ಪ್ರಯಾಣದ ವೇಳೆ ಹೋಟೆಲ್, ಹೋಮ್‌ಸ್ಟೇ ಅಥವಾ ಗೆಸ್ಟ್ ಹೌಸ್‌ನಲ್ಲಿ ತಂಗುವಾಗ ಕೇವಲ ಸ್ವಚ್ಛತೆ ಮಾತ್ರವಲ್ಲ, ನಿಮ್ಮ ಪ್ರೈವಸಿ ಮತ್ತು ಡಿಜಿಟಲ್ ಸುರಕ್ಷತೆಯ ಬಗ್ಗೆಯೂ ಎಚ್ಚರಿಕೆ ವಹಿಸುವುದು ಮುಖ್ಯ. ಹಿಡನ್ ಕ್ಯಾಮೆರಾ, Wifi, Smart TV ಸೇರಿದಂತೆ ಕೋಣೆಯಲ್ಲಿರುವ ಕೆಲವು ವಸ್ತುಗಳನ್ನು ಹೇಗೆ ಪರಿಶೀಲಿಸಬೇಕು ಎಂಬುದನ್ನು ಈ ಟಿಪ್ಸ್ ಮೂಲಕ ತಿಳಿಯಿರಿ.

ಲಕ್ಸುರಿ ರೂಮಿನಲ್ಲೂ ಹಿಡನ್ ಕ್ಯಾಮೆರಾ ಇರಬಹುದು ಎಚ್ಚರ

ಪ್ರಯಾಣದ ವೇಳೆ ಜನರು ಸಾಮಾನ್ಯವಾಗಿ ಹೋಟೆಲ್, ಗೆಸ್ಟ್ ಹೌಸ್, ಹೋಮ್‌ಸ್ಟೇ ಅಥವಾ ಬಾಡಿಗೆ ಅಪಾರ್ಟ್‌ಮೆಂಟ್‌ಗಳಲ್ಲಿ ತಂಗುತ್ತಾರೆ. ಹೆಚ್ಚಿನವರು ಕೇವಲ ಸ್ವಚ್ಛತೆಯ ಬಗ್ಗೆ ಗಮನ ಹರಿಸುತ್ತಾರೆ. ಆದರೆ ಅದಕ್ಕಿಂತಲೂ ಮುಖ್ಯವಾದದ್ದು ಸೇಫ್ಟಿ ಪರಿಶೀಲನೆ ಮಾಡುವುದು. ಏಕೆಂದರೆ ಕೇವಲ ನಿಮ್ಮ ವಸ್ತುಗಳು ಸುರಕ್ಷಿತವಾಗಿರುವುದು ಸಾಕಾಗುವುದಿಲ್ಲ. ನಿಮ್ಮ ಡಿಜಿಟಲ್ ಡೇಟಾ ಮತ್ತು ವೈಯಕ್ತಿಕ ಮಾಹಿತಿಯ ಸುರಕ್ಷತೆಯೂ ಬಹಳ ಮುಖ್ಯ. ಹೋಟೆಲ್ Wi-Fi, Smart TV ಮತ್ತು ಇಂಟರ್ನೆಟ್‌ಗೆ ಸಂಪರ್ಕ ಹೊಂದಿರುವ ಕೋಣೆಯಲ್ಲಿರುವ ಎಲೆಕ್ಟ್ರಾನಿಕ್ ಸಾಧನಗಳು ಕೆಲವೊಮ್ಮೆ ನಿಮ್ಮ ಪ್ರೈವಸಿಗೆ ಅಪಾಯ ಉಂಟುಮಾಡಬಹುದು.

ಇಂತಹ ಸಂದರ್ಭದಲ್ಲಿ ಕೆಲವು ಸರಳ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವ ಮೂಲಕ ನಿಮ್ಮ ವೈಯಕ್ತಿಕ ಮಾಹಿತಿ, ಮೊಬೈಲ್, ಲ್ಯಾಪ್‌ಟಾಪ್ ಮತ್ತು ಆನ್‌ಲೈನ್ ಖಾತೆಗಳನ್ನು ಸುರಕ್ಷಿತವಾಗಿಟ್ಟುಕೊಳ್ಳಬಹುದು. ಕೋಣೆಯಲ್ಲಿ ಸಂಪೂರ್ಣವಾಗಿ ಆರಾಮವಾಗುವ ಮೊದಲು ಕೆಲವು ನಿಮಿಷ ತೆಗೆದುಕೊಂಡು ಕೆಲವು ವಸ್ತುಗಳನ್ನು ಚೆನ್ನಾಗಿ ಪರಿಶೀಲಿಸುವುದು ಬಹಳ ಮುಖ್ಯ. ಹೊಸ ಸ್ಥಳದಲ್ಲಿ ತಂಗಿದ ನಂತರ ಯಾವ ವಿಷಯಗಳ ಬಗ್ಗೆ ಗಮನಹರಿಸಬೇಕು ಎಂಬುದನ್ನು ತಿಳಿಯೋಣ.

Wi-Fiಗೆ ಸಂಪರ್ಕಿಸುವ ಮೊದಲು ಎಚ್ಚರಿಕೆ ವಹಿಸಿ

ಹೋಟೆಲ್ ಮತ್ತು ಗೆಸ್ಟ್ ಹೌಸ್‌ಗಳಲ್ಲಿ ಸಾಮಾನ್ಯವಾಗಿ ಉಚಿತ Wi-Fi ಸೌಲಭ್ಯ ನೀಡಲಾಗುತ್ತದೆ. ಆದರೆ ಪ್ರತಿಯೊಂದು ನೆಟ್‌ವರ್ಕ್ ಕೂಡ ಸಂಪೂರ್ಣವಾಗಿ ಸುರಕ್ಷಿತವಾಗಿರುವುದಿಲ್ಲ. ಆದ್ದರಿಂದ ಸಾರ್ವಜನಿಕ Wi-Fi ಬಳಸುವಾಗ ಬ್ಯಾಂಕಿಂಗ್, ಆನ್‌ಲೈನ್ ಪಾವತಿ ಅಥವಾ ಸೂಕ್ಷ್ಮ ಮಾಹಿತಿಯಿರುವ ಖಾತೆಗಳನ್ನು ಬಳಸುವುದನ್ನು ತಪ್ಪಿಸಿ. ಸಾಧ್ಯವಾದರೆ VPN ಬಳಸಿ ಅಥವಾ ಮೊಬೈಲ್ ಡೇಟಾ ಬಳಸುವುದು ಉತ್ತಮ. Wi-Fiಗೆ ಸಂಪರ್ಕಿಸುವ ಮೊದಲು ಅದರ ಸರಿಯಾದ ಹೆಸರನ್ನು ರಿಸೆಪ್ಷನ್‌ನಲ್ಲಿ ಖಚಿತವಾಗಿ ಕೇಳಿಕೊಳ್ಳಿ.

ಕೋಣೆಯಲ್ಲಿ ಅಡಗಿರುವ ಕ್ಯಾಮೆರಾಗಳನ್ನು ಪರಿಶೀಲಿಸಿ

ಹೋಟೆಲ್ ಕೋಣೆಯಲ್ಲಿ ಹಿಡನ್ ಕ್ಯಾಮೆರಾ ಅಡಗಿಸಿಟ್ಟಿರುವ ಅಪಾಯವೂ ಇರಬಹುದು. ವಿಶೇಷವಾಗಿ ಮಹಿಳೆಯರನ್ನು ರೆಕಾರ್ಡ್ ಮಾಡಲು ಇಂತಹ ಕ್ಯಾಮೆರಾಗಳನ್ನು ಅಳವಡಿಸುವ ಸಾಧ್ಯತೆಯ ಬಗ್ಗೆ ಎಚ್ಚರಿಕೆ ವಹಿಸಬೇಕು. ಸ್ಮೋಕ್ ಡಿಟೆಕ್ಟರ್‌ನಿಂದ ಹಿಡಿದು ಅಲಾರಂ ಕ್ಲಾಕ್, USB ಚಾರ್ಜರ್, ವಿದ್ಯುತ್ ಸಾಕೆಟ್, ಫೋಟೋ ಫ್ರೇಮ್, ಕನ್ನಡಿ ಮತ್ತು ಅಲಂಕಾರಿಕ ವಸ್ತುಗಳಂತಹ ವಸ್ತುಗಳಲ್ಲಿ ಕ್ಯಾಮೆರಾ ಅಡಗಿಸಿರಬಹುದು. ಇವುಗಳನ್ನು ಸರಿಯಾಗಿ ಪರಿಶೀಲಿಸಿ. ಯಾವುದಾದರೂ ವಸ್ತುವಿನ ಬಗ್ಗೆ ಅನುಮಾನ ಬಂದರೆ ಅದನ್ನು ಮುಟ್ಟಬೇಡಿ. ಅದರ ಫೋಟೋ ತೆಗೆದುಕೊಂಡು ಹೋಟೆಲ್ ಮ್ಯಾನೇಜ್‌ಮೆಂಟ್ ಅಥವಾ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿ.

ಸ್ಮಾರ್ಟ್ ಡಿವೈಸ್ ಬಳಸುವಾಗ ಎಚ್ಚರ

ಇತ್ತೀಚಿನ ದಿನಗಳಲ್ಲಿ ಹಲವು ಹೋಟೆಲ್‌ಗಳಲ್ಲಿ ಸ್ಮಾರ್ಟ್ ಟಿವಿ, ಸ್ಮಾರ್ಟ್ ಸ್ಪೀಕರ್r ಮತ್ತು ಇಂಟರ್ನೆಟ್‌ಗೆ ಸಂಪರ್ಕ ಹೊಂದಿರುವ ಇತರ ಸಾಧನಗಳು ಇರುತ್ತವೆ. ಇವುಗಳಲ್ಲಿ ನಿಮ್ಮ ವೈಯಕ್ತಿಕ ಖಾತೆಗಳಿಗೆ ಲಾಗಿನ್ ಮಾಡುವಾಗ ಎಚ್ಚರಿಕೆ ವಹಿಸಿ. ನೀವು ಟಿವಿಯಲ್ಲಿ ಯಾವುದೇ OTT ಅಥವಾ ಸ್ಟ್ರೀಮಿಂಗ್ ಸರ್ವೀಸ್ ಬಳಸಿದ್ದರೆ, ಹೋಟೆಲ್‌ನಿಂದ ಹೊರಡುವ ಮೊದಲು Logout ಮಾಡಲು ಮರೆಯಬೇಡಿ. ಇಂತಹ ಸಾಧನಗಳಲ್ಲಿ ಬ್ಯಾಂಕಿಂಗ್ ಅಥವಾ ಇತರ ಸೂಕ್ಷ್ಮ ಮಾಹಿತಿಯನ್ನು ನಮೂದಿಸುವುದನ್ನು ತಪ್ಪಿಸಿ.

ಪ್ರಯಾಣಕ್ಕೂ ಮೊದಲು ನಿಮ್ಮ ಸಾಧನಗಳನ್ನು ಸುರಕ್ಷಿತಗೊಳಿಸಿ

ಮೊಬೈಲ್ ಮತ್ತು ಲ್ಯಾಪ್‌ಟಾಪ್‌ನಲ್ಲಿ ಸ್ಕ್ರೀನ್ ಲಾಕ್ ಕಡ್ಡಾಯವಾಗಿ ಹಾಕಿ ಹಾಗೂ ಸ್ಟ್ರಾಂಗ್ ಪಾಸ್ ವರ್ಡ್ ಬಳಸಿ. ಪ್ರಮುಖ ದಾಖಲೆಗಳ ಡಿಜಿಟಲ್ ಪ್ರತಿಗಳನ್ನು ಮೊಬೈಲ್ ನಲ್ಲಿ ಇಟ್ಟುಕೊಳ್ಳುವುದನ್ನು ತಪ್ಪಿಸಿ. ನಿಮ್ಮ ಡಿವೈಸ್ ಕಳೆದುಹೋದರೆ ಅಥವಾ ಕಳ್ಳತನವಾದರೆ ಸಹಾಯವಾಗುವಂತೆ Find My Device ನಂತಹ ಆಯ್ಕೆ ಆನ್‌ ಮಾಡಿ. ಪ್ರಯಾಣಕ್ಕೂ ಮೊದಲು ಮೊಬೈಲ್ ಮತ್ತು ಲ್ಯಾಪ್‌ಟಾಪ್‌ನ Software Update ಮಾಡಿಕೊಳ್ಳುವುದು ಕೂಡ ಮುಖ್ಯ.