ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಪ್ರಜ್ವಲ್ ರೇವಣ್ಣ ಅವರ ಸೆಲ್‌ನಲ್ಲಿ ಸಿಕ್ಕ ಪೆನ್‌ಡ್ರೈವ್‌ನಲ್ಲಿ ಸುಮಾರು 100 ಅಶ್ಲೀಲ ವಿಡಿಯೋಗಳಿರುವುದು ಎಫ್‌ಎಸ್‌ಎಲ್ ವರದಿಯಿಂದ ದೃಢಪಟ್ಟಿದೆ. ಪ್ರಜ್ವಲ್ ಈ ವಿಡಿಯೋಗಳನ್ನು ಜೈಲಿನ ಎಲ್‌ಇಡಿ ಟಿವಿಯಲ್ಲಿ ವೀಕ್ಷಿಸಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿದೆ. ಈ ಸಂಬಂಧ ಪ್ರಜ್ವಲ್ ಮತ್ತು ಅವರ ಸಹಕೈದಿ ವಿರುದ್ಧ ಪ್ರಕರಣ ದಾಖಲಾಗಿದೆ.
ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ಮಾಜಿ ಸಂಸದ ಹಾಗೂ ಅತ್ಯಾ*ಚಾರ ಪ್ರಕರಣದ ಸಜಾ ಕೈದಿ ಪ್ರಜ್ವಲ್ ರೇವಣ್ಣ ಸೆಲ್‌ನಲ್ಲಿ ಪತ್ತೆಯಾಗಿದ್ದ ಪೆನ್‌ಡ್ರೈವ್‌ನಲ್ಲಿ ಸುಮಾರು 100 ಅಶ್ಲೀಲ ವಿಡಿಯೋಗಳಿವೆ ಎಂದು ವಿಧಿ ವಿಜ್ಞಾನ ಪ್ರಯೋಗಾಲಯದ (ಎಫ್‌ಎಸ್‌ಎಲ್) ವರದಿಯಲ್ಲಿ ಮಹತ್ವದ ಸಂಗತಿ ಉಲ್ಲೇಖವಾಗಿರುವುದಾಗಿ ತಿಳಿದು ಬಂದಿದೆ.
ಕಾರಾಗೃಹದಲ್ಲಿ ಅಳವಡಿಸಲಾಗಿದ್ದ ಎಲ್‌ಇಡಿ ಟೀವಿಗೆ ಆ ಪೆನ್‌ಡ್ರೈವ್ ಅಳವಡಿಸಿಕೊಂಡು ಅಶ್ಲೀಲ ವಿಡಿಯೋಗಳನ್ನು ಪ್ರಜ್ವಲ್ ವೀಕ್ಷಿಸಿದ್ದಾರೆ ಎಂದು ಪರಪ್ಪನ ಅಗ್ರಹಾರ ಪೊಲೀಸರ ತನಿಖೆಯಲ್ಲಿ ಬಯಲಾಗಿದೆ. ಯಾವ ಸಮಯದಲ್ಲಿ ಪೆನ್ ಡ್ರೈವ್ ಬಳಸಲಾಗಿದೆ ಎಂಬುದನ್ನು ದೃಢಪಡಿಸುವಂತೆ ಮತ್ತೆ ಎಫ್‌ಎಸ್‌ಎಲ್ ತಜ್ಞರನ್ನು ಈಗ ಪೊಲೀಸರು ಕೋರಿದ್ದಾರೆ ಎನ್ನಲಾಗಿದೆ.
ಆದರೆ ಪ್ರಜ್ವಲ್ ಇದ್ದ ಸೆಲ್‌ನಲ್ಲಿ ಸಿಕ್ಕಿದ ಮೊಬೈಲ್‌ನಲ್ಲಿ ಚಲನಚಿತ್ರಗಳು ಹಾಗೂ ವೆಬ್ ಸಿರೀಸ್‌ಗಳು ಮಾತ್ರ ಸಿಕ್ಕಿವೆ. ಮೊಬೈಲ್‌ನಲ್ಲಿದ್ದ ಫೈಲ್‌ಗಳಲ್ಲಿ ಅಶ್ಲೀಲ ವಿಡಿಯೋಗಳು ಕಂಡು ಬಂದಿಲ್ಲ ಎಂದು ಮೂಲಗಳು ‘ಕನ್ನಡಪ್ರಭ’ಕ್ಕೆ ತಿಳಿಸಿವೆ.
ಮೊಬೈಲ್ ಹಾಗೂ ಪೆನ್‌ಡ್ರೈವ್ ಬಳಕೆ
ಕಳೆದ ತಿಂಗಳ 11ರಂದು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮೇಲೆ ಸಿಸಿಬಿ ಪೊಲೀಸರು ದಿಢೀರ್ ದಾಳಿ ನಡೆಸಿದ್ದರು. ಆ ವೇಳೆ ಕಾರಾಗೃಹದ ವಿಶೇಷ ಭದ್ರತಾ ವಿಭಾಗದ ಸಜಾ ಕೈದಿ ಪ್ರಜ್ವಲ್ ರೇವಣ್ಣ ಸೆಲ್ ಅನ್ನು ತಸಾಪಣೆ ನಡೆಸಿದಾಗ ಸಿಸಿಬಿ ತಂಡಕ್ಕೆ ಮೊಬೈಲ್ ಹಾಗೂ ಪೆನ್ ಡ್ರೈವ್‌ಗಳು ಸಿಕ್ಕಿದ್ದವು. ಜೈಲಿನಲ್ಲಿ ನಿಷೇಧಿತ ವಸ್ತುಗಳಾದ ಮೊಬೈಲ್ ಹಾಗೂ ಪೆನ್‌ಡ್ರೈವ್ ಬಳಕೆ ಆರೋಪದ ಮೇರೆಗೆ ಪ್ರಜ್ವಲ್ ಹಾಗೂ ಆತನ ಸೆಲ್‌ನ ಸಹಕೈದಿ ಪಶ್ಚಿಮ ಬಂಗಾಳ ಮೂಲದ ಪ್ರತಾಪ್ ರಾಯ್ ವಿರುದ್ಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಯಿತು. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು, ಪ್ರಜ್ವಲ್ ಸೆಲ್‌ನಲ್ಲಿ ಜಪ್ತಿಯಾಗಿದ್ದ ಮೊಬೈಲ್ ಹಾಗೂ ಪೆನ್ ಡ್ರೈವ್ ಅನ್ನು ಪರೀಕ್ಷೆ ನಡೆಸಿ ವರದಿ ನೀಡುವಂತೆ ಎಫ್ಎಸ್‌ಎಲ್‌ಗೆ ಕಳುಹಿಸಿದ್ದರು. ಈಗ ಪೊಲೀಸರ ಕೈಗೆ ಸೇರಿದ ಎಫ್‌ಎಸ್‌ಎಲ್ ವರದಿಯಲ್ಲಿ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ ಎಂದು ತಿಳಿದು ಬಂದಿದೆ.
173 ಫೈಲ್‌ಗಳಲ್ಲಿ 100 ವಿಡಿಯೋ
ಪ್ರಜ್ವಲ್ ರೇವಣ್ಣ ಸೆಲ್‌ನಲ್ಲಿ ಪತ್ತೆಯಾದ ಪೆನ್‌ಡ್ರೈವ್ ಹಾಗೂ ಮೊಬೈಲ್‌ಗಳಲ್ಲಿ 173 ಫೈಲ್‌ಗಳಲ್ಲಿ ವಿಡಿಯೋಗಳಿದ್ದವು. ಇದರಲ್ಲಿ ಹಿಂದಿ, ಇಂಗ್ಲೀಷ್ ಹಾಗೂ ಕನ್ನಡ ಭಾಷೆಗಳ ಚಲನಚಿತ್ರಗಳು, ವೆಬ್ ಸೀರೀಸ್‌ಗಳು ಹಾಗೂ ಇತರೆ ವಿಡಿಯೋಗಳಿವೆ. ಆದರೆ ಮೊಬೈಲ್‌ನ ಫೈಲ್‌ಗಳಲ್ಲಿ ಯಾವುದೇ ಅಶ್ಲೀಲ ವಿಡಿಯೋಗಳ ಸಿಕ್ಕಿಲ್ಲ. ಆದರೆ ಪೆನ್‌ಡ್ರೈವ್ ನಲ್ಲಿ 100 ಅಶ್ಲೀಲ ವಿಡಿಯೋಗಳಿದ್ದವು ಎಂದು ಎಫ್‌ಎಸ್‌ಎಲ್ ವರದಿಯಲ್ಲಿ ದೃಢಪಡಿಸಿರುವುದಾಗಿ ಮೂಲಗಳು ತಿಳಿಸಿವೆ.
ಜೈಲು ಟಿವಿಯಲ್ಲಿ ಸೆ*ಕ್ಸ್ ವಿಡಿಯೋ
ಜೈಲಿನಲ್ಲಿ ಕೈದಿಗಳ ಮನರಂಜನೆ ಸಲುವಾಗಿ ಎಲ್‌ಇಡಿ ಟಿವಿಗಳನ್ನು ಅಳವಡಿಸಲಾಗಿದೆ. ಅಂತೆಯೇ ಪ್ರಜ್ವಲ್ ಬ್ಯಾರಕ್‌ನಲ್ಲಿ ಸಹ ಟಿವಿ ಇತ್ತು. ತನ್ನ ಬ್ಯಾರೆಕ್‌ನ ಟಿವಿಯಲ್ಲಿ ಪೆನ್ ಡ್ರೈವ್ ಅನ್ನು ಬಳಸಿ ಅಶ್ಲೀಲ ವಿಡಿಯೋಗಳನ್ನು ಪ್ರಜ್ವಲ್ ವೀಕ್ಷಿಸಿದ್ದಾರೆ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ಹೇಳಿದ್ದಾರೆ.


