ರಾಧಿಕಾ ಫಿಟ್ ಆಗಿರಲು ಪ್ರತಿದಿನ ಜಿಮ್‌ಗೆ ಹೋಗುವುದಿಲ್ಲ. ಅದೇ ರೀತಿ ಕಠಿಣ ಡಯಟ್ ಅಥವಾ ಕ್ರ್ಯಾಶ್ ಡಯಟ್ ಕೂಡ ಫಾಲೋ ಮಾಡುವುದಿಲ್ಲ. ಬದಲಿಗೆ ಸರಳವಾದ ಕೆಲವು ಅಭ್ಯಾಸಗಳನ್ನು ತಮ್ಮ ದಿನಚರಿಯ ಭಾಗವಾಗಿಸಿಕೊಂಡಿದ್ದಾರೆ.
‘ಟಾಕ್ಸಿಕ್’ ಚಿತ್ರದ ಮೂಲಕ ಮತ್ತೊಮ್ಮೆ ಭರ್ಜರಿ ಸುದ್ದಿಯಲ್ಲಿರುವ ರಾಕಿಂಗ್ ಸ್ಟಾರ್ ಯಶ್ ಅವರ ಪತ್ನಿ ರಾಧಿಕಾ ಪಂಡಿತ್ ಕೂಡ ಕನ್ನಡ ಚಿತ್ರರಂಗದ ಜನಪ್ರಿಯ ನಟಿ. ಒಂದು ಕಾಲದಲ್ಲಿ ಸ್ಯಾಂಡಲ್‌ವುಡ್‌ನ ಟಾಪ್ ಹೀರೋಯಿನ್ ಆಗಿದ್ದ ರಾಧಿಕಾ, ಇದೀಗ ಸಿನಿಮಾಗಳಿಂದ ದೂರವಿದ್ದರೂ ತಮ್ಮ ಫಿಟ್‌ನೆಸ್ ಹಾಗೂ ಆಕ್ಟಿವ್ ಲೈಫ್‌ಸ್ಟೈಲ್‌ನಿಂದ ಗಮನ ಸೆಳೆಯುತ್ತಾರೆ.
ವಿಶೇಷ ಅಂದರೆ, ರಾಧಿಕಾ ಫಿಟ್ ಆಗಿರಲು ಪ್ರತಿದಿನ ಜಿಮ್‌ಗೆ ಹೋಗುವುದಿಲ್ಲ. ಅದೇ ರೀತಿ ಕಠಿಣ ಡಯಟ್ ಅಥವಾ ಕ್ರ್ಯಾಶ್ ಡಯಟ್ ಕೂಡ ಫಾಲೋ ಮಾಡುವುದಿಲ್ಲ. ಬದಲಿಗೆ ಸರಳವಾದ ಕೆಲವು ಅಭ್ಯಾಸಗಳನ್ನು ತಮ್ಮ ದಿನಚರಿಯ ಭಾಗವಾಗಿಸಿಕೊಂಡಿದ್ದಾರೆ. ಹಾಗಾದರೆ ರಾಧಿಕಾ ಅವರ ಫಿಟ್‌ನೆಸ್ ಸೀಕ್ರೆಟ್ ಏನು?
ಜಿಮ್ ಇಲ್ಲ, ಕಠಿಣ ಡಯಟ್ ಕೂಡ ಇಲ್ಲ!
ಹಳೆಯ ಸಂದರ್ಶನವೊಂದರಲ್ಲಿ ರಾಧಿಕಾ ಪಂಡಿತ್ ತಮ್ಮ ಫಿಟ್‌ನೆಸ್ ಬಗ್ಗೆ ಮಾತನಾಡಿದ್ದರು. ತಾವು ಮೊದಲಿನಿಂದಲೂ ಸಣ್ಣ ಮೈಕಟ್ಟಿನವರಾಗಿದ್ದು, ಇದೇ ಕಾರಣಕ್ಕೆ ಕೆಲವು ಸಿನಿಮಾಗಳ ಅವಕಾಶಗಳನ್ನು ಕಳೆದುಕೊಂಡಿದ್ದೆ ಎಂದು ಅವರು ಹೇಳಿಕೊಂಡಿದ್ದರು. ಆದರೆ ಫಿಟ್ ಆಗಲು ಗಂಟೆಗಟ್ಟಲೆ ಟ್ರೆಡ್‌ಮಿಲ್ ಮೇಲೆ ಓಡುವುದು ಅಥವಾ ಕಠಿಣ ಡಯಟ್ ಮಾಡುವುದು ತಮ್ಮಿಂದ ಸಾಧ್ಯವಿಲ್ಲ ಎಂದು ರಾಧಿಕಾ ಸ್ಪಷ್ಟವಾಗಿ ಹೇಳಿದ್ದರು. ಹೀಗಾಗಿ ತಮಗೆ ಇಷ್ಟವಾಗುವ ಮತ್ತು ಸುಲಭವಾಗಿ ಅನುಸರಿಸಬಹುದಾದ ರೀತಿಯಲ್ಲಿ ಫಿಟ್‌ನೆಸ್ ರೂಟೀನ್ ರೂಪಿಸಿಕೊಂಡಿದ್ದಾರೆ.
ಫಿಟ್ ಆಗಿರಲು ರಾಧಿಕಾ ಮಾಡುವ 3 ಕೆಲಸಗಳು: ರಾಧಿಕಾ ಅವರ ಫಿಟ್‌ನೆಸ್ ರೂಟೀನ್ ತುಂಬಾ ಸರಳವಾಗಿದೆ. ಜಿಮ್‌ಗೆ ಹೋಗುವ ಬದಲು ದೈಹಿಕ ಚಟುವಟಿಕೆಗಳನ್ನು ತಮ್ಮ ದಿನಚರಿಯಲ್ಲಿ ಸೇರಿಸಿಕೊಂಡಿದ್ದಾರೆ.
1. ಜುಂಬಾ ಮತ್ತು ಡ್ಯಾನ್ಸ್
ರಾಧಿಕಾಗೆ ಡ್ಯಾನ್ಸ್ ಎಂದರೆ ತುಂಬಾ ಇಷ್ಟ. ಹೀಗಾಗಿ ಕ್ಯಾಲೊರಿ ಬರ್ನ್ ಮಾಡಲು ಅವರು ಜುಂಬಾ ಅಥವಾ ನಾರ್ಮಲ್ ಡ್ಯಾನ್ಸ್ ಮಾಡುತ್ತಾರೆ. ಡ್ಯಾನ್ಸ್ ಮೂಲಕ ವರ್ಕೌಟ್ ಮಾಡಿದಂತೆಯೂ ಆಗುತ್ತದೆ, ಜೊತೆಗೆ ಮನಸ್ಸಿಗೂ ಖುಷಿ ಸಿಗುತ್ತದೆ.
2. ಸೂರ್ಯ ನಮಸ್ಕಾರ, ಯೋಗ ಮತ್ತು ಎಕ್ಸರ್ಸೈಸ್
ಬೆಳಗ್ಗೆ ಎದ್ದ ಬಳಿಕ ಸೂರ್ಯ ನಮಸ್ಕಾರ, ಯೋಗ ಅಥವಾ ಸರಳವಾದ ವ್ಯಾಯಾಮಗಳನ್ನು ಮಾಡುವುದು ಅವರ ದಿನಚರಿಯ ಮತ್ತೊಂದು ಭಾಗ. ದೇಹವನ್ನು ಆಕ್ಟಿವ್ ಆಗಿಡಲು ಇದು ಸಹಾಯ ಮಾಡುತ್ತದೆ.
3. 30 ನಿಮಿಷ ವಾಕಿಂಗ್
ಇದರ ಜೊತೆಗೆ ಪ್ರತಿದಿನ ಸುಮಾರು 30 ನಿಮಿಷ ವಾಕ್ ಮಾಡುವ ಅಭ್ಯಾಸವೂ ರಾಧಿಕಾ ಅವರದ್ದು. ಫಿಟ್‌ನೆಸ್‌ಗಾಗಿ ದುಬಾರಿ ಜಿಮ್‌ಗಿಂತಲೂ ನಿಯಮಿತವಾಗಿ ನಡೆಯುವುದು ಮತ್ತು ದೈಹಿಕ ಚಟುವಟಿಕೆಯಲ್ಲಿ ತೊಡಗಿಕೊಳ್ಳುವುದು ಮುಖ್ಯ ಎಂಬುದು ಅವರ ನಂಬಿಕೆ.
ಮೆಡಿಟೇಷನ್ ಬದಲು ಈ ಅಭ್ಯಾಸಗಳು!
ಮನಸ್ಸನ್ನು ರಿಲ್ಯಾಕ್ಸ್ ಮಾಡಿಕೊಳ್ಳಲು ರಾಧಿಕಾ ಮೆಡಿಟೇಷನ್ ಮಾಡುವುದಿಲ್ಲವಂತೆ. ಬದಲಿಗೆ ತಮ್ಮ ನೆಚ್ಚಿನ ಹಾಡುಗಳನ್ನು ಕೇಳುವುದು, ಸಿನಿಮಾಗಳನ್ನು ನೋಡುವುದು ಮತ್ತು ಪುಸ್ತಕಗಳನ್ನು ಓದುವುದನ್ನು ಇಷ್ಟಪಡುತ್ತಾರೆ. ವಿಶೇಷವಾಗಿ ರಾತ್ರಿ ಸಮಯದಲ್ಲಿ ಪುಸ್ತಕ ಓದುವುದು ಅವರಿಗೆ ತುಂಬಾ ಇಷ್ಟ. ಕೆಲವೊಮ್ಮೆ ಇದರ ಜೊತೆಗೆ ಹಾಟ್ ಚಾಕೊಲೇಟ್ ಕೂಡ ಸವಿಯುತ್ತಾರೆ. ಈ ರೀತಿಯ ಸಣ್ಣ ಸಣ್ಣ ಅಭ್ಯಾಸಗಳೇ ತಮ್ಮ ಮನಸ್ಸನ್ನು ಶಾಂತವಾಗಿಡಲು ಸಹಾಯ ಮಾಡುತ್ತವೆ ಎಂದು ರಾಧಿಕಾ ಹೇಳಿದ್ದಾರೆ.
ಊಟದ ವಿಚಾರದಲ್ಲೂ ಸಿಂಪಲ್ ರೂಟೀನ್
ರಾಧಿಕಾ ಪಂಡಿತ್ ಸಸ್ಯಾಹಾರಿ. ಅವರ ಆಹಾರ ಪದ್ಧತಿಯೂ ತುಂಬಾ ಸರಳವಾಗಿದೆ. ದಿನದಲ್ಲಿ ಸಾಮಾನ್ಯವಾಗಿ ಹೊಟ್ಟೆ ತುಂಬಾ ಊಟ ಮಾಡುವ ಅವರು, ರಾತ್ರಿ ವೇಳೆ ತರಕಾರಿ, ರೊಟ್ಟಿ ಮತ್ತು ಸಲಾಡ್‌ನಂತಹ ಹಗುರವಾದ ಆಹಾರವನ್ನು ಸೇವಿಸುತ್ತಾರೆ. ಸ್ನ್ಯಾಕ್ಸ್‌ಗಾಗಿ ಡ್ರೈ ಫ್ರೂಟ್ಸ್ ಮತ್ತು ಹಣ್ಣುಗಳನ್ನು ಆಯ್ಕೆ ಮಾಡುತ್ತಾರೆ. ರಾತ್ರಿ ಸುಮಾರು 8 ಗಂಟೆಯೊಳಗೆ ಊಟ ಮುಗಿಸಿಕೊಳ್ಳುವ ಅಭ್ಯಾಸವೂ ಅವರಿಗಿದೆ. ತಮ್ಮ ದೇಹ ಆಹಾರವನ್ನು ಸುಲಭವಾಗಿ ಜೀರ್ಣಿಸಿಕೊಳ್ಳುತ್ತದೆ ಮತ್ತು ಬೆಳಗ್ಗೆ ಫ್ರೆಶ್ ಆಗಿ ಎದ್ದೇಳುತ್ತೇನೆ ಎಂದು ರಾಧಿಕಾ ಹಿಂದಿನ ಸಂದರ್ಶನದಲ್ಲಿ ಹೇಳಿಕೊಂಡಿದ್ದರು.
ಫಿಟ್‌ನೆಸ್ ಅಂದ್ರೆ ದೇಹಕ್ಕೆ ಶಿಕ್ಷೆ ಕೊಡುವುದಲ್ಲ!
ರಾಧಿಕಾ ಅವರ ಫಿಟ್‌ನೆಸ್ ಮಂತ್ರ ತುಂಬಾ ಸರಳ. ಫಿಟ್ ಆಗಿರಲು ನಮ್ಮ ದೇಹಕ್ಕೆ ಕಠಿಣ ಶಿಕ್ಷೆ ನೀಡುವ ಅಗತ್ಯವಿಲ್ಲ. ಬದಲಿಗೆ ನಮಗೆ ಹೊಂದುವ ಆರೋಗ್ಯಕರ ದಿನಚರಿಯನ್ನು ರೂಪಿಸಿಕೊಂಡು ಅದನ್ನು ನಿಯಮಿತವಾಗಿ ಪಾಲಿಸುವುದು ಮುಖ್ಯ. ಜುಂಬಾ ಅಥವಾ ಡ್ಯಾನ್ಸ್, ಯೋಗ ಮತ್ತು ಸೂರ್ಯ ನಮಸ್ಕಾರ, ವಾಕಿಂಗ್-ಈ ಮೂರು ಸರಳ ಅಭ್ಯಾಸಗಳನ್ನೇ ತಮ್ಮ ದಿನಚರಿಯ ಭಾಗವಾಗಿಸಿಕೊಂಡಿರುವ ರಾಧಿಕಾ, ಇಂದಿಗೂ ಫಿಟ್ ಹಾಗೂ ಆಕ್ಟಿವ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.


