ಕರ್ನಾಟಕ ಲೋಕಸೇವಾ ಆಯೋಗ (KPSC) ನಡೆಸಿದ ನಾಲ್ಕು ಪ್ರಮುಖ ನೇಮಕಾತಿ ಪರೀಕ್ಷೆಗಳಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಕುರಿತು ಸಿಐಡಿ ಮತ್ತು ಇಡಿ ತನಿಖೆ ತೀವ್ರಗೊಳಿಸಿವೆ. ಓಎಂಆರ್ ಶೀಟ್ ತಿದ್ದುಪಡಿ ಆರೋಪದ ಮೇಲೆ ಮೂಲ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದ್ದು, ಪಶು ವೈದ್ಯಾಧಿಕಾರಿಗಳ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಕೆಪಿಎಸ್‌ಸಿ ಅಧ್ಯಕ್ಷರ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

ಬೆಂಗಳೂರು (ಆ.29): ಕರ್ನಾಟಕ ಲೋಕಸೇವಾ ಆಯೋಗ (KPSC) ನಡೆಸಿದ ನೇಮಕಾತಿ ಪರೀಕ್ಷೆಗಳಲ್ಲಿ ನಡೆದಿದೆ ಎನ್ನಲಾದ ಭಾರೀ ಅಕ್ರಮಕ್ಕೆ ಸಂಬಂಧಿಸಿದಂತೆ ಸಿಐಡಿ (CID) ಹಾಗೂ ಜಾರಿ ನಿರ್ದೇಶನಾಲಯ (ED) ಅಧಿಕಾರಿಗಳು ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಕಳೆದ ಮೂರು ವರ್ಷಗಳಲ್ಲಿ ಆಯೋಗ ನಡೆಸಿದ ನಾಲ್ಕು ಪ್ರಮುಖ ನೇಮಕಾತಿ ಪರೀಕ್ಷೆಗಳ ಸಮಗ್ರ ದಾಖಲೆಗಳನ್ನು ಕಲೆಹಾಕಿ ತನಿಖೆ ಆರಂಭಿಸಲಾಗಿದೆ.

ತನಿಖೆಯ ವ್ಯಾಪ್ತಿಯಲ್ಲಿರುವ 4 ಪರೀಕ್ಷೆಗಳು:

  • ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ
  • ಪಂಚಾಯತ್ ಅಭಿವೃದ್ಧಿ ಇಲಾಖೆ
  • ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ
  • ಪಶುವೈದ್ಯಾಧಿಕಾರಿಗಳ ನೇಮಕಾತಿ ಪರೀಕ್ಷೆ

ಓಎಂಆರ್ ಶೀಟ್ ತಿದ್ದುಪಡಿ ಆರೋಪ:

ಈ ನಾಲ್ಕೂ ಪರೀಕ್ಷೆಗಳ ಸಂದರ್ಭದಲ್ಲಿ ಓಎಂಆರ್ (OMR) ಶೀಟ್‌ಗಳನ್ನು ತಿದ್ದುಪಡಿ ಮಾಡಿರುವ ಹಾಗೂ ಪ್ರಶ್ನೆಪತ್ರಿಕೆ ವಿತರಣೆ ವೇಳೆ ವ್ಯವಸ್ಥಿತ ಲೋಪವೆಸಗಿರುವುದು ತನಿಖೆಯಲ್ಲಿ ಶಂಕಿಸಲಾಗಿದೆ. ಈ ಹಿಂದೆ ಈ ಅಕ್ರಮದ ಬಗ್ಗೆ ಆಯೋಗದ ಹಂತದಲ್ಲೇ ಸಣ್ಣಪುಟ್ಟ ಶಿಸ್ತುಕ್ರಮ ಕೈಗೊಂಡು ಪ್ರಕರಣವನ್ನು ಮುಚ್ಚಿಹಾಕಲಾಗಿತ್ತು ಎಂಬ ಆರೋಪ ಕೇಳಿಬಂದಿತ್ತು.

ಇದೀಗ ಸಿಐಡಿ ಅಧಿಕಾರಿಗಳು ನಾಲ್ಕೂ ಪರೀಕ್ಷೆಗಳಿಗೆ ಸಂಬಂಧಿಸಿದ ಮೂಲ ದಾಖಲೆಗಳು, ಪರೀಕ್ಷಾರ್ಥಿಗಳ ವಿವರ ಮತ್ತು ಅಂಕಪಟ್ಟಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಆರ್ಥಿಕ ಅಕ್ರಮದ ಜಾಡು ಹಿಡಿದು ಇ.ಡಿ ಕೂಡ ಮಾಹಿತಿ ಸಂಗ್ರಹಿಸುತ್ತಿದ್ದು, ನೇಮಕಾತಿ ಜಾಲದಲ್ಲಿದ್ದ ಕಿಂಗ್‌ಪಿನ್‌ಗಳಿಗೆ ಕಾನೂನಿನ ಸಂಕೋಲೆ ಬಿಗಿಯಾಗುವ ಸಾಧ್ಯತೆಯಿದೆ.

ಪಶು ವೈದ್ಯಕೀಯ ಹಗರಣದ ತನಿಖೆ ಏನಾಯ್ತು?

ಕೆಪಿಎಸ್‌ಸಿ ನಡೆಸಿದ್ದ ರಾಜ್ಯದ ಪಶು ವೈದ್ಯಾಧಿಕಾರಿಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ, ಸ್ವಜನಪಕ್ಷಪಾತ ಆರೋಪ ಸಂಬಂಧ ಈಗಾಗಲೇ ಅಮಾನತಾಗಿರುವ ಕೆಪಿಎಸ್‌ಸಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಕೆಪಿಎಸ್‌ಸಿ ಸದಸ್ಯರು, ಅಧಿಕಾರಿಗಳು ಸೇರಿ ನಾಲ್ವರ ವಿರುದ್ಧ ವಿಧಾನಸೌಧ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ. ಕೆಪಿಎಸ್‌ಸಿಯು 2026ರ ಜುಲೈ 17ರಂದು ಪಶು ವೈದ್ಯಾಧಿಕಾರಿಗಳ ಹುದ್ದೆಯ ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸಿದ್ದು, ಕೆಪಿಎಸ್‌ಸಿಯ ಅಧ್ಯಕ್ಷರು, ಸದಸ್ಯರು ಹಾಗೂ ಸಿಬ್ಬಂದಿಯ ಸಂಬಂಧಿ ಅಭ್ಯರ್ಥಿಗಳು ಉನ್ನತ ಶ್ರೇಣಿಯಲ್ಲಿ ಉತೀರ್ಣ ಹೊಂದಿದ್ದಾರೆ. ಕೆಪಿಎಸ್‌ಸಿಯು ಪಶುವೈದ್ಯಾಧಿಕಾರಿಗಳ ಹುದ್ದೆಗೆ ನಡೆಸಿದ ಪರೀಕ್ಷೆಯಲ್ಲಿ, ಪದವಿಯಲ್ಲಿ ಚಿನ್ನದ ಪದಕ ಪಡೆದ ಅಭ್ಯರ್ಥಿಗಳು, ಯುಪಿಎಸ್‌ಸಿ ನಡೆಸುವ ಐಎಫ್ಎಸ್ ಪರೀಕ್ಷೆಯಲ್ಲಿ ಉತೀರ್ಣರಾದ ಅಭ್ಯರ್ಥಿಗಳು 350 ಅಂಕಗಳನ್ನೂ ಪಡೆಯಲು ವಿಫಲರಾಗಿದ್ದಾರೆ. ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಕೆಪಿಎಸ್‌ಸಿ ಅಧ್ಯಕ್ಷ ಶಿವಶಂಕರಪ್ಪ ಹಾಗೂ ಐಎಎಸ್ ಅಧಿಕಾರಿ ಜ್ನಾನೇಂದ್ರ ಕುಮಾರ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ.