ಶಿವರಾಜ್‌ಕುಮಾರ್ ಅಭಿನಯದ ‘ಮೈಲಾರಿ 2’ ಸಿನಿಮಾ ಖಂಡಿತವಾಗಿಯೂ ಬರಲಿದೆ ಎಂದು ಶಿವಣ್ಣ ಸ್ಪಷ್ಟಪಡಿಸಿದ್ದಾರೆ. ಆರ್.ಚಂದ್ರು ಈಗಾಗಲೇ ಮುಂದುವರಿದ ಕಥೆಯನ್ನು ಸಿದ್ಧಪಡಿಸಿಕೊಂಡಿದ್ದು, ಕಥೆ ಮತ್ತು ಪಾತ್ರದ ಸ್ಟೈಲ್ ಎಲ್ಲಾ ಭಾಷೆಗಳ ಪ್ರೇಕ್ಷಕರಿಗೂ ಕನೆಕ್ಟ್ ಆಗಲಿದೆ.
‘ನನಗೆ ಆ ಚಿತ್ರದ ಕತೆ ಮತ್ತು ಕ್ಯಾರೆಕ್ಟರ್ ತುಂಬಾ ಇಷ್ಟವಾಗಿತ್ತು. ಖಂಡಿತವಾಗಿಯೂ ಅದರ ಮುಂದುವರಿದ ಭಾಗ ಬರಲಿದೆ’. ಆರ್.ಚಂದ್ರು ನಿರ್ದೇಶನದ ‘ಒರಿಜಿನಲ್ ಮಾನ್‌ಸ್ಟರ್’ ಚಿತ್ರದ ಮೂಹೂರ್ತದಲ್ಲಿ ಶಿವರಾಜ್‌ಕುಮಾರ್ ಹೀಗೆ ಹೇಳಿದ್ದು ‘ಮೈಲಾರಿ’ ಚಿತ್ರದ ಬಗ್ಗೆ.
‘ಕಬ್ಜ’ ಪಾರ್ಟ್ 2 ಬರಲಿದೆಯೇ? ಎನ್ನುವ ಪ್ರಶ್ನೆಗೆ ಉತ್ತರಿಸಿದ ಶಿವಣ್ಣ, ‘ಕಬ್ಜ ಪಾರ್ಟ್ 2 ಬರಲಿದೆ. ಅದಕ್ಕಿಂತ ಮುಖ್ಯವಾಗಿ ‘ಮೈಲಾರಿ 2’ ಚಿತ್ರ ಬರಲಿದೆ. ಆರ್.ಚಂದ್ರು ಅದರ ಮುಂದುವರಿದ ಕತೆ ಬರೆದುಕೊಂಡಿದ್ದಾರೆ. ಅದರ ಮುಂದುವರಿದ ಕತೆ ಮತ್ತು ಕ್ಯಾರೆಕ್ಟರ್ ಸ್ಟೈಲ್ ಎಲ್ಲಾ ಭಾಷೆಗಳಿಗೂ ಕನೆಕ್ಟ್ ಆಗೋದು ಪಕ್ಕಾ.
ಖಂಡಿತವಾಗಿಯೂ ಅದೊಂದು ವಿಶೇಷ ಸಿನಿಮಾ ಆಗಲಿದೆ. ಇದರ ಜೊತೆಗೆ ‘ಕಬ್ಜ 2’ ಚಿತ್ರ ಕೂಡ ಪ್ಲಾನ್‌ನಲ್ಲಿದೆ’ ಎಂದಿದ್ದಾರೆ. ‘ಒರಿಜಿನಲ್ ಮಾನ್‌ಸ್ಟರ್’ ಕನ್ನಡ ಮತ್ತು ಹಿಂದಿಯಲ್ಲಿ ಮೂಡಿಬರಲಿದೆ. ಶಿವಣ್ಣ ತಮಗೆ ಹಿಂದಿ ಭಾಷೆ ತಿಳಿದಿರುವುದಾಗಿ ಹೇಳಿದ್ದಾರೆ.
ಕಬ್ಜ ಫ್ಲಾಪ್ ಅನ್ನೋರಿಗೆ ಚಿತ್ರದ ಕಲೆಕ್ಷನ್ ಉತ್ತರ ಕೊಟ್ಟಿದೆ: ಆರ್.ಚಂದ್ರು
‘ಒರಿಜಿನಲ್ ಮಾನ್‌ಸ್ಟರ್’ ಚಿತ್ರದ ಮುಹೂರ್ತ ಕಾರ್ಯಕ್ರಮದಲ್ಲಿ ಮಾತನಾಡಿದ ಆರ್.ಚಂದ್ರು, ‘ಕಬ್ಜ ಫ್ಲಾಪ್ ಆಗಿದ್ದರೆ ಶಿವಣ್ಣ ಅಂಥ ದೊಡ್ಡ ಸ್ಟಾರ್ ಹೀರೋ ನನ್ನ ಜೊತೆಗೆ ಸಿನಿಮಾ ಮಾಡುತ್ತಿರಲಿಲ್ಲ. ಅಮೆಜಾನ್ ಪ್ರೈಮ್ ವೀಡಿಯೋ ಓಟಿಟಿಯವರು ಕರ್ನಾಟಕದಿಂದ ಇಬ್ಬರನ್ನು ಮಾತ್ರ ಬಿಸಿನೆಸ್ ಮೀಟಿಂಗ್‌ಗೆ ಕರೆದಿದ್ದರು. ಒಬ್ಬರು ಹೊಂಬಾಳೆ ಪ್ರೊಡಕ್ಷನ್ ಮತ್ತು ನಾನು.
ಇಷ್ಟೆಲ್ಲ ಗೌರವ ಪಡೆಯಲು ಸಾಧ್ಯವಾಗಿದ್ದು ‘ಕಬ್ಜ’ ಸಿನಿಮಾದಿಂದಲೇ. ಅಲ್ಲದೆ ‘ಕಬ್ಜ’ ಎಷ್ಟು ಕೋಟಿ ಗಳಿಸಿದೆ, ಎಷ್ಟು ಕೋಟಿ ತೆರಿಗೆ ಕಟ್ಟಿದ್ದೇನೆ ಎಂದು ಬಹಿರಂಗವಾಗಿಯೇ ಹೇಳಿದ್ದೇನೆ. ಹಾಗಿದ್ದರೂ ‘ಕಬ್ಜ’ ಫ್ಲಾಪ್ ಅನ್ನೋರಿಗೆ ನಾನು ಉತ್ತರ ಕೊಡಲ್ಲ. ನಾನು ಸಿನಿಮಾ ಮಾಡಿಕೊಂಡು ಹೋಗುತ್ತೇನೆ. ಮಾತಾಡೋವ್ರು ಮಾತಾಡಲಿ’ ಎಂದಿದ್ದಾರೆ.


