City Lights Kannada Movie: ದುನಿಯಾ ವಿಜಯ್ ನಿರ್ದೇಶನದ ಈ ಚಿತ್ರದಲ್ಲಿ ದೊಡ್ಮನೆ ಕುಡಿ ವಿನಯ್ ರಾಜ್‌ಕುಮಾರ್ ಹಾಗೂ ವಿಜಯ್ ಅವರ ಪುತ್ರಿ ಮೋನಿಷಾ ವಿಜಯ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಸೆಪ್ಟೆಂಬರ್ 18ರಂದು ರಾಜ್ಯಾದ್ಯಂತ ತೆರೆಗೆ ಬರಲು ಸಜ್ಜಾಗಿರುವ ‘ಸಿಟಿಲೈಟ್ಸ್’ ಸಿನಿಮಾ ಈಗಾಗಲೇ ಸ್ಯಾಂಡಲ್‌ವುಡ್‌ನಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ. ದುನಿಯಾ ವಿಜಯ್ ನಿರ್ದೇಶನದ ಈ ಚಿತ್ರದಲ್ಲಿ ದೊಡ್ಮನೆ ಕುಡಿ ವಿನಯ್ ರಾಜ್‌ಕುಮಾರ್ ಹಾಗೂ ವಿಜಯ್ ಅವರ ಪುತ್ರಿ ಮೋನಿಷಾ ವಿಜಯ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೀಗ ಚಿತ್ರತಂಡ ರಿಲೀಸ್ ಮಾಡಿರುವ ಮೇಕಿಂಗ್ ವಿಡಿಯೋ ಸಿನಿಮಾದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.

‘ಸಲಗ’ ಹಾಗೂ ‘ಭೀಮ’ ಚಿತ್ರಗಳ ಬಳಿಕ ದುನಿಯಾ ವಿಜಯ್ ನಿರ್ದೇಶಿಸುತ್ತಿರುವ ಮೂರನೇ ಸಿನಿಮಾ ಇದಾಗಿದ್ದು, ಈ ಬಾರಿ ವಿಭಿನ್ನ ಕಥೆಯೊಂದಿಗೆ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ. ಈಗಾಗಲೇ ಚಿತ್ರದ ಹಾಡುಗಳು ಗಮನ ಸೆಳೆದಿದ್ದು, ಹೊಸದಾಗಿ ಬಿಡುಗಡೆಯಾಗಿರುವ ಮೇಕಿಂಗ್ ವಿಡಿಯೋ ಮಾತ್ರ ಚಿತ್ರದ ಕಥೆ ಹಾಗೂ ಪಾತ್ರಗಳ ಬಗ್ಗೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ರಕ್ತಸಿಕ್ತ ಅವತಾರದಲ್ಲಿ ವಿನಯ್; ಲಾಂಗ್ ಹಿಡಿದ ಮೋನಿಷಾ!

ಮೇಕಿಂಗ್ ವಿಡಿಯೋದಲ್ಲಿ ವಿನಯ್ ರಾಜ್‌ಕುಮಾರ್ ಸಂಪೂರ್ಣ ರಗಡ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ರಕ್ತಸಿಕ್ತ ಮುಖದೊಂದಿಗೆ ಕೈಯಲ್ಲಿ ಲಾಂಗ್ ಹಿಡಿದು ನಿಂತಿರುವ ವಿನಯ್, ತಮ್ಮ ಹೆಗಲ ಮೇಲೆ ಮೋನಿಷಾ ಅವರನ್ನು ಕೂರಿಸಿಕೊಂಡಿರುವ ದೃಶ್ಯ ಗಮನ ಸೆಳೆಯುತ್ತಿದೆ. ಇನ್ನೊಂದೆಡೆ ಮೋನಿಷಾ ಕೂಡ ಕೈಯಲ್ಲಿ ಮಚ್ಚು ಹಿಡಿದು ಖಡಕ್ ಪೋಸ್ ನೀಡಿದ್ದಾರೆ. ವಿಶೇಷವೆಂದರೆ, ನಟಿ ಯಾವ ರೀತಿ ಪೋಸ್ ನೀಡಬೇಕು ಎಂಬುದನ್ನು ದುನಿಯಾ ವಿಜಯ್ ಸ್ವತಃ ವಿವರಿಸುತ್ತಿರುವ ದೃಶ್ಯವೂ ವಿಡಿಯೋದಲ್ಲಿದೆ. ಮೇಕಿಂಗ್ ವಿಡಿಯೋದಲ್ಲಿ ಕಾಣಿಸಿಕೊಂಡಿರುವ ಈ ಬ್ಲಡಿ ಹಾಗೂ ಆ್ಯಕ್ಷನ್ ಝಲಕ್ ನೋಡಿ, ‘ಸಿಟಿಲೈಟ್ಸ್’ನಲ್ಲಿ ವಿನಯ್ ಮತ್ತು ಮೋನಿಷಾ ಅವರ ಪಾತ್ರಗಳು ಹೇಗಿರಲಿವೆ ಎಂಬ ಕುತೂಹಲ ಸಿನಿಪ್ರಿಯರಲ್ಲಿ ಹೆಚ್ಚಾಗಿದೆ.

ಹಳ್ಳಿ ದಂಪತಿ, ಬೆಂಗಳೂರು ಬದುಕು... ‘ಸಿಟಿಲೈಟ್ಸ್’ ಕಥೆಯೇನು?

‘ಸಿಟಿಲೈಟ್ಸ್’ ಕೇವಲ ಆ್ಯಕ್ಷನ್ ಸಿನಿಮಾ ಮಾತ್ರವಲ್ಲ. ದೊಡ್ಡ ಕನಸುಗಳನ್ನು ಹೊತ್ತು ಹಳ್ಳಿಯಿಂದ ಬೆಂಗಳೂರಿಗೆ ಬರುವ ಗ್ರಾಮೀಣ ದಂಪತಿಯ ಬದುಕು, ಮಹಾನಗರದ ಕಠಿಣ ವಾಸ್ತವ ಮತ್ತು ಬದುಕಿಗಾಗಿ ಅವರು ನಡೆಸುವ ಹೋರಾಟದ ಸುತ್ತ ಕಥೆ ಸಾಗಲಿದೆ. ನಗರದ ವೇಗದ ಬದುಕಿನಲ್ಲಿ ಮಹಿಳೆಯರು ಎದುರಿಸುವ ಸವಾಲುಗಳು, ಜೀವನ ನಿರ್ವಹಣೆಗಾಗಿ ಅವರು ಮಾಡುವ ಕೆಲಸಗಳು ಹಾಗೂ ಅವರ ಬದುಕಿನ ಮತ್ತೊಂದು ಮುಖವನ್ನು ಸಿನಿಮಾದಲ್ಲಿ ಕಟ್ಟಿಕೊಡಲಾಗುತ್ತಿದೆ. ಹೆಣ್ಣುಮಕ್ಕಳ ಬದುಕಿನ ಸುತ್ತವೇ ಕಥೆ ಹೆಚ್ಚು ಕೇಂದ್ರೀಕೃತವಾಗಿದೆ ಎಂದು ದುನಿಯಾ ವಿಜಯ್ ಈ ಹಿಂದೆ ಹೇಳಿಕೊಂಡಿದ್ದರು. ಇದೇ ಕಾರಣಕ್ಕೆ ಸಿನಿಮಾ ಬಿಡುಗಡೆಯ ಮುನ್ನವೇ ವಿಭಿನ್ನ ನಿರೀಕ್ಷೆ ಮೂಡಿಸಿದೆ.

ಉಮಾಶ್ರೀಗೆ ವಿಶೇಷ ಪಾತ್ರ

ಸಮಾಜದಲ್ಲಿ ಮಂಗಳಮುಖಿಯರನ್ನು ಗೌರವದಿಂದ ಕಾಣಬೇಕು ಎಂಬ ಸಂದೇಶವನ್ನೂ ಸಿನಿಮಾದ ಮೂಲಕ ನೀಡುವ ಉದ್ದೇಶ ಚಿತ್ರತಂಡಕ್ಕಿದೆ. ಈ ಕಾರಣಕ್ಕಾಗಿ ಹಿರಿಯ ನಟಿ ಉಮಾಶ್ರೀ ಅವರಿಗೆ ಪ್ರಮುಖ ಪಾತ್ರವೊಂದನ್ನು ನೀಡಲಾಗಿದೆ. ಚಿತ್ರದ ಕಥಾವಸ್ತು ಹಾಗೂ ಪಾತ್ರಗಳ ವಿನ್ಯಾಸದ ಬಗ್ಗೆ ಈಗಾಗಲೇ ಸಾಕಷ್ಟು ಚರ್ಚೆ ನಡೆಯುತ್ತಿದ್ದು, ಸಿನಿಮಾ ಬಿಡುಗಡೆಯಾದ ಬಳಿಕ ಈ ಪಾತ್ರಗಳು ಹೇಗೆ ಮೂಡಿಬರಲಿವೆ ಎಂಬುದನ್ನು ಕಾದು ನೋಡಬೇಕಿದೆ.

‘ಕಂದಮ್ಮ’, ‘ಬಾವ ಬಾವ’ ಹಾಡುಗಳಿಗೆ ಉತ್ತಮ ಪ್ರತಿಕ್ರಿಯೆ

ಚಿತ್ರಕ್ಕೆ ಚರಣ್ ರಾಜ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಸಿನಿಮಾದಲ್ಲಿ ಒಟ್ಟು ಐದರಿಂದ ಆರು ಹಾಡುಗಳಿದ್ದು, ಈಗಾಗಲೇ ಬಿಡುಗಡೆಯಾಗಿರುವ ‘ಕಂದಮ್ಮ’ ಹಾಗೂ ‘ಬಾವ ಬಾವ’ ರ್ಯಾಪ್ ಹಾಡುಗಳು ಪ್ರೇಕ್ಷಕರ ಗಮನ ಸೆಳೆದಿವೆ. ಮಾಸ್ತಿ ಮಂಜು ಸಂಭಾಷಣೆ ಬರೆದಿದ್ದು, ವಿಜಯ್ ಕುಮಾರ್ ಹಾಗೂ ವಿಕ್ರಮ್ ಆರ್ಯ ಜಂಟಿಯಾಗಿ ಚಿತ್ರವನ್ನು ನಿರ್ಮಿಸಿದ್ದಾರೆ. ಕೆವಿಎನ್ ಪ್ರೊಡಕ್ಷನ್ಸ್ ಸಿನಿಮಾದ ವಿತರಣೆಯ ಜವಾಬ್ದಾರಿ ಹೊತ್ತಿದೆ. ಈಗಾಗಲೇ ಚಿತ್ರೀಕರಣ ಪೂರ್ಣಗೊಂಡಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗುತ್ತಿವೆ.

ಮೋನಿಷಾ ವಿಜಯ್‌ಗೆ ‘ಸಿಟಿಲೈಟ್ಸ್’ ದೊಡ್ಡ ಎಂಟ್ರಿ!

‘ಸಿಟಿಲೈಟ್ಸ್’ ಮತ್ತೊಂದು ಕಾರಣಕ್ಕೂ ವಿಶೇಷ. ದುನಿಯಾ ವಿಜಯ್ ತಮ್ಮ ಎರಡನೇ ಪುತ್ರಿ ಮೋನಿಷಾ ವಿಜಯ್ ಅವರನ್ನು ಇದೇ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ನಾಯಕಿಯಾಗಿ ಪರಿಚಯಿಸುತ್ತಿದ್ದಾರೆ. ವಿನಯ್ ರಾಜ್‌ಕುಮಾರ್ ಅವರ ವಿಭಿನ್ನ ಲುಕ್, ಮೋನಿಷಾ ಅವರ ಆ್ಯಕ್ಷನ್ ಅವತಾರ ಹಾಗೂ ದುನಿಯಾ ವಿಜಯ್ ನಿರ್ದೇಶನ-ಈ ಮೂರು ಅಂಶಗಳು ಸಿನಿಮಾದ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿವೆ. ಸೆಪ್ಟೆಂಬರ್ 18ರಂದು ‘ಸಿಟಿಲೈಟ್ಸ್’ ರಾಜ್ಯಾದ್ಯಂತ ಚಿತ್ರಮಂದಿರಗಳಿಗೆ ಲಗ್ಗೆ ಇಡಲಿದೆ. ಗ್ರಾಮೀಣ ಬದುಕು, ಬೆಂಗಳೂರಿನ ಕಠಿಣ ವಾಸ್ತವ, ಮಹಿಳೆಯರ ಹೋರಾಟ ಮತ್ತು ಆ್ಯಕ್ಷನ್‌ನ ಮಿಶ್ರಣದೊಂದಿಗೆ ಬರುತ್ತಿರುವ ಈ ಸಿನಿಮಾ ಪ್ರೇಕ್ಷಕರ ಮನಗೆಲ್ಲುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.