ಆಪಲ್‌ನ ಹೊಸ 'ಐಫೋನ್ ಡ್ಯುಯೋ' ಬೆಲೆಯು ಭಾರತದ ಪ್ರಮುಖ ಐಟಿ ಕಂಪನಿಗಳಾದ ಟಿಸಿಎಸ್, ಇನ್ಫೋಸಿಸ್‌ನ ಫ್ರೆಷರ್ಸ್ ವಾರ್ಷಿಕ ಸಂಬಳಕ್ಕೆ ಸಮನಾಗಿದೆ ಎಂದು 'ಎಕ್ಸ್'ನಲ್ಲಿ ವೈರಲ್ ಆದ ಪೋಸ್ಟ್ ಚರ್ಚೆ ಹುಟ್ಟುಹಾಕಿದೆ.
ಬೆಂಗಳೂರು (ಸೆ.11): ಜಾಗತಿಕ ತಂತ್ರಜ್ಞಾನ ದೈತ್ಯ 'ಆಪಲ್' (Apple) ಸಂಸ್ಥೆಯು ತನ್ನ ಚೊಚ್ಚಲ ಫೋಲ್ಡಬಲ್ ಸ್ಮಾರ್ಟ್‌ಫೋನ್ 'ಐಫೋನ್ ಡ್ಯುಯೋ' (iPhone Duo) ಅನ್ನು ಮಾರುಕಟ್ಟೆಗೆ ಪರಿಚಯಿಸುತ್ತಿದ್ದಂತೆ, ಅದರ ಭಾರತದ ಪ್ರೀಮಿಯಂ ಬೆಲೆಗಳನ್ನು ಕಂಡ ತಂತ್ರಜ್ಞಾನ ಪ್ರಿಯರು ತಲೆಬಿಸಿ ಮಾಡಿಕೊಂಡಿದ್ದಾರೆ. ಪ್ರೀಮಿಯಂ ಸ್ಮಾರ್ಟ್‌ಫೋನ್‌ಗಳ ಬೆಲೆಗಳು ಎಷ್ಟು ಗಗನಕ್ಕೇರಿವೆ ಎಂದರೆ, ಪ್ರಮುಖ ಐಟಿ ಕಂಪನಿಗಳು ಪದವೀಧರ ಫ್ರೆಷರ್‌ಗಳಿಗೆ ನೀಡುವ ವಾರ್ಷಿಕ ಸ್ಯಾಲರಿ ಪ್ಯಾಕೇಜ್‌ಗೆ (Annual CTC) ಈ ಫೋನ್‌ನ ಬೆಲೆಗಳು ನೇರವಾಗಿ ಪೈಪೋಟಿ ನೀಡುತ್ತಿವೆ!
'ಎಕ್ಸ್'ನಲ್ಲಿ (X) ಗಗನ್ ಎಂಬುವವರು 'ಐಫೋನ್ ಡ್ಯುಯೋ' ಮಾದರಿಗಳ ಬೆಲೆಯನ್ನು ಪ್ರಮುಖ ಐಟಿ ಕಂಪನಿಗಳಾದ ಟಿಸಿಎಸ್, ವಿಪ್ರೋ, ಅಕ್ಸೆಂಚರ್ ಹಾಗೂ ಇನ್ಫೋಸಿಸ್ ನೀಡುವ ಫ್ರೆಷರ್ಸ್ ಸ್ಯಾಲರಿಗೆ ಹೋಲಿಸಿ ಮಾಡಿರುವ ಪೋಸ್ಟ್ ಈಗ ಇಂಟರ್ನೆಟ್‌ನಲ್ಲಿ ತೀವ್ರ ವೈರಲ್ ಆಗಿದೆ.
ವೈರಲ್ ಪೋಸ್ಟ್‌ನಲ್ಲಿರುವ ಬೆಲೆ ಹಾಗೂ ಸಂಬಳದ ಹೋಲಿಕೆ ಇಲ್ಲಿದೆ
256GB ಆವೃತ್ತಿ – ₹2,99,900. ಇದು ಟಿಸಿಎಸ್ (TCS) ಕಂಪನಿಯ ಫ್ರೆಷರ್ಸ್ ವಾರ್ಷಿಕ ಸ್ಯಾಲರಿ ಪ್ಯಾಕೇಜ್.
512GB ಆವೃತ್ತಿ – ₹3,24,900 ಇದು ವಿಪ್ರೋ (Wipro) ಸಂಸ್ಥೆಗೆ ಸೇರುವ ಫ್ರೆಶರ್ ಉದ್ಯೋಗಿಯ ವಾರ್ಷಿಕ ವೇತನ.
1TB ಆವೃತ್ತಿ – ₹3,74,900. ಇದು ಅಕ್ಸೆಂಚರ್ (Accenture) ಕಂಪನಿಯ ವೇರಿಯೇಬಲ್ ಪೇ ಸೇರಿದಂತೆ ಸಿಗುವ ವಾರ್ಷಿಕ ವೇತನ.
2TB ಆವೃತ್ತಿ – ₹4,49,900. ಇದು ಇನ್ಫೋಸಿಸ್ (Infosys) ಸಂಸ್ಥೆಯ ಆರಂಭಿಕ ಹಂತದ ಫ್ರೆಷರ್ಸ್ ವಾರ್ಷಿಕ ಸಿಟಿಸಿ.
ಫೋನ್ ಸ್ಪೆಸಿಫಿಕೇಶನ್ ವರ್ಸಸ್ ವಾಸ್ತವ ಬಜೆಟ್
ನಿಮ್ಮ ಸ್ಮಾರ್ಟ್‌ಫೋನ್‌ನ ಆರಂಭಿಕ ಬೆಲೆಯೇ ಒಬ್ಬ ಐಟಿ ಫ್ರೆಷರ್‌ನ ವಾರ್ಷಿಕ ಸಿಟಿಸಿಯಂತೆ (CTC) ಕಾಣಲು ಪ್ರಾರಂಭಿಸಿದಾಗ, ವಿಷಯಗಳು ನಿಜಕ್ಕೂ ಗಂಭೀರ ಹಂತಕ್ಕೆ ತಲುಪಿವೆ ಎಂಬುದು ಅರಿವಾಗುತ್ತದೆ ಎಂದು ವೈರಲ್ ಪೋಸ್ಟ್ ತಮಾಷೆಯಾಗಿ ಚಾಟಿ ಬೀಸಿದೆ.
ಒಂದು ಕಾಲದಲ್ಲಿ ಸ್ಮಾರ್ಟ್‌ಫೋನ್ ಖರೀದಿಸುವಾಗ ಇದರ ಸ್ಪೆಸಿಫಿಕೇಶನ್‌ಗಳು ಮತ್ತು ಫೀಚರ್‌ಗಳು ಏನೇನಿವೆ? ಎಂದು ರಿಸರ್ಚ್ ಮಾಡುತ್ತಿದ್ದ ಜನ, ಇಂದು ಪ್ರೀಮಿಯಂ ಫೋನ್‌ಗಳ ಬೆಲೆ ನೋಡಿ "ಇದನ್ನು ಕೊಳ್ಳಲು ನನ್ನಿಂದ ನಿಜಕ್ಕೂ ಸಾಧ್ಯವೇ?" ಎಂದು ಯೋಚಿಸುವ ಸ್ಥಿತಿಗೆ ತಲುಪಿದ್ದಾರೆ. "ಒಂದು ಇಡೀ ವರ್ಷ ಕಷ್ಟಪಟ್ಟು ದುಡಿದ ಸಂಪೂರ್ಣ ಸಂಬಳವನ್ನು ಕೇವಲ ಒಂದೇ ಒಂದು ಸ್ಮಾರ್ಟ್‌ಫೋನ್ ಖರೀದಿಸಲು ನೀವು ಖರ್ಚು ಮಾಡುತ್ತೀರಾ?" ಎಂಬ ಪ್ರಶ್ನೆ ಈಗ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಐಟಿ ವಲಯದಲ್ಲಿ ಇಂದಿಗೂ ಆರಂಭಿಕ ಹಂತದ ವೇತನಗಳು ಹತ್ತಾರು ವರ್ಷಗಳಿಂದ ಗಣನೀಯವಾಗಿ ಏರಿಕೆಯಾಗದಿರುವುದು ಮತ್ತು ಇನ್ನೊಂದೆಡೆ ಪ್ರೀಮಿಯಂ ತಂತ್ರಜ್ಞಾನದ ಬೆಲೆ ಕಲ್ಪನೆಗೂ ಮೀರಿದ ವೇಗದಲ್ಲಿ ಗಗನಕ್ಕೇರುತ್ತಿರುವುದನ್ನು ಈ ವೈರಲ್ ಪೋಸ್ಟ್ ಅತ್ಯಂತ ರೋಚಕವಾಗಿ ಹಾಗೂ ಹಾಸ್ಯಾಸ್ಪದವಾಗಿ ಪ್ರತಿಬಿಂಬಿಸಿದೆ.


