿ ಪಾತ್ರೆ ತೊಳೆಯುವ ಕೆಲಸ ಮಾಡಿದ್ದೇನೆ. ಅದು ನಿಜಕ್ಕೂ ಅತ್ಯಂತ ಉತ್ಪಾದಕ ಮತ್ತು ಉಪಯುಕ್ತ ಕೆಲಸ ಎಂಬ ಅನುಭವ ನೀಡುತ್ತದೆ ಎಂದು ಮತ್ತೊಬ್ಬ ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.
ಈ ಘಟನೆಯು ಕಾರ್ಪೊರೇಟ್ ವಲಯದಲ್ಲಿ ಹಠಾತ್ ಕೆಲಸ ಕಳೆದುಕೊಳ್ಳುವ ಉದ್ಯೋಗಿಗಳ ಮಾನಸಿಕ ಸ್ಥಿತಿ ಮತ್ತು ಅವರು ಎದುರಿಸುವ 'ಅಸ್ತಿತ್ವದ ಬಿಕ್ಕಟ್ಟನ್ನು' ಎತ್ತಿ ತೋರಿಸುತ್ತದೆ. ಕೇವಲ ಹಣ ಗಳಿಕೆಯಷ್ಟೇ ಅಲ್ಲದೆ, ಪ್ರತಿಯೊಬ್ಬ ವ್ಯಕ್ತಿಯ ಮಾನಸಿಕ ಆರೋಗ್ಯ ಹಾಗೂ ದಿನನಿತ್ಯದ ಶಿಸ್ತಿಗೆ ಒಂದು ನಿರ್ದಿಷ್ಟ ಕಾಯಕ ಅಥವಾ ಕೆಲಸ ಎಷ್ಟು ಮುಖ್ಯ ಎಂಬುದಕ್ಕೆ ಈ ಯುವಕನ ಕಥೆ ಸಾಕ್ಷಿಯಾಗಿದೆ.


