ಪರಪ್ಪನ ಅಗ್ರಹಾರ ಜೈಲಿನಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ, ಅಕ್ರಮವಾಗಿ ಮೊಬೈಲ್ ಬಳಸಿದ ಆರೋಪ ಎದುರಿಸುತ್ತಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ತೀವ್ರಗೊಳಿಸಿರುವ ಪೊಲೀಸರು, ವಿಚಾರಣೆಗಾಗಿ ಪ್ರಜ್ವಲ್ ಅವರನ್ನು ಬಾಡಿ ವಾರೆಂಟ್ ಮೇಲೆ ವಶಕ್ಕೆ ಪಡೆಯಲು ನಿರ್ಧರಿಸಿದ್ದಾರೆ.
ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಅಪರಾಧಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣ, ಜೈಲಿನ ನಿಯಮಗಳನ್ನು ಉಲ್ಲಂಘಿಸಿ ಮೊಬೈಲ್ ಬಳಸಿದ್ದಾರೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಈ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ ಅವರನ್ನು ಬಾಡಿ ವಾರೆಂಟ್ ಮೂಲಕ ವಶಕ್ಕೆ ಪಡೆದು ವಿಚಾರಣೆ ನಡೆಸಲು ಪೊಲೀಸರು ನಿರ್ಧರಿಸಿದ್ದಾರೆ.
ತನಿಖೆಯನ್ನು ಮುಂದುವರಿಸಲು ಆರೋಪಿಯಯನ್ನು ವಶಕ್ಕೆ ಪಡೆಯುತ್ತಿರುವುದು ಅತ್ಯಗತ್ಯವಾಗಿರುವ ಹಿನ್ನೆಲೆಯಲ್ಲಿ, ಪೊಲೀಸರು ಇಂದು ಪ್ರಜ್ವಲ್ ರೇವಣ್ಣ ಅವರನ್ನು ನಗರದ 42ನೇ ಎಸಿಎಂಎಂ (ACMM) ನ್ಯಾಯಾಲಯದ ಮುಂದೆ ಹಾಜರುಪಡಿಸಲಿದ್ದಾರೆ. ಬಳಿಕ ಅವರನ್ನು ಹೆಚ್ಚಿನ ವಿಚಾರಣೆಗಾಗಿ ಪೊಲೀಸ್ ಕಸ್ಟಡಿಗೆ ನೀಡುವಂತೆ ನ್ಯಾಯಾಲಯಕ್ಕೆ ಮನವಿ ಸಲ್ಲಿಸಲಿದ್ದಾರೆ.
ಮುಖಾಮುಖಿ ವಿಚಾರಣೆ ನಡೆಸಲು ತನಿಖಾ ತಂಡ ಸಿದ್ಧತೆ
ಪ್ರಕರಣದ ವಿವರಗಳ ಪ್ರಕಾರ, ಜೈಲಿನಲ್ಲಿ ಮೊಬೈಲ್ ಫೋನ್ ಅಕ್ರಮ ಬಳಕೆಗೆ ಸಂಬಂಧಿಸಿದಂತೆ ದಾಖಲಾಗಿರುವ ಎಫ್‌ಐಆರ್‌ನಲ್ಲಿ ಪ್ರತಾಪ್ ಎಂಬಾತನನ್ನು ಮೊದಲ ಆರೋಪಿ (A1) ಹಾಗೂ ಪ್ರಜ್ವಲ್ ರೇವಣ್ಣ ಅವರನ್ನು ಎರಡನೇ ಆರೋಪಿ (A2) ಎಂದು ಹೆಸರಿಸಲಾಗಿದೆ. ಜೈಲಿನೊಳಗೆ ಮೊಬೈಲ್ ತಲುಪಿದ್ದು ಹೇಗೆ ಮತ್ತು ಯಾರ ಸಹಕಾರದೊಂದಿಗೆ ಸಂವಹನ ನಡೆಸಲಾಗುತ್ತಿತ್ತು ಎಂಬ ಕುರಿತು ಸತ್ಯಾಸತ್ಯತೆಯನ್ನು ಹೊರತರಲು ಇಬ್ಬರೂ ಆರೋಪಿಗಳನ್ನು ಕಸ್ಟಡಿಗೆ ಪಡೆದು ಮುಖಾಮುಖಿ ವಿಚಾರಣೆ ನಡೆಸಲು ತನಿಖಾ ತಂಡ ಸಿದ್ಧತೆ ಮಾಡಿಕೊಂಡಿದೆ.
ಸಿಸಿಬಿ (CCB) ಅಧಿಕಾರಿಗಳು ಜೈಲಿನ ಮೇಲೆ ದಿಢೀರ್ ದಾಳಿ ನಡೆಸಿದಾಗ ಪ್ರಜ್ವಲ್ ರೇವಣ್ಣ ಇದ್ದ ಬ್ಯಾರಕ್‌ನಲ್ಲಿ ಆಂಡ್ರಾಯ್ಡ್ ಮೊಬೈಲ್ ಫೋನ್, ಚಾರ್ಜರ್ ಮತ್ತು ಪೆನ್‌ಡ್ರೈವ್ ಪತ್ತೆಯಾಗಿತ್ತು. ಈ ಮೊಬೈಲ್‌ನಲ್ಲಿ ಫೇಸ್‌ಬುಕ್, ವಾಟ್ಸ್‌ಆ್ಯಪ್, ಇನ್‌ಸ್ಟಾಗ್ರಾಮ್, ನೆಟ್‌ಫ್ಲಿಕ್ಸ್ ಹಾಗೂ ಅಮೆಜಾನ್ ಪ್ರೈಮ್‌ನಂತಹ ಆಪ್‌ಗಳು ಇದ್ದವು. ಮನೆಯವರು ಹಾಗೂ ವಕೀಲರ ಜತೆ ಮಾತನಾಡಲು ಇದನ್ನು ಬಳಸುತ್ತಿದ್ದುದು ಬೆಳಕಿಗೆ ಬಂದಿತ್ತು.ಮೊಬೈಲ್ ನೀಡಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದರು.
ಮೊಬೈಲ್ ನಲ್ಲಿ ಆ್ಯಪ್‌ಗಳು ಪತ್ತೆ
ಆಗಸ್ಟ್ 11ರಂದು ಕೇಂದ್ರ ಅಪರಾಧ ವಿಭಾಗ (CCB) ನಡೆಸಿದ ದಾಳಿಯಲ್ಲಿ ಪ್ರಜ್ವಲ್ ರೇವಣ್ಣ ಅವರ ಬಳಿ ಮೊಬೈಲ್ ಫೋನ್ ಪತ್ತೆಯಾಗಿತ್ತು. ರೇವಣ್ಣ ಅವರನ್ನು ಇರಿಸಲಾಗಿದ್ದ ಕೊಠಡಿಯಲ್ಲಿ ಪತ್ತೆಯಾದ ತಿಳಿ ನೀಲಿ ಬಣ್ಣದ ರೆಡ್ಮಿ 5ಜಿ ಮೊಬೈಲ್‌ನಲ್ಲಿ ಮೆಸೆಂಜರ್ ಹಾಗೂ ಸ್ಟ್ರೀಮಿಂಗ್ ಆ್ಯಪ್‌ಗಳು ಇನ್‌ಸ್ಟಾಲ್ ಆಗಿದ್ದವು. ಅಲ್ಲದೆ, ಮೊಬೈಲ್‌ಗೆ ಪಾಸ್‌ವರ್ಡ್ ಹಾಕಲಾಗಿತ್ತು. ಕಾರಾಗೃಹಗಳ ಡಿಐಜಿ ಜಿನೇಂದ್ರ ಖನಗಾವಿ ಅವರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.


