ಪ್ರಧಾನಿ ಮೋದಿಯವರಿಂದ 'ಮನ್ ಕೀ ಬಾತ್'ನಲ್ಲಿ ಶ್ಲಾಘನೆಗೆ ಒಳಗಾಗಿದ್ದ ಬೆಂಗಳೂರಿನ ಫುಟ್‌ಪಾತ್ ಇಡ್ಲಿ ವ್ಯಾಪಾರಿ ನಿಂಗಮ್ಮ ಅವರಿಗೆ ಜಿಬಿಎ ಅಧಿಕಾರಿಗಳು ಅಂಗಡಿ ತೆರವುಗೊಳಿಸಲು ಸೂಚಿಸಿದ್ದಾರೆ. ಕಾನೂನು ಎಲ್ಲರಿಗೂ ಒಂದೇ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಬೆಂಗಳೂರು (ಸೆ.5): ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ‘ಮನ್ ಕೀ ಬಾತ್’ (Mann Ki Baat) ಕಾರ್ಯಕ್ರಮದಲ್ಲಿ ಪ್ರಶಂಸಿಸಿದ್ದ ಬೆಂಗಳೂರಿನ ಫುಟ್‌ಪಾತ್ ಇಡ್ಲಿ ವ್ಯಾಪಾರಿ ನಿಂಗಮ್ಮ ಅವರ ಅಂಗಡಿ ತೆರವುಗೊಳಿಸುವಂತೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಮೌಖಿಕ ಸೂಚನೆ ನೀಡಿರುವ ವಿಚಾರ ಸಾರ್ವಜನಿಕ ವಲಯದಲ್ಲಿ ದೊಡ್ಡ ಚರ್ಚೆಗೆ ಗ್ರಾಸವಾಗಿದೆ. ಈ ಕುರಿತು ಕಲಬುರಗಿಯಲ್ಲಿ ಪ್ರತಿಕ್ರಿಯಿಸಿರುವ ರಾಜ್ಯ ಗೃಹ ಸಚಿವ ಪ್ರಿಯಾಂಕ್ ಖರ್ಗೆ, "ಮನ್ ಕೀ ಬಾತ್‌ನಲ್ಲಿ ಪ್ರಧಾನಿ ಮೋದಿ ಮಾತನಾಡಿದರು ಎಂದ ತಕ್ಷಣ ಕಾನೂನು ಬದಲಾಯಿಸಲು ಬರುವುದಿಲ್ಲ," ಎಂದು ಖಡಕ್ ಆಗಿ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ, "ಸಾಮಾನ್ಯವಾಗಿ ಸಾರ್ವಜನಿಕ ಸ್ಥಳಗಳು ಹಾಗೂ ಫುಟ್‌ಪಾತ್‌ಗಳಿಂದ ಗೂಡಂಗಡಿಗಳನ್ನು ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗಬಾರದು ಎಂಬ ಕಾರಣಕ್ಕೆ ತೆರವುಗೊಳಿಸಲಾಗುತ್ತದೆ. ಹಾಗೇ ಬಿಟ್ಟರೆ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತದೆ. ಪ್ರಧಾನಿಯವರು ಯಾರದ್ದೋ ಬಗ್ಗೆ ಹೇಳಿದರೆಂದು ಕಾನೂನು ಅಥವಾ ನಿಯಮಗಳನ್ನು ಬದಲಾಯಿಸಲು ಸಾಧ್ಯವಿಲ್ಲ. ಎಲ್ಲವನ್ನೂ ಉಲ್ಲಂಘಿಸಿ ಬಿಟ್ಟರೆ ಕೊನೆಗೆ ನಿಮ್ಮಿಂದಲೇ ಬೈಸಿಕೊಳ್ಳಬೇಕಾಗುತ್ತದೆ," ಎಂದು ಕಾನೂನು ಪಾಲನೆಯ ಅಗತ್ಯವನ್ನು ಪ್ರತಿಪಾದಿಸಿದರು.

ಪ್ರಧಾನಿ ಶ್ಲಾಘಿಸಿದ್ದ ನಿಂಗಮ್ಮನ ಸಾಧನೆ

ಹಾಸನ ಮೂಲದ ನಿಂಗಮ್ಮ ಅವರು ಬೆಂಗಳೂರಿನ ಹೊಸಹಳ್ಳಿ ಮೆಟ್ರೋ ನಿಲ್ದಾಣದ ಬಳಿ ಫುಟ್‌ಪಾತ್‌ನಲ್ಲಿ ಸಣ್ಣ ತಳ್ಳುವ ಗಾಡಿಯಲ್ಲಿ ಇಡ್ಲಿ, ದೋಸೆ ಮಾರಾಟ ಮಾಡುವ ಟಿಫನ್ ಸೆಂಟರ್ ನಡೆಸುತ್ತಿದ್ದಾರೆ. ಕೇಂದ್ರ ಸರ್ಕಾರದ 'ಪಿಎಂ ಸ್ವನಿಧಿ' (PM SVANidhi) ಯೋಜನೆಯಡಿ ಸಣ್ಣ ಸಾಲ ಪಡೆದು, ಕಷ್ಟಪಟ್ಟು ಬದುಕು ಕಟ್ಟಿಕೊಂಡಿದ್ದ ನಿಂಗಮ್ಮ ತಮ್ಮ ಮಕ್ಕಳಿಗೂ ಉತ್ತಮ ಶಿಕ್ಷಣ ಕೊಡಿಸುತ್ತಿದ್ದಾರೆ. ಇತ್ತೀಚಿನ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನಿಂಗಮ್ಮ ಅವರ ಸ್ವಾವಲಂಬನೆಯ ಕಥೆಯನ್ನು ಉಲ್ಲೇಖಿಸಿ, ಅವರ ಸಾಧನೆ ಹಾಗೂ ಶ್ರಮವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದರು. ಪ್ರಧಾನಿಯವರ ಬಾಯಲ್ಲಿ ತಮ್ಮ ಹೆಸರು ಕೇಳಿ ನಿಂಗಮ್ಮ ತೀವ್ರ ಸಂತಸ ವ್ಯಕ್ತಪಡಿಸಿದ್ದರು.

ಸನ್ಮಾನಿಸಿದ ಜಿಬಿಎಯಿಂದಲೇ ತೆರವು ಸೂಚನೆ!

ಪ್ರಧಾನಿ ಮೋದಿ ಅವರ ಶ್ಲಾಘನೆಯ ಬೆನ್ನಲ್ಲೇ ಕಳೆದ ಭಾನುವಾರ ಜಿಬಿಎ (GBA) ಅಧಿಕಾರಿಗಳು ನಿಂಗಮ್ಮ ಅವರನ್ನು ಪ್ರೀತಿಯಿಂದ ಸನ್ಮಾನಿಸಿದ್ದರು. ಆದರೆ, ಸನ್ಮಾನಿಸಿದ ಕೆಲವೇ ದಿನಗಳಲ್ಲಿ ಅಧಿಕಾರ ವರ್ಗ ನಿಂಗಮ್ಮನಿಗೆ ಬಿಗ್ ಶಾಕ್ ನೀಡಿದೆ. ಫುಟ್‌ಪಾತ್ ಮೇಲೆ ಅಂಗಡಿ ಹಾಕುವಂತಿಲ್ಲ, ತಕ್ಷಣವೇ ಜಾಗ ತೆರವುಗೊಳಿಸಿ ಎಂದು ಜಿಬಿಎ ಅಧಿಕಾರಿಗಳು ನಿನ್ನೆ ಮೌಖಿಕ ಸೂಚನೆ ನೀಡಿದ್ದಾರೆ.

'ಅಂಗಡಿ ತೆಗೆದರೆ ಬದುಕೋದು ಹೇಗೆ?': ಕಣ್ಣೀರಿಟ್ಟ ನಿಂಗಮ್ಮ

ಅಧಿಕಾರಿಗಳ ಬೆದರಿಕೆ ಹಾಗೂ ತೆರವು ಸೂಚನೆಯ ಹೊರತಾಗಿಯೂ ನಿಂಗಮ್ಮ ಇಂದು ಎಂದಿನಂತೆ ತಮ್ಮ ಟಿಫನ್ ಸೆಂಟರ್ ಓಪನ್ ಮಾಡಿ ವ್ಯಾಪಾರ ಮುಂದುವರಿಸಿದ್ದಾರೆ. "ನಾನು ಅಂಗಡಿ ತೆರವು ಮಾಡುವುದಿಲ್ಲ, ಇಲ್ಲೇ ವ್ಯಾಪಾರ ಮಾಡುತ್ತೇನೆ. ಕಷ್ಟಪಟ್ಟು ದುಡಿದು ಜೀವನ ಸಾಗಿಸುತ್ತಿದ್ದೇನೆ. ಒಂದು ವೇಳೆ ಈ ಅಂಗಡಿಯನ್ನೂ ತೆರವುಗೊಳಿಸಿದರೆ ನನ್ನ ಕುಟುಂಬದ ಜೀವನಕ್ಕೆ ನಾನೇನು ಮಾಡಲಿ?" ಎಂದು ನಿಂಗಮ್ಮ ಅಳಲು ತೋಡಿಕೊಂಡಿದ್ದಾರೆ. ಪ್ರಧಾನಿಯಿಂದ ಮೆಚ್ಚುಗೆ ಪಡೆದ ವ್ಯಾಪಾರಿಗೆ ಈಗ ಬದುಕಿನ ಆಸರೆಯೇ ಕೈತಪ್ಪುವ ಭೀತಿ ಎದುರಾಗಿದೆ.