ಬೆಂಗಳೂರಿನ ಐಟಿ ಉದ್ಯೋಗ ತೊರೆದ ಚೇತನ್ ಶೆಟ್ಟಿ, ತಮ್ಮ ಪೂರ್ವಜರ ಜಮೀನಿನಲ್ಲಿ ಆಧುನಿಕ ಕೃಷಿ ಆರಂಭಿಸಿದರು. ಅಡಿಕೆ ಜೊತೆಗೆ ರಂಬುಟಾನ್, ಮ್ಯಾಂಗೋಸ್ಟೀನ್‌ನಂತಹ ವಿದೇಶಿ ಹಣ್ಣುಗಳನ್ನು ಬೆಳೆದು, ಸ್ಮಾರ್ಟ್ ಮಾರುಕಟ್ಟೆ ತಂತ್ರಗಳಿಂದ ವಾರ್ಷಿಕ ಲಕ್ಷಾಂತರ ರೂಪಾಯಿ ಲಾಭ ಗಳಿಸುತ್ತಿದ್ದಾರೆ.
ಅನೇಕ ವೃತ್ತಿಪರರು ನಗರದ ಕಾರ್ಪೊರೇಟ್ ಜಂಜಾಟದಿಂದ ಪಾರಾಗಿ ಪ್ರಕೃತಿಯ ಮಡಿಲು ಸೇರುವ ಕನಸು ಕಾಣುತ್ತಾರೆ. ಆದರೆ, ಕೈತುಂಬಾ ಸಂಬಳ ನೀಡುವ ಸ್ಥಿರ ಉದ್ಯೋಗವನ್ನು ತೊರೆದು ಪೂರ್ಣಾವಧಿ ಕೃಷಿಗೆ ಧುಮುಕುವ ಸಾಹಸ ಮಾಡುವವರು ಬೆರಳೆಣಿಕೆಯಷ್ಟು ಮಂದಿ ಮಾತ್ರ. ಅಂತಹ ವಿರಳ ಸಾಹಸಿಗಳಲ್ಲಿ ಚೇತನ್ ಶೆಟ್ಟಿ ಒಬ್ಬರು.
ಬೆಂಗಳೂರಿನಲ್ಲಿ ಐಟಿ ಸಂಸ್ಥೆಯಲ್ಲಿ ಸುಮಾರು ಎಂಟು ವರ್ಷಗಳ ಕಾಲ ಯಶಸ್ವಿ ಉದ್ಯೋಗಿಯಾಗಿದ್ದ ಚೇತನ್, 2017ರಲ್ಲಿ ತಮ್ಮ ಕಾರ್ಪೊರೇಟ್ ಜೀವನಕ್ಕೆ ಪೂರ್ಣವಿರಾಮ ಇಟ್ಟರು. ಊರಾದ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆಯ ತಮ್ಮೂರಿಗೆ ಮರಳಿ ಕುಟುಂಬದ 11 ಎಕರೆ ಪೂರ್ವಜರ ಜಮೀನನ್ನು ಹೊಸ ಮಾದರಿಯಲ್ಲಿ ಅಭಿವೃದ್ಧಿಪಡಿಸಲು ತೀರ್ಮಾನಿಸಿದರು.
ಸುರಕ್ಷಿತ ಉದ್ಯೋಗವನ್ನು ತೊರೆದು ಅನಿಶ್ಚಿತತೆಯಿಂದ ಕೂಡಿದ ಕೃಷಿ ಕ್ಷೇತ್ರಕ್ಕೆ ಕಾಲಿಟ್ಟಾಗ ಚೇತನ್ ಅವರಿಗೆ ಸ್ನೇಹಿತರು, ಬಂಧುಗಳು ಹಾಗೂ ಹೆತ್ತವರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಮತ್ತೆ ಊರಿಗೆ ಬಂದು ಜೀವನ ಹಾಳು ಮಾಡಿಕೊಳ್ಳುತ್ತಿದ್ದೀಯಾ? ಮಗಳನ್ನು ಯಾರು ಮದುವೆ ಮಾಡಿಕೊಡುತ್ತಾರೆ? ಎಂಬಂತಹ ಮಾತುಗಳನ್ನು ಅವರು ಕೇಳಬೇಕಾಯಿತು. ಒಂದು ವರ್ಷದಲ್ಲಿ ಅವರು ಮತ್ತೆ ನಗರಕ್ಕೆ ಓಡಿಹೋಗುತ್ತಾರೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ, ಚೇತನ್ ಅವರ ನಿಲುವು ದೃಢವಾಗಿತ್ತು.
ಕಾರ್ಪೊರೇಟ್ ಕೆಲಸದಲ್ಲಿದ್ದಾಗಲೇ ತಮ್ಮ ಹವ್ಯಾಸಕ್ಕಾಗಿ ಬೆಂಗಳೂರಿನ ಬಾಡಿಗೆ ಮನೆಯ ಅಡುಗೆಮನೆಯಲ್ಲಿ ಅಣಬೆ (Mushroom) ಬೆಳೆದು ಸ್ಥಳೀಯ ಹೋಟೆಲ್‌ಗಳಿಗೆ ಮಾರಾಟ ಮಾಡಿದ್ದರು. ಜೊತೆಗೆ ಊರಿನ ಜಮೀನಿನಲ್ಲಿ ಪ್ರಯೋಗಾತ್ಮಕವಾಗಿ ಅರಿಶಿನ ಬೆಳೆದು 3,000 ಕೆಜಿ ಇಳುವರಿ ಪಡೆದಿದ್ದರು. ಈ ಸಣ್ಣ ಮಟ್ಟದ ಯಶಸ್ಸು ಅವರಿಗೆ ಕೃಷಿಯಲ್ಲಿ ಪೂರ್ಣಪ್ರಮಾಣದಲ್ಲಿ ತೊಡಗಿಸಿಕೊಳ್ಳಲು ಆತ್ಮವಿಶ್ವಾಸ ಹುಟ್ಟಿಸಿತ್ತು.
ಆಧುನಿಕ ಕೃಷಿ ಮತ್ತು ಬೆಳೆ ವೈವಿಧ್ಯೀಕರಣ
ಸಾಂಪ್ರದಾಯಿಕ ಕೃಷಿಗೆ ಮಾತ್ರ ಸೀಮಿತವಾಗದೆ, ಚೇತನ್ ತಮ್ಮ ತೋಟವನ್ನು ಆಧುನೀಕರಿಸಲು ಮತ್ತು ಬೆಳೆ ವೈವಿಧ್ಯೀಕರಣಗೊಳಿಸಲು ಸುಮಾರು ₹18 ಲಕ್ಷ ಹೂಡಿಕೆ ಮಾಡಿದರು. ಅಡಿಕೆ ತೋಟದಿಂದ ವಾರ್ಷಿಕ ಸುಮಾರು ₹12 ಲಕ್ಷ ಸ್ಥಿರ ಆದಾಯ ಬರುತ್ತಿದ್ದರೂ, ಆದಾಯವನ್ನು ಮತ್ತಷ್ಟು ಹೆಚ್ಚಿಸಲು ಪ್ರೀಮಿಯಂ ಹಾಗೂ Exotic ಹಣ್ಣುಗಳನ್ನು ಬೆಳೆಯಲು ಪ್ರಾರಂಭಿಸಿದರು.
ಪ್ರಸ್ತುತ ಅವೆ ಮಂಜಣ್ಣ ಶೆಟ್ಟಿ ಫ್ಯಾಮಿಲಿ ಫಾರ್ಮ್ಸ್ ನಲ್ಲಿ 2,500ಕ್ಕೂ ಹೆಚ್ಚು ಅಡಿಕೆ ಮರಗಳು, 650 ರಂಬುಟಾನ್ ಮರಗಳು, 300 ತೆಂಗಿನ ಮರಗಳು, 100ಕ್ಕೂ ಹೆಚ್ಚು ಮ್ಯಾಂಗೋಸ್ಟೀನ್ ಮರಗಳು, 800 ಕಾಳು ಮೆಣಸಿನ ಬಳ್ಳಿಗಳು ಇದರ ಜೊತೆಗೆ ಇತರ ಬೆಳೆಗಳಾದ ಜಾಯಿಕಾಯಿ, ಆವಕಾಡೊ (ಬೆಣ್ಣೆಹಣ್ಣು), ಅರಿಶಿನ ಮತ್ತು ತರಕಾರಿಗಳು ಇದೆ.
ಅಧಿಕ ಮೌಲ್ಯದ ತರಹೇವಾರಿ ವಿದೇಶಿ ಹಣ್ಣುಗಳು
ಚೇತನ್ ಅವರ ಕೃಷಿ ನವೋದ್ಯಮದಲ್ಲಿ ವಿವಿಧ ಜಾತಿಗೆ ಹಣ್ಣುಗಳು ಪ್ರಮುಖ ಆದಾಯದ ಮೂಲವಾದವು. ಮಾರುಕಟ್ಟೆಯಲ್ಲಿ ರಂಬುಟಾನ್ ಪ್ರತಿ ಕೆಜಿಗೆ ₹200 ರಿಂದ ₹400 ರವರೆಗೆ ಮಾರಾಟವಾದರೆ, ಮ್ಯಾಂಗೋಸ್ಟೀನ್ ಗರಿಷ್ಠ ಬೇಡಿಕೆಯ ಅವಧಿಯಲ್ಲಿ ಕೆಜಿಗೆ ₹750 ರವರೆಗೆ ಬೆಲೆ ಪಡೆಯುತ್ತದೆ. "ರಂಬುಟಾನ್ ಮಾರಾಟದಿಂದ ಬಂದ ಆದಾಯದಿಂದಲೇ ನಾವು ಊರಿನಲ್ಲಿ ಹೊಸ ಮನೆ ಕಟ್ಟಿದೆವು," ಎಂದು ಚೇತನ್ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ವರದಿಗಳ ಪ್ರಕಾರ, ಅವರ ತೋಟದ ವಾರ್ಷಿಕ ಒಟ್ಟು ವಹಿವಾಟು ₹25 ಲಕ್ಷದಿಂದ ₹60 ಲಕ್ಷದವರೆಗೆ ಇರುತ್ತದೆ, ಹಾಗೂ ವಾರ್ಷಿಕ ನಿವ್ವಳ ಲಾಭ ಸುಮಾರು ₹15 ಲಕ್ಷವನ್ನು ತಲುಪುತ್ತದೆ.
ಹವಾಮಾನ ವೈಪರೀತ್ಯ ಮತ್ತು ಪರಿಹಾರ
ಚೇತನ್ ಅವರ ಕೃಷಿ ಪ್ರಯಾಣವು ಸುಲಭವಾಗಿರಲಿಲ್ಲ. ಇತ್ತೀಚಿನ ವರ್ಷಗಳಲ್ಲಿ ಉಂಟಾದ ಹವಾಮಾನ ವೈಪರೀತ್ಯದಿಂದಾಗಿ ರಂಬುಟಾನ್ ಇಳುವರಿ ತೀವ್ರವಾಗಿ ಕುಸಿಯಿತು. 2022ರಲ್ಲಿ 5,500 ಕೆಜಿ ಇದ್ದ ರಂಬುಟಾನ್ ಉತ್ಪಾದನೆಯು 2024ರ ವೇಳೆಗೆ ಕೇವಲ 400 ಕೆಜಿಗೆ ಇಳಿಯಿತು. ಆದಾಗ್ಯೂ ದೃತಿಗೆಡದ ಚೇತನ್, ಕೃಷಿ ಭೂಮಿಯ ಯೋಜನೆಗಳನ್ನು ಮರುಸಂಘಟಿಸಿ, ಹವಾಮಾನಕ್ಕೆ ತಕ್ಕಂತೆ ಬೆಳೆ ನಿರ್ವಹಣಾ ವಿಧಾನಗಳನ್ನು ಬದಲಾಯಿಸಿಕೊಂಡರು.
ನೆಟ್‌ವರ್ಕ್ ಮತ್ತು ಮಾರುಕಟ್ಟೆ ಸೌಲಭ್ಯ
ಚೇತನ್ ಕೇವಲ ಕೃಷಿಯತ್ತ ಮಾತ್ರವಲ್ಲದೆ, ದಕ್ಷ ಲಾಜಿಸ್ಟಿಕ್ಸ್ ಮತ್ತು ವಿತರಣಾ ಜಾಲವನ್ನು ನಿರ್ಮಿಸುವತ್ತ ಗಮನಹರಿಸಿದರು. ತೋಟದ ಉತ್ಪನ್ನಗಳನ್ನು ಬೆಂಗಳೂರು, ಮುಂಬೈ, ಪುಣೆ, ದೆಹಲಿ, ಅಮೃತಸರ ಮತ್ತು ಹೈದರಾಬಾದ್ ಮುಂತಾದ ಮಹಾನಗರಗಳ ಸಗಟು ಹಾಗೂ ಚಿಲ್ಲರೆ ವ್ಯಾಪಾರಿಗಳಿಗೆ ಮಂಗಳೂರಿನಿಂದ ರೈಲು, ಬಸ್ ಮತ್ತು ರಸ್ತೆ ಸಾರಿಗೆಯ ಮೂಲಕ ತಲುಪಿಸುತ್ತಾರೆ.
ಹೆಚ್ಚುವರಿಯಾಗಿ, ಸ್ಥಳೀಯ ರೈತರಿಗೂ ಮಾರುಕಟ್ಟೆ ಪ್ರವೇಶವನ್ನು ಕಲ್ಪಿಸಲು Zepto ಮತ್ತು Farmizen ನಂತಹ ಕೃಷಿ ಆಧಾರಿತ ನವೋದ್ಯಮಗಳ (Agri-tech Startups) ಜೊತೆ ಪಾಲುದಾರಿಕೆ ಮಾಡಿಕೊಂಡಿದ್ದಾರೆ. ಕಾರ್ಮಿಕರ ಅಭಾವವಿರುವುದರಿಂದ ಕೊಯ್ಲು, ವಿಂಗಡಣೆ ಮತ್ತು ಪ್ಯಾಕಿಂಗ್ ಕಾರ್ಯಗಳನ್ನು ಚೇತನ್ ಹಾಗೂ ಅವರ ಕುಟುಂಬದವರೇ ಸ್ವತಃ ನಿರ್ವಹಿಸುತ್ತಾರೆ.
"ಇದು ಕೇವಲ ಹಣದ ವಿಚಾರವಲ್ಲ; ಮಾಡುವ ಕೆಲಸದಲ್ಲಿ ಸಿಗುವ ತೃಪ್ತಿಯ ವಿಚಾರ. 2017ರಲ್ಲಿ ನಾನು ತೆಗೆದುಕೊಂಡ ಆ ಒಂದು ನಿರ್ಧಾರದಿಂದಾಗಿ ಇಂದು ನಾನು ಅತ್ಯಂತ ಸಂತೋಷವಾಗಿದ್ದೇನೆ," ಎನ್ನುತ್ತಾರೆ 35 ವರ್ಷದ ಈ ಯಶಸ್ವಿ ಕೃಷಿ ಉದ್ಯಮಿ.
ಸರಿಯಾದ ಯೋಜನೆ, ತಂತ್ರಜ್ಞಾನದ ಬಳಕೆ ಮತ್ತು ಸ್ಮಾರ್ಟ್ ಮಾರುಕಟ್ಟೆ ತಂತ್ರಗಳನ್ನು ಅಳವಡಿಸಿಕೊಂಡರೆ ಕೃಷಿಯು ಲಾಭದಾಯಕ ಹಾಗೂ ಸುಸ್ಥಿರ ವೃತ್ತಿಯಾಗಬಲ್ಲದು ಎಂಬುದಕ್ಕೆ ಚೇತನ್ ಶೆಟ್ಟಿ ಅವರ ಈ ಪಯಣವೇ ಜೀವಂತ ನಿದರ್ಶನ.


