ಹಿಮಾಚಲ ಪ್ರದೇಶದಲ್ಲಿ ವಿದೇಶಿ ಪ್ರವಾಸಿಗನೊಬ್ಬ ಬೇರೆಯವರು ಎಸೆದ ಕಸವನ್ನು ಹೆಕ್ಕಿ ಕಸದ ಬುಟ್ಟಿಗೆ ಹಾಕುತ್ತಿರುವ ವೀಡಿಯೋ ವೈರಲ್ ಆಗಿದೆ. ಪ್ರವಾಸಿ ತಾಣದಲ್ಲಿ ಕಸ ಎಸೆಯುವ ಬುದ್ಧಿಗೇಡಿ ಪ್ರವಾಸಿಗರ ಬಗ್ಗೆ ಭಾರಿ ಆಕ್ರೋಶ ವ್ಯಕ್ತವಾಗ್ತಿದೆ..
ಹಿಮಾಚಲ ಪ್ರದೇಶದ ಪ್ರವಾಸಿ ತಾಣವೊಂದರಲ್ಲಿ ಪ್ರವಾಸಿಗರು ಎಸೆದ ಕಸವನ್ನು ವಿದೇಶಿ ಪ್ರವಾಸಿಗನೋರ್ವ ಹೆಕ್ಕಿ ಕಸದ ಡಬ್ಬಿಗೆ ಹಾಕಿದ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದೆ. ಹಿಮಾಚಲ ಪ್ರದೇಶದ ಜಲಪಾತವೊಂದರ ಸಮೀಪ ಸೆರೆಯಾದ ವೀಡಿಯೋ ಇದಾಗಿದೆ.
ಟ್ವಿಟ್ಟರ್‌ನಲ್ಲಿ ನಿಕಿಲ್ ಸೈನಿ ಎಂಬುವವರು ಈ ವೀಡಿಯೋವನ್ನು ಪೋಸ್ಟ್ ಮಾಡಿದ್ದು, ವೀಡಿಯೋದಲ್ಲಿ ಹಿಮಾಚಲ ಪ್ರದೇಶದ ಕಾಂಗ್ರಾದಲ್ಲಿ ಜಲಪಾತವೊಂದರ ಬುಡದಲ್ಲಿ ವಿದೇಶಿ ಪ್ರವಾಸಿಗನೋರ್ವ ಬೇರೆ ಯಾರೋ ಎಸೆದು ಹೋದ ಪ್ಲಾಸ್ಟಿಕ್ ಕಸವನ್ನು ಹೆಕ್ಕಿ ತಂದು ಕಸದ ಬುಟ್ಟಿಗೆ ಹಾಕುತ್ತಿರುವುದು ಕಾಣುತ್ತಿದೆ. ವೀಡಿಯೋದಲ್ಲಿ ಆ ವಿದೇಶಿ ವ್ಯಕ್ತಿ, ನಾನು ಒಂದು ದಿನ ಬಿಡುವು ಹೊಂದಿದ್ದರೆ ಇಲ್ಲಿ ಕುಳಿತು ಜನರಿಗೆ ಇದನ್ನು ಇಲ್ಲಿಂದ ತೆಗೆಯಿರಿ ಎಂದು ಹೇಳುತ್ತಿದ್ದೆ. ಅದನ್ನು ಹೇಳುವುದಕ್ಕೆ ನನಗೆ ಏನೂ ಸಮಸ್ಯೆ ಇಲ್ಲ ಎಂದು ವಿದೇಶಿಗ ಹೇಳುವುದನ್ನು ವೀಡಿಯೋದಲ್ಲಿ ನೋಡಬಹುದಾಗಿದೆ.
ಇಲ್ಲಿನ ಸ್ಥಳೀಯ ಪ್ರವಾಸಿಗರು ನಾಚಿಕೆ ಇಲ್ಲದೇ ಈ ಸುಂದರ ಪ್ರವಾಸಿ ತಾಣದಲ್ಲಿ ಕಸ ಎಸೆಯುತ್ತಿದ್ದರೆ, ವಿದೇಶಿಗರೊಬ್ಬರು ನಮ್ಮ ಪರಿಸರದ ಬಗ್ಗೆ ನಮಗಿಂತ ಹೆಚ್ಚು ಕಾಳಜಿ ತೋರುತ್ತಿರುವುದನ್ನು ನೋಡುವುದು ನಾಚಿಕೆಗೇಡಿನ ವಿಚಾರ. ಇಲ್ಲಿ ಯಾವುದೇ ಸರ್ಕಾರವನ್ನು ದೂರುವುದಕ್ಕೆ ಆಗುವುದಿಲ್ಲ, ಏಕೆಂದರೆ ಜನ ಬದಲಾಗಬೇಕು, ನಮ್ಮ ದೇಶ ಸ್ವಚ್ಛವಾಗಿರಬೇಕು ಎಂದರೆ ನಮ್ಮ ಜನರ ಮನಸ್ಥಿತಿ ಬದಲಾಗಬೇಕು ಎಂದು ವೀಡಿಯೋ ಶೇರ್ ಮಾಡಿದ ನಿಕಿಲ್ ಸೈನಿ ಬರೆದುಕೊಂಡಿದ್ದಾರೆ.
ಈ ವೀಡಿಯೋವನ್ನು 4 ಮಿಲಿಯನ್‌ಗೂ ಹೆಚ್ಚು ಜನ ವೀಕ್ಷಿಸಿದ್ದಾರೆ. ವೀಡಿಯೋ ನೋಡಿದ ಅನೇಕರು ಇಲ್ಲಿ ಕಸ ಎಸೆದ ಪ್ರವಾಸಿಗರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದೆಲ್ಲವೂ ಮನುಷ್ಯರ ಮನಸ್ಥಿತಿಯನನ್ನು ಅವಲಂಬಿಸಿದೆ. ಅನೇಕರು ಇದಕ್ಕೆ ಸರ್ಕಾರವನ್ನು ದೂರುತ್ತಾರೆ. ಆದರೆ ಪ್ರತಿಯೊಬ್ಬರನ್ನು ಸರ್ಕಾರ ಕಾಯವುದಕ್ಕೆ ಆಗುವುದಿಲ್ಲ, ಎಲ್ಲಾ ಕಡೆ ಕಸ ಹಾಕಬೇಡಿ ಎಂಬ ಬೋರ್ಡ್‌ಗಳನ್ನು ಇಟ್ಟಿರುತ್ತಾರೆ. ಹೀಗಿದ್ದು ಜನ ಕಸ ಎಸೆಯುತ್ತಾರೆ. ಪ್ರತಿಯೊಬ್ಬ ಪ್ರವಾಸಿಗನು ಸರ್ಕಾರದ ಆಸ್ತಿಯನ್ನು, ಪ್ರವಾಸಿ ತಾಣಗಳನ್ನು ನಮ್ಮದು ಎಂಬಂತೆ ನೋಡಿದಾಗ ಮಾತ್ರ ಸ್ವಚ್ಛತೆ ಸಾಧ್ಯ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.
ವಿದೇಶಿಗರ ಸ್ಟೈಲ್ ಫಾಲೋ ಮಾಡೋ ಭಾರತೀಯರೇಕೆ ಅವರ ಒಳ್ಳೆಗುಣಗಳನ್ನು ಕಲಿಯೋದಿಲ್ಲ ಯಾಕೆ?
ಬಹುತೇಕ ಭಾರತೀಯರು ವಿದೇಶಿಗರ, ಅದರಲ್ಲೂ ಪಾಶ್ಚಿಮಾತ್ಯ ಜನ ಭಾಷೆ, ಸಂಸ್ಕೃತಿ ಆಚಾರ, ವಿಚಾರ, ಬಟ್ಟೆ ಸ್ಟೈಲ್,ಆಹಾರ ಸಂಸ್ಕೃತಿ ಹೀಗೆ ಪ್ರತಿಯೊಂದನ್ನು ಫಾಲೋ ಮಾಡ್ತಾರೆ. ಆದರೆ ಅವರ ಒಳ್ಳೆಯ ಗುಣಗಳನ್ನು ಮಾತ್ರ ನಮ್ಮ ಜನ ಯಾವುದೇ ಕಾರಣಕ್ಕೂ ಫಾಲೋ ಮಾಡಲ್ಲ, ವಿದೇಶಗಳಲ್ಲಿ ಸುತ್ತಿ ಬರ್ತಾರೆ ಅಲ್ಲಿ ಅಷ್ಟು ಚೆನ್ನಾಗಿದೆ. ಅಷ್ಟು ಶಿಸ್ತಿದೆ. ಎಲ್ಲೂ ಒಂದೇ ಒಂದು ತುಂಡು ಕಸ ಸಿಕ್ಕಿಲ್ಲ, ಅಂತಾರೆ ಆದರೆ ನಮ್ಮ ದೇಶದ ಪ್ರವಾಸಿ ತಾಣಕ್ಕೆ ಹೋಗ್ತಾರೆ. ನಿಸರ್ಗದ ಮಧ್ಯೆ ಇರುವ ಜಲಪಾತಗಳಲ್ಲಿ ಕಾಡಿನಲ್ಲಿ ತಾವು ತೆಗೆದುಕೊಂಡು ಹೋದ ಖಾಲಿ ಡಬ್ಬಿಗಳು, ನೀರಿನ ಬಾಟಲ್‌ಗಳು ಚಾಕೋಲೆಟ್ ಬಿಸ್ಕೆಟ್ ಪ್ಯಾಕೇಟುಗಳನ್ನು ಅಲ್ಲಿ ಎಸೆದು ಬರುತ್ತಾರೆ. ಮತ್ತೆ ನಮ್ಮ ದೇಶವನ್ನು ದೂರುತ್ತಾ ಬರುತ್ತಾರೆ. ಹಾಗಿದ್ರೆ ನಮ್ಮ ದೇಶವನ್ನು ಕ್ಲೀನ್ ಮಾಡಬೇಕಾದವರು ಯಾರು ನಾವೇ ಅಲ್ಲವೇ?
ಪ್ರವಾಸಿಗರು ಎಸೆದ ಕಸವನ್ನು ಅವರಿಂದಲೇ ಹೆಕ್ಕಿಸಿದ ಸ್ಥಳೀಯ ಯುವಕ
ಹೆಚ್ಚು ದೂರ ಹೋಗೋದು ಬೇಡ ಇತ್ತೀಚೆಗೆ ಮಡಿಕೇರಿಯಲ್ಲಿಯೇ ಪ್ರವಾಸಿಗರು ಯಾರೋ ತಿಂದು ಖಾಲಿಯಾದ ಬಿಸ್ಕೆಟ್ ಚಾಕೋಲೇಟ್‌ಗಳ ಕಸವನ್ನು ಚಲಿಸುತ್ತಿದ್ದಾಗಲೇ ವಾಹನದಿಂದ ರಸ್ತೆಗೆಸೆದು ಹೋದರು. ಸ್ಥಳೀಯರು ಯಾರೋ ದಿಟ್ಟ ನಿಲುವು ತೆಗೆದುಕೊಂಡು ಅವರನ್ನು ಹಿಂಬಾಲಿಸಿ ಹೋಗಿ ಕಸವನ್ನು ಅವರ ಕೈಯಲ್ಲೇ ಹೆಕ್ಕಿಸಿದರು. ಆದರೆ ಪ್ರತಿದಿನವೂ ಪ್ರತಿಕ್ಷಣವೂ ಪ್ರವಾಸಿಗರನ್ನು ಕಾವಲು ಕಾಯುವುದಕ್ಕೆ ಸಾಧ್ಯವೇ. ಕನಷ್ಟೇ ಶಿಕ್ಷಣ ಕಲಿತಿರುವ ನಾವು ಈ ಬಗ್ಗೆ ಆತ್ಮವಲೋಕನ ಮಾಡಿಕೊಳ್ಳಬೇಕಿದೆ. ನಮ್ಮ ಮನೆಯೊಳಗೆ ಮಾತ್ರ ನೀಟ್ ಆಗಿ ಇಟ್ಕೊಂಡ್ರೆ ಸಾಲದು ನಮ್ಮ ನೆಲ, ಭೂಮಿ, ಸುತ್ತಲಿನ ಪರಿಸರ ಪ್ರವಾಸಿ ತಾಣಗಳ ಬಗ್ಗೆಯೂ ಯೋಚನೆ ಮಾಡಬೇಕು. ನಮ್ಮ ಮುಂದಿನ ಪೀಳಿಗೆಗೂ ಅದು ನಮ್ಮ ಕಣ್ಣಿಗೆ ಕಂಡಂತೆ ಸೊಗಸಾಗಿ ಕಾಣುವಂತೆ ಇರಬೇಕು ಹೀಗೆ ಪ್ರತಿಯೊಬ್ಬ ಮನುಷ್ಯನೂ ಯೋಚನೆ ಮಾಡಿದಾಗ ಮಾತ್ರ ಇಂತಹ ಅನಾಚಾರಗಳಿಗೊಂದು ತಡೆ ಬೀಳಲು ಸಾಧ್ಯ. ನೀವೆನಂತಿರಿ.
