ಎಲೋನ್ ಮಸ್ಕ್ ಅವರು ಭಾರತದ ವಲಸೆ ಮತ್ತು ಪೌರತ್ವ ನಿಯಮಗಳನ್ನು 'ವಾಸ್ತವಿಕ' ಎಂದು ಶ್ಲಾಘಿಸಿದ್ದಾರೆ. ಐರಿಶ್ ಪ್ರಜೆಯೊಬ್ಬರು ಭಾರತದ ಪೌರತ್ವ ಪಡೆಯುವ ಕಠಿಣ ಪ್ರಕ್ರಿಯೆಯ ಬಗ್ಗೆ 'ಗ್ರೋಕ್' ಚಾಟ್‌ಬಾಟ್‌ನೊಂದಿಗೆ ನಡೆಸಿದ ವೈರಲ್ ಸಂಭಾಷಣೆಗೆ ಅವರು ಈ ರೀತಿ ಪ್ರತಿಕ್ರಿಯಿಸಿದ್ದು, ಇದು ಜಾಗತಿಕ ಚರ್ಚೆಗೆ ಕಾರಣವಾಗಿದೆ.

ಸಾಮಾಜಿಕ ಜಾಲತಾಣ X ನ ಮಾಲೀಕ ಎಲೋನ್ ಮಸ್ಕ್ ಅವರು ಭಾರತದ ವಲಸೆ ಮತ್ತು ಪೌರತ್ವ ನಿಯಮಗಳನ್ನು ಸಮರ್ಥಿಸಿಕೊಳ್ಳುವ ರೀತಿಯಲ್ಲಿ ನೀಡಿದ 'ಭಾರತ ಅತ್ಯಂತ ಪ್ರಾಯೋಗಿಕ ಹಾಗೂ ವ್ಯಾವಹಾರಿಕ' ಎಂಬ ಹೇಳಿಕೆ ಈಗ ಜಾಗತಿಕ ಮಟ್ಟದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಐರಿಶ್ ಪ್ರಜೆಯೊಬ್ಬರು ಕೃತಕ ಬುದ್ಧಿಮತ್ತೆ ಚಾಟ್‌ಬಾಟ್ 'ಗ್ರೋಕ್' ಜೊತೆ ನಡೆಸಿದ ಆಸಕ್ತಿಕರ ಮತ್ತು ತಮಾಷೆಯ ಸಂಭಾಷಣೆಗೆ ಮಸ್ಕ್ ಈ ರೀತಿ ಪ್ರತಿಕ್ರಿಯಿಸಿದ್ದಾರೆ.

ಘಟನೆಯ ವಿವರ!

ಐರಿಶ್ ಪ್ರಜೆಯೊಬ್ಬರು ಇತ್ತೀಚೆಗೆ ಭಾರತದ ಕಲ್ಕತ್ತಾಗೆ (ಕೋಲ್ಕತ್ತಾ) ಆಗಮಿಸಿದ ನಂತರ X ನಲ್ಲಿ "ನಾನು ಈಗಷ್ಟೇ ಭಾರತಕ್ಕೆ ಬಂದಿಳಿದೆ, ನನಗೆ ಈ ದೇಶ ತುಂಬಾ ಇಷ್ಟವಾಗಿದೆ. ನಾನು ಇಲ್ಲೇ ನೆಲೆಸಲು ಬಯಸುತ್ತೇನೆ" ಎಂದು ಪೋಸ್ಟ್ ಮಾಡಿದ್ದರು. ಇದರ ಬೆನ್ನಲ್ಲೇ ಅವರು xAI ಅಭಿವೃದ್ಧಿಪಡಿಸಿದ 'ಗ್ರೋಕ್' ಚಾಟ್‌ಬಾಟ್‌ಗೆ, ಭಾರತದ ಪೌರತ್ವ ಪಡೆಯಲು ಎಷ್ಟು ಸಮಯ ಹಿಡಿಯುತ್ತದೆ ಎಂದು ಪ್ರಶ್ನಿಸಿದರು.

ಗ್ರೋಕ್ ನೀಡಿದ ಸ್ಪಷ್ಟನೆಗಳು!

ಗ್ರೋಕ್ ಚಾಟ್‌ಬಾಟ್ ಭಾರತೀಯ ಕಾನೂನುಗಳ ಕುರಿತು ಅತ್ಯಂತ ನಿಖರವಾದ ವಿವರಣೆಗಳನ್ನು ನೀಡಿತು:

12 ವರ್ಷಗಳ ಕಾಯುವಿಕೆ; ಭಾರತದ ಪೌರತ್ವ ಪಡೆಯಲು ಕನಿಷ್ಠ 12 ವರ್ಷಗಳ ಕಾನೂನುಬದ್ಧ ನಿವಾಸ ಅಗತ್ಯ. ಹಿಂದಿನ 14 ವರ್ಷಗಳಲ್ಲಿ ಕನಿಷ್ಠ 11 ವರ್ಷಗಳು ಹಾಗೂ ಅರ್ಜಿ ಸಲ್ಲಿಸುವ ಮುನ್ನ ಸತತ 12 ತಿಂಗಳು ಭಾರತದಲ್ಲೇ ವಾಸವಿರಬೇಕು.

ದ್ವಿಪೌರತ್ವಕ್ಕೆ ಅವಕಾಶವಿಲ್ಲ; ಭಾರತದಲ್ಲಿ ದ್ವಿಪೌರತ್ವಕ್ಕೆ ಅವಕಾಶವಿಲ್ಲ. ಆದ್ದರಿಂದ ಪೌರತ್ವ ಪಡೆಯಲು ಅವರು ತಮ್ಮ ಐರಿಶ್ ರಾಷ್ಟ್ರೀಯತೆಯನ್ನು ಸಂಪೂರ್ಣವಾಗಿ ತ್ಯಜಿಸಬೇಕಾಗುತ್ತದೆ.

ಸರ್ಕಾರದ ನಿರ್ಧಾರ; ಪೌರತ್ವ ನೀಡುವುದು ಸಂಪೂರ್ಣವಾಗಿ ಭಾರತ ಸರ್ಕಾರದ ವಿವೇಚನೆಗೆ ಒಳಪಟ್ಟಿರುತ್ತದೆ.

ಆರ್ಥಿಕ ಸಹಾಯ ಮತ್ತು ಉದ್ಯೋಗದ ಪ್ರಶ್ನೆ!

ಸಂಭಾಷಣೆ ಮುಂದುವರಿದಂತೆ, ಆ ವ್ಯಕ್ತಿ ತಾವು ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ಬಂದಿರುವುದಾಗಿ ಹೇಳಿ, ಕೆಲಸ ಸಿಗುವವರೆಗೆ ಭಾರತ ಸರ್ಕಾರ ತಮಗೆ ಏನಾದರೂ ಆರ್ಥಿಕ ನೆರವು ಅಥವಾ ನಿರುದ್ಯೋಗ ಭತ್ಯೆ ನೀಡುತ್ತದೆಯೇ ಎಂದು ಕೇಳಿದರು.

ಖಡಕ್‌ ಆಗಿ ಉತ್ತರಿಸಿದ ಗ್ರೋಕ್‌!

ಇದಕ್ಕೆ ಖಡಕ್ ಆಗಿ ಉತ್ತರಿಸಿದ ಗ್ರೋಕ್, ಯಾವುದೇ ಉಚಿತ ಹಣ ಸಿಗುವುದಿಲ್ಲ! ಭಾರತದಲ್ಲಿ ಹೊಸದಾಗಿ ಬಂದ ವಿದೇಶಿಯರಿಗೆ ಅಥವಾ ಪೌರರಲ್ಲದವರಿಗೆ ಯಾವುದೇ ಸಾಮಾಜಿಕ ಕಲ್ಯಾಣ ಅಥವಾ ನಿರುದ್ಯೋಗ ಭತ್ಯೆಯಿರುವುದಿಲ್ಲ. ಸರ್ಕಾರದ ಪಡಿತರ ಚೀಟಿ ಅಥವಾ ಪಿಂಚಣಿ ಸೌಲಭ್ಯಗಳಿಗೆ ಭಾರತೀಯ ಪೌರತ್ವದ ಜೊತೆಗೆ ಬಡತನ ರೇಖೆಗಿಂತ ಕೆಳಗಿರುವ (BPL) ಅರ್ಹತೆ ಬೇಕು. ಆದ್ದರಿಂದ ನಿಮ್ಮ ಕುಟುಂಬವನ್ನು ನೀವೇ ಸ್ವಂತ ಖರ್ಚಿನಲ್ಲಿ ನೋಡಿಕೊಳ್ಳಬೇಕು" ಎಂದು ಸಲಹೆ ನೀಡಿತು.

ಆಸ್ತಿ ಖರೀದಿ ಮತ್ತು ಕ್ಯಾಸಿನೊ ಹಣ!

ನಂತರ ಆ ವ್ಯಕ್ತಿ "ಕ್ಯಾಸಿನೊದಲ್ಲಿ 1,00,000 ಯುರೋ ಗೆದ್ದರೆ, ಆ ಹಣದಿಂದ ಭಾರತದಲ್ಲಿ ಮನೆ ಖರೀದಿಸಬಹುದೇ?" ಎಂದು ಪ್ರಸ್ತಾಪಿಸಿದರು. ಅದಕ್ಕೆ ಗ್ರೋಕ್, ಆಸ್ತಿ ಖರೀದಿಸುವುದು ಕೇವಲ ಹಣದ ಮೇಲಷ್ಟೇ ಅಲ್ಲದೆ, ಅವರ ವಲಸೆ ಮತ್ತು ನಿವಾಸದ ಕಾನೂನು ಸ್ಥಿತಿಯನ್ನು ಅವಲಂಬಿಸಿರುತ್ತದೆ ಎಂದು ಅರಿವು ಮೂಡಿಸಿತು.

ವೈರಲ್ ಆದ ಪೋಸ್ಟ್ ಹಾಗೂ ಎಲೋನ್ ಮಸ್ಕ್ ಪ್ರತಿಕ್ರಿಯೆ!

ಈ ಇಡೀ ಸಂಭಾಷಣೆಯ ಸ್ಕ್ರೀನ್‌ಶಾಟ್‌ಗಳನ್ನು X ಬಳಕೆದಾರ ಪೀಟರ್ ಸೇಂಟ್ ಒಂಗೆ ಹಂಚಿಕೊಂಡು, ಭಾರತಕ್ಕೆ ಸ್ಥಳಾಂತರಗೊಳ್ಳುವ ಬಗ್ಗೆ ಐರಿಶ್ ವ್ಯಕ್ತಿಯೊಬ್ಬರು ಕೇಳುತ್ತಿರುವ ತಮಾಷೆಯ ಸಂಭಾಷಣೆ ಇದು. 12 ವರ್ಷ ಕಾಯಬೇಕು, ಹಳೆಯ ಪಾಸ್‌ಪೋರ್ಟ್ ತ್ಯಜಿಸಬೇಕು ಮತ್ತು ಯಾವುದೇ ಉಚಿತ ಸೌಲಭ್ಯಗಳಿಲ್ಲ" ಎಂದು ಬರೆದುಕೊಂಡಿದ್ದರು. ಈ ಪೋಸ್ಟ್ ಅನ್ನು ಗಮನಿಸಿದ ಎಲೋನ್ ಮಸ್ಕ್, ಭಾರತ ವಾಸ್ತವಿಕವಾಗಿದೆ ಎಂದು ಕೇವಲ ಮೂರೇ ಪದಗಳಲ್ಲಿ ಪ್ರತಿಕ್ರಿಯಿಸಿದ್ದಾರೆ. ಅಕ್ರಮ ವಲಸೆ ಮತ್ತು ವಲಸಿಗರ ಉಚಿತ ಕಲ್ಯಾಣ ಯೋಜನೆಗಳ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆ ನಡೆಯುತ್ತಿರುವ ಈ ಸಮಯದಲ್ಲಿ, ಭಾರತದ ಕಟ್ಟುನಿಟ್ಟಾದ ಮತ್ತು ಸ್ಪಷ್ಟ ವಲಸೆ ನಿಯಮಗಳನ್ನು ಮಸ್ಕ್ ಶ್ಲಾಘಿಸಿರುವುದು ವ್ಯಾಪಕ ಬೆಂಬಲ ವ್ಯಕ್ತವಾಗಲು ಕಾರಣವಾಗಿದೆ.