ಎರಡು ದಶಕಗಳಿಂದ ಬೇರ್ಪಟ್ಟಿದ್ದ ದಂಪತಿಗಳ ವಿಚ್ಛೇದನವನ್ನು ತೆಲಂಗಾಣ ಹೈಕೋರ್ಟ್ ಎತ್ತಿಹಿಡಿದಿದೆ. ಸರಿಪಡಿಸಲಾಗದಷ್ಟು ಸಂಬಂಧ ಹದಗೆಟ್ಟಿದೆ ಎಂದು ಹೇಳಿ, ಪತ್ನಿಗೆ ಶಾಶ್ವತ ಜೀವನಾಂಶವಾಗಿ 50 ಲಕ್ಷ ರೂ. ಪಾವತಿಸಲು ಪತಿಗೆ ಆದೇಶಿಸಿದೆ.
ಎರಡು ದಶಕಗಳ ಹಿಂದೆಯೇ ಮುರಿದು ಬಿದ್ದ ದಂಪತಿಗಳ ವಿಚ್ಚೇದನ ಪ್ರಕರಣದಲ್ಲಿ ಕೌಟುಂಬಿಕ ನ್ಯಾಯಾಲಯ ನೀಡಿದ ತೀರ್ಪನ್ನು ತೆಲಂಗಾಣ ಹೈಕೋರ್ಟ್ ಎತ್ತಿ ಹಿಡಿದಿದ್ದು, ಪತ್ನಿಗೆ ಶಾಶ್ವತ ಜೀವನಾಂಶವಾಗಿ 50 ಲಕ್ಷ ರೂ.ಗಳನ್ನು ಪಾವತಿಸಲು ಆದೇಶಿಸಿದೆ. ನ್ಯಾಯಮೂರ್ತಿಗಳಾದ ಕೆ. ಲಕ್ಷ್ಮಣ್ ಮತ್ತು ನರಸಿಂಗ್ ರಾವ್ ನಂದಿಕೊಂಡ ಅವರ ಪೀಠವು ಡಿಸೆಂಬರ್ 1 ರಂದು ತಮ್ಮ ಸಾಮಾನ್ಯ ತೀರ್ಪಿನಲ್ಲಿ, ಪ್ರತ್ಯೇಕಗೊಂಡ ದಂಪತಿಗಳಾದ ದ್ರೋಣಂರಾಜು ವಿಜಯಲಕ್ಷ್ಮಿ ಮತ್ತು ದ್ರೋಣಂರಾಜು ಶ್ರೀಕಾಂತ್ ಫಣಿ ಕುಮಾರ್ ಅವರ ನಡುವಿನ ಸಂಬಂಧದ ಸರಿಪಡಿಸಲಾಗದಷ್ಟು ಕುಸಿದು ಹೋಗಿದೆ ಎಂದು ಹೇಳಿ ಅವರಿಗೆ ವಿಚ್ಛೇದನ ಮಂಜೂರು ಮಾಡಿದೆ.
2008ರಿಂದಲೂ ಈ ಪ್ರಕರಣ ಕೌಟುಂಬಿಕ ನ್ಯಾಯಾಲಯದಲ್ಲಿ ನಡೆಯುತ್ತಿತ್ತು. ಕ್ರೌರ್ಯ ಹಾಗೂ ಪತ್ನಿ ತೊರೆದು ಹೋಗಿದ್ದಾಳೆ ಎಂದು ಆರೋಪಿಸಿ ಗಂಡ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಅದೇ ಸಮಯದಲ್ಲಿ ಪತ್ನಿ ಕೌಟುಂಬಿಕ ಸಂಬಂಧವನ್ನು ಮರುಸ್ಥಾಪಿಸುವಂತೆ ಮನವಿ ಮಾಡಿ ಅರ್ಜಿ ಸಲ್ಲಿಸಿದ್ದರು. 2002 ಮೇ ನಲ್ಲಿ ವಿವಾಹವಾದ ಈ ದಂಪತಿಗಳು 2003 ರಲ್ಲಿ ತಮ್ಮ ಮಗಳು ಜನಿಸಿದಾಗಿನಿಂದಲೂ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ನ್ಯಾಯಾಲಯದಲ್ಲಿ ಬಹಳ ದೀರ್ಘ ಕಾಲ ನಡೆದ ಈ ಪ್ರಕರಣದಲ್ಲಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 498-A ಅಡಿಯಲ್ಲಿ ಹಲವಾರು ಕ್ರಿಮಿನಲ್ ದೂರುಗಳು, ಜೀವನಾಂಶ ಅರ್ಜಿಗಳನ್ನು ಒಳಗೊಂಡಿತ್ತು. ಕೌಟುಂಬಿಕ ವಿಚಾರಣಾ ನ್ಯಾಯಾಲಯವು ಫೆಬ್ರವರಿ 2015 ರಲ್ಲಿಯೇ ಅವರಿಗೆ ವಿಚ್ಛೇದನವನ್ನು ನೀಡಿತು. ಆದರೆ ಪತ್ನಿ ಈ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಿದರು.
ಇದನ್ನೂ ಓದಿ: 3 ಅಡಿ ಜಾಗದಲ್ಲಿ ಎರಡು ಮಹಡಿ ಮನೆ: ಇರುವುದರಲ್ಲೇ ಅರಮನೆ ಕಾಣೋದು ಅಂದ್ರೆ ಇದೇನಾ?
22 ವರ್ಷದ ಎಂಬಿಬಿಎಸ್ ವಿದ್ಯಾರ್ಥಿನಿಯಾಗಿರುವ ತಮ್ಮ ಮಗಳ ಸಲುವಾಗಿ ಮತ್ತೆ ಒಂದಾಗಲು ಪತ್ನಿ ಆರಂಭದಲ್ಲಿ ಮನವಿ ಮಾಡಿದರೂ, ದೀರ್ಘಾವಧಿಯ ಬೇರ್ಪಡುವಿಕೆಯ ನಂತರ ಪತ್ನಿ ಕೂಡ ಪತಿಯೊಂದಿಗೆ ಮತ್ತೆ ಸೇರಲು ನಿರಾಸಕ್ತಿ ವ್ಯಕ್ತಪಡಿಸಿದ್ದಾರೆ ಎಂದು ನ್ಯಾಯಾಲಯವು ವಿಚಾರಣೆಯ ಸಮಯದಲ್ಲಿ ಗಮನಿಸಿತು. ಪರಸ್ಪರ ಅಪನಂಬಿಕೆ ಮತ್ತು ಎರಡು ಬಣಗಳ ನಡುವಿನ ಮೊಕದ್ದಮೆಗಳ ಪ್ರಮಾಣದಿಂದಾಗಿ ಮದುವೆಯು ಹಿಂತಿರುಗಲಾಗದ ಹಂತವನ್ನು ತಲುಪಿದೆ ಎಂದು ಪೀಠವು ಗಮನಿಸಿತು.
ವಿಶ್ವಾಸ, ಪ್ರೀತಿ ಮತ್ತು ವಾತ್ಸಲ್ಯ ಮತ್ತು ಪರಸ್ಪರ ಸಹಬಾಳ್ವೆ ನಡೆಸುವ ಉದ್ದೇಶವನ್ನು ಹೊಂದಿರುವ ಈ ದಾಂಪತ್ಯದಲ್ಲಿ ಇದ್ಯಾವುದು ಇಲ್ಲದೇ ಹೋದಾಗ ಅವರು ಜೊತೆಯಾಗಿ ಬದುಕುವಂತೆ ನಿರ್ದೇಶಿಸಲಾಗದು. ಏಕೆಂದರೆ ಇಬ್ಬರಿಗೂ ಪರಸ್ಪರ ನಂಬಿಕೆ ಇಲ್ಲವಾದ್ದರಿಂದ ಮತ್ತಷ್ಟು ಇವರ ಮಧ್ಯೆ ಮತ್ತಷ್ಟು ಆತಂಕಗಳು, ವಿವಾದಗಳು ಉದ್ಭವಿಸುತ್ತವೆ ಎಂದು ತೀರ್ಪು ನೀಡಿದ ನ್ಯಾಯಮೂರ್ತಿ ಕೆ. ಲಕ್ಷ್ಮಣ್ ಹೇಳಿದ್ದಾರೆ.
ಮಗುವಿಗೆ ಉತ್ತಮ ಜೀವನವನ್ನು ನೀಡುವುದಕ್ಕಾಗಿ ಪತಿ ತನ್ನ ಜೊತೆಗೆ ಇರಬೇಕು ಎಂದು ಪತ್ನಿ ವಾದ ಮಾಡಿದ್ದರು. ಈ ವೇಳೆ ಒಟ್ಟಿಗೆ ಇರಲು ಬಯಸಿದರೂ ಇಬ್ಬರಿಗೂ ಒಬ್ಬರಿಗೊಬ್ಬರು ಸಹಕರಿಸುವ ಉದ್ದೇಶವಿಲ್ಲ ಎಂಬುದಕ್ಕೆ ಸಾಕಷ್ಟು ಸಾಕ್ಷ್ಯಗಳನ್ನು ನ್ಯಾಯಾಲಯ ಗಮನಿಸಿದ್ದು, ಬಳಿಕ ಇವರಿಬ್ಬರನ್ನು ಮತ್ತೆ ಒಂದು ಮಾಡುವುದು ಅಸಾಧ್ಯ ಎಂದು ತೀರ್ಮಾನಿಸಿದೆ.
ಇದನ್ನೂ ಓದಿ: ಹೆಂಡ್ತಿಗೆ ಹೆರಿಗೆ ನೋವು: ಆಸ್ಪತ್ರೆಗೆ ಕರೆದೊಯ್ಯುವ ಗೊಂದಲದಲ್ಲಿ ಆಕೆಯನ್ನೇ ಬಿಟ್ಟು ಹೋದ ಗಡಿಬಿಡಿ ಗಂಡ
ವಿಚ್ಛೇದನವನ್ನು ದೃಢೀಕರಿಸುವಾಗ, ಕುಟುಂಬ ನ್ಯಾಯಾಲಯವು ಮಗಳಿಗೆ ಶಾಶ್ವತ ಜೀವನಾಂಶವನ್ನು ನೀಡುವಲ್ಲಿ ವಿಫಲವಾಗಿದೆ ಎಂದು ಹೈಕೋರ್ಟ್ ಗಮನಿಸಿದ್ದು, ಜೀವನಾಂಶ ಪ್ರಕರಣಗಳು ಮತ್ತು ಆಸ್ತಿ ವಿವಾದಗಳು ಸೇರಿದಂತೆ ಎಲ್ಲಾ ಬಾಕಿ ಇರುವ ಹಕ್ಕುಗಳನ್ನು ಇತ್ಯರ್ಥಪಡಿಸಲು, ನ್ಯಾಯಾಲಯವು ಪತ್ನಿಗೆ 50 ಲಕ್ಷ ರೂ.ಗಳ ಪರಿಹಾರವನ್ನು ಒಮ್ಮೆಗೆ ನೀಡುವಂತೆ ಆದೇಶಿಸಿತು.
ಈ ಮೊತ್ತವು ಅಪೀಲುದಾರರು ಮತ್ತು ಅವರ ಮಗಳ ಪೂರ್ಣ ವೆಚ್ಚಕ್ಕೆ ಅಂತಿಮ ಹಾಗೂ ಶಾಶ್ವತ ಪರಿಹಾರವಾಗಿದೆ ಎಂದು ಹೇಳಿತು. ಅಲ್ಲದೇ ಮೂರು ತಿಂಗಳ ಒಳಗಾಗಿ ಈ ಹಣವನ್ನು ಪತ್ನಿಗೆ ಪಾವತಿ ಮಾಡುವಂತೆ ನ್ಯಾಯಾಲಯ ಆದೇಶಿಸಿದೆ. ಅಲ್ಲದೇ ಇಷ್ಟೊಂದು ಪರಿಹಾರ ಪಡೆದ ನಂತರ ಆತನ ಆಸ್ತಿಯ ಮೇಲೆ ಮತ್ತೆ ತಾಯಿಗಾಗಲಿ ಮಗಳಿಗಾಗಲಿ ಯಾವುದೇ ಹಕ್ಕು ಇರುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ.


