ನವದೆಹಲಿ(ಆ.25): ಕೇಂದ್ರದ ಮಾಜಿ ಸಚಿವ, ಬಿಜೆಪಿ ಹಿರಿಯ ನಾಯಕ  ಅರುಣ್ ಜೇಟ್ಲಿ ಅಂತ್ಯ ಸಂಸ್ಕಾರ ಸಕಲ ಸರ್ಕಾರಿ ಗೌರವಗಳೊಂದಿಗೆ ಇಂದು ನೆರವೇರಿತು. ದೆಹಲಿಯ ನಿಗಮ್ ಬೋಧ್ ಘಾಟ್’ನಲ್ಲಿ ಜೇಟ್ಲಿ ಅಂತ್ಯ  ಸಂಸ್ಕಾರ ನೆರವೇರಿದ್ದು, ಪುತ್ರ ರೋಹನ್ ಜೇಟ್ಲಿ ಚಿತೆಗೆ ಅಗ್ನಿಸ್ಪರ್ಶ ಮಾಡಿದರು.

ಈ ವೇಳೆ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು, ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಸ್ಮೃತಿ ಇರಾನಿ, ಯೋಗಗುರು ಬಾಬಾ ರಾಮ್’ದೇವ್, ಪ್ರತಿಪಕ್ಷಗಳ ನಾಯಕರು ಹಾಗೂ ದೇಶ-ವಿದೇಶಗಳ ಗಣ್ಯರು ಹಾಜರಿದ್ದರು.

ಜಿ7 ಶೃಂಗಸಭೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ತ್ರಿರಾಷ್ಟ್ರ ಪ್ರವಾಸದಲ್ಲಿದ್ದು, ಜೇಟ್ಲಿ ಅಂತ್ಯ ಸಂಸ್ಕಾರಕ್ಕೆ ಬರಲಾಗಲಿಲ್ಲ. ವಿದೇಶ ಪ್ರವಾಸ ಮೊಟಕುಗೊಳಿಸದಂತೆ ಜೇಟ್ಲಿ ಕುಟುಂಬ ನಿನ್ನೆ ಪ್ರಧಾನಿ ಮೋದಿ ಅವರಲ್ಲಿ ಮನವಿ ಕೂಡ ಮಾಡಿತ್ತು.

ಇದಕ್ಕೂ ಮೊದಲು ಜೇಟ್ಲಿ  ನಿವಾಸದಿಂದ ಬಿಜೆಪಿ ಕಚೇರಿಗೆ ಮತ್ತು ಬಿಜೆಪಿ ಕಚೇರಿಯಿಂದ ನಿಗಮ್ ಬೋಧ್ ಘಾಟ್’ವರೆಗೂ ಜೇಟ್ಲಿ ಕಳೆಬರಹದ ಅಂತಿಮ ಯಾತ್ರೆ ನೆರವೇರಿತು. ಈ ವೇಳೆ ಅಗಲಿದ ನಾಯಕನಿಗೆ ಸಾವಿರಾರು ಜನರು ಅಂತಿಮ ನಮನ ಸಲ್ಲಿಸಿದರು.

ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಮಾಜಿ ವಿತ್ತ ಸಚಿವ ಅರುಣ್ ಜೇಟ್ಲಿ, ನಿನ್ನೆ(ಆ.24)ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು.