ಸಚಿವ ಸ್ಥಾನ ಸಿಗದಿದ್ದಕ್ಕೆ ರಾಜೀನಾಮೆ ನೀಡಿದ್ದ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ್, ಇದೀಗ ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ. ಹಿರಿಯ ನಾಯಕರ ಮನವೊಲಿಕೆ ಹಾಗೂ ಕಾರ್ಯಕರ್ತರ ಒತ್ತಾಯದ ಮೇರೆಗೆ, ಅವರು ತಮ್ಮ ರಾಜೀನಾಮೆ ಪತ್ರವನ್ನು ಹಿಂಪಡೆದಿದ್ದಾರೆ.

ವಿಜಯಪುರ (ಆ.05): ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಸಂಪುಟ ವಿಸ್ತರಣೆಯಾದ ಬೆನ್ನಲ್ಲಿಯೇ ತಮಗೆ ಸಚಿವ ಸ್ಥಾನ ಸಿಕ್ಕಿಲ್ಲವೆಂದು ವಿಜಯಪುರ ಜಿಲ್ಲೆಯ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ್ ಅವರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆದರೆ, ಎರಡು ದಿನಗಳಲ್ಲಿ ಕಾಂಗ್ರೆಸ್ ಹಿರಿಯ ನಾಯಕರು ಮನವೊಲಿಕೆ ಮಾಡಿದ್ದು, ಇದೀಗ ತಮ್ಮ ರಾಜೀನಾಮೆ ಪತ್ರವನ್ನು ಹಿಂಪಡೆದಿದ್ದಾರೆ.

ಈ ಬಗ್ಗೆ ವಿಜಯಪುರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ಕಾರಣಾಂತರಗಳಿಂದ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದೆ. ಆದರೆ, ಇದೀಗ ರಾಜೀನಾಮೆ ವಾಪಸ್ ಪಡೆಯುತ್ತಿದ್ದೇನೆ. ಈ ಕುರಿತು ವಿಧಾನ ಸಭೆ ಕಾರ್ಯದರ್ಶಿಗೆ ಪತ್ರ ಬರೆದಿದ್ದೇನೆ. ಇದೀಗ ರಾಜೀನಾಮೆ ವಾಪಸ್ ಪಡೆಯುತ್ತಿರುವ ಮಾಹಿತಿಯನ್ನು ನಿಮಗೆ ತಿಳಿಸುತ್ತಿದ್ದೇನೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದನ್ನು ಯಶವಂತರಾಯಗೌಡ ಪಾಟೀಲ್ ತಿಳಿಸಿದರು.

ಇಂಡಿಯಲ್ಲಿ ಹಿತೈಷಿಗಳು, ಕಾರ್ಯಕರ್ತ ಜೊತೆಗೆ ಸಭೆ ನಡೆಸಿದ್ದ ಶಾಸಕ ಯಶವಂತರಾಯಗೌಡ, ಇಂಡಿ ಪಟ್ಟಣಕ್ಕೆ ಭೇಟಿ ನೀಡಿದಾಗ ಶಾಸಕರನ್ನ ಭೇಟಿ ಮಾಡಿದ ಅನೇಕ ಮುಖಂಡರು, ಹಿತೈಷಿಗಳು ಕೂಡ ರಾಜೀನಾಮೆ ವಾಪಸ್ ಪಡೆಯುವಂತೆ ಒತ್ತಾಯಿಸಿದ್ದರು. ಈ ಹಿನ್ನೆಲೆಯಲ್ಲಿ ರಾಜೀನಾಮೆಯನ್ನು ವಾಪಸ್ ಪಡೆಯುತ್ತಿದ್ದೇನೆ ಎಂದು ಮಾಹಿತಿ ನೀಡಿದರು.

ಸಚಿವರ ಪ್ರಮಾಣವಚನಕ್ಕೂ ಮುನ್ನವೇ ರಾಜೀನಾಮೆ

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ 2ನೇ ಬಾರಿ ಸಂಪುಟ ವಿಸ್ತರಣೆ ಪಟ್ಟಿ ಬರುತ್ತಿದ್ದಂತೆ, ಅದರಲ್ಲಿ ತಮ್ಮ ಹೆಸರಿಲ್ಲವೆಂದು ಸುಮಾರು ಐದಾರು ಶಾಸಕರು ರಾಜೀನಾಮೆ ಕೊಡುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಅದರಲ್ಲಿ ಯಶವಂತರಾಯಗೌಡ ಪಾಟೀಲ್ ಅವರು ಹೊಸ 19 ಸಚಿವರು ಪ್ರಮಾಣವಚನ ಸ್ವೀಕಾರಕ್ಕೂ ಮುನ್ನವೇ ವಿಧಾನಸಭಾ ಉಪ ಸಭಾಪತಿಯಾಗಿದ್ದ ರುದ್ರಪ್ಪ ಲಮಾಣಿ ಅವರಿಗೆ ರಾಜೀನಾಮೆ ಪತ್ರವನ್ನು ಸಲ್ಲಿಕೆ ಮಾಡಿದರು. ಎಲ್ಲರಿಗಿಂತಲೂ ಮುಂಚಿತವಾಗಿ ರಾಜೀನಾಮೆ ನಿಡುವ ಮೂಲಕ ಸ್ವಪಕ್ಷದ ನಾಯಕರ ಮೇಲೆ ಆಕ್ರೋಶ ಹೊರಹಾಕಿದ್ದರು.

ನಾಳೆ ರಾಜೀನಾಮೆ ಎಂದವರು ತಣ್ಣಗಾದರು:

ಸಚಿವ ಸಂಪುಟ ವಿಸ್ತರಣೆಗೆ ಹೈಕಮಾಂಡ್‌ನಿಂದ ಪಟ್ಟಿ ಬರುತ್ತಿದ್ದಂತೆ ಬೇಳೂರು ಗೋಪಾಲಕೃಷ್ಣ, ಎನ್.ವೈ. ಗೋಪಾಲಕೃಷ್ಣ, ಭದ್ರಾವತಿ ಶಾಸಕ ಸಂಗಮೇಶ್ ಅವರು ನಾಳೆ ಬೆಳಗ್ಗೆ ರಾಜೀನಾಮೆ ಕೊಡುತ್ತೇವೆ ಎಂದು ಹೈಕಮಾಂಡ್‌ಗ ಬೆದರಿಕೆ ಹಾಕಿದ್ದರು. ಇವರ ಜೊತೆಗೆ, ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ್, ಮೈಸೂರಿನ ತನ್ವೀರ್ ಸೇಠ್, ಬೆಂಗಳೂರಿನ ಅಪ್ಪ-ಮಗ ಶಾಸಕರಾದ ಎಂ.ಕೃಷ್ಣಪ್ಪ ಹಾಗೂ ಪ್ರಿಯಾಕೃಷ್ಣ ಸೇರಿದಂತೆ ಹಲವರು ಆಕ್ರೋಶ ಹೊರಹಾಕಿದ್ದರು. ಆದರೆ, ಹೈಕಮಾಂಡ್‌ನಿಂದ ರಾಜೀನಾಮೆ ಕೊಟ್ಟರೆ ಅಂಗೀಕಾರ ಮಾಡಿ ಎಂದು ಸೂಚನೆ ನೀಡಿತ್ತು. ಇದರ ಬೆನ್ನಲ್ಲಿಯೇ ಹೊಸ ಸಚಿವರ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮದ ಬೆನ್ನಲ್ಲಿಯೇ ಯಾರಾದರೂ ಶಾಸಕರು ರಾಜೀನಾಮೆ ನೀಡಿದರೆ ತತಕ್ಷಣ ಅಂಗೀಕಾರ ಮಾಡುತ್ತೇನೆ ಎಂದು ಸಿಎಂ ಡಿ.ಕೆ. ಶಿವಕುಮಾರ್ ಎಚ್ಚರಿಕೆ ನೀಡಿದ್ದರು. ಇದಾದ ನಂತರ ಕೆಲವರನ್ನು ಮನವೊಲಿಕೆ ಮಾಡಲಾಗಿದ್ದು, ಇನ್ನು ಕೆಲವರು ತಮ್ಮ ಕ್ಷೇತ್ರದ ಸಹ-ಮುಖಂಡರೊಂದಿಗೆ ಸಭೆ ಮಾಡಿ ರಾಜೀನಾಮೆ ನೀಡುವ ನಿರ್ಧಾರ ಹಿಂಪಡೆದಿದ್ದಾರೆ.

ಕಾಂಗ್ರೆಸ್ ಹೈಕಮಾಂಡ್ ಸೂಚನೆ ಬರುವುದಕ್ಕೂ ಮುನ್ನವೇ ಆಕ್ರೋಶದಲ್ಲಿ ರಾಜೀನಾಮೆ ನೀಡಿದ್ದ ಶಾಸಕ ಯಶವಂತರಾಯಗೌಡ ಪಾಟೀಲ್ ಅವರು ಇಂದು ತಾವು ಸಲ್ಲಿಸಿದ್ದ ರಾಜೀನಾಮೆಯನ್ನು ವಾಪಸ್ ಪಡೆಯುತ್ತಿರುವುದಾಗಿ ವಿಧಾನಸಭಾ ಕಾರ್ಯದರ್ಶಿಗೆ ಪತ್ರವನ್ನು ಬರೆದಿದ್ದಾರೆ.