ಬೆಂಗಳೂರು: ಕೊರೋನಾ ವಾರಿಯರ್ಸ್‌ ಮೇಲಿನ ಹಲ್ಲೆ ತಡೆಯಲು ಸರ್ಕಾರ ಸುಗ್ರೀವಾಜ್ಞೆಯ ದಾರಿ ಹಿಡಿಯಲು ಮುಂದಾಗಿರುವ ನಡುವೆಯೂ ಸಾರ್ವಜನಿಕರ ಆರೋಗ್ಯ ರಕ್ಷಣೆಗಾಗಿ ಹಗಲು ರಾತ್ರಿ ದುಡಿಯುತ್ತಿರುವವರ ಮೇಲಿನ ಗೂಂಡಾ ವರ್ತನೆ ರಾಜ್ಯದಲ್ಲಿ ಹೆಚ್ಚುತ್ತಲೇ ಇದೆ. ಕೊಡಗು, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಕೋಲಾರ, ಚಿಕ್ಕಬಳ್ಳಾಪುರ ಮತ್ತು ಮೈಸೂರಲ್ಲಿ ಆಶಾ ಕಾರ್ಯಕರ್ತರು, ಪೊಲೀಸರು, ಅಧಿಕಾರಿಗಳು ಮತ್ತು ಪೌರಕಾರ್ಮಿಕರ ಮೇಲೆ ಹಲ್ಲೆ, ನಿಂದಿಸಿದ ಒಟ್ಟು 7 ಪ್ರಕರಣಗಳು ಸೋಮವಾರದಿಂದೀಚೆಗೆ ವರದಿಯಾಗಿವೆ. ಈ ಸಂಬಂಧ 12ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಲಾಗಿದೆ.

ಮೈಸೂರಿನ ಅಲೀಂ ನಗರದಲ್ಲಿ ಮಾಸ್ಕ್‌ ಹಾಕಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂದು ಬುದ್ಧಿವಾದ ಹೇಳಿದ್ದಕ್ಕೆ ಆಶಾ ಕಾರ್ಯಕರ್ತೆ ಸುಮಯಾ ಫಿರ್ದೂಶ್‌ ಮೇಲೆ ಸ್ಥಳೀಯರಾದ ಮೆಹಬೂಬ್, ಖಲೀಲ್‌ ಮತ್ತು ಜೀಸನ್‌ ಎಂಬ ಕಿಡಿಗೇಡಿಗಳು ಸೋಮವಾರ ಅವಾಚ್ಯವಾಗಿ ನಿಂದಿಸಿ, ಧಮ್ಕಿ ಹಾಕಿದ್ದಾರೆ. ಕೊರೋನಾ ಸಂಬಂಧ ಸರ್ವೆ ಮಾಡುತ್ತಿದ್ದಾಗ ಗುಂಪು ಸೇರಿದ್ದನ್ನು ನೋಡಿ ಸುಮಯಾ ಬುದ್ಧಿವಾದ ಹೇಳಿದ್ದರು. ಈ ಸಂಬಂಧ ಆರೋಪಿಗಳನ್ನು ಬಂಧಿಸಲಾಗಿದೆ. ಮತ್ತೊಂದು ಪ್ರಕರಣದಲ್ಲಿ ಕೋಲಾರ ಜಿಲ್ಲೆ ಶಿಡ್ಲಘಟ್ಟದ ಬಾಳೇಗೌಡನ ಹಳ್ಳಿಯಲ್ಲಿ ಸರ್ವೆ ನಡೆಸುತ್ತಿದ್ದ ಆಶಾ ಕಾರ್ಯಕರ್ತೆಯೊಬ್ಬರಿಗೆ ವ್ಯಕ್ತಿಯೊಬ್ಬ ಅವಾಚ್ಯವಾಗಿ ನಿಂದಿಸಿದ್ದಾನೆ.

ಪಾದರಾಯನಪುರ ಆರೋಪಿಗಳು ರಾಮನಗರಕ್ಕೆ: ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟ ಎಚ್‌ಡಿಕೆ

ಪೌರಕಾರ್ಮಿಕರ ಮೇಲೆ ಹಲ್ಲೆ: ಚಿಕ್ಕಮಗಳೂರು ಹಾಗೂ ಕೋಲಾರದಲ್ಲಿ ಪೌರ ಕಾರ್ಮಿಕರ ಮೇಲೆ ಹಲ್ಲೆ ನಡೆದಿವೆ. ಕೋಲಾರದಲ್ಲಿ ಡ್ರೈನೇಜ್‌ನ ಪಿಟ್‌ಕ್ಲೀನಿಂಗ್‌ ಜಾಗಕ್ಕೆ ವಿಳಂಬವಾಗಿ ಹೋಗಿದ್ದಕ್ಕೆ ಸೆಪ್ಟಿಕ್‌ ಟ್ಯಾಂಕರ್‌ ವಾಹನ ಚಾಲಕನ ಮೇಲೆ ನಗರಸಭೆ ಸದಸ್ಯೆ ಅಜ್ರನಸ್ರೀನ್‌ ಪತಿ ಸಾಧಿಕ್‌ ಹಲ್ಲೆ ನಡೆಸಿ, ಪ್ರಾಣ ಬೆದರಿಕೆ ಹಾಕಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಇನ್ನು ಚಿಕ್ಕಮಗಳೂರಿನ ಉಪ್ಪಳ್ಳಿ ಬಡಾವಣೆಯಲ್ಲಿ ಕಸ ಸಂಗ್ರಹಿಸುವ ವಾಹನದ ಚಾಲಕ ದಾರಿ ಕೊಡಲಿಲ್ಲ ಎನ್ನುವ ಕಾರಣಕ್ಕೆ ತಮೀಮ್‌ ಎಂಬಾತ ಹಲ್ಲೆ ನಡೆಸಿದ್ದಾನೆ. ಪೌರಕಾರ್ಮಿಕ ಮಂಜುನಾಥ್‌ ತಮ್ಮ ಕಸದ ಆಟೋ ಬಡಾವಣೆಯ ರಸ್ತೆಯಲ್ಲಿ ನಿಲ್ಲಿಸಿದ್ದರು. ಮಹಿಳೆ ಸೇರಿ ಮತ್ತಿಬ್ಬರು ಪೌರ ಕಾರ್ಮಿಕರು ಮನೆಯಿಂದ ಕಸಸಂಗ್ರಹಿಸಿ ರಿಕ್ಷಾಗೆ ಸುರಿಯುತ್ತಿದ್ದರು. ಈ ವೇಳೆ ಆಟೋ ಚಾಲಕ ದಾರಿ ಕೊಡಲಿಲ್ಲ ಎನ್ನುವ ಎಂದು ತಗಾದೆ ತೆಗೆದ ತಮೀಂ ಹಲ್ಲೆ ನಡೆಸಿದ್ದಾನೆ. ಆರೋಪಿಯನ್ನು ಬಂಧಿಸಲಾಗಿದೆ.

ಅಧಿಕಾರಿಗಳಿಗೆ ಅಡ್ಡಿ: 

ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳದ ಬಾರೆಕಾಡಲ್ಲಿ ಅಂಗಡಿ ಬಂದ್‌ ಮಾಡಿ ಎಂದು ಸೂಚಿಸಿದ್ದಕ್ಕೆ ಪ್ಲೈಯಿಂಗ್‌ ಸ್ಕಾ$್ವಡ್‌ನ ಪುರಸಭಾ ಮಹಿಳಾ ಅಧಿಕಾರಿ ಯಾಸ್ಮೀನ್‌ ಅವರ ತಂಡದ ಕರ್ತವ್ಯಕ್ಕೆ ಅಡ್ಡಿಪಡಿಸಿದ ಗುಂಪೊಂದು, ಅವರ ಕಾರು ಚಾಲಕನ ಮೇಲೆ ಹಲ್ಲೆ ನಡೆಸಿದೆ.

ಪೊಲೀಸರ ಮೇಲೂ ಹಲ್ಲೆ: 

ಕೋಲಾರ ಮತ್ತು ಕೊಡಗಿನಲ್ಲಿ ಪೊಲೀಸರ ಮೇಲೂ ಹಲ್ಲೆ, ನಿಂದನೆ ನಡೆಸಲಾಗಿದೆ. ಕೊಡಗಿನ ಸಿದ್ದಾಪುರ ಸಮೀಪದ ಹುಂಡಿಯಲ್ಲಿ ವಾಲಿಬಾಲ್‌ ಆಡುತ್ತಿದ್ದವರಿಗೆ ಬುದ್ಧಿವಾದ ಹೇಳಲು ಹೋದ ಮೂವರು ಪೇದೆಗಳ ಮೇಲೆ ಹಲ್ಲೆ ನಡೆದಿದೆ. ಈ ಸಂಬಂಧ ನಜೀರ್‌, ಹಂಜ್‌ ಸೇರಿ 7 ಮಂದಿಯನ್ನು ಬಂಧಿಸಲಾಗಿದೆ. ಕೋಲಾರ ಜಿಲ್ಲೆ ಶಿಡ್ಲಘಟ್ಟತಾಲೂಕಿನ ವೈ ಹುಣಸೇನ ಹಳ್ಳಿಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಮಾಸ್ಕ್‌ ಹಾಕಿಕೊಳ್ಳುವಂತೆ ಸೂಚಿಸಿದ್ದಕ್ಕೆ ಪೇದೆಯೊಬ್ಬನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಲಾಗಿದೆ. ಈ ಸಂಬಂಧ ವ್ಯಕ್ತಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಜಮೀರ್ ಅಹ್ಮದ್‌ಗೆ ಖಡಕ್‌ ಎಚ್ಚರಿಕೆ ಕೊಟ್ಟ ಸಿಎಂ ರಾಜಕೀಯ ಕಾರ್ಯದರ್ಶಿ...!

ದಾಳಿ ಪ್ರಕರಣಗಳು

1. ಮೈಸೂರು: ಅಲೀಂ ನಗರದಲ್ಲಿ ಮಾಸ್ಕ್‌ ಹಾಕುವಂತೆ ಬುದ್ಧಿ ಹೇಳಿದ ಆಶಾ ಕಾರ್ಯಕರ್ತೆಗೆ ಅವಾಚ್ಯ ಶಬ್ದಗಳಿಂದ ನಿಂದನೆ, ಧಮಕಿ

2. ಕೋಲಾರ: ಶಿಡ್ಲಘಟ್ಟದ ಬಾಳೇಗೌಡನ ಹಳ್ಳಿಯಲ್ಲಿ ಸರ್ವೆ ನಡೆಸುತ್ತಿದ್ದ ಆಶಾ ಕಾರ್ಯಕರ್ತೆಗೆ ವ್ಯಕ್ತಿಯೊಬ್ಬನಿಂದ ಅವಾಚ್ಯವಾಗಿ ನಿಂದನೆ

3. ಚಿಕ್ಕಮಗಳೂರು: ಉಪ್ಪಳ್ಳಿ ಬಡಾವಣೆಯಲ್ಲಿ ಕಸ ಸಂಗ್ರಹ ವಾಹನದ ಚಾಲಕ ದಾರಿ ಬಿಡಲಿಲ್ಲ ಎಂಬ ನೆಪವೊಡ್ಡಿ ವ್ಯಕ್ತಿಯಿಂದ ಹಲ್ಲೆ

4. ಕೋಲಾರ: ಒಳಚರಂಡಿ ಸ್ವಚ್ಛತೆಗೆ ತಡವಾಗಿ ಬಂದ ಎಂದು ಟ್ಯಾಂಕರ್‌ ಚಾಲಕಗೆ ನಗರಸಭೆ ಸದಸ್ಯೆಯ ಪತಿ ಹಲ್ಲೆ, ಜೀವ ಬೆದರಿಕೆ

5. ಕೋಲಾರ: ಶಿಡ್ಲಘಟ್ಟತಾಲೂಕಿನ ವೈ ಹುಣಸೇನಹಳ್ಳಿಯಲ್ಲಿ ಮಾಸ್ಕ್‌ ಹಾಕಲು ತಿಳಿ ಹೇಳಿದ ಪೇದೆಗೆ ಅವಾಚ್ಯ ಶಬ್ದಗಳಿಂದ ನಿಂದನೆ

6. ಕೊಡಗು: ಸಿದ್ದಾಪುರ ಸಮೀಪದ ಹುಂಡಿ ಎಂಬಲ್ಲಿ ವಾಲಿಬಾಲ್‌ ಆಡುತ್ತಿದ್ದವರಿಗೆ ಬುದ್ಧಿವಾದ ಹೇಳಿದ 3 ಪೇದೆಗಳ ಮೇಲೆ ಹಲ್ಲೆ

7. ದಕ್ಷಿಣ ಕನ್ನಡ: ಬಂಟ್ವಾಳದ ಬಾರೆಕಾಡಲ್ಲಿ ಅಂಗಡಿ ಬಂದ್‌ ಮಾಡಲು ಹೇಳಿದ ಅಧಿಕಾರಿಗೆ ಅಡ್ಡಿ, ಕಾರು ಚಾಲಕನ ಮೇಲೆ ಹಲ್ಲೆ