ಚೊಚ್ಚಲ ಹೆರಿಗೆ ನೋವಿನಿಂದ ಬಳಲುತ್ತಿದ್ದ ಪತ್ನಿಯನ್ನು ಆಸ್ಪತ್ರೆಗೆ ಕರೆದೊಯ್ಯುವ ಆತಂಕದಲ್ಲಿ, ಪತಿಯೊಬ್ಬ ಆಕೆಯನ್ನೇ ಮನೆಯಲ್ಲೇ ಮರೆತು ಲಗೇಜ್ ಸಮೇತ ಕಾರಿನಲ್ಲಿ ಒಬ್ಬನೇ ಹೊರಟು ಹೋದ ಘಟನೆ ನಡೆದಿದ್ದು, ಈ ಘಟನೆಯವ ವೀಡಿಯೋ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ.
ಪತ್ನಿಗೆ ಚೊಚ್ಚಲ ಹೆರಿಗೆ ನೋವಿನ ಸಮಯದಲ್ಲಿ ನಿಜವಾಗಿಯೂ ಪುರುಷರಿಗೆ ಏನಾಗುತ್ತದೆ. ಅವರಿಗೂ ನೋವಾಗುತ್ತಾ? ಈ ಬಗ್ಗೆ ಅನೇಕರು ಅನುಭವ ಹಂಚಿಕೊಂಡಿದ್ದಾರೆ. ಒತ್ತಡ, ಆತಂಕ, ಭಯದಿಂದ ಚಡಪಡಿಸಿದಾಗಿ ಹೇಳಿಕೊಂಡಿದ್ದಾರೆ. ಬಹಳ ಮಹತ್ವದ ಸಮಯದಲ್ಲಿ ಈ ರೀತಿ ಅಗೋದು ಸಹಜ ಹಾಗೆಯೇ ಇಲ್ಲೊಂದು ಕಡೆ ಮೊದಲ ಬಾರಿ ತಂದೆಯಾಗುವ ಖುಷಿಯಲ್ಲಿದ್ದ ಯುವಕನೋರ್ವ ಏನು ಮಾಡಿದ್ದಾನೆ ಎಂದು ಕೇಳಿದರೆ ನೀವು ಭಯದ ಜೊತೆ ಹೊಟ್ಟೆ ಹುಣ್ಣಾಗುವಂತೆ ನಗೋದಂತು ಗ್ಯಾರಂಟಿ.
ಮೊದಲ ಮಗುವಿನ ನಿರೀಕ್ಷೆಯಲ್ಲಿ ಇರುವ ಅನೇಕ ದಂಪತಿಗಳು ಆ ಸಮಯದಲ್ಲಿ ಭಯ, ಆತಂಕ ಒತ್ತಡದಿಂದ ಬಳಲುತ್ತಾರೆ. ತಾಯಂದಿರಿಗೆ ದೈಹಿಕವಾಗಿ ನೋವಾದರೆ ಪುರುಷರಿಗೆ ಮಾನಸಿಕವಾಗಿ ಭಯ ಆತಂಕ ಉಂಟಾಗುತ್ತದೆ. ಅನೇಕರು ಈ ಪರಿಸ್ಥಿತಿಯನ್ನು ನಿಭಾಯಿಸಲು ಹೆಣಗಾಡುತ್ತಾರೆ. ಹೆಂಡ್ತಿಗೆ ಹೆರಿಗೆ ನೋವು ಬರುತ್ತಿದ್ದಂತೆ ಬಹುತೇಕ ಪುರುಷರು ಭಯಗೊಳ್ಳುತ್ತಾರೆ.
ಹಾಗೆಯೇ ಇಲ್ಲೊಂದು ಕಡೆ ಪತ್ನಿಗೆ ಹೆರಿಗೆ ನೋವು ಬಂತು ಎಂದು ಆಕೆಯನ್ನು ಆಸ್ಪತ್ರೆಗೆ ಬೇಗನೇ ಕರೆದುಕೊಂಡು ಹೋಗಬೇಕು ಎಂದು ಆತಂಕದಲ್ಲಿದ್ದ ವ್ಯಕ್ತಿಯೋರ್ವ ಆಸ್ಪತ್ರೆಗೆ ಬೇಕಾದ ಲಗೇಜುಗಳನ್ನೆಲ್ಲಾ ತನ್ನ ಕಾರಿಗೆ ತುಂಬಿಸಿದ್ದಾನೆ. ನಂತರ ಯಾರನ್ನು ಕರೆದುಕೊಂಡು ಹೋಗಬೇಕೋ ಅವರನ್ನು ಅಲ್ಲೇ ಬಿಟ್ಟು ಅಂದರೆ ಗರ್ಭಿಣಿ ಪತ್ನಿಯನ್ನು ಮನೆಯಲ್ಲೇ ಬಿಟ್ಟು ಆತ ವೇಗವಾಗಿ ಕಾರು ಚಲಾಯಿಸಿಕೊಂಡು ಅಲ್ಲಿಂದ ಹೋಗಿದ್ದಾನೆ. ಈ ವಿಚಿತ್ರ ಘಟನೆ ನಡೆದಿರುವುದು ವಿಯೆಟ್ನಾಂನಲ್ಲಿ ಈ ದೃಶ್ಯ ದಂಪತಿ ವಾಸಿಸುತ್ತಿದ್ದ ಕಟ್ಟಡದ ಸಿಸಿಟಿವಿಯಲ್ಲಿ ಕೂಡ ರೆಕಾರ್ಡ್ ಕೂಡ ಆಗಿದ್ದು, ಈಗ ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ., ಅನೇಕರು ಹಲವು ಕಾಮೆಂಟ್ ಮಾಡಿದ್ದಾರೆ.
ಕಳೆದ ವರ್ಷ ಸೆಪ್ಟೆಂಬರ್ 30 ರಂದು ಈ ಘಟನೆ ನಡೆದಿದೆ ಎನ್ನಲಾಗಿದ್ದು, ಈಗ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೈರಲ್ ಆದ ವೀಡಿಯೋದಲ್ಲಿ ಕಾಣುವಂತೆ ತಡರಾತ್ರಿ ಗರ್ಭಿಣಿ ಮಹಿಳೆ ಪಾರ್ಕಿಂಗ್ ಮಾಡಿದ ಕಾರಿನ ಸಮೀಪ ನಿಂತುಕೊಂಡಿದ್ದಾರೆ. ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆ ಆಕೆ ತನ್ನ ಗಂಡನ ಬಳಿ ಬೇಗ ಬೇಗ ಸಿದ್ಧಗೊಳ್ಳುವಂತೆ ಹೇಳುವುದನ್ನು ಕಾಣಬಹುದು. ಇದಾಗಿ ಸೆಕೆಂಡ್‌ನಲ್ಲಿ ಆಕೆಯ ಪತಿ ಮನೆಯಿಂದ ಎರಡು ಟ್ರಾಲಿ ಬ್ಯಾಗ್ ಹಾಗೂ ಸಣ್ಣ ಬ್ಯಾಗ್‌ಗಳನ್ನು ಹಿಡಿದುಕೊಂಡು ಬಂದು ಕಾರಿನ ಹಿಂಭಾಗಕ್ಕೆ ಹಾಕಿದ್ದಾನೆ. ನಂತರ ಕಾರಿನ ಡಿಕ್ಕಿಯ ಬಾಗಿಲು ದಢಾರ್ ಎಂದು ಹಾಕಿದ ಆತ ಕಾರಿನೊಳಗೆ ಹೆಂಡ್ತಿ ಕೂತಿದ್ದಾಳೋ ಇಲ್ಲವೋ ಎಂಬುದನ್ನು ಕೂಡ ಗಮನಿಸದೇ ಹೆರಿಗೆ ನೋವಿನಿಂದ ಬಳಲುತ್ತಿದ್ದ ಹೆಂಡ್ತಿಯನ್ನು ಅಲ್ಲೇ ಬಿಟ್ಟು ಸೀದಾ ಹೋಗಿ ಡ್ರೈವಿಂಗ್ ಸೀಟಿನಲ್ಲಿ ಕುಳಿತು ಗಾಡಿ ಓಡಿಸಿ ಹೊರಟು ಹೋಗಿದ್ದಾನೆ. ವೀಡಿಯೋದಲ್ಲಿ ಗರ್ಭಿಣಿ ಕಾರಿಗೆ ಏರುವುದಕ್ಕೆ ಮುಂಭಾಗದ ಸೀಟಿನತ್ತ ಹೋಗುವುದನ್ನು ಕೂಡ ನೋಡಬಹುದು. ಆದರೆ ಅನಾಹುತಕಾರಿ ಪತಿ ಅತ್ತಿತ್ತ ನೋಡದೇ ಸೀದಾ ಹೊರಟು ಹೋಗಿದ್ದಾನೆ.
ಆದರೆ ಇತ್ತಾ ಗಂಡನ ಈ ಅವತಾರ ನೋಡಿ ಆಕೆ ಶಾಕ್ ಆಗಿದ್ದಾಳೆ. ಅತ್ತ ನಾಯಿಯೊಂದು ಆ ಕಾರನ್ನು ಓಡಿಸಿಕೊಂಡು ಹೋಗವುದನ್ನು ಕೂಡ ನೋಡಬಹುದು. ಆದರೆ ನಂತರ ಆ ಮಹಿಳೆಯನ್ನು ನೆರೆಮನೆಯವರು ಆಸ್ಪತ್ರೆಗೆ ಸೇರಿಸಿದ್ದು, ಆಕೆ ನಂತರ ಮಗುವಿಗೆ ಜನ್ಮ ನೀಡಿದಳು ಎಂದು ವರದಿಯಾಗಿದೆ.
ಇದನ್ನು ಓದಿ: ಸಿಎಂ ಯೋಗಿ ಆದಿತ್ಯನಾಥ್ ರೀತಿ ಮಾತನಾಡಿ ಸರ್ಕಾರಿ ಶಾಲಾ ಶಿಕ್ಷಕಿ ಅಳುವಂತೆ ಮಾಡಿದ ಯುವಕ
ಆದರೆ ಈ ವೀಡಿಯೋ ಈಗ ವೈರಲ್ ಆಗ್ತಿದ್ದಂತೆ ನೆಟ್ಟಿಗರು ಕಾಮೆಂಟ್‌ನ ಸುರಿಮಳೆ ಸುರಿಸುತ್ತಿದ್ದಾರೆ. ಇದನ್ನು ನೋಡಿ ಆಕೆಗೆ ಹೆರಿಗೆ ನೋವೇ ಮರೆತು ಹೋಗಿರುತ್ತದೆ ಎಂದು ಒಬ್ಬರು ಹಾಸ್ಯಮಯವಾಗಿ ಕಾಮೆಂಟ್ ಮಾಡಿದ್ದಾರೆ. ಈತ ಪತ್ನಿಗಿಂತಲೂ ಹೆಚ್ಚು ನರ್ವಸ್ ಆಗಿದ್ದಾನೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಅವನ ಹೃದಯ ಸರಿಯಾದ ಜಾಗದಲ್ಲೇ ಇದೆ. ಆದರೆ ಆತನ ಮಿದುಳು ಮಾತ್ರ ಬೇರೆಡೆ ಇದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಆತನಿಗೆ ಎಷ್ಟು ದೂರು ಹೋದ ನಂತರ ಕಾರಿನಲ್ಲಿ ತಾನೋಬ್ಬನೇ ಇರೋದು ಅಂತ ಗೊತ್ತಾಯ್ತು ಎಂದು ಒಬ್ಬರು ಪ್ರಶ್ನೆ ಮಾಡಿದ್ದಾರೆ. ಮತ್ತೆ ಕೆಲವರು ತಮಾಷೆಯಾಗಿ ಅವನಿಗೆ ಯಾವ ಮಗು ಹೆರಿಗೆ ಆಯ್ತು ಎಂದು ಪ್ರಶ್ನೆ ಮಾಡಿದ್ದಾರೆ ಅದಕ್ಕೆ ಪ್ರತಿಕ್ರಿಯಿಸಿದ ಒಬ್ಬರು ಆಸ್ಪತ್ರೆಯಲ್ಲಿ ಲಗೇಜ್ ಡೆಲಿವರಿ ಆಗಿದೆ ಎಂದು ಕಾಮೆಂಟ್ ಮಾಡಿದ್ದಾರೆ.
ಇದನ್ನು ಓದಿ: ಡಿವೋರ್ಸ್ ಆದರೂ ಹೆಸರಿನ ಮುಂದಿದ್ದ ಪತಿಯ ಹೆಸರು ಉಳಿಸಿಕೊಂಡ ನಟಿ


