ಜರ್ಮನಿಯ ಅಲೆಕ್ಸಾಂಡರ್ ಜ್ವೆರೆವ್ ಅವರು ಅಮೆರಿಕದ ಬೆನ್ ಶೆಲ್ಟನ್ ಅವರನ್ನು ಮಣಿಸಿ ಚೊಚ್ಚಲ ಯುಎಸ್ ಓಪನ್ ಗ್ರ್ಯಾನ್‌ಸ್ಲಾಂ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಇದರೊಂದಿಗೆ 2003ರ ಬಳಿಕ ಕಪ್ ಗೆಲ್ಲುವ ಅಮೆರಿಕದ 23 ವರ್ಷಗಳ ಕನಸು ಭಗ್ನಗೊಂಡಿದೆ. ಜ್ವೆರೆವ್ ಅವರಿಗೆ ₹52.58 ಕೋಟಿ ಪ್ರಶಸ್ತಿ ಮೊತ್ತ ಲಭಿಸಿದೆ.
ನ್ಯೂಯಾರ್ಕ್: ಜರ್ಮನಿಯ ತಾರಾ ಟೆನಿಸಿಗ ಅಲೆಕ್ಸಾಂಡರ್ ಜ್ವೆರೆವ್ ಅವರು ಯುಎಸ್ ಓಪನ್ ಗ್ರ್ಯಾನ್‌ಸ್ಲಾಂ ಟೆನಿಸ್ ಟೂರ್ನಿಯಲ್ಲಿ ಚೊಚ್ಚಲ ಕಿರೀಟ ತಮ್ಮದಾಗಿಸಿಕೊಂಡಿದ್ದಾರೆ. ಇದು ಅವರ 2ನೇ ಗ್ರ್ಯಾನ್‌ಸ್ಲಾಂ ಟ್ರೋಫಿ ಆಗಿದೆ. ಇತ್ತೀಚೆಗೆ ಫ್ರೆಂಚ್ ಓಪನ್‌ನಲ್ಲಿ ಚಾಂಪಿಯನ್ ಆಗಿದ್ದ ಅವರು, ಕೆಲ ತಿಂಗಳಲ್ಲೇ ಮತ್ತೊಮ್ಮೆ ಗ್ರ್ಯಾನ್‌ಸ್ಲಾಂ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದಿದ್ದಾರೆ.
23ರ ಶೆಲ್ಟನ್ ಕನಸು ಭಗ್ನ
ಭಾನುವಾರ ನ್ಯೂಯಾರ್ಕ್‌ನಲ್ಲಿ ನಡೆದ ಪುರುಷರ ಸಿಂಗಲ್ಸ್ ಫೈನಲ್‌ನಲ್ಲಿ 29 ವರ್ಷದ ಜ್ವೆರೆವ್ ಅವರು ಅಮೆರಿಕದ ಬೆನ್ ಶೆಲ್ಟನ್ ವಿರುದ್ಧ 6-3, 7-6(7-2), 5-7, 6-2 ಅಂತರದಲ್ಲಿ ಜಯಭೇರಿ ಬಾರಿಸಿದರು. ಇದರೊಂದಿಗೆ ಚೊಚ್ಚಲ ಗ್ರ್ಯಾನ್‌ಸ್ಲಾಂ ಗೆಲ್ಲುವ 23ರ ಶೆಲ್ಟನ್ ಕನಸು ಭಗ್ನಗೊಂಡಿತು. ಟೂರ್ನಿಯ ಕ್ವಾರ್ಟರ್ ಫೈನಲ್‌ನಲ್ಲಿ ಕಾರ್ಲೋಸ್ ಆಲ್ಕರಜ್‌ಗೆ ಶೆಲ್ಟನ್ ಆಘಾತ ನೀಡಿ ಸೋಲಿಸಿದ್ದರು. ಆದರೆ ಫೈನಲ್‌ಗೆ ಅವರಿಗೆ ಜ್ವೆರೆವ್ ವಿರುದ್ಧ ಗೆಲ್ಲಲಾಗಲಿಲ್ಲ.
ಈ ಬಾರಿ ಟೂರ್ನಿಗೆ ನಂ.1 ಶ್ರೇಯಾಂಕಿತರಾಗಿ ಕಾಲಿಟ್ಟಿದ್ದ ಜ್ವೆರೆವ್‌ಗೆ ಫೈನಲ್‌ವರೆಗೂ ಪ್ರಬಲ ಎದುರಾಳಿಗಳು ಸಿಕ್ಕಿರಲಿಲ್ಲ. ಆರಂಭಿಕ ಸುತ್ತಿನಿಂದ ಸೆಮಿಫೈನಲ್‌ವರೆಗಿನ 6 ಪಂದ್ಯಗಳ ಪೈಕಿ ನಾಲ್ಕರಲ್ಲಿ ಶ್ರೇಯಾಂಕರಹಿತ ಆಟಗಾರರು ಸಿಕ್ಕಿದ್ದರೆ, 2 ಪಂದ್ಯಗಳಲ್ಲಿ 20ಕ್ಕಿಂತ ಕೆಳ ಶ್ರೇಯಾಂಕದ ಆಟಗಾರರು ಎದುರಾಗಿದ್ದರು. ಆದರೆ ಫೈನಲ್‌ನಲ್ಲಿ 8ನೇ ಶ್ರೇಯಾಂಕಿತ ಶೆಲ್ಟನ್ ಸವಾಲು ಎದುರಾಗಿತ್ತು. 2 ಮತ್ತು 3ನೇ ಸೆಟ್‌ನಲ್ಲಿ ಜ್ವೆರೆವ್‌ಗೆ ಶೆಲ್ಟನ್ ಪ್ರಬಲ ಪೈಪೋಟಿ ನೀಡಿದರೂ, ಜ್ವೆರೆವ್‌ರನ್ನು ಸೋಲಿಸಲು ಸಾಧ್ಯವಾಗಲಿಲ್ಲ.
2003ರ ಬಳಿಕ ಕಪ್ ಇಲ್ಲ:
ಯುಎಸ್ ಓಪನ್‌ನಲ್ಲಿ ಅಮೆರಿಕದ ಟೆನಿಸಿಗರು ಕಪ್ ಗೆಲ್ಲದೇ ಬರೋಬ್ಬರಿ 23 ವರ್ಷಗಳಾಯಿತು. ಈ ಬಾರಿ ಆ ಅವಕಾಶ ಶೆಲ್ಟನ್‌ಗೆ ಇತ್ತಾದರೂ ಅದನ್ನು ಅವರು ಬಳಸಿಕೊಳ್ಳಲಿಲ್ಲ. ಕೊನೆಯದಾಗಿ ಅಮೆರಿಕದ ಆ್ಯಂಡ್ರಿ ರೋಡಿಕ್ ಅವರು 2003ರಲ್ಲಿ ಚಾಂಪಿಯನ್ ಆಗಿದ್ದರು. ಆ ಬಳಿಕ ಬೇರೆ ದೇಶದವರೇ ಪ್ರಶಸ್ತಿ ಗೆಲ್ಲುತ್ತಿದ್ದಾರೆ.
₹52.58 ಕೋಟಿ: ಚಾಂಪಿಯನ್ ಅಲೆಕ್ಸಾಂಡರ್ ಜ್ವೆರೆವ್‌ಗೆ ಸಿಕ್ಕ ಪ್ರಶಸ್ತಿ ಮೊತ್ತ.
₹26.75 ಕೋಟಿ: ರನ್ನರ್-ಅಪ್ ಆದ ಬೆನ್ ಶೆಲ್ಟನ್‌ಗೆ ದೊರೆತ ಪ್ರಶಸ್ತಿ ಮೊತ್ತ.


