ಸ್ವಾತಂತ್ರ್ಯ ದಿನದಂದು ವೈರಲ್ ಆದ 10 ಸೆಕೆಂಡ್‌ಗಳ ವಿಡಿಯೋವೊಂದು, ಒಂಬತ್ತು ವರ್ಷಗಳ ಹಿಂದೆ ಜಾರ್ಖಂಡ್‌ನಿಂದ ಕಾಣೆಯಾಗಿದ್ದ ಯಾಸಿನ್ ಶೇಖ್ ಎಂಬ ಯುವಕ. ಮತ್ತೆ ಕುಟುಂಬಕ್ಕೆ ಸೇರಿದ. ಕೇರಳದ ಆರೈಕೆ ಕೇಂದ್ರದಲ್ಲಿ 'ರಶೀದ್' ಹೆಸರಿನಲ್ಲಿದ್ದ ಅವನನ್ನು ಪತ್ತೆಹಚ್ಚಿದ್ದು ಆ ಹತ್ತು ಸೆಕೆಂಡ್‌ಗಳ ವಿಡಿಯೋ..

ಸ್ವಾತಂತ್ರ್ಯ ದಿನದಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಕೇವಲ 10 ಸೆಕೆಂಡ್‌ಗಳ ವಿಡಿಯೋವೊಂದು, ಸುಮಾರು ಒಂಬತ್ತು ವರ್ಷಗಳ ಹಿಂದೆ ಕಾಣೆಯಾಗಿದ್ದ ಮಗನನ್ನು ಕುಟುಂಬಕ್ಕೆ ಮತ್ತೆ ಸೇರಿಸಿದೆ. ಲಕ್ಷಾಂತರ ಮಂದಿ ನೋಡಿದ ಆ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದ ಅವನ ನಗು, ಜಾರ್ಖಂಡ್‌ನ ಕುಟುಂಬವೊಂದಕ್ಕೆ ತಮ್ಮ ಮಗನ ನೆನಪನ್ನು ತಂದಿತ್ತು. ಕಾಣೆಯಾಗಿದ್ದು ಹೇಗೆ? ಕೇರಳ ತಲುಪಿದ್ದು ಹೇಗೆ ರೋಚಕ, ಮನಕಲುಕುವ ಸ್ಟೋರಿ ಇಲ್ಲಿದೆ.

ಕೇರಳದಲ್ಲಿ ರಶೀದ್,, ಕುಟುಂಬಕ್ಕೆ ಆತ ಯಾಸಿನ್!

ಕೇರಳದ ಕೋಝಿಕ್ಕೋಡ್‌ನಲ್ಲಿರುವ ವಿಶೇಷ ಚೇತನರ ಆರೈಕೆ ಕೇಂದ್ರದಲ್ಲಿ ‘ರಶೀದ್’ ಎಂಬ ಹೆಸರಿನಲ್ಲಿ ವಾಸಿಸುತ್ತಿದ್ದ ವ್ಯಕ್ತಿಯೇ ಜಾರ್ಖಂಡ್‌ನ ಸಾಹಿಬ್‌ಗಂಜ್ ಜಿಲ್ಲೆಯ ಯಾಸಿನ್ ಶೇಖ್ ಎಂಬುದು ಇದೀಗ ದೃಢಪಟ್ಟಿದೆ. ಕಾಣೆಯಾದಾಗ ಯಾಸಿನ್‌ಗೆ 26 ವರ್ಷ. ಈಗ ಅವರಿಗೆ 35 ವರ್ಷ!

2017ರಲ್ಲಿ ಆಟವಾಡಲು ಹೊರಗೆ ಹೋಗಿದ್ದವನ ಮನೆ ಹಿಂದಿರುಗಲಿಲ್ಲ!

2017ರಲ್ಲಿ ಯಾಸಿನ್ ತನ್ನ ಸ್ನೇಹಿತರೊಂದಿಗೆ ಆಟವಾಡಲು ಸಾಹಿಬ್‌ಗಂಜ್ ಜಿಲ್ಲೆಯ ನಾರಾಯಣಪುರದಲ್ಲಿರುವ ಮನೆಯಿಂದ ಹೊರಗೆ ಹೋಗಿದ್ದ. ಆದರೆ ಆ ಬಳಿಕ ಯಾಸಿನ್ ಮನೆಗೆ ವಾಪಸ್ ಆಗಲೇ ಇಲ್ಲ. ಮೊದಲಿಗೆ ಆಟವಾಡಲು ಹೋಗಿದ್ದಾನೆ ಎಂದು ಕುಟುಂಬಸ್ಥರು ,ತಡರಾತ್ರಿಯಾದರೂ ಮನೆಗೆ ಬರದಿದ್ದಾಗ ಆತಂಕಗೊಂಡಿದ್ದರು. ಸುತ್ತಮುತ್ತ ಎಲ್ಲ ಕಡೆ ಹುಡುಕಾಡಿದರೂ ಪತ್ತೆಯಾಗಿರಲಿಲ್ಲ. ಕೊನೆಗೆ ಕುಟುಂಬಸ್ಥರು ಮಗ ಕಾಣೆಯಾಗಿರುವ ಬಗ್ಗೆ ದೂರು ದಾಖಲಿಸಿದರು. ವರ್ಷಾನುಗಟ್ಟಲೆ ಹುಡುಕಾಡಿದರು. ಆದರೆ ಎಲ್ಲಿಗೆ ಹೋದ, ಏನಾಯ್ತು ಎಂಬುದೇ ಕುಟುಂಬಕ್ಕೆ ತಿಳಿಯಲಿಲ್ಲ. ಇತ್ತ ಅದೇ ವರ್ಷ ಕೇರಳದ ಕೋಝಿಕ್ಕೋಡ್ ಜಿಲ್ಲೆಯ ಚೆರುವಾಡಿಯಲ್ಲಿ ಯುವಕನೊಬ್ಬ ಅಲೆದಾಡುತ್ತಿರುವುದು ಸ್ಥಳೀಯರ ಗಮನಿಸಿದ್ದಾರೆ. ನೋಡಲು ಬುದ್ಧಿಮಾಂಧ್ಯ ಅನಾಥನಂತೆ ಕಾಣುತ್ತಿದ್ದರಿಂದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಯಾಸಿನ್‌ ವಿಚಾರಿಸಿದಾಗ ಸ್ಪಷ್ಟವಾಗಿ ಮಾತಾಡದೆ ಯಾವುದೇ ಮಾಹಿತಿ ತಿಳಿಯಲಾಗಿಲ್ಲ. ಅಲ್ಲಿಂದ ಆತನನ್ನ ಮಕ್ಕಳ ಕಲ್ಯಾಣ ಸಮಿತಿ ಮುಂದೆ ತಂದಿದ್ದಾರೆ.

ಹೆಸರು ಗೊತ್ತಿಲ್ಲದೆ ಯುವಕನಿಗೆ ರಶೀದ್ ಎಂದು ಹೆಸರಿಟ್ಟರು

ಮೊದಲಿಗೆ ಯುವಕನ ಅಪ್ರಾಪ್ತನಂತೆ ಕಾಣುತ್ತಿದ್ದರಿಂದ ಅವನನ್ನು ಆರೈಕೆ ಕೇಂದ್ರಕ್ಕೆ ದಾಖಲಿಸಲಾಗಿತ್ತು. ಬಳಿಕ 2023ರಲ್ಲಿ 18 ವರ್ಷಕ್ಕಿಂತ ಮೇಲ್ಪಟ್ಟವರಿಗಾಗಿ ಇರುವ ಕಟ್ಟಿಪ್ಪರದ ಕಾರುಣ್ಯತೀರಂ ಕೇಂದ್ರಕ್ಕೆ ಅವರನ್ನು ಸ್ಥಳಾಂತರಿಸಲಾಯಿತು. ಆದರೆ ರಶೀದ್‌ಗೆ ಮಾತು ಸ್ಪಷ್ಟವಿರಲಿಲ್ಲ. ಅವನು ಮಾತಾಡಿದ್ದು ಯಾರಿಗೂ ಅರ್ಥವಾಗುತ್ತಿರಲಿಲ್ಲ. ತನ್ನ ಹೆಸರನ್ನೂ ಕೂಡ ಸ್ಪಷ್ಟವಾಗಿ ಹೇಳಲಾಗುತ್ತಿರಲಿಲ್ಲ. ಎಲ್ಲಿಯವನು, ಹೇಗೆ ಬಂದ, ಕುಟುಂಬ ಎಲ್ಲಿದೆ ಎಂದು ತಿಳಿಯೋಣವೆಂದರೆ ಯಾವುದೇ ಅಧಿಕೃತ ದಾಖಲೆಗಳೂ ಅವನ ಬಳಿ ಇರಲಿಲ್ಲ. ಹೀಗಾಗಿ ಕೇಂದ್ರದ ಸಿಬ್ಬಂದಿ ಅವರಿಗೆ ‘ರಶೀದ್’ ಎಂದು ಹೆಸರಿಟ್ಟಿದ್ದರು.

ಕ್ಯಾಮೆರಾ ಕಂಡರೆ ಅರಳುತ್ತಿತ್ತು ಆ ನಗು!

ಕಾರುಣ್ಯತೀರಂನಲ್ಲಿ ರಶೀದ್ ಎಲ್ಲರೊಂದಿಗೆ ಬೆರೆತು ಸ್ಥಳೀಯನೇ ಆಗಿಹೋಗಿದ್ದ. ಇನ್ನೊಂದು ವಿಶೇಷವೆಂದರೆ ಅವನು ಕ್ಯಾಮೆರಾ ಎಂದರೆ ಎಂಥದೋ ಆಸಕ್ತಿ. ಕ್ಯಾಮೆರಾ ಕಂಡರೆ ಸಾಕು ಅವನ ಮುಖದಲ್ಲಿ ನಗು ಮೂಡುತ್ತಿತ್ತು. ಅಲ್ಲಿ ನಡೆಯುತ್ತಿದ್ದ ಎಲ್ಲ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದ ರಶೀದ್, ‘ಒನ್ ಸ್ಮೈಲ್’ ಎಂಬ ಕಿರುಚಿತ್ರದಲ್ಲೂ ಕಾಣಿಸಿಕೊಂಡಿದ್ದ. ಅಚ್ಚರಿ ಎಂದರೆ ಆ ಕಿರುಚಿತ್ರ ಸಮಾಜ ಕಲ್ಯಾಣ ಇಲಾಖೆಯ ಸ್ಪರ್ಧೆಯಲ್ಲಿ ರಾಜ್ಯಮಟ್ಟದ ಎರಡನೇ ಬಹುಮಾನವನ್ನೂ ಪಡೆದಿತ್ತು!

ಅವನ ಮನಸಿನಲ್ಲಿ ಒಂದೇ ಆಸೆ 'ನನ್ನ ಮನೆಗೆ ಹೋಗಬೇಕು'

ಜಾರ್ಖಂಡ್‌ನಿಂದ ಕಾಣೆಯಾಗಿ ಕೇರಳ ತಲುಪಿ ಇಲ್ಲಿಯೇ ಜೀವನ ಸಾಗಿಸುತ್ತಿದ್ದರೂ ರಶೀದ್ ಕುಟುಂಬ, ತಂದೆ-ತಾಯಿಯನ್ನ ಮರೆತಿರಲಿಲ್ಲ. ಆಗಾಗ ತಮ್ಮ ತಾಯಿ, ಹಳ್ಳಿಯ ಬಗ್ಗೆ ಮಾತನಾಡುತ್ತಿದ್ದ.. ನಾನು ಮನೆಗೆ ಹೋಗಬೇಕು ಎಂಬ ಆಸೆಯನ್ನ ಹೇಳಿಕೊಳ್ಳುತ್ತಿದ್ದ. ಆದರೆ ಅವನ ಮನೆ ಎಲ್ಲಿದೆ, ಯಾವ ರಾಜ್ಯ, ತಂದೆ ತಾಯಿ ಹೆಸರೇನು? ಅಲ್ಲಿಂದ ಕಾಣೆಯಾಗಿದ್ದು ಹೇಗೆ? ಕೇರಳ ತಲುಪಿದ್ದು ಹೇಗೆ ಇವ್ಯಾವ ಪ್ರಶ್ನೆಗಳಿಗೂ ಅವನು ಸ್ಪಷ್ಟವಾಗಿ ಪ್ರತಿಕ್ರಿಯಿಸುತ್ತಿರಲಿಲ್ಲ. ಹೀಗಾಗಿ ರಶೀದ್ ಕುಟುಂಬಸ್ಥರಿಗೆ ಸೇರಿಸೋಣವೆಂದರೆ ಯಾರಿಗೂ ಸ್ಪಷ್ಟ ಮಾಹಿತಿ ಇರಲಿಲ್ಲ.

ಸ್ವಾತಂತ್ರ್ಯ ದಿನದ ಆ ಒಂದು ರೀಲ್ ಎಲ್ಲವನ್ನೂ ಬದಲಿಸಿತು!

ಸ್ವಾತಂತ್ರ್ಯ ದಿನಾಚರಣೆಯಂದು ಸೋಷಿಯಲ್ ಮೀಡಿಯಾದ ಇನ್ಫಲೆಯನ್ಸರ್ ಒಬ್ಬರು ಅದೇ ದಿನ ಯಾಸಿರ್ ಇದ್ದ ಕಾರುಣ್ಯತೀರಂಗೆ ಭೇಟಿ ನೀಡಿದ್ದರು. ಅಲ್ಲಿ ರಶೀದ್ ಸ್ನೇಹಿತರೊಂದಿಗೆ ಕೈಯಲ್ಲಿ ರಾಷ್ಟ್ರಧ್ವಜ ಹಿಡಿದು ಸಂತೋಷದಿಂದ ನಡೆದುಕೊಂಡು ಹೋಗುತ್ತಿದ್ದ ದೃಶ್ಯವನ್ನು ತಮ್ಮ ಮೊಬೈಲ್‌ನಲ್ಲಿ ಸೆರೆಹಿಡಿದರು. ಅದು ಕೇವಲ 10 ಸೆಕೆಂಡ್‌ಗಳ ವಿಡಿಯೋ. ಆ ವಿಡಿಯೋವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದ ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್. ಆ ವಿಡಿಯೋಗೆ ಬರೋಬ್ಬರಿ 10 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳು ಬಂದವು. ಹಾಗೆ ವೀಕ್ಷಿಸಿದವರಲ್ಲಿ ಯಾಸೀನ್ ಕುಟುಂಬದವರು ಇದ್ದರು! ಅವರು ರಶೀದ್ ಹೆಸರಿನ ಯಾಸಿನ್‌ನನ್ನು ಕುಟುಂಬಸ್ಥರು ಗುರುತಿಸಿದರು.

‘ಇವರು ನಮ್ಮ ಯಾಸಿನ್!’

ವಿಡಿಯೋ ನೋಡಿದ ಯಾಸಿನ್‌ನ ಸೋದರಸಂಬಂಧಿಗೆ ಅನುಮಾನ ಮೂಡಿತು. ರಶೀದ್ ಅವ ವಿಶಿಷ್ಟ ನಗು, ಮುಖಚಹರೆ ಎಲ್ಲವೂ ವರ್ಷಗಳಿಂದ ಕಾಣೆಯಾಗಿದ್ದ ನಮ್ಮ ಯಾಸಿನ್‌ನನ್ನೇ ಹೋಲುತ್ತಿದೆ. ಇವ ನಮ್ಮ ಯಾಸಿನ್ ಎಂದು ಗುರುತಿಸಿದರು. ನಂತರ ಇನ್‌ಸ್ಟಾಗ್ರಾಂನಲ್ಲಿ ಕಾಮೆಂಟ್ ಮಾಡಿ ಮಾಹಿತಿ ಹಂಚಿಕೊಂಡರು. ಬಳಿಕ ಕಾರುಣ್ಯತೀರಂ ಸಿಬ್ಬಂದಿಯನ್ನು ಸಂಪರ್ಕಿಸಿದರು. ಕುಟುಂಬಸ್ಥರು ಯಾಸಿನ್‌ನ ಆಧಾರ್ ಸೇರಿದಂತೆ ಗುರುತಿನ ದಾಖಲೆಗಳನ್ನು ಹಂಚಿಕೊಂಡರು.

ಕೇರಳ ಮತ್ತು ಜಾರ್ಖಂಡ್ ಪೊಲೀಸರು ಕೂಡ ದಾಖಲೆಗಳನ್ನು ಪರಿಶೀಲಿಸಿದರು. ಕೊನೆಗೆ ‘ರಶೀದ್’ ಎಂಬ ಹೆಸರಿನಲ್ಲಿ ಹಲವು ವರ್ಷಗಳಿಂದ ಬದುಕುತ್ತಿದ್ದ ವ್ಯಕ್ತಿ ಜಾರ್ಖಂಡ್‌ನ ಯಾಸಿನ್ ಶೇಖ್ ಎಂಬುದು ಖಚಿತವಾಯಿತು!

9 ವರ್ಷಗಳ ಬಳಿಕ ಮತ್ತೆ ಕುಟುಂಬ ಸೇರಿದ ಯಾಸಿನ್

ಯಾಸಿನ್ ತನ್ನ ತಂದೆ ಸೊಹ್ರಾಬ್ ಶೇಖ್ ಹಾಗೂ ಸಹೋದರರೊಂದಿಗೆ ವಿಡಿಯೋ ಕಾಲ್‌ನಲ್ಲಿ ಮಾತನಾಡಿದರು. ವರ್ಷಗಳ ಬಳಿಕ ಮಗನ ಧ್ವನಿ ಕೇಳಿದ ಕುಟುಂಬದ ಸಂತೋಷಕ್ಕೆ ಪಾರವೇ ಇರಲಿಲ್ಲ. ಯಾಸಿನ್‌ನನ್ನು ಮನೆಗೆ ಕರೆದುಕೊಂಡು ಹೋಗಲು ಅವರ ಕಿರಿಯ ಸಹೋದರ ಅಜುಲ್ ಶೇಖ್ ಕೇರಳಕ್ಕೆ ಬಂದರು. ಬಳಿಕ ಯಾಸಿನ್ ಸುಮಾರು 2,500 ಕಿಲೋಮೀಟರ್ ದೂರದ ತಮ್ಮ ಮನೆಗೆ ಪ್ರಯಾಣ ಆರಂಭಿಸಿದ.

ಒಂದು ಕಡೆ ಸಂತೋಷ, ನೋವು ಒಟ್ಟೊಟ್ಟಿಗೆ

ವರ್ಷಗಳ ಹುಡುಕಾಟದ ಬಳಿಕ ಮಗ ಮನೆಗೆ ಮರಳುತ್ತಿದ್ದಾನೆ ಎಂಬ ಸಂತೋಷದ ಜೊತೆಗೆ ಕುಟುಂಬಕ್ಕೆ ನೋವಿನ ಅನುಭವವೂ ಆಯಿತು. ಯಾಸಿನ್ ಆಗಾಗ್ಗೆ ಪ್ರೀತಿಯಿಂದ ನೆನಪಿಸಿಕೊಳ್ಳುತ್ತಿದ್ದ ಅವರ ತಾಯಿ 2023ರಲ್ಲೇ ನಿಧನರಾಗಿದ್ದರು. ಕಾಣೆಯಾಗಿದ್ದ ಮಗ ಮರಳಿ ಬರುತ್ತಾನೆ ಎಂಬ ನಿರೀಕ್ಷೆಯಲ್ಲೇ ಅವರು ಕೊನೆಯುಸಿರೆಳೆದಿದ್ದರು.

ಒಂದು ಸಣ್ಣ ನಗು... ಒಂದು 10 ಸೆಕೆಂಡ್‌ಗಳ ವಿಡಿಯೋ... ಮತ್ತು ಒಂಬತ್ತು ವರ್ಷಗಳ ಬಳಿಕ ಒಬ್ಬ ಮಗ ಮತ್ತೆ ತನ್ನ ಮನೆಯ ದಾರಿ ಹಿಡಿದ! ಇದು ಯಾವ ಸಿನಿಮಾಗೂ ಕಡಿಮೆಯಿಲ್ಲದ ನೈಜ ಕತೆ! ಸೋಷಿಯಲ್ ಮೀಡಿಯಾದ ಪವರ್ ಇದು!