6ನೇ ತರಗತಿಯ ಕಂಪ್ಯೂಟರ್ ಸೈನ್ಸ್ ಪಠ್ಯಪುಸ್ತಕದಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಮತ್ತು ಮಷಿನ್ ಲರ್ನಿಂಗ್‌ನಂತಹ ಇಂಜಿನಿಯರಿಂಗ್ ವಿಷಯಗಳಿರುವುದು ವೈರಲ್ ವಿಡಿಯೋದಿಂದ ಬೆಳಕಿಗೆ ಬಂದಿದೆ. ಈ ಬೆಳವಣಿಗೆಯು ಮಕ್ಕಳ ಮೇಲೆ ಬೀರುವ ಪರಿಣಾಮ ಮತ್ತು ಶಿಕ್ಷಣ ವ್ಯವಸ್ಥೆಯ ಬದಲಾವಣೆ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧ ಚರ್ಚೆಯನ್ನು ಹುಟ್ಟುಹಾಕಿದೆ.

ನಾವು-ನೀವು ಕಾಲೇಜು ಮುಗಿಸಿ, ಇಂಜಿನಿಯರಿಂಗ್ ಪದವಿಯ ಅಂತಿಮ ವರ್ಷಗಳಲ್ಲಿ ಹೆಣಗಾಡಿಕೊಂಡು ಕಲಿಯುತ್ತಿದ್ದ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI), ಮಷಿನ್ ಲರ್ನಿಂಗ್ (Machine Learning) ಮತ್ತು ಪೈಥಾನ್ (Python) ನಂತಹ ಕಠಿಣ ಕಂಪ್ಯೂಟರ್ ಕೋಡಿಂಗ್ ವಿಷಯಗಳನ್ನು ಇಂದಿನ 6ನೇ ತರಗತಿ ಪುಟಾಣಿ ಮಕ್ಕಳೇ ಓದುತ್ತಿದ್ದಾರೆ ಅಂದರೆ ನೀವು ನಂಬಲೇಬೇಕು!

ಹೌದು, ಆರನೇ ತರಗತಿಯ ಕಂಪ್ಯೂಟರ್ ಸೈನ್ಸ್ ಪಠ್ಯಪುಸ್ತಕದ ಪುಟಗಳನ್ನು ನೋಡಿ ಯುವತಿಯೊಬ್ಬಳು ಹಂಚಿಕೊಂಡಿರುವ ಇನ್‌ಸ್ಟಾಗ್ರಾಂ ವಿಡಿಯೋವೊಂದು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸಂಚಲನ ಮೂಡಿಸಿದ್ದು, ಇಂಟರ್ನೆಟ್ ಜಗತ್ತಿನಲ್ಲಿ ಬಿಸಿಬಿಸಿ ಚರ್ಚೆಗೆ ನಾಂದಿ ಹಾಡಿದೆ.

ಏನಿದು ವೈರಲ್ ವಿಡಿಯೋ?

ಮುಂಬೈ ಮೂಲದ ಖುಷಿ ಜೇಸ್ವಾನಿ (@kj_rocks15) ಎಂಬ ಯುವತಿ ಇನ್‌ಸ್ಟಾಗ್ರಾಮ್‌ನಲ್ಲಿ 6ನೇ ತರಗತಿಯ ಕಂಪ್ಯೂಟರ್ ಸೈನ್ಸ್ ಪುಸ್ತಕದ ಪುಟಗಳನ್ನು ತಿರುಗಿಸುತ್ತಾ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ.

ಆ ಪಠ್ಯಪುಸ್ತಕದಲ್ಲಿರುವ ವಿಷಯಗಳನ್ನು ನೋಡಿ ಸ್ವತಃ ಇಂಜಿನಿಯರಿಂಗ್ ವಿದ್ಯಾರ್ಥಿಗಳೇ ಶಾಕ್ ಆಗಿದ್ದಾರೆ.

ಆ ಪುಸ್ತಕದ ಪರಿವಿಡಿಯಲ್ಲಿ (Index):

  • ‘ಮಷಿನ್ ಲರ್ನಿಂಗ್ ವಿತ್ ಪೈಥಾನ್’ (Machine Learning with Python)
  • ‘ಡೇಟಾ ಆ್ಯಂಡ್ ವಿಶ್ಯುಲೈಸೇಷನ್’ (Data and Visualization)
  • ‘ನ್ಯೂರಲ್ ನೆಟ್‌ವರ್ಕ್ಸ್ ಆ್ಯಂಡ್ ಎಐ’ (Neural Networks and AI) ಸೇರಿದಂತೆ ಅಡ್ವಾನ್ಸ್‌ಡ್ ತಂತ್ರಜ್ಞಾನದ ಅಧ್ಯಾಯಗಳು ಕೂಡ ಇವೆ.

ಹಾಗಾದ್ರೆ ಇಂಜಿನಿಯರ್‌ಗಳಾದ ನಾವೇನು ದಡ್ಡರಾ?:

ತಾವು ಹಿಡಿದುಕೊಂಡ ಪುಸ್ತಕದ ಪುಟಗಳನ್ನು ತೋರಿಸುತ್ತಾ ಆಶ್ಚರ್ಯ ವ್ಯಕ್ತಪಡಿಸಿದ ಖುಷಿ, 'ನಾವು ಈಗ ಕಾಲೇಜಿನಲ್ಲಿ ಕಷ್ಟಪಟ್ಟು ಕಲಿಯುತ್ತಿರುವ ಪೈಥಾನ್ ಮತ್ತು ಎಐ ಪರಿಕಲ್ಪನೆಗಳನ್ನು ಈ ಮಕ್ಕಳಿಗೆ 6ನೇ ಕ್ಲಾಸ್ ಸಿಲಬಸ್‌ನಲ್ಲೇ ಇಟ್ಟಿದ್ದಾರೆ! ಹಾಗಾದ್ರೆ ಇಂಜಿನಿಯರಿಂಗ್ ಮಾಡುತ್ತಿರುವ ನಾವೇನು ದಡ್ಡರಾ? ಇಷ್ಟು ಚಿಕ್ಕ ವಯಸ್ಸಿನ ಮಕ್ಕಳಿಗೆ ಇಷ್ಟೊಂದು ಕಠಿಣ ಸಿಲಬಸ್ ಯಾಕೆ ಬೇಕು?' ಎಂದು ತಮಾಷೆಯಾಗಿ ಹಾಗೂ ಗಂಭೀರವಾಗಿ ಪ್ರಶ್ನಿಸಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಪರ-ವಿರೋಧ ಚರ್ಚೆ:

ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಎರಡು ಬಣಗಳಾಗಿ ವಿಭಜನೆಗೊಂಡು ಕಾಮೆಂಟ್ ಮಾಡುತ್ತಿದ್ದಾರೆ:

ಆಧುನಿಕ ಶಿಕ್ಷಣಕ್ಕೆ ಬೆಂಬಲ: 'ಇಂದಿನ ಜಗತ್ತು ಎಐ ಮಯವಾಗಿದೆ. ಮಕ್ಕಳು ಚಿಕ್ಕ ವಯಸ್ಸಿನಲ್ಲೇ ಕೋಡಿಂಗ್ ಮತ್ತು ಎಐ ಕಲಿತರೆ ಭವಿಷ್ಯದ ತಂತ್ರಜ್ಞಾನಕ್ಕೆ ಬೇಗನೆ ಹೊಂದಿಕೊಳ್ಳುತ್ತಾರೆ. ಇದು ಒಳ್ಳೆಯ ಬೆಳವಣಿಗೆ' ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.

ಮಾನಸಿಕ ಒತ್ತಡದ ಕಳವಳ: '6ನೇ ತರಗತಿಯ ಮಕ್ಕಳಿಗೆ ಇಷ್ಟು ಭಾರದ ಸಿಲಬಸ್ ಹಾಕುವುದು ಅವರ ಬಾಲ್ಯವನ್ನು ಕಸಿದುಕೊಂಡಂತೆ. ಆಟವಾಡುವ ವಯಸ್ಸಿನಲ್ಲಿ ನ್ಯೂರಲ್ ನೆಟ್‌ವರ್ಕ್ ಮತ್ತು ಕೋಡಿಂಗ್ ಕಲಿಯುವ ಒತ್ತಡ ಅವರ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ' ಎಂದು ಪೋಷಕರು ಮತ್ತು ಶಿಕ್ಷಣ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.

ಒಟ್ಟಾರೆಯಾಗಿ, ಇಂಜಿನಿಯರಿಂಗ್ ಲೆವೆಲ್ ಸಿಲಬಸ್ ಶಾಲಾ ಮಕ್ಕಳ ಬ್ಯಾಗ್ ಸೇರಿರುವುದು ಶಿಕ್ಷಣ ವ್ಯವಸ್ಥೆಯ ಬದಲಾವಣೆ ಹಾಗೂ ಮಕ್ಕಳ ಮೇಲಿನ ಒತ್ತಡದ ಬಗ್ಗೆ ಮತ್ತೊಮ್ಮೆ ಚರ್ಚೆಯನ್ನು ಮುನ್ನೆಲೆಗೆ ತಂದಿದೆ.

View post on Instagram