ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ರಾಜ್ಯ ಸಚಿವ ಸಂಪುಟ ವಿಸ್ತರಣೆಯಾಗಿದ್ದು, 19 ನೂತನ ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇದರೊಂದಿಗೆ, ಸಂಪುಟದ ಒಟ್ಟು ಬಲ 33ಕ್ಕೆ ಏರಿಕೆಯಾಗಿದೆ. ಆದರೆ, ಈ ವಿಸ್ತರಿತ ಮಂತ್ರಿಮಂಡಲದಲ್ಲಿ ಒಬ್ಬರೂ ಮಹಿಳಾ ಶಾಸಕರಿಗೆ ಸಚಿವ ಸ್ಥಾನ ನೀಡದಿರುವುದು ಗಮನಾರ್ಹ ಚರ್ಚೆಗೆ ಕಾರಣವಾಗಿದೆ.

ಬೆಂಗಳೂರು (ಆ.03): ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ (Congress Government) ಮೊದಲ ಅವಧಿಗೆ ಮೂರು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ್ದ ಸಿದ್ದರಾಮಯ್ಯ (Siddaramaiah) ಅವರು ರಾಜೀನಾಮೆ ನೀಡಿದ ನಂತರ, ಜುಲೈ 3ರಂದು 2ನೇ ಅವಧಿಯ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ (D.K. Shivakumar) ಹಾಗೂ 13 ಶಾಸಕರು ಸಂಪುಟ ದರ್ಜೆ ಸಚಿವರಾಗಿ (Cabinet Ministers) ಪ್ರಮಾಣ ವಚನ ಸ್ವೀಕರಿಸಿದ್ದರು.

ಇದಾದ ಬರೋಬ್ಬರಿ ಒಂದು ತಿಂಗಳ ಬಳಿಕ ಇಂದು (ಆಗಸ್ಟ್ 03) ರಾಜ್ಯ ಸಚಿವ ಸಂಪುಟ ವಿಸ್ತರಣೆ (Cabinet Expansion) ನಡೆದಿದ್ದು, ಹೆಚ್ಚುವರಿಯಾಗಿ 19 ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

33ಕ್ಕೇರಿದ ಸಂಪುಟ ಬಲ; ಮಹಿಳೆಯರಿಗೆ ಸಿಗದ ಸ್ಥಾನ!

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿ ರಾಜ್ಯ ಸಚಿವ ಸಂಪುಟದ ಒಟ್ಟು ಗಾತ್ರ ಇದೀಗ 33ಕ್ಕೆ ಏರಿಕೆಯಾಗಿದೆ. ಆದರೆ, ಈ ವಿಸ್ತರಿತ ಮಂತ್ರಿಮಂಡಲದಲ್ಲಿ ಯಾರೊಬ್ಬರೂ ಮಹಿಳಾ ಸಚಿವರಿಲ್ಲದಿರುವುದು (Zero Women Representation) ಭಾರಿ ಆಶ್ಚರ್ಯ ಹಾಗೂ ಚರ್ಚೆಗೆ ಗ್ರಾಸವಾಗಿದೆ. ಕೊನೆ ಪಕ್ಷ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯನ್ನು (Women and Child Welfare Department) ನೋಡಿಕೊಳ್ಳುವುದಕ್ಕೂ ಒಬ್ಬರೇ ಒಬ್ಬರು ಮಹಿಳಾ ಸಚಿವೆ ಇಲ್ಲದಿರುವುದು ಹಿನ್ನಡೆಯಾಗಿದ್ದು, ಇದರ ಹಿಂದಿನ ರಾಜಕೀಯ ಒಳ-ಲೆಕ್ಕಾಚಾರ ಮಾತ್ರ ನಿಗೂಢವಾಗಿದೆ.

ಯಾವ ಸಚಿವರು ಯಾರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು?

ಸಂಪುಟ ಸೇರಿದ ನೂತನ 19 ಸಚಿವರು ವಿಭಿನ್ನವಾಗಿ ತಮ್ಮ ಆರಾಧ್ಯ ದೈವ, ಸಂವಿಧಾನ ಹಾಗೂ ಗಣ್ಯರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದು, ಅವರ ವಿವರ ಹೀಗಿದೆ:

  1. ಅಜಯ್ ಧರ್ಮಸಿಂಗ್: ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕಾರ.
  2. ಹುಲಿಕಟ್ಟೆ ಚೆನ್ನಪ್ಪ ಬಾಲಕೃಷ್ಣ: ಭಾರತದ ಸಂವಿಧಾನ (Constitution) ಹಾಗೂ ದೇವರ ಮೇಲೆ ಪ್ರಮಾಣ ವಚನ.
  3. ಕೆ.ಎಸ್‌ ಬಸವಂತಪ್ಪ: ಜಗಜ್ಯೋತಿ ಬಸವೇಶ್ವರ ಹಾಗೂ ದೇವರ ಹೆಸರಿನಲ್ಲಿ ಪ್ರಮಾಣ ವಚನ.
  4. ಬಸವರಾಜ್ ರಾಯರೆಡ್ಡಿ: ಶ್ರದ್ಧಾಪೂರ್ವಕವಾಗಿ (Solemnly) ಪ್ರತಿಜ್ಞೆ ಸ್ವೀಕಾರ.
  5. ಎನ್.ಚಲುವರಾಯಸ್ವಾಮಿ: ದೇವರು ಹಾಗೂ ನೊಣವಿನಕೆರೆ ಅಜ್ಜಯ್ಯನ ಹೆಸರಿನಲ್ಲಿ ಪ್ರಮಾಣ ವಚನ.
  6. ಲಕ್ಷ್ಮಣ್ ಸವದಿ: ದೇವರ ಹೆಸರಿನಲ್ಲಿ ಪ್ರಮಾಣ ವಚನ.
  7. ಮಧು ಬಂಗಾರಪ್ಪ: ದೇವರ ಹೆಸರಿನಲ್ಲಿ ಪ್ರಮಾಣ ವಚನ.
  8. ಎಸ್.ಎಸ್.ಮಲ್ಲಿಕಾರ್ಜುನ: ದೇವರ ಹೆಸರಿನಲ್ಲಿ ಪ್ರಮಾಣ ವಚನ.
  9. ಬಿ. ನಾಗೇಂದ್ರ: ದೇವರ ಹೆಸರಿನಲ್ಲಿ ಪ್ರಮಾಣ ವಚನ.
  10. ಪಿ.ಎಂ. ನರೇಂದ್ರಸ್ವಾಮಿ: ಗಂಗಾಧರ ಅಜ್ಜಯ್ಯ ಹಾಗೂ ಬಾಬಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಹೆಸರಿನಲ್ಲಿ ಪ್ರಮಾಣ ವಚನ.
  11. ಸಿ. ಪುಟ್ಟರಂಗಶೆಟ್ಟಿ: ದೇವರ ಹೆಸರಿನಲ್ಲಿ ಪ್ರಮಾಣ ವಚನ.
  12. ಟಿ.ರಘುಮೂರ್ತಿ: ದೇವರ ಹೆಸರಿನಲ್ಲಿ ಪ್ರಮಾಣ ವಚನ.
  13. ರಿಜ್ವಾನ್ ಅರ್ಷದ್: ದೇವರ ಹೆಸರಿನಲ್ಲಿ ಪ್ರಮಾಣ ವಚನ.
  14. ರುದ್ರಪ್ಪ ಲಮಾಣಿ: ದೇವರ ಹೆಸರಿನಲ್ಲಿ ಪ್ರಮಾಣ ವಚನ.
  15. ಸಂತೋಷ್ ಲಾಡ್: ಶ್ರದ್ಧಾಪೂರ್ವಕವಾಗಿ ಪ್ರತಿಜ್ಞೆ ಮಾಡಿ ಪ್ರಮಾಣ ವಚನ.
  16. ಕೆ.ಎಂ. ಶಿವಲಿಂಗೇಗೌಡ: ದೇವರ ಹೆಸರಿನಲ್ಲಿ ಪ್ರಮಾಣ ವಚನ.
  17. ಶಿವರಾಜ್ ತಂಗಡಗಿ: ದೇವರ ಹೆಸರಿನಲ್ಲಿ ಪ್ರಮಾಣ ವಚನ.
  18. ವಿಜಯಾನಂದ ಕಾಶಪ್ಪನವರ್: ದೇವರ ಹೆಸರಿನಲ್ಲಿ ಪ್ರಮಾಣ ವಚನ.
  19. ಜಮೀರ್ ಅಹಮದ್ ಖಾನ್: ಅಲ್ಲಾ (Allah) ಮತ್ತು ತಾಯಿಯ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕಾರ.