ಆರ್ಥಿಕ ಅಪರಾಧಿ ವಿಜಯ್ ಮಲ್ಯ, ತಾವು ಭಾರತಕ್ಕೆ ಮರಳಲು ನಿರಾಕರಿಸುತ್ತಿಲ್ಲ, ಬದಲಾಗಿ ಬ್ರಿಟಿಷ್ ಕಾನೂನಿನಿಂದಾಗಿ ಯುಕೆ ತೊರೆಯಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ತಮ್ಮಿಂದ ಸಾಲಕ್ಕಿಂತ ಹೆಚ್ಚು ಹಣ ವಸೂಲಿ ಮಾಡಲಾಗಿದೆ ಎಂದು ಹೇಳಿಕೊಂಡಿರುವ ಅವರು, ತಮ್ಮನ್ನು ರಾಜಕೀಯ ಲಾಭಕ್ಕಾಗಿ 'ಪೋಸ್ಟರ್ ಬಾಯ್' ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.
ನವದೆಹಲಿ: ಆರ್ಥಿಕ ಅಪರಾಧದ ಆರೋಪ ಎದುರಿಸುತ್ತಿರುವ ಸಾಲದ ದೊರೆ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ಮಾಲೀಕ ವಿಜಯ್ ಮಲ್ಯ ಈಗ ಭಾರತಕ್ಕೆ ಮರಳಿ ಬರುವ ಸುದ್ದಿಗೆ ಟ್ವಸ್ಟ್ ಕೊಟ್ಟಿದ್ದಾರೆ. ತಮ್ಮನ್ನು 'ಆರ್ಥಿಕ ಅಪರಾಧಿ' ಮತ್ತು 'ಭಗೋಡ' (ಪರಾರಿಯಾದ ಸುಸ್ತಿದಾರ) ಎಂದು ಕರೆಯುತ್ತಿರುವ ಟೀಕಾಕಾರರ ವಿರುದ್ಧ ಸಾಮಾಜಿಕ ಜಾಲತಾಣ 'X' ನಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿ ತಾವು ಭಾರತಕ್ಕೆ ಮರಳಲು ನಿರಾಕರಿಸುತ್ತಿಲ್ಲ, ಬದಲಾಗಿ ಬ್ರಿಟಿಷ್ ಕಾನೂನಿನ ಪ್ರಕಾರ ಯುನೈಟೆಡ್ ಕಿಂಗ್‌ಡಮ್ (UK) ತೊರೆಯುವುದನ್ನು ತಮಗೆ ನಿಷೇಧಿಸಲಾಗಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.
1992 ರಿಂದ ನಾನು ಲಂಡನ್ ಕಾಯಂ ನಿವಾಸಿ!
70 ವರ್ಷದ ಉದ್ಯಮಿ ವಿಜಯ್ ಮಲ್ಯ, 1992 ರಿಂದ ತಾವು ಬ್ರಿಟನ್‌ನ ಶಾಶ್ವತ ನಿವಾಸಿಯಾಗಿದ್ದು, ಭಾರತ ಸರ್ಕಾರವು ತಮ್ಮ ವಿಷಯದಲ್ಲಿ ಅನ್ಯಾಯವಾಗಿ ನಡೆದುಕೊಂಡಿದೆ ಮತ್ತು ರಾಜಕೀಯ ಲಾಭಕ್ಕಾಗಿ ತಮ್ಮನ್ನು 'ಪೋಸ್ಟರ್ ಬಾಯ್' ಮಾಡಿದೆ ಎಂದು ಆರೋಪಿಸಿದ್ದಾರೆ.
"ನಾನು ಭಾರತಕ್ಕೆ ಬರಲು ನಿರಾಕರಿಸುತ್ತಿರುವ ಪರಾರಿಸಾಲಗಾರ ಎಂದು ಹೇಳುವವರೆಲ್ಲರೂ ತಿಳಿದುಕೊಳ್ಳಬೇಕಾದ ಸತ್ಯವೇನೆಂದರೆ, ನಾನು 1992 ರಿಂದ ಯುಕೆಯ ಶಾಶ್ವತ ನಿವಾಸಿಯಾಗಿದ್ದೇನೆ. ಪ್ರಸ್ತುತ ಕಾನೂನಾತ್ಮಕವಾಗಿ ನನಗೆ ಈ ದೇಶ ಬಿಟ್ಟು ಹೋಗಲು ಅನುಮತಿಯಿಲ್ಲ," ಎಂದು ಮಲ್ಯ ಪೋಸ್ಟ್ ಮಾಡಿದ್ದಾರೆ.
ಕಿಂಗ್‌ಫಿಷರ್ ಏರ್‌ಲೈನ್ಸ್‌ನ ಸಾಲ ಬಾಕಿ ಪ್ರಕರಣಕ್ಕೆ ಸಂಬಂಧಿಸಿದಂತೆ 2019 ರಲ್ಲೇ ಬ್ರಿಟಿಷ್ ನ್ಯಾಯಾಲಯಗಳು ಇವರ ಹಸ್ತಾಂತರಕ್ಕೆ ಅನುಮೋದನೆ ನೀಡಿದ್ದರೂ, ಲಂಡನ್‌ನಲ್ಲಿ ನಡೆಯುತ್ತಿರುವ ಕೆಲವು ಗೌಪ್ಯ ಕಾನೂನು ಪ್ರಕ್ರಿಯೆಗಳು, ಆಶ್ರಯ ಹಕ್ಕು ಹಾಗೂ ಮಾನವ ಹಕ್ಕುಗಳ ನಿಯಮಗಳಿಂದಾಗಿ ಹಸ್ತಾಂತರ ಪ್ರಕ್ರಿಯೆ ವಿಳಂಬವಾಗಿದೆ.
ಇಡಿ ಅಫಿಡವಿಟ್ ಮತ್ತು ವಸೂಲಾತಿ ಅಂಕಿ-ಅಂಶ
ಬಾಂಬೆ ಹೈಕೋರ್ಟ್‌ಗೆ ಜಾರಿ ನಿರ್ದೇಶನಾಲಯ (ED) ಸಲ್ಲಿಸಿದೆಯೆನ್ನಲಾದ ಅಫಿಡವಿಟ್ ಪ್ರತಿಯನ್ನು ಹಂಚಿಕೊಂಡಿರುವ ಮಲ್ಯ, ತಮ್ಮಿಂದ ಈಗಾಗಲೇ ಸಾಲಕ್ಕಿಂತ ಹೆಚ್ಚಿನ ಮೊತ್ತ ವಸೂಲಿ ಮಾಡಲಾಗಿದೆ ಎಂದು ಮತ್ತೊಮ್ಮೆ ಒತ್ತಿ ಹೇಳಿದ್ದು, ದಾಖಲಾತಿಗಳನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
2021 ರ ವೇಳೆಗೆ ತಮ್ಮ ಆಸ್ತಿ ಮುಟ್ಟುಗೋಲು ಮೂಲಕ ₹14,131.60 ಕೋಟಿ ವಸೂಲಿ ಮಾಡಲಾಗಿದೆ. ಕೋರ್ಟ್ ಆದೇಶಿಸಿದ ಮೂಲ ತೀರ್ಪು ಸಾಲ ₹6,203 ಕೋಟಿ ಮಾತ್ರವಾಗಿತ್ತು. ತಮ್ಮ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದ್ದರಿಂದ ಕಿಂಗ್‌ಫಿಷರ್ ಉದ್ಯೋಗಿಗಳಿಗೆ ವೇತನ ನೀಡಲು ಸಾಧ್ಯವಾಗಲಿಲ್ಲ. ಆದರೆ ಇಡಿ ಅದೇ ನಿಧಿಯಿಂದ ₹350 ಕೋಟಿಗೂ ಹೆಚ್ಚು ಹಣವನ್ನು ಬಿಡುಗಡೆ ಮಾಡಿದೆ ಎಂದು ಅವರು ತಿಳಿಸಿದ್ದಾರೆ. ಸಾಲಕ್ಕಿಂತ ದುಪ್ಪಟ್ಟು ಮೊತ್ತವನ್ನು ವಸೂಲಿ ಮಾಡಿದ ಮೇಲೆಯೂ ತಮ್ಮನ್ನು ‘ವಂಚಕ’ ಎಂದು ಕರೆಯುತ್ತಿರುವುದೇಕೆ ಎಂದು ಅವರು ಪ್ರಶ್ನಿಸಿದ್ದಾರೆ.
ಆರ್‌ಸಿಬಿ ಮತ್ತು ಕ್ರೀಡಾ ಪಯಣ
ಕಾನೂನು ಸಂಕಷ್ಟಕ್ಕೆ ಸಿಲುಕುವ ಮೊದಲು ಮಲ್ಯ ಐಪಿಎಲ್‌ನ ಅತ್ಯಂತ ಪ್ರಭಾವಿ ವ್ಯಕ್ತಿಯಾಗಿದ್ದರು. 2008 ರಲ್ಲಿ ₹111 ಮಿಲಿಯನ್ ಡಾಲರ್‌ಗೆ 'ಆರ್‌ಸಿಬಿ' ಫ್ರಾಂಚೈಸಿಯನ್ನು ಖರೀದಿಸಿ, 'ಪ್ಲೇ ಬೋಲ್ಡ್' ಗುರುತನ್ನು ತಂದಿದ್ದರು. 19 ವರ್ಷದ ವಿರಾಟ್ ಕೊಹ್ಲಿಯನ್ನು ತಂಡಕ್ಕೆ ಆಯ್ಕೆ ಮಾಡಿ, ಅವರನ್ನು ಜಾಗತಿಕ ಸೂಪರ್ ಸ್ಟಾರ್ ಆಗಿ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಮಾರ್ಚ್ 2016 ರಲ್ಲಿ ಲಂಡನ್‌ಗೆ ತೆರಳಿದ ನಂತರ ಅವರು ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ನೀಡಿದರೂ, ಇಂದಿಗೂ ತಂಡದ ಯಶಸ್ಸನ್ನು (2024 ರ ಆರ್‌ಸಿಬಿ ಮಹಿಳಾ ತಂಡದ ಡಬ್ಲ್ಯೂಪಿಎಲ್ ಗೆಲುವು ಸೇರಿದಂತೆ) ಸೋಷಿಯಲ್ ಮೀಡಿಯಾದಲ್ಲಿ ಆಚರಿಸುತ್ತಿರುತ್ತಾರೆ.
ಕೇಂದ್ರ ಸರ್ಕಾರವು 2018 ರ ಪ್ಯುಗಿಟಿವ್ ಎಕನಾಮಿಕ್ ಆಫೆಂಡರ್ಸ್ ಆಕ್ಟ್ (FEOA) ಅಡಿಯಲ್ಲಿ ಮಲ್ಯ ಅವರನ್ನು ಆರ್ಥಿಕ ಅಪರಾಧಿ ಎಂದು ಘೋಷಿಸಿದ್ದು, ಅವರನ್ನು ಭಾರತಕ್ಕೆ ಕರೆತರುವ ಕಾನೂನಾತ್ಮಕ ಪ್ರಯತ್ನಗಳನ್ನು ಮುಂದುವರಿಸಿದೆ.


