ಪತಿಯ ಅನಾರೋಗ್ಯದಿಂದ ಸಂಕಷ್ಟಕ್ಕೆ ಸಿಲುಕಿದ ಬೆಂಗಳೂರಿನ ಪ್ರಿಯಾ, ತನ್ನ ಇಬ್ಬರು ಪುಟ್ಟ ಮಕ್ಕಳನ್ನು ಆಟೋದಲ್ಲಿಯೇ ಇಟ್ಟುಕೊಂಡು ಚಾಲನೆ ಮಾಡುತ್ತಿದ್ದಾರೆ. ಕುಟುಂಬದ ಜವಾಬ್ದಾರಿ ಹೊತ್ತು ರಸ್ತೆಗಿಳಿದ ಈ ತಾಯಿಯ ಹೋರಾಟದ ಕಥೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆರವಿನ ಹಸ್ತಗಳು ಹರಿದುಬರುತ್ತಿವೆ.

ಬೆಂಗಳೂರು: ಜೀವನದಲ್ಲಿ ಸವಾಲುಗಳು ಎದುರಾದಾಗ ಕುಗ್ಗಿ ಹೋಗದೆ, ಕುಟುಂಬದ ಹೊಣೆ ಹೊರಲು ರಸ್ತೆಗಿಳಿದ ಬೆಂಗಳೂರಿನ ಮಹಿಳಾ ಆಟೋ ಚಾಲಕಿ ಪ್ರಿಯಾ ಅವರ ಕಥೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದ್ದು, ನೆಟ್ಟಿಗರ ಕಣ್ಣಾಲಿಗಳನ್ನು ಒದ್ದೆ ಮಾಡಿದೆ. ತನ್ನ 7 ವರ್ಷ ಹಾಗೂ 1 ವರ್ಷದ ಇಬ್ಬರು ಪುಟ್ಟ ಗಂಡು ಮಕ್ಕಳನ್ನು ಆಟೋ ರಿಕ್ಷಾದಲ್ಲೇ ಕುಳ್ಳಿರಿಸಿಕೊಂಡು ಅವರು ದುಡಿಯುತ್ತಿರುವ ದೃಶ್ಯ ಇಡೀ ಇಂಟರ್ನೆಟ್ ಜಗತ್ತನ್ನು ಭಾವುಕಗೊಳಿಸಿದೆ.

ಬ್ರೈನ್ ಸ್ಟ್ರೋಕ್‌ನಿಂದ ಪತಿಗೆ ಅನಾರೋಗ್ಯ, ಬೆನ್ನಿಗೆ ಬಿತ್ತು ಸಂಸಾರ:

ಸಾಮಾಜಿಕ ಜಾಲತಾಣ ಎಕ್ಸ್ (X) ಬಳಕೆದಾರ ಹಾಗೂ ಕಂಟೆಂಟ್ ಕ್ರಿಯೇಟರ್ ಅಂಕಿತ್ ಎಂಬುವವರು ಆಸ್ಪತ್ರೆಗೆ ಹೋಗಲು ಪ್ರಿಯಾ ಅವರ ಆಟೋ ಹತ್ತಿದಾಗ ಈ ಘಟನೆ ಬೆಳಕಿಗೆ ಬಂದಿದೆ. ಆಟೋದಲ್ಲಿ ಇಬ್ಬರು ಪುಟ್ಟ ಮಕ್ಕಳಿರುವುದನ್ನು ಕಂಡ ಅಂಕಿತ್ ವಿಚಾರಿಸಿದಾಗ, ಪ್ರಿಯಾ ತಮ್ಮ ಕಷ್ಟದ ದಿನಗಳ ಕುರಿತು ಹಂಚಿಕೊಂಡಿದ್ದಾರೆ. ಕಳೆದ ಒಂದು ವರ್ಷದಿಂದ ಅವರ ಪತಿ ಬ್ರೈನ್ ಸ್ಟ್ರೋಕ್‌ನಿಂದ ಬಳಲುತ್ತಿದ್ದು, ಸಂಪೂರ್ಣವಾಗಿ ಹಾಸಿಗೆ ಹಿಡಿದಿದ್ದಾರೆ. ಪತಿಯ ವೈದ್ಯಕೀಯ ವೆಚ್ಚ ಮತ್ತು ಮನೆ ನಿರ್ವಹಣೆಗೆ ಹಣವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ ಪ್ರಿಯಾ, ಬೇರೆ ದಾರಿ ಕಾಣದೆ ಕೇವಲ 7 ದಿನಗಳ ಹಿಂದೆಯಷ್ಟೇ ಆಟೋ ಚಾಲನೆ ಆರಂಭಿಸಿದ್ದಾರೆ.

ಮಕ್ಕಳ ಆರೈಕೆ ಜೊತೆಗೆ ಆಟೋ ಚಾಲನೆ:

ಒಂದೆಡೆ ಅನಾರೋಗ್ಯ ಪೀಡಿತ ಪತಿ, ಇನ್ನೊಂದೆಡೆ ಇಬ್ಬರು ಪುಟ್ಟ ಮಕ್ಕಳು. ಮಕ್ಕಳನ್ನು ಮನೆಯಲ್ಲಿ ಒಂಟಿಯಾಗಿ ಬಿಡಲು ಸಾಧ್ಯವಾಗದೆ, ಆಟೋದ ಹಿಂಭಾಗದಲ್ಲೇ ಅವರಿಗೆ ಜಾಗ ಮಾಡಿ ಕೂರಿಸಿಕೊಂಡು ಪ್ರಿಯಾ ಬೆಂಗಳೂರಿನ ದಟ್ಟಣೆಯ ರಸ್ತೆಗಳಲ್ಲಿ ಆಟೋ ಓಡಿಸುತ್ತಿದ್ದಾರೆ. ಅಂಕಿತ್ ತಮ್ಮ ಎಕ್ಸ್ ಖಾತೆಯಲ್ಲಿ ಈ ಕುರಿತು ಬರೆದುಕೊಂಡು, 'ನಾವು ನಮಗೇ ದೊಡ್ಡ ಸಮಸ್ಯೆಗಳಿವೆ ಎಂದುಕೊಳ್ಳುತ್ತೇವೆ, ಆದರೆ ಈ ತಾಯಿಯ ಹೋರಾಟ ನೋಡಿ!' ಎಂದು ಪ್ರಿಯಾ ಅವರ ಧೈರ್ಯವನ್ನು ಮೆಚ್ಚಿದ್ದಾರೆ.

ನೆರವಿಗೆ ಹರಿದುಬಂದ ಆನ್‌ಲೈನ್ ಹಸ್ತ:

ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಸಾವಿರಾರು ಜನರು ಪ್ರಿಯಾ ಅವರ ಧೈರ್ಯ ಮತ್ತು ಆತ್ಮಸ್ಥೈರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅನೇಕ ಸಾಮಾಜಿಕ ಜಾಲತಾಣ ಬಳಕೆದಾರರು ಅವರಿಗೆ ಆರ್ಥಿಕ ನೆರವು ನೀಡಲು ಮುಂದೆ ಬಂದಿದ್ದು, ಅವರನ್ನು ಸಂಪರ್ಕಿಸಲು ವಿವರಗಳನ್ನು ಕೇಳುತ್ತಿದ್ದಾರೆ.

ಇದೇ ವೇಳೆ, ನಗರದಲ್ಲಿನ ಆರ್ಥಿಕ ಅಸಮಾನತೆಯ ಕುರಿತಾಗಿಯೂ ಆನ್‌ಲೈನ್‌ನಲ್ಲಿ ಚರ್ಚೆಗಳು ಆರಂಭವಾಗಿವೆ. ಕೋಟಿ ಬೆಲೆಯ ಐಷಾರಾಮಿ ಕಾರುಗಳ ಚರ್ಚೆಯ ಪಕ್ಕದಲ್ಲೇ, ಇಬ್ಬರು ಮಕ್ಕಳನ್ನು ಕರೆದುಕೊಂಡು ಬದುಕಿಗಾಗಿ ಹೋರಾಡುತ್ತಿರುವ ಪ್ರಿಯಾ ಅವರಂತಹ ಜೀವಗಳ ನೈಜ ಸ್ಥಿತಿ ಸಮಾಜದ ಕನ್ನಡಿಯಂತಿದೆ ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ.

Scroll to load tweet…