ಕೆಪಿಎಸ್‌ಸಿ ಹಗರಣದಲ್ಲಿ ಪ್ರಿಯಾಂಕ್ ಖರ್ಗೆ ಜೈಲು ಸೇರಲಿದ್ದಾರೆ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ವ್ಯಂಗ್ಯವಾಡಿದ್ದಾರೆ. ತಮ್ಮ ಮೇಲಿನ ಎಫ್‌ಐಆರ್‌ಗಳಿಗೆ ಹೆದರುವುದಿಲ್ಲ ಎಂದಿರುವ ಅವರು, ಟಿ. ನರಸೀಪುರದಲ್ಲಿ ಗಣೇಶೋತ್ಸವಕ್ಕೆ ಅಡ್ಡಿಪಡಿಸುತ್ತಿರುವ ಪೊಲೀಸ್ ಇನ್‌ಸ್ಪೆಕ್ಟರ್ ವಿರುದ್ಧ ಆರ್. ಅಶೋಕ್ ಭೇಟಿ ನೀಡಿ ಕ್ರಮ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.

ಮೈಸೂರು (ಸೆ.13):'ಕೆಪಿಎಸ್‌ಸಿ ಹಗರಣದಲ್ಲಿ ಪ್ರಿಯಾಂಕ್ ಖರ್ಗೆ ಪರಪ್ಪನ ಅಗ್ರಹಾರ ಜೈಲು ಸೇರುವ ಸ್ಥಿತಿಯಲ್ಲಿದ್ದಾರೆ. ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಅವರು ಈ ಅಕ್ರಮದ ಬಗ್ಗೆ ಮಾತನಾಡಿದಾಗಿನಿಂದ ಖರ್ಗೆ ಅವರಿಗೆ ಕನಸಿನಲ್ಲೂ ಪರಪ್ಪನ ಅಗ್ರಹಾರವೇ ಕಾಣುತ್ತಿದೆ' ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ವ್ಯಂಗ್ಯವಾಡಿದ್ದಾರೆ.

ಮೈಸೂರಿನಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಭಾರಿ ಕೋಲಾಹಲ ಸೃಷ್ಟಿಸಿರುವ ಕೆಪಿಎಸ್‌ಸಿ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ನೇರ ವಾಗ್ದಾಳಿ ನಡೆಸಿ ಆಕ್ರೋಶ ಹೊರಹಾಕಿದರು.

21 ಕೇಸ್‌ಗಳಿವೆ, ಇನ್ನೊಂದು ಹಾಕಿ; ಗಣೇಶೋತ್ಸವಕ್ಕಾಗಿ ಜೈಲಿಗೂ ರೆಡಿ!

ತಮ್ಮ ಮೇಲಿನ ಎಫ್‌ಐಆರ್ ಹಾಗೂ ಜೈಲು ಬೆದರಿಕೆಗಳ ಬಗ್ಗೆ ಖಾರವಾಗಿ ಪ್ರತಿಕ್ರಿಯಿಸಿದ ಪ್ರತಾಪ್ ಸಿಂಹ, 'ನನ್ನ ಮೇಲೆ ಈಗಾಗಲೇ 21 ಎಫ್‌ಐಆರ್‌ಗಳು (FIR) ಇವೆ. ಬೇಕಿದ್ದರೆ ಇನ್ನೊಂದು ಎಫ್‌ಐಆರ್ ದಾಖಲಿಸಲಿ, ನಾನು ಯಾವುದಕ್ಕೂ ಹೆದರುವ ವ್ಯಕ್ತಿಯಲ್ಲ. ಸಾರ್ವಜನಿಕ ಗಣೇಶೋತ್ಸವವನ್ನು ವಿಜೃಂಭಣೆಯಿಂದ ಆಚರಿಸಿದ್ದಕ್ಕಾಗಿ ನನ್ನನ್ನು ಜೈಲಿಗೆ ಕಳುಹಿಸಿದರೆ ನನಗೇನೂ ಬೇಸರವಿಲ್ಲ, ಅದಕ್ಕೆ ನಾನು ಸಿದ್ಧನಿದ್ದೇನೆ. ನನ್ನನ್ನು ಹೆದರಿಸುವ ಪ್ರಯತ್ನ ಯಾರಿಂದಲೂ ನಡೆಯಲ್ಲ' ಎಂದು ಗುಡುಗಿದರು.

ಭೂತದ ಬಾಯಲ್ಲಿ ಭಗವದ್ಗೀತೆ ಬಂದಂತೆ ಖರ್ಗೆ ಮಾತು!

ಕಾಂಗ್ರೆಸ್ ಸರ್ಕಾರದ ಹಿಂದಿನ ನಡೆಗಳನ್ನು ಪ್ರಸ್ತಾಪಿಸಿದ ಅವರು, 'ಪ್ರಿಯಾಂಕ್ ಖರ್ಗೆ ಮಾತುಗಳು ಭೂತದ ಬಾಯಲ್ಲಿ ಭಗವದ್ಗೀತೆ ಬಂದಂತಿದೆ. ಡಿಜೆ ಹಳ್ಳಿ ಮತ್ತು ಕೆಜೆ ಹಳ್ಳಿಯಲ್ಲಿ ಪೊಲೀಸ್ ಠಾಣೆ ಮತ್ತು ಪೊಲೀಸ್ ವಾಹನಗಳಿಗೆ ಬೆಂಕಿ ಹಚ್ಚಿದ್ದ ಗಲಭೆಕೋರರನ್ನು ಜೈಲಿನಿಂದ ಬಿಡಿಸಿಕೊಂಡು ಬಂದಿದ್ದು ಇದೇ ಕಾಂಗ್ರೆಸ್ಸಿಗರು. ಕಾಂಗ್ರೆಸ್‌ನ ಇತಿಹಾಸ ನನಗೆ ಚೆನ್ನಾಗಿ ಗೊತ್ತಿದೆ. ಖರ್ಗೆ ಅವರಲ್ಲಿ ಅಭದ್ರತೆ ಮತ್ತು ಪುಕ್ಕಲುತನ ಹೆಚ್ಚಾಗಿದೆ. ಆ ಕಾರಣಕ್ಕಾಗಿಯೇ ಅವರು ಎಲ್ಲರ ಬಗ್ಗೆಯೂ ಏಕವಚನದಲ್ಲಿ ಮಾತನಾಡುತ್ತಾರೆ' ಎಂದು ಕಿಡಿಕಾರಿದರು.

ಟಿ. ನರಸೀಪುರ ಇನ್‌ಸ್ಪೆಕ್ಟರ್ ದರ್ಪಕ್ಕೆ ತಕ್ಕ ಪಾಠ: ಆರ್‌ ಅಶೋಕ್ ಭೇಟಿ

ಇದೇ ವೇಳೆ ಟಿ. ನರಸೀಪುರ ಪೊಲೀಸ್ ಠಾಣೆ ಮುಂಭಾಗ ಬಿಜೆಪಿ ನಡೆಸುತ್ತಿರುವ ಪ್ರತಿಭಟನೆಯನ್ನು ಪ್ರಸ್ತಾಪಿಸಿದ ಅವರು, 'ಸ್ಥಳೀಯ ಪೊಲೀಸ್ ಇನ್‌ಸ್ಪೆಕ್ಟರ್ ಧನಂಜಯ ಅವರು ಗಣಪತಿ ಮೂರ್ತಿ ಪ್ರತಿಷ್ಠಾಪನೆ ಮಾಡುವ ಹಿಂದು ಯುವಕರ ಮೇಲೆ ದರ್ಪ ತೋರಿ, ಧಮ್ಕಿ ಹಾಕುತ್ತಿದ್ದಾರೆ. ಸ್ಥಳೀಯ ಜನರಲ್ಲಿ ಸುಳ್ಳು ಕೇಸ್ ಹಾಕುವ ಭೀತಿ ಹುಟ್ಟಿಸಿದ್ದಾರೆ. ಇಂತಹ ಅಧಿಕಾರಿಯ ದರ್ಪವನ್ನು ಮುರಿಯಲು ಹಾಗೂ ಅವರನ್ನು ತರಾಟೆಗೆ ತೆಗೆದುಕೊಳ್ಳಲು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಸ್ವತಃ ಟಿ. ನರಸೀಪುರಕ್ಕೆ ಆಗಮಿಸುತ್ತಿದ್ದಾರೆ' ಎಂದು ಮಾಹಿತಿ ನೀಡಿದರು.