ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಬೇಸಿಗೆ ರಜೆಗಾಗಿ ಬೆಂಗಳೂರಿನಿಂದ ಬನ್ನೇರುಘಟ್ಟ ಮತ್ತು ಮುತ್ಯಾಲಮಡುವು ಪ್ರವಾಸಿ ತಾಣಗಳಿಗೆ ಹೊಸ ಹವಾನಿಯಂತ್ರಿತ ಬಸ್ ಪ್ರವಾಸವನ್ನು ಆರಂಭಿಸಿದೆ. ಈ ಪ್ಯಾಕೇಜ್‌ನಲ್ಲಿ ಪ್ರಯಾಣ, ಪ್ರವೇಶ ಶುಲ್ಕಗಳು, ಸಫಾರಿ, ಬೋಟಿಂಗ್ ಮತ್ತು ಊಟದ ವ್ಯವಸ್ಥೆ ಸೇರಿದೆ.

ಬೆಂಗಳೂರು: ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು ಬೇಸಿಗೆ ರಜೆಯಲ್ಲಿ ಪ್ರವಾಸಿಗರು ಬೆಂಗಳೂರು ಹೊರವಲಯದ ಬನ್ನೇರುಘಟ್ಟ ಮತ್ತು ಮುತ್ಯಾಲಮಡುವು ಪ್ರವಾಸಿ ತಾಣಗಳನ್ನು ವೀಕ್ಷಿಸಲು ಹವಾನಿಯಂತ್ರಿತ ಬಸ್‌ ಸೌಲಭ್ಯ ಆರಂಭಿಸಿದೆ.

Add Asianetnews Kannada as a Preferred SourcegooglePreferred

ವಾರದಲ್ಲಿ ಯಾವೆಲ್ಲಾ ದಿನ ಇರಲಿದೆ ಪ್ರವಾಸ? ಸಮಯ ಏನು?

ಇದರೊಂದಿಗೆ ನಿಗಮವು ಈಗಾಗಲೇ ನಡೆಸುತ್ತಿರುವ ರಾಜ್ಯದ ವಿವಿಧ ಪ್ರವಾಸಿತಾಣಗಳ ಪ್ರವಾಸ ಯೋಜನೆ ಜೊತೆಗೆ ಹೊಸ ಪ್ರವಾಸ ಯೋಜನೆ ಸೇರರ್ಪಡೆಯಾಗಿದೆ. ಬನ್ನೇರುಘಟ್ಟ ಮತ್ತು ಮುತ್ಯಾಲಮಡುವಿಗೆ ಯಶವಂತಪುರದಿಂದ ಮಂಗಳವಾರ ಹೊರತುಪಡಿಸಿ ವಾರದ ಉಳಿದೆಲ್ಲಾ ದಿನಗಳಲ್ಲಿ ಬೆಳಗ್ಗೆ 7.15ಕ್ಕೆ ಹವಾನಿಯಂತ್ರಿತ ಬಸ್‌ ಹೊರಡಲಿದೆ. ಈ ಬಸ್‌ 7.30ಕ್ಕೆ ಕೆಂಪೇಗೌಡ ಬಸ್‌ ನಿಲ್ದಾಣ, 7.45ಕ್ಕೆ ಶಾಂತಿನಗರ ಬಸ್‌ ನಿಲ್ದಾಣ ಮತ್ತು 8 ಗಂಟೆಗೆ ಜಯನಗರ ಬಸ್‌ ನಿಲ್ದಾಣದ ಮಾರ್ಗವಾಗಿ ಸಂಚರಿಸಲಿದ್ದು, ಹೆಚ್ಚಿನ ಪ್ರವಾಸಿಗರಿಗೆ ತಮ್ಮ ಮನೆಯ ಬಳಿಯೇ ಬಸ್‌ ಹತ್ತಲು ಅವಕಾಶ ಕಲ್ಪಿಸಲಾಗಿದೆ.

ಪ್ಯಾಕೇಜ್ ಶುಲ್ಕ ಎಷ್ಟು?

ಪ್ರವಾಸ ಯೋಜನೆಯು ಬನ್ನೇರುಘಟ್ಟ ಮೃಗಾಲಯ, ಸಫಾರಿ-ಚಿಟ್ಟೆ ಉದ್ಯಾನ, ಮುತ್ಯಾಲಮಡುವು-ಬೋಡಿಂಗ್‌ ಸೂರ್ಯಾಸ್ತ ವೀಕ್ಷಣೆ ಒಳಗೊಂಡಿದೆ. ಪ್ರವಾಸಕ್ಕೆ ಒಬ್ಬರಿಗೆ 1,680 ರು. ಶುಲ್ಕ ನಿಗದಿಪಡಿಸಲಾಗಿದೆ. ಈ ದರವು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದಲ್ಲಿನ ಎಲ್ಲಾ ರೀತಿಯ ಪ್ರವೇಶ ಶುಲ್ಕಗಳು, ಮುತ್ಯಾಲಮುಡುವಿನಲ್ಲಿ ಬೋಡಿಂಗ್‌, ಬೆಳಗಿನ ಉಪಹಾರ, ಮಧ್ಯಾಹ್ನದ ಭೋಜನ ಹಾಗೂ ಸಂಜೆಯ ಲಘು ಉಪಹಾರ ಶುಲ್ಕ ಒಳಗೊಂಡಿದೆ. 

ಇದನ್ನೂ ಓದಿ: ಈ ದೇಶದಲ್ಲಿ ನದಿಯೇ ಇಲ್ಲ, ನೀರಿಗೆ ಇವರೆಲ್ಲ ಏನು ಮಾಡ್ತಾರೆ?

ಬುಕ್ಕಿಂಗ್ ಮಾಡೋದು ಹೇಗೆ?

ಆಸಕ್ತ ಪ್ರವಾಸಿಗರು ನಿಗಮದ ಯಶವಂತಪುರ ಬುಕ್ಕಿಂಗ್‌ ಕೌಂಟರ್‌, ನಿಗಮ ಅಧಿಕೃತ ಟ್ರಾವೆಲ್‌ ಏಜೆಂಟ್‌ಗಳು ಹಾಗೂ ನಿಗಮದ ವೆಬ್‌ಸೈಟ್‌ ಮೂಲಕ ಮುಂಗಡ ಬುಕ್ಕಿಂಗ್‌ ಮಾಡಿಕೊಳ್ಳಬಹುದು. ಹೆಚ್ಚಿನ ಮಾಹಿತಿಗೆ ನಿಗಮದ ವೆಬ್‌ಸೈಟ್‌ www.kstdc.co ಅಥವಾ ದೂ: 080 4334 4334/35, 8970650070, 8970650021 ಸಂಪರ್ಕಿಸಬಹುದು ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಮಂಗಳೂರು-ಮಂತ್ರಾಲಯ ಪಲ್ಲಕ್ಕಿ ನಾನ್ ಎಸಿ ಸ್ಲೀಪರ್; ಇತ್ತ ಮುಂಡಗೋಡ-ಪಣಜಿ ಬಸ್ ಸೇವೆ ಆರಂಭ