‘ನಿಮ್ಮ ನಿಮ್ಮ ಊರು, ಭಾಗಗಳಲ್ಲಿ ನೀವು ನೆಡೆಸುವ ಕಾರ್ಯಕ್ರಮಗಳೇ ಆಶೀರ್ವಾದ. ಅದು ಸದಾ ಮುಂದುವರೆಯಲಿ. ಮತ್ತೆ ಭೇಟಿ ಆಗೋಣ. ನನ್ನನ್ನು ನಿಮ್ಮನ್ನು ಎಂದಾದರೂ ಬೇರ್ಪಡಿಸಲು ಸಾಧ್ಯವೇ?’ಕಿಚ್ಚ ಸುದೀಪ್ ತಮ್ಮ, ಹುಟ್ಟುಹಬ್ಬವನ್ನು ಫ್ಯಾನ್ ಜೊತೆ ಏಕೆ ಅಚರಿಸಿಕೊಳ್ಳುತ್ತಿಲ್ಲ? ಈ ಸ್ಟೋರಿ ನೋಡಿ..
ಕಿಚ್ಚ ಸುದೀಪ್ ‘ಹುಟ್ಟುಬ್ಬದ ಆಚರಣೆ’ ಬಗ್ಗೆ ಅಭಿಮಾನಿಗಳಗೆ ಬರೆದ ಪತ್ರ ಇಲ್ಲಿದೆ ನೋಡಿ- Kichcha Sudeep's letter to fans regarding his birthday celebration is here.
ಆತ್ಮೀಯ ಸ್ನೇಹಿತರೇ,
ನಮಸ್ಕಾರ, ಹೇಗಿದ್ದೀರಿ?
2ನೇ ಸೆಪ್ಟೆಂಬರ್ ಎ೦ಬುದು ಒಂದು ದಿನಾಂಕ ಅಷ್ಟೇ.
ಅದನ್ನು ಸಂಭ್ರಮವನ್ನಾಗಿ 30 ವರ್ಷಗಳಿಂದ ಪರಿವರ್ತಿಸಿದ ಅಪಾರ ಪ್ರೀತಿ ನಿಮ್ಮದು.
ನಿಮ್ಮ ಅಭಿಮಾನ, ಹುಚ್ಚು ಪ್ರೀತಿಗೆ ಎಷ್ಟು ಧನ್ಯವಾದ ಹೇಳಿದರೂ ಸಾಲದು.
ಕಳೆದ 30 ವರ್ಷಗಳಲ್ಲಿ ನಿಮ್ಮ ಚಪ್ಪಾಳೆ, ಶಿಳ್ಳೆಗಳಲ್ಲಿ ಇನ್ನು ಹೆಚ್ಚು ಹೆಚ್ಚು ಪ್ರೋತ್ಸಾಹ ಪ್ರೀತಿ ಕಂಡುಕೊಂಡಿದ್ದೇನೆ. ಪ್ರತಿ ಸಿನಿಮಾ ಇರಲಿ, BIGGBOSS ಇರಲಿ ಜೊತೆಗೆ ಯಾವುದೇ ಕಾರ್ಯಕ್ರಮಕ್ಕೆ ಮುಂದಾದಾಗ ನೀವು ತೋರಿಸಿದ ಪ್ರೀತಿ ಅಪರಿಮಿತ..
ಅದೇ ನನಗೆ ಶ್ರೀರಕ್ಷೆ.
ಆದರೆ ಈ ವರ್ಷ ನನ್ನ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿಲ್ಲ. ಅದಕ್ಕೆ ಬಲವಾದ ಮತ್ತು ವೈಯಕ್ತಿಕ ಕಾರಣಗಳಿವೆ. ಸಂಭ್ರಮಗಳನ್ನು ತೆರೆದ ಹೃದಯದಿಂದ ಆಚರಿಸಲು ಸಾಧ್ಯವಾಗದಿದ್ದರೆ ಅದು ಸಂಭ್ರಮವೆ ಅಲ್ಲ ನನಗೆ..
ನಿಮ್ಮ ನಿಮ್ಮ ಊರು, ಭಾಗಗಳಲ್ಲಿ ನೀವು ನೆಡೆಸುವ ಕಾರ್ಯಕ್ರಮಗಳೇ ಆಶೀರ್ವಾದ. ಅದು ಸದಾ ಮುಂದುವರೆಯಲಿ. ಮತ್ತೆ ಭೇಟಿ ಆಗೋಣ. ನನ್ನನ್ನು ನಿಮ್ಮನ್ನು ಎಂದಾದರೂ ಬೇರ್ಪಡಿಸಲು ಸಾಧ್ಯವೇ?
ಅಂದು ಮನೆಯ ಬಳಿಯೂ ಯಾರಿಗೂ ಲಭ್ಯವಾಗುತ್ತಿಲ್ಲ. ಸತ್ಕಾರಗಳು ಗದ್ದಲವಾಗಬಾರದು ಎ೦ಬುದನ್ನು ನಿಮ್ಮಲ್ಲಿ ಪದೇ ಪದೇ ಅರಿಕೆ ಮಾಡಿಕೊಂಡಿದ್ದೇನೆ.
ನಿಮ್ಮ ಉಡುಗೊರೆಗಳು ಸಮಾಜಕ್ಕೆ ಸದ್ವಿನಿಯೋಗವಾಗಲಿ.
ನಿಮ್ಮ ಪ್ರೀತಿ, ಹಾರೈಕೆಗಳಿಗಿಂತ ಮತ್ತೊಂದು ಶ್ರೀರಕ್ಷೆ, ಆಶೀರ್ವಾದ ಇರಲು ಸಾಧ್ಯವೇ?
ಮತ್ತೊ೦ದು ವಿಷಯ ..
30 ವರ್ಷ... ಅಂದರೆ "ಬರೋಬ್ಬರಿ ಮೂವತ್ತು ವರ್ಷ" ಕನ್ನಡ ಚಿತ್ರರಂಗಕ್ಕೆ ಅರ್ಪಿಸಿಕೊಂಡವನಿಗೆ ಸಿನಿಮಾ ನನ್ನ ಪರಮ ಕಾಯಕ ಅನ್ನೋದು ಸ್ಪಷ್ಟ. ಕೆಲವೊಮ್ಮೆ ತಡವಾಗಬಹುದು ಅದಕ್ಕೂ ಕಾರಣಗಳಿರುತ್ತವೆ.
"ಸಿಂಹ ಸುಮ್ಮನೆ ಕುಳಿತಿದೆ ಎಂದರೆ ಸುಸ್ತಾಗಿದೆ ಅಂತಲ್ಲ ಮುಂದಿನ ಬೇಟೆಗೆ ರೆಡಿ ಆಗ್ತಿದೆ ಎಂದರ್ಥ "
ನೋಡಿ, ನನ್ನದೇ ಸಿನಿಮಾ ಸಂಭಾಷಣೆ ಹೀಗೆ ಈ ಪತ್ರದಲ್ಲಿ ನನ್ನ ಬಳಕೆಗೆ ಬರುತ್ತದೆ ಎಂದು ನಾನೂ ಅಂದುಕೊಂಡಿರಲಿಲ್ಲ
ಯಾವುದೇ ವೇದಿಕೆ, ಯಾವುದೇ ಕಾರ್ಯಕ್ರಮಕ್ಕೆ ಹೋದರು ಕನ್ನಡಿಗರನ್ನು ರಂಜಿಸಲು, ಕನ್ನಡವನ್ನು ಕುಣಿಸಲು,
'ಕನ್ನಡ ನನ್ನ ಸತ್ಯ.. ಕನ್ನಡದಿಂದ ನಾನು ನಿತ್ಯ"
ನಿಮ್ಮನ್ನು ರಂಜಿಸುವ ವಿಷಯದಲ್ಲಿ ಯಾವತ್ತಿಗೂ ರಾಜಿಯಾದವನಲ್ಲ ನಾನು. ರಾಜಿ ಆಗುವುದೂ ಇಲ್ಲ.
ನನ್ನ ಎಲ್ಲ ಹೆಜ್ಜೆಗಳಲ್ಲಿ ನೀವಿದ್ದೀರಿ ಹೆಜ್ಜೆ ಗುರುತಾಗಿ. ಏನೇ ಇರಲಿ ಜೀವನದಲ್ಲಿ ಹೂ ಮುಳ್ಳು, ನಿಮ್ಮ ಪ್ರೀತಿ ಮೈಲಿಗಲ್ಲು.
Lv u all always...
ಪ್ರೀತಿಯಿಂದ,
ಕಿಚ್ಚ
**
ಎಂದು ಕನ್ನಡದ ಸ್ಟಾರ್, ಪ್ಯಾನ್ ಇಂಡಿಯಾ ನಟ ಕಿಚ್ಚ ಸುದೀಪ್ ಬರೆದುಕೊಂಡಿದ್ದಾರೆ.


