ಕಲ್ಯಾಣ ಕರ್ನಾಟಕ ಭಾಗದ 6 ರಿಂದ 8ನೇ ತರಗತಿ ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದಂತೆ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಗೊಂದಲಕ್ಕೆ ಕಾರಣವಾಗಿದ್ದ ಹಳೆಯ ಆಯ್ಕೆ ಪಟ್ಟಿಗಳನ್ನು ರದ್ದುಗೊಳಿಸಿರುವ ನ್ಯಾಯಾಲಯ, ಮೂರು ತಿಂಗಳೊಳಗೆ ಹೊಸದಾಗಿ ಆಯ್ಕೆ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಆದೇಶಿಸಿದೆ.

ಬೆಂಗಳೂರು/ಕಲಬುರಗಿ (ಸೆ.21): ಕಲ್ಯಾಣ ಕರ್ನಾಟಕ ಭಾಗದ 6 ರಿಂದ 8ನೇ ತರಗತಿಯ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಗೆ ಸಂಬಂಧಿಸಿ ಹೈಕೋರ್ಟ್‍ನ ಕಲಬುರಗಿ ಪೀಠವು ಮಹತ್ವದ ತೀರ್ಪು ನೀಡಿದೆ.

ಕಲ್ಯಾಣ ಕರ್ನಾಟಕ ಮತ್ತು ಉಳಿದ ಕರ್ನಾಟಕ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯಲ್ಲಿನ ಗೊಂದಲಗಳಿಗೆ ಕಾರಣವಾಗಿದ್ದ ಹಳೇ ತಾತ್ಕಾಲಿಕ ಹಾಗೂ ಅಂತಿಮ ಆಯ್ಕೆ ಪಟ್ಟಿಗಳನ್ನು ನ್ಯಾಯಾಲಯವು ಸಂಪೂರ್ಣವಾಗಿ ರದ್ದುಗೊಳಿಸಿದೆ. ಅಲ್ಲದೆ, ನಿಯಮಾನುಸಾರ ಎಲ್ಲ ಅರ್ಹ ಅಭ್ಯರ್ಥಿಗಳನ್ನು ಪರಿಗಣಿಸಿ, ಮೂರು ತಿಂಗಳೊಳಗೆ ಹೊಸದಾಗಿ ಆಯ್ಕೆ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಶಾಲಾ ಶಿಕ್ಷಣ ಇಲಾಖೆಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ.

ಏನಿದು ವಿವಾದ?: 

ರಾಜ್ಯ ಸರ್ಕಾರವು 15,000 ಜಿಪಿಎಸ್‌ಟಿಆರ್ ಶಿಕ್ಷಕರ ನೇಮಕಾತಿಗೆ ಅಧಿಸೂಚನೆ ಹೊರಡಿಸಿತ್ತು. ಆದರೆ, ಸಂವಿಧಾನದ 371(ಎ) ವಿಧಿಯ ಅನ್ವಯ ಕಲ್ಯಾಣ ಕರ್ನಾಟಕ ಮತ್ತು ಉಳಿದ ಕರ್ನಾಟಕ ವೃಂದದ ಹುದ್ದೆಗಳ ಹಂಚಿಕೆ ಮತ್ತು ಮೀಸಲಾತಿ ನಿಗದಿಯಲ್ಲಿ ಗೊಂದಲ ಉಂಟಾಗಿತ್ತು. 2023ರ ಫೆ 01ರಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಹೊರಡಿಸಿದ್ದ ಸುತ್ತೋಲೆಯು ಈ ಗೊಂದಲ ಮತ್ತಷ್ಟು ಹೆಚ್ಚಿಸಿತ್ತು. ಈ ನಿಯಮಗಳ ಅನ್ವಯ ಬಿಡುಗಡೆಯಾಗಿದ್ದ ಆಯ್ಕೆ ಪಟ್ಟಿ ಪ್ರಶ್ನಿಸಿ ಅಭ್ಯರ್ಥಿಗಳು ನ್ಯಾಯಾಲಯದ ಮೊರೆ ಹೋಗಿದ್ದರು.

ಆಯ್ಕೆಪಟ್ಟಿಗಳ ರದ್ದು:

2023ರ ಫೆಬ್ರವರಿ ಮತ್ತು ಮಾರ್ಚ್‍ನಲ್ಲಿ ಬಿಡುಗಡೆಯಾಗಿದ್ದ ಎಲ್ಲ ತಾತ್ಕಾಲಿಕ ಮತ್ತು ಅಂತಿಮ ಆಯ್ಕೆ ಪಟ್ಟಿಗಳನ್ನು ಅಧಿಕೃತವಾಗಿ ವಜಾಗೊಳಿಸಲಾಗಿದೆ. ನೇಮಕಾತಿ ಪ್ರಕ್ರಿಯೆಯಲ್ಲಿ ಗೊಂದಲ ಸೃಷ್ಟಿಸಿದ್ದ 2024 ಜ.31ರ ಕರ್ನಾಟಕ ರಾಜ್ಯ ಆಡಳಿತಾತ್ಮಕ ನ್ಯಾಯಮಂಡಳಿ ಆದೇಶ ಹಾಗೂ ಡಿಪಿಎಆರ್ ಸುತ್ತೋಲೆಯನ್ನು ನ್ಯಾಯಾಲಯ ರದ್ದುಪಡಿಸಿದೆ.