City Lights Kannada Movie: ದುನಿಯಾ ವಿಜಯ್ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಪೋಸ್ಟರ್ ಹಂಚಿಕೊಂಡು, "ಸಿಟಿ ಲೈಟ್ಸ್ ಸೆಪ್ಟೆಂಬರ್ 18ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ" ಎಂದು ಘೋಷಿಸಿದ್ದಾರೆ.

'ಭೀಮ' ಚಿತ್ರದ ಭರ್ಜರಿ ಯಶಸ್ಸಿನ ಬಳಿಕ ನಟ-ನಿರ್ದೇಶಕ ದುನಿಯಾ ವಿಜಯ್ ಮತ್ತೊಮ್ಮೆ ಮೆಗಾಫೋನ್ ಹಿಡಿದಿರುವ 'ಸಿಟಿ ಲೈಟ್ಸ್' ಸಿನಿಮಾ ಬಿಡುಗಡೆಯ ದಿನಾಂಕ ಅಧಿಕೃತವಾಗಿ ಘೋಷಣೆಯಾಗಿದೆ. ಸಾಕಷ್ಟು ದಿನಗಳಿಂದ ಈ ಚಿತ್ರದ ರಿಲೀಸ್‌ಗಾಗಿ ಕಾಯುತ್ತಿದ್ದ ಸಿನಿಪ್ರಿಯರಿಗೆ ಚಿತ್ರತಂಡ ಗುಡ್‌ನ್ಯೂಸ್ ನೀಡಿದ್ದು, ಸೆಪ್ಟೆಂಬರ್ 18ರಂದು ರಾಜ್ಯಾದ್ಯಂತ ಸಿನಿಮಾ ತೆರೆಕಾಣಲಿದೆ ಎಂದು ಪ್ರಕಟಿಸಿದೆ.

ದುನಿಯಾ ವಿಜಯ್ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಪೋಸ್ಟರ್ ಹಂಚಿಕೊಂಡು, "ಸಿಟಿ ಲೈಟ್ಸ್ ಸೆಪ್ಟೆಂಬರ್ 18ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ" ಎಂದು ಘೋಷಿಸಿದ್ದಾರೆ. ಈ ಪೋಸ್ಟ್ ಹೊರಬಿದ್ದ ಕೆಲವೇ ಕ್ಷಣಗಳಲ್ಲಿ ಅಭಿಮಾನಿಗಳಿಂದ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಸಿನಿಮಾ ಬಗ್ಗೆ ನಿರೀಕ್ಷೆ ಮತ್ತಷ್ಟು ಹೆಚ್ಚಿದೆ.

ರಿಲೀಸ್ ಘೋಷಣೆಗೆ ಅಭಿಮಾನಿಗಳ ಸಂಭ್ರಮ

ರಿಲೀಸ್ ಡೇಟ್ ಪ್ರಕಟವಾಗುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ. "ಸಿಟಿ ಲೈಟ್ಸ್ ನೋಡಲು ಇನ್ನೂ ಕಾಯಲು ಸಾಧ್ಯವಿಲ್ಲ", "ಈ ಸಿನಿಮಾ ದೊಡ್ಡ ಹಿಟ್ ಆಗಲಿ", "ಅಂತೂ ಈ ವರ್ಷವೇ ಸಿನಿಮಾ ಬಿಡುಗಡೆಯಾಗುತ್ತಿದೆ" ಎಂಬ ಕಾಮೆಂಟ್‌ಗಳು ಹರಿದು ಬರುತ್ತಿವೆ. ಹಲವರು ದುನಿಯಾ ವಿಜಯ್ ಹಾಗೂ ವಿನಯ್ ರಾಜ್‌ಕುಮಾರ್‌ಗೆ ಶುಭಾಶಯ ತಿಳಿಸಿ ಪೋಸ್ಟ್ ಹಂಚಿಕೊಳ್ಳುತ್ತಿದ್ದಾರೆ.

ವಿನಯ್ ರಾಜ್‌ಕುಮಾರ್‌ಗೆ ಮಾಸ್ ಲುಕ್, ಮೋನಿಷಾ ವಿಜಯ್‌ಗೆ ಮೊದಲ ಸಿನಿಮಾ

ದೊಡ್ಮನೆ ಕುಡಿ ವಿನಯ್ ರಾಜ್‌ಕುಮಾರ್ ಈ ಚಿತ್ರದಲ್ಲಿ ಪಕ್ಕಾ ಮಾಸ್ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದೇ ಸಿನಿಮಾದ ಮೂಲಕ ದುನಿಯಾ ವಿಜಯ್ ಅವರ ಎರಡನೇ ಪುತ್ರಿ ಮೋನಿಷಾ ವಿಜಯ್ ಕನ್ನಡ ಚಿತ್ರರಂಗಕ್ಕೆ ಪರಿಚಯವಾಗುತ್ತಿದ್ದಾರೆ. ಹೀಗಾಗಿ ಈ ಸಿನಿಮಾ ಕೇವಲ ಮತ್ತೊಂದು ರಿಲೀಸ್ ಅಲ್ಲ, ವಿಜಯ್ ಕುಟುಂಬಕ್ಕೂ ವಿಶೇಷ ಮೈಲಿಗಲ್ಲಾಗಿದೆ.

'ಸಲಗ', 'ಭೀಮ' ಬಳಿಕ ದುನಿಯಾ ವಿಜಯ್‌ನ ಹೊಸ ಪ್ರಯೋಗ

'ಸಲಗ' ಮತ್ತು 'ಭೀಮ' ಸಿನಿಮಾಗಳ ಮೂಲಕ ನಿರ್ದೇಶಕರಾಗಿಯೂ ಯಶಸ್ಸು ಕಂಡಿರುವ ದುನಿಯಾ ವಿಜಯ್, ಈ ಬಾರಿ ವಿಭಿನ್ನ ಕಥೆಯೊಂದಿಗೆ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. 'ಸಿಟಿ ಲೈಟ್ಸ್' ಮಹಿಳಾ ಕೇಂದ್ರಿತ ಕಥೆಯನ್ನು ಒಳಗೊಂಡಿದ್ದು, ಬೆಂಗಳೂರಿನಲ್ಲಿ ಬದುಕು ಕಟ್ಟಿಕೊಳ್ಳಲು ಹೋರಾಡುವ ಯುವತಿಯರ ಬದುಕಿನ ನೈಜ ಅಂಶಗಳನ್ನು ತೆರೆಗೆ ತರುವ ಪ್ರಯತ್ನವಾಗಿದೆ. ಈ ಹಿಂದೆ ಚಿತ್ರದ ಕುರಿತು ಮಾತನಾಡಿದ್ದ ದುನಿಯಾ ವಿಜಯ್, "ಇದು ಹೆಣ್ಣು ಮಕ್ಕಳ ಬದುಕು, ಅವರ ಹೋರಾಟ ಮತ್ತು ಸಮಾಜದ ವಾಸ್ತವವನ್ನು ಹೇಳುವ ಕಥೆ" ಎಂದು ತಿಳಿಸಿದ್ದರು.

ಹಾಡುಗಳಿಗೆ ಉತ್ತಮ ಪ್ರತಿಕ್ರಿಯೆ; ಟ್ರೇಲರ್‌ಗೆ ಹೆಚ್ಚಿದ ನಿರೀಕ್ಷೆ

ಚಿತ್ರದ 'ಭಾವ ಭಾವ' ಹಾಗೂ 'ಕಂದಮ್ಮ ಕಂದಮ್ಮ' ಹಾಡುಗಳು ಈಗಾಗಲೇ ಬಿಡುಗಡೆಯಾಗಿ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿವೆ. ಚಿತ್ರದಲ್ಲಿ ಒಟ್ಟು ಐದರಿಂದ ಆರು ಹಾಡುಗಳಿದ್ದು, ಶೀಘ್ರದಲ್ಲೇ ಟ್ರೇಲರ್ ಬಿಡುಗಡೆಯಾಗಲಿದೆ. ಟ್ರೇಲರ್ ಮೂಲಕ ಚಿತ್ರದ ಕಥೆಯ ಬಗ್ಗೆ ಇನ್ನಷ್ಟು ಸುಳಿವು ಸಿಗಲಿದೆ ಎಂಬ ನಿರೀಕ್ಷೆಯಲ್ಲಿದ್ದಾರೆ ಅಭಿಮಾನಿಗಳು.

ಉಮಾಶ್ರೀ ಪ್ರಮುಖ ಪಾತ್ರ, ಚರಣ್ ರಾಜ್ ಸಂಗೀತ

ಚಿತ್ರದಲ್ಲಿ ಹಿರಿಯ ನಟಿ ಉಮಾಶ್ರೀ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದು, ಸಂಗೀತ ನಿರ್ದೇಶಕ ಚರಣ್ ರಾಜ್ ಸಂಗೀತ ಸಂಯೋಜಿಸಿದ್ದಾರೆ. ವಿನಯ್ ರಾಜ್‌ಕುಮಾರ್ ಅವರ ಮಾಸ್ ಲುಕ್, ದುನಿಯಾ ವಿಜಯ್ ನಿರ್ದೇಶನ ಹಾಗೂ ನೈಜ ಘಟನೆಯ ಆಧಾರಿತ ಕಥಾವಸ್ತು ಈಗಾಗಲೇ ಸಿನಿಮಾ ಮೇಲಿನ ಕುತೂಹಲವನ್ನು ಹೆಚ್ಚಿಸಿದೆ. ಬಹುನಿರೀಕ್ಷಿತ 'ಸಿಟಿ ಲೈಟ್ಸ್' ಸಿನಿಮಾ ಸೆಪ್ಟೆಂಬರ್ 18ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದ್ದು, ದುನಿಯಾ ವಿಜಯ್ ಮತ್ತೊಮ್ಮೆ ನಿರ್ದೇಶಕರಾಗಿ ಗೆಲುವಿನ ಪಯಣ ಮುಂದುವರಿಸುತ್ತಾರೆಯೇ ಎಂಬುದನ್ನು ಕಾದು ನೋಡಬೇಕಿದೆ.