ಹಾಸನ ಪೆನ್‌ಡ್ರೈವ್ ಪ್ರಕರಣದಲ್ಲಿ ಜೈಲು ಸೇರಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಬಳಿ ಮೊಬೈಲ್ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ, ವಿಚಾರಣೆಗೆ ತೆರಳಿದ ಪೊಲೀಸರ ಮುಂದೆ ಉಡಾಫೆಯಿಂದ ವರ್ತಿಸಿದ್ದಾರೆ. 'ನಾನು ಮಾಜಿ ಸಂಸದ, ಮಾಜಿ ಪ್ರಧಾನಿ ಮೊಮ್ಮಗ' ಎಂದು ದಬಾಯಿಸಿ, ಮೌನವಾಗಿರುವ ಹಕ್ಕಿದೆ ಎಂದು ಹೇಳಿ ತನಿಖೆಗೆ ಸಹಕರಿಸಲು ನಿರಾಕರಿಸಿದ್ದಾರೆ.
ಬೆಂಗಳೂರು: ಹಾಸನ ಪೆನ್‌ಡ್ರೈವ್ ಪ್ರಕರಣದಲ್ಲಿ ಅಪರಾಧಿಯಾಗಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಬಳಿ ಮೊಬೈಲ್ ಪತ್ತೆಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ, ವಿಚಾರಣೆಗೆ ತೆರಳಿದ ಪೊಲೀಸರ ಮುಂದೆ ಪ್ರಜ್ವಲ್ ರೇವಣ್ಣ ಉಡಾಫೆ ರೀತಿ ವರ್ತಿಸಿ, ತನ್ನ ಬಾಲ ಬಿಚ್ಚಿದ್ದಾನೆ ಎಂದು ಪೊಲೀಸ್ ಮೂಲಗಳಿಂದ ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ಮಾಹಿತಿ ಲಭ್ಯವಾಗಿದೆ.
ಜೈಲಿನಲ್ಲಿ ಮೊಬೈಲ್ ಬಳಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಲು ಪೊಲೀಸರು ಜೈಲಿಗೆ ತೆರಳಿದಾಗ ಪೊಲೀಸರಿಗೆ ಅವಾಜ್ ಹಾಕಿದ್ದಾರೆ. ಇದರ ಜೊತೆಗೆ ಕೃತ್ಯಕ್ಕೆ ಸಹಕಾರ ನೀಡಿದ್ದ ವಿಚಾರಣಾಧೀನ ಕೈದಿ ಪ್ರತಾಪ್ ರಾಯ್ ಹೇಳಿಕೆಯನ್ನು ಕೂಡ ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ದಾಖಲಿಸಿಕೊಂಡಿದ್ದಾರೆ. ಪ್ರಜ್ವಲ್ ಜೈಲಿನಲ್ಲಿದ್ದರೂ ತಂದೆ ಎಚ್.ಡಿ.ರೇವಣ್ಣ, ತಾಯಿ ಭವಾನಿ ರೇವಣ್ಣ ಹಾಗೂ ಸ್ನೇಹಿತರ ಜತೆಗೆ ನಿರಂತರವಾಗಿ ಮೊಬೈಲ್ ಫೋನ್ ಮೂಲಕ ಸಂಭಾಷಣೆ ನಡೆಸಿರುವುದು ಪತ್ತೆಯಾಗಿದ್ದು, ಆ ಬಗ್ಗೆ ಪ್ರಶ್ನೆಗಳನ್ನು ಪ್ರಜ್ವಲ್ ಅವರಿಗೆ ಕೇಳಲಾಗಿದೆ
ವಿಚಾರಣೆ ವೇಳೆ ಪ್ರಜ್ವಲ್ ರೇವಣ್ಣ ಹೈಡ್ರಾಮಾ:
ತನ್ನ ಬಳಿ ಮೊಬೈಲ್ ಪತ್ತೆಯಾದ ಕುರಿತು ಪರಪ್ಪನ ಅಗ್ರಹಾರ ಪೊಲೀಸರು ವಿಚಾರಣೆ ನಡೆಸಿದಾಗ ಪ್ರಜ್ವಲ್ ರೇವಣ್ಣ ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಲು ಒಪ್ಪಲಿಲ್ಲ. ಬದಲಿಗೆ, ಕಾನೂನಿನ ಹಕ್ಕನ್ನು ಮುಂದಿಟ್ಟು "ಐ ಹ್ಯಾವ್ ರೈಟ್ಸ್ ಟು ರಿಮೇನ್ ಸೈಲೆಂಟ್" (ಮೌನವಾಗಿರುವ ಹಕ್ಕು ನನಗೆ ಇದೆ) ಎಂದು ಹೇಳಿ ಪ್ರಶ್ನೆಗಳಿಗೆ ಉತ್ತರಿಸಲು ನಿರಾಕರಿಸಿದರು.
ಪೊಲೀಸರಿಗೆ ಅವಮಾನ ಮಾಡಿದ ಪ್ರಜ್ವಲ್
ವಿಚಾರಣೆ ನಡೆಸುತ್ತಿದ್ದ ಅಧಿಕಾರಿಗಳ ಮುಂದೆ ಏರು ಧ್ವನಿಯಲ್ಲಿ, "ನೀವು ಯಾರ ಜೊತೆಗೆ ಮಾತನಾಡುತ್ತಿದ್ದೀರಿ ಎಂಬುದು ನಿಮಗೆ ಗೊತ್ತಾ? ನಾನು ಮಾಜಿ ಸಂಸದ ಹಾಗೂ ಮಾಜಿ ಪ್ರಧಾನಿಯ ಮೊಮ್ಮಗ, ನಾನು ಕೋರ್ಟ್ ಗೆ ಅಪೀಲು ಹೋಗ್ತೀನಿ." ಎಂದು ದಬಾಯಿಸಿದ್ದಾರೆ. ಉದ್ದೇಶಪೂರ್ವಕವಾಗಿ ತಮ್ಮನ್ನು ಈ ಪ್ರಕರಣದಲ್ಲಿ ಸಿಲುಕಿಸಲು ಯತ್ನಿಸಲಾಗುತ್ತಿದೆ ಎಂದು ಆರೋಪಿಸಿದ ಪ್ರಜ್ವಲ್, ತಮ್ಮ ಜಾಮೀನು ರದ್ದುಪಡಿಸಲು ಅಧಿಕಾರಿಗಳು ಸಾಕಷ್ಟು ಪ್ರಯತ್ನಗಳನ್ನು ನಡೆಸುತ್ತಿದ್ದಾರೆ ಎಂದು ಕೂಗಾಡಿದ್ದಾರಂತೆ. ‘ನಾನು ಏನು ಹೇಳುವುದಿಲ್ಲ, ಯಾವುದೇ ವಿಚಾರಕ್ಕೂ ಬಾಯಿಬಿಡುವುದಿಲ್ಲ, ಏನು ಬೇಕಾದರೂ ಮಾಡಿಕೊಳ್ಳಿ ಯಾರ ಜೊತೆಗೆ ಮಾತನಾಡ್ತಿದ್ದೀರಾ ನೀವು’ ಎಂದು ಪೊಲೀಸರ ಮುಂದೆ ಉಡಾಫೆಯಾಗಿ ವರ್ತಿಸಿ ತನಿಖೆಗೆ ಸಹಕರಿಸಲು ಸ್ಪಷ್ಟವಾಗಿ ನಿರಾಕರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಆ.11ರಂದು ಸಿಸಿಬಿ ನಡೆಸಿದ ದಾಳಿಯ ವೇಳೆ ಪ್ರಜ್ವಲ್ ಬ್ಯಾರಕ್‌ನಲ್ಲಿ ಮೊಬೈಲ್, ಪೆನ್‌ಡ್ರೈವ್, ಪತ್ತೆಯಾಗಿತ್ತು. ಜೈಲು ಅಧಿಕಾರಿಗಳು ನೀಡಿದ ದೂರಿನ ಮೇಲೆ ಪ್ರಜ್ವಲ್ ಹಾಗೂ ಪ್ರತಾಪ್ ರಾಯ್ ವಿರುದ್ಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.


