ಶಿರಾಡಿಘಾಟ್‌ನಲ್ಲಿ ಪ್ರವಾಸಿಗರ ಕಾರು ಜಲಪಾತಕ್ಕೆ ಉರುಳಿ ಬಿದ್ದ ಘಟನೆ. ಚಾಲಕನ ನಿಯಂತ್ರಣ ತಪ್ಪಿ ಕಾರು ಜಲಪಾತಕ್ಕೆ ಬಿದ್ದಿದೆ. ಅದೃಷ್ಟವಶಾತ್ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಶಿರಾಡಿಘಾಟ್‌ನಲ್ಲಿ ಕಾರೊಂದು ನಿಯಂತ್ರಣ ತಪ್ಪಿ ಜಲಪಾತಕ್ಕೆ ಉರುಳಿದ ಘಟನೆ ಸಂಭವಿಸಿದೆ. ಬೆಂಗಳೂರು ಮೂಲದ ಪ್ರವಾಸಿಗರು ಪ್ರಯಾಣಿಸುತ್ತಿದ್ದ ಕಾರು, ಜಲಪಾತದ ದರ್ಶನಕ್ಕಾಗಿ ನಿಲ್ಲಿಸಿದ್ದ ಸಂದರ್ಭದಲ್ಲೇ ಚಾಲಕನ ನಿಯಂತ್ರಣ ತಪ್ಪಿ ಕಾರು ಕಿಡಿಗೇಡಿಯಾಗಿ ಪಾಲ್ಸ್‌ಗೆ ಉರುಳಿತು.

ಅದೃಷ್ಟವಶಾತ್ ಯಾವುದೇ ಭಾರಿ ಅನಾಹುತ ಸಂಭವಿಸದೇ, ಕಾರಿನಲ್ಲಿ ಇದ್ದ ಪ್ರಯಾಣಿಕರು ಅಪಾಯದಿಂದ ಪಾರಾದರು. ಚಾಲಕನಿಗೆ ಮಾತ್ರ ಸಣ್ಣಪುಟ್ಟ ಗಾಯಗಳಾಗಿವೆ. ಮಲೆನಾಡಿನ ಪ್ರದೇಶದಲ್ಲಿ ಇತ್ತೀಚೆಗೆ ಸುರಿಯುತ್ತಿರುವ ಮಳೆಯಿಂದಾಗಿ ಹಲವು ಕಿರು ಜಲಪಾತಗಳು ನಿರ್ಮಾಣವಾಗಿದ್ದು, ಪ್ರವಾಸಿಗರನ್ನು ಆಕರ್ಷಿಸುತ್ತಿವೆ. ಘಟನೆ ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದೆ.

ಬೆಂಗಳೂರು ಮತ್ತು ಚಿಕ್ಕಮಗಳೂರಿಗೆ ಆರೆಂಜ್ ಅಲರ್ಟ್ – ಬಿರುಗಾಳಿ, ಮಳೆಗೆ ಮುನ್ಸೂಚನೆ

ರಾಜ್ಯದ ಹಲವೆಡೆ ಮಳೆ ಆರ್ಭಟಿಸುತ್ತಿರುವ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಗಳ ಜೊತೆಗೆ ಚಿಕ್ಕಮಗಳೂರು ಜಿಲ್ಲೆಗೆ ಆರೆಂಜ್ ಅಲರ್ಟ್ ಘೋಷಿಸಿದೆ. ಗಂಟೆಗೆ 50 ಕಿಲೋಮೀಟರ್ ವೇಗದ ಬಿರುಗಾಳಿ ಹಾಗೂ ಮಳೆಯ ಸಂಭವವಿದ್ದು, ದುರ್ಬಲ ಮರಗಳು ಹಾಗೂ ರೆಂಬೆಗಳು ಬೀಳುವ ಸಾಧ್ಯತೆಗಳಿವೆ ಎಂದು ಇಲಾಖೆ ತಿಳಿಸಿದೆ.

ಇತ್ತ, ಬೆಂಗಳೂರಿನಲ್ಲಿ ಬಿರುಸಿನ ಮಳೆಯಿಂದಾಗಿ ಚಾಮರಾಜಪೇಟೆ 5ನೇ ಮುಖ್ಯ ರಸ್ತೆಯಲ್ಲಿ ಬುಡ ಸಮೇತ ಧರೆಗುರುಳಿದ ಮರ ಸ್ಥಳೀಯರ ಆತಂಕಕ್ಕೆ ಕಾರಣವಾಯಿತು. ಅದೃಷ್ಟವಶಾತ್ ಈ ಘಟನೆ ವೇಳೆ ಯಾವುದೇ ಅಪಾಯ ಸಂಭವಿಸಿಲ್ಲ. ಮರ ರಸ್ತೆಗೆ ಬಿದ್ದು ಕೆಲಕಾಲ ರಸ್ತೆ ಸಂಪರ್ಕ ಸಂಪೂರ್ಣವಾಗಿ ಸ್ಥಗಿತಗೊಂಡಿತು. ಮರ ರಸ್ತೆಯ ಬದಿಯಲ್ಲಿದ್ದ ತಳ್ಳುವ ಗಾಡಿಯ ಮೇಲೆ ಬಿದ್ದರೂ ಹೆಚ್ಚಿನ ಹಾನಿ ತಪ್ಪಿದೆ. ರಾತ್ರಿ 10.45ರ ಸುಮಾರಿಗೆ ಮರ ಧರೆಗುರುಳಿದಾಗ ರಸ್ತೆ ಮೇಲೆ ಯಾರೂ ಸಂಚರಿಸುತ್ತಿರಲಿಲ್ಲ ಎನ್ನುವುದು ಸಮಾಧಾನದ ವಿಷಯವಾಗಿದೆ. ಬಿಬಿಎಂಪಿ ಸಿಬ್ಬಂದಿ ಚಾಮರಾಜಪೇಟೆ ಪೊಲೀಸರ ಸಮ್ಮುಖದಲ್ಲಿ ಮರ ತೆರವು ಕಾರ್ಯಾಚರಣೆ ಕೈಗೊಂಡಿದ್ದಾರೆ.