ಹಾಸ್ಯ ನಟ ಚಿಕ್ಕಣ್ಣ ಪತ್ನಿ ಪಾವನಾ ಜೊತೆ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇದೇ ವೇಳೆ ‘ಲಕ್ಷ್ಮೀಪುತ್ರ’ ಸಿನಿಮಾ ನವೆಂಬರ್ 27ರಂದು ಬಿಡುಗಡೆಯಾಗಲಿದೆ ಎಂದು ಘೋಷಿಸಿದ್ದಾರೆ.
ಹಾಸ್ಯ ನಟನಾಗಿ ಕನ್ನಡಿಗರ ಮನಗೆದ್ದಿರುವ ಚಿಕ್ಕಣ್ಣ ಇದೀಗ ತಮ್ಮ ವೈವಾಹಿಕ ಜೀವನದ ಸಂಭ್ರಮದ ನಡುವೆ ಪತ್ನಿ ಪಾವನಾ ಅವರೊಂದಿಗೆ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಭೇಟಿ ನೀಡಿದ್ದಾರೆ. ಗುಂಡ್ಲುಪೇಟೆ ತಾಲೂಕಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರಕ್ಕೆ ಗೆಳೆಯರೊಂದಿಗೆ ಆಗಮಿಸಿದ ದಂಪತಿ, ಗೋಪಾಲಸ್ವಾಮಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.
ಚಿಕ್ಕಣ್ಣ ಮತ್ತು ಪಾವನಾ ದಂಪತಿಯನ್ನು ದೇವಸ್ಥಾನದ ಅರ್ಚಕರು ಆತ್ಮೀಯವಾಗಿ ಬರಮಾಡಿಕೊಂಡರು. ಶಲ್ಯ ಹಾಗೂ ಹೂವಿನ ಹಾರ ಹಾಕಿ ಗೌರವಿಸಿದ ಅರ್ಚಕರು, ಬಾಲ ಗೋಪಾಲ ಮೂರ್ತಿಯನ್ನು ದಂಪತಿಯ ಕೈಗೆ ನೀಡಿ ವಿಶೇಷ ಪೂಜೆ ನೆರವೇರಿಸಿದರು.
ಪೂಜೆ ಬಳಿಕ ದೇವಸ್ಥಾನಕ್ಕೆ ಪ್ರದಕ್ಷಿಣೆ ಹಾಕಿದ ಚಿಕ್ಕಣ್ಣ-ಪಾವನಾ, ಹಿಮವದ್ ಗೋಪಾಲಸ್ವಾಮಿ ಬೆಟ್ಟದ ಹಸಿರು ಸೌಂದರ್ಯ ಮತ್ತು ಸದಾ ಮಂಜಿನಿಂದ ಕಂಗೊಳಿಸುವ ಪ್ರಕೃತಿಯನ್ನು ಕಣ್ತುಂಬಿಕೊಂಡರು. ಇದೇ ವೇಳೆ ನೆಚ್ಚಿನ ನಟನನ್ನು ಕಂಡ ಸಾರ್ವಜನಿಕರು ಹಾಗೂ ಭಕ್ತರು ಅವರೊಂದಿಗೆ ಸೆಲ್ಫಿ ಮತ್ತು ಫೋಟೋ ತೆಗೆದುಕೊಳ್ಳಲು ಮುಗಿಬಿದ್ದರು.
ನಾಯಕನಾಗಿ ಚಿಕ್ಕಣ್ಣನ ಮತ್ತೊಂದು ಸಿನಿಮಾ ರೆಡಿ!
ಇನ್ನು ಸಿನಿಮಾಗಳ ವಿಚಾರಕ್ಕೆ ಬಂದರೆ, ಚಿಕ್ಕಣ್ಣ ಅಭಿನಯದ ಮತ್ತೊಂದು ಬಹುನಿರೀಕ್ಷಿತ ಸಿನಿಮಾ 'ಲಕ್ಷ್ಮೀಪುತ್ರ' ಬಿಡುಗಡೆಗೆ ಸಜ್ಜಾಗಿದೆ. ಕನ್ನಡ ಚಿತ್ರರಂಗದ ಬಹುತೇಕ ಸ್ಟಾರ್ ನಟರೊಂದಿಗೆ ತೆರೆ ಹಂಚಿಕೊಂಡಿರುವ ಚಿಕ್ಕಣ್ಣ, 'ಉಪಾಧ್ಯಕ್ಷ' ಸಿನಿಮಾ ಮೂಲಕ ಪೂರ್ಣ ಪ್ರಮಾಣದ ನಾಯಕನಾಗಿ ಯಶಸ್ಸು ಕಂಡಿದ್ದರು. ಇದೀಗ ನಾಯಕನಾಗಿ ತಮ್ಮ ಎರಡನೇ ಹೆಜ್ಜೆ ಇಡುತ್ತಿದ್ದಾರೆ.
ಚಿತ್ರದ ಬಿಡುಗಡೆ ದಿನಾಂಕವನ್ನು ಸ್ವತಃ ಚಿಕ್ಕಣ್ಣ ಘೋಷಿಸಿದ್ದು, ನವೆಂಬರ್ 27ರಂದು 'ಲಕ್ಷ್ಮೀಪುತ್ರ' ರಾಜ್ಯಾದ್ಯಂತ ತೆರೆಕಾಣಲಿದೆ. ಕನ್ನಡ ರಾಜ್ಯೋತ್ಸವದ ಸಂಭ್ರಮದ ತಿಂಗಳಲ್ಲೇ ತಮ್ಮ ಸಿನಿಮಾ ಬಿಡುಗಡೆಯಾಗುತ್ತಿರುವುದಕ್ಕೆ ಚಿಕ್ಕಣ್ಣ ಸಂತಸ ವ್ಯಕ್ತಪಡಿಸಿದ್ದಾರೆ.
"ನನ್ನ ವೃತ್ತಿಜೀವನದ ಆರಂಭದ ದಿನಗಳಲ್ಲಿ ಗಣೇಶೋತ್ಸವ ಮತ್ತು ರಾಜ್ಯೋತ್ಸವದ ವೇದಿಕೆಗಳೇ ನನ್ನ ಬದುಕಿಗೆ ಆಸರೆಯಾಗಿದ್ದವು. ಅದೇ ತಿಂಗಳಲ್ಲಿ ನನ್ನ ಸಿನಿಮಾ ಬಿಡುಗಡೆಯಾಗುತ್ತಿರುವುದು ವಿಶೇಷ. ಪ್ರೇಕ್ಷಕರು ಎಂದಿನಂತೆ ಪ್ರೀತಿ, ಪ್ರೋತ್ಸಾಹ ನೀಡಿ ಚಿತ್ರವನ್ನು ಹರಸಬೇಕು" ಎಂದು ಚಿಕ್ಕಣ್ಣ ಮನವಿ ಮಾಡಿದ್ದಾರೆ. ಹೀಗಾಗಿ ಒಂದು ಕಡೆ ಪತ್ನಿ ಪಾವನಾ ಜೊತೆ ದೇವರ ದರ್ಶನ, ಮತ್ತೊಂದೆಡೆ ನಾಯಕನಾಗಿ ಹೊಸ ಸಿನಿಮಾದ ಬಿಡುಗಡೆ ಸಿದ್ಧತೆ-ಚಿಕ್ಕಣ್ಣ ಪಾಲಿಗೆ ಸದ್ಯ ಸಂಭ್ರಮದ ಸಮಯವೇ ಸರಿ!


