Asianet Suvarna News Asianet Suvarna News

ಜೇಟ್ಲಿ ನನ್ನನ್ನು ಟೆಲಿಕಾಂ ಜಿಹಾದಿ ಅನ್ನುತ್ತಿದ್ದರು!

ಅರುಣ್ ಜೇಟ್ಲಿ ಅವರೊಬ್ಬ ಅನುಪಮ ರಾಜಕಾರಣಿ. ನನಗೆ ಗೊತ್ತು, ಅವರ ವೃತ್ತಿಬದುಕಿನ ಹಲವು ಕತೆಗಳನ್ನು ಬೇರೆಯವರು ಈಗ ಹಂಚಿಕೊಳ್ಳುತ್ತಾರೆ. ಆದರೆ, ಅವರ ರಾಜಕಾರಣದ ಎರಡು ಹಾಲ್‌ಮಾರ್ಕ್ಗಳು ಅವರನ್ನು ಬೇರೆಯವರಿಂದ ಭಿನ್ನವಾಗಿ ನಿಲ್ಲಿಸುತ್ತವೆ. ಅವು- ಪ್ರಾಮಾಣಿಕತೆ ಮತ್ತು ಬುದ್ಧಿಶಕ್ತಿ. ಬೇರೆಲ್ಲದಕ್ಕಿಂತ ಹೆಚ್ಚಾಗಿ ಈ ಗುಣಗಳಿಂದಲೇ ಅವರು ಗುರುತಿಸಲ್ಪಡುತ್ತಾರೆ ಎಂದು ರಾಜ್ಯ ಸಭಾ ಸದಸ್ಯರಾದ ರಾಜೀವ್ ಚಂದ್ರಶೇಖರ್ ಅವರು ನೆನೆಯುತ್ತಾರೆ. 

Mother India lost one of her most distinguished son Says MP Rajeev Chandrasekhar About Arun Jaitley
Author
Bengaluru, First Published Aug 25, 2019, 8:54 AM IST
  • Facebook
  • Twitter
  • Whatsapp

ರಾಜೀವ್‌ ಚಂದ್ರಶೇಖರ್‌ , ರಾಜ್ಯಸಭಾ ಸದಸ್ಯರು

ಭಾರತ ಮಾತೆ ನಿನ್ನೆ ಅದ್ಭುತ ಪುತ್ರನೊಬ್ಬನನ್ನು ಕಳೆದುಕೊಂಡಿದೆ. ಅರುಣ್‌ ಜೇಟ್ಲಿ ಯಾರಾರ‍ಯರ ಬದುಕನ್ನು ಸ್ಪರ್ಶಿಸಿದ್ದರೋ ಅವರಿಗೆಲ್ಲ, ನನ್ನನ್ನೂ ಸೇರಿಸಿದಂತೆ, ಈ ಸಾವು ಆಳವಾಗಿ ತಟ್ಟಿರುತ್ತದೆ. ಜೇಟ್ಲಿಜಿ ನನ್ನ ಬದುಕಿಗೆ ಎರಡು ದಶಕಕ್ಕೂ ಹೆಚ್ಚು ಕಾಲ ದಾರಿದೀಪವಾಗಿದ್ದವರು. ಮೊದಲಿಗೆ ಉದ್ಯಮಿಯಾಗಿ, ನಂತರ ಸಂಸದನಾಗಿ ನನಗೆ ಅವರ ಜೊತೆ ಒಡನಾಡುವ ಅವಕಾಶ ದೊರಕಿತ್ತು.

ಪ್ರಾಮಾಣಿಕ, ಬೌದ್ಧಿಕ ರಾಜಕಾರಣ

ಅವರೊಬ್ಬ ಅನುಪಮ ರಾಜಕಾರಣಿ. ನನಗೆ ಗೊತ್ತು, ಅವರ ವೃತ್ತಿಬದುಕಿನ ಹಲವು ಕತೆಗಳನ್ನು ಬೇರೆಯವರು ಈಗ ಹಂಚಿಕೊಳ್ಳುತ್ತಾರೆ. ಆದರೆ, ಅವರ ರಾಜಕಾರಣದ ಎರಡು ಹಾಲ್‌ಮಾರ್ಕ್ಗಳು ಅವರನ್ನು ಬೇರೆಯವರಿಂದ ಭಿನ್ನವಾಗಿ ನಿಲ್ಲಿಸುತ್ತವೆ. ಅವು- ಪ್ರಾಮಾಣಿಕತೆ ಮತ್ತು ಬುದ್ಧಿಶಕ್ತಿ. ಬೇರೆಲ್ಲದಕ್ಕಿಂತ ಹೆಚ್ಚಾಗಿ ಈ ಗುಣಗಳಿಂದಲೇ ಅವರು ಗುರುತಿಸಲ್ಪಡುತ್ತಾರೆ.

1975ರಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ದೇಶದ ಮೇಲೆ ತುರ್ತುಸ್ಥಿತಿ ಹೇರಿದಾಗ ಮೊಟ್ಟಮೊದಲು ಜೈಲಿಗೆ ಹೋದವರಲ್ಲಿ ಜೇಟ್ಲಿ ಕೂಡ ಒಬ್ಬರು. 19 ತಿಂಗಳು ಅವರು ಜೈಲಿನಲ್ಲಿದ್ದರು. ಅಲ್ಲಿಂದ ಹೊರಬಂದ ಮೇಲೆ ಕಾನೂನು ವೃತ್ತಿಯ ಮೇಲೆ ಗಮನ ಕೇಂದ್ರೀಕರಿಸಿದರು.

ಜೇಟ್ಲಿ ಮೊದಲ ಬಾರಿ ಸಚಿವರಾಗಿದ್ದು 1999ರಲ್ಲಿ. ಕೇಂದ್ರದಲ್ಲಿ ಅಟಲ್‌ಜಿ ಅಧಿಕಾರಕ್ಕೆ ಮರಳಿದ ಮೇಲೆ ಜೇಟ್ಲಿಯವರಿಗೆ ಮಾಹಿತಿ ಮತ್ತು ಪ್ರಸಾರ ಖಾತೆ ನೀಡಿದ್ದರು. ಕಠಿಣ ಪರಿಶ್ರಮ ಹಾಗೂ ಅಪ್ರತಿಮ ಬುದ್ಧಿವಂತಿಕೆಯಿಂದಾಗಿ ಶೀಘ್ರದಲ್ಲೇ ಅವರಿಗೆ ಸಂಪುಟ ದರ್ಜೆಗೆ ಬಡ್ತಿ ದೊರಕಿತು. ಕಾನೂನು ಮತ್ತು ನ್ಯಾಯ, ಬಂಡವಾಳ ಹಿಂತೆಗೆತದಂತಹ ಮಹತ್ವದ ಖಾತೆಗಳು ಅವರದಾದವು. ನಂತರ ವಾಣಿಜ್ಯ ಮತ್ತು ಔದ್ಯೋಗಿಕ ಸಚಿವಾಲಯವನ್ನೂ ನಿಭಾಯಿಸಿದರು.

ಸರ್ಕಾರ ಮತ್ತು ಸಂಸತ್ತಲ್ಲಿ ಜೇಟ್ಲಿ

ಮೊದಲೇ ನನಗೆ ಜೇಟ್ಲಿ ದೇಶಾವರಿಯಾಗಿ ಪರಿಚಿತರಾಗಿದ್ದರೂ ಟೆಲಿಕಾಂ ಉದ್ಯಮಿಯಾಗಿ ಅಟಲ್‌ಜಿ ಸರ್ಕಾರದಲ್ಲಿ ಅವರ ಹತ್ತಿರದ ಸಂಪರ್ಕ ದೊರೆಯಿತು. ಒಮ್ಮೊಮ್ಮೆ ಸರ್ಕಾರದ ಜೊತೆ, ಕೆಲವೊಮ್ಮೆ ಸ್ವತಃ ಜೇಟ್ಲಿ ಜೊತೆ ನಾನು ಘರ್ಷಣೆಗಿಳಿಯುತ್ತಿದ್ದೆ. ನಾನಾಗ ಯುವಕ. ಯಾವುದನ್ನು ಸರಿ ಎಂದು ನಂಬಿದ್ದೆನೋ ಅದಕ್ಕಾಗಿ ತೀವ್ರ ಕಕ್ಕುಲಾತಿಯಿಂದ ಹೋರಾಡುತ್ತಿದ್ದೆ. ಅನೇಕ ವಿಷಯಗಳಲ್ಲಿ ನನ್ನನ್ನು ಜೇಟ್ಲಿ ಒಪ್ಪುತ್ತಿರಲಿಲ್ಲ. ಆದರೆ, ಯಾವತ್ತೂ ನನ್ನ ಉತ್ಸಾಹ ಕುಂದಿಸಲಿಲ್ಲ. ಆ ಸಮಯದಲ್ಲೇ ನನ್ನನ್ನು ಅವರು ಟೆಲಿಕಾಂ ಜಿಹಾದಿ (ಹೋರಾಟಗಾರ) ಎಂದು ಕರೆಯತೊಡಗಿದ್ದರು! ಸರ್ಕಾರದ ವಿರುದ್ಧ ನಾನು ನಡೆಸುತ್ತಿದ್ದ ಕಾನೂನು ಹೋರಾಟದ ಬಗ್ಗೆ ಅವರಿಗೆ ಭಿನ್ನಾಭಿಪ್ರಾಯವಿದ್ದಾಗಲೂ ಮೋತಿಮಹಲ್‌ನಲ್ಲಿ ನಾನು-ಅವರು ಜೊತೆಯಾಗಿ ಮಾಡಿದ ಊಟಗಳು ಅಚ್ಚಳಿಯದೆ ನೆನಪಿವೆ.

2006ರಲ್ಲಿ ಬಿಜೆಪಿಯ ಸಂಸದೀಯ ಮಂಡಳಿ ಸದಸ್ಯರಾಗಿದ್ದ ಜೇಟ್ಲಿ ನನ್ನ ರಾಜ್ಯಸಭೆ ಅಭ್ಯರ್ಥಿತ್ವವನ್ನು ಬೆಂಬಲಿಸಿದ್ದರು. ನಂತರ 2008ರಲ್ಲಿ ಆಗಷ್ಟೇ ಮೊಳಕೆಯೊಡೆಯುತ್ತಿದ್ದ 2ಜಿ ಹಗರಣವನ್ನು ನಾನು ಪ್ರಶ್ನಿಸತೊಡಗಿದಾಗ ನನ್ನನ್ನು ಬೆಂಬಲಿಸಿದ ಕೆಲವೇ ನಾಯಕರಲ್ಲಿ ಅವರೂ ಒಬ್ಬರು. ‘ರಾಜೀವ್‌ ಚಂದ್ರಶೇಖರ್‌ರ ಒಳಗಿನಿಂದ ನೀವು ಟೆಲಿಕಾಂ ಕಿತ್ತುಕೊಳ್ಳಬಹುದು, ಆದರೆ ಹೋರಾಟಗಾರನನ್ನು ಹೊರಹಾಕಲು ಸಾಧ್ಯವಿಲ್ಲ’ ಎಂದು ಜೋಕ್‌ ಮಾಡುತ್ತಿದ್ದರು. ನಮ್ಮಲ್ಲಿ ಭಿನ್ನಾಭಿಪ್ರಾಯವಿದ್ದಾಗಲೂ ನನ್ನ ಕೆಲಸವನ್ನು ಪ್ರೋತ್ಸಾಹಿಸುತ್ತಿದ್ದರು.

ರಾಜ್ಯಸಭೆಯ ವಿರೋಧ ಪಕ್ಷದ ನಾಯಕನಾದ ಮೇಲೆ ಜೇಟ್ಲಿ ಮಿಂಚತೊಡಗಿದರು. ಅದಕ್ಷ ಹಾಗೂ ದುಷ್ಟಯುಪಿಎ ಸರ್ಕಾರವನ್ನು ಅವರು ತರಾಟೆ ತೆಗೆದುಕೊಳ್ಳುತ್ತಿದ್ದುದು ನಮಗೆಲ್ಲ ಸ್ಫೂರ್ತಿದಾಯಕವಾಗಿತ್ತು.

ಜೇಟ್ಲಿ ಯಾವಾಗಲೂ ಅಂಕಿಅಂಶ ಮತ್ತು ಮಾಹಿತಿಗಳ ಮಾಸ್ಟರ್‌. ಅವರು ಮಾತನಾಡಲು ಎದ್ದುನಿಂತರೆ ಇಡೀ ಸದನ ಗಪ್‌ಚುಪ್‌ ಆಗಿ ತದೇಕಚಿತ್ತದಿಂದ ಆಲಿಸುತ್ತಿತ್ತು. 2012ರಲ್ಲಿ ಕಲ್ಲಿದ್ದಲು ಹಗರಣ ಬೆಳಕಿಗೆ ಬಂದಾಗ ಅವರು ಆಡಿದ ಮಾತುಗಳು ನೆನಪಾಗುತ್ತವೆ. ಯುಪಿಎ ಸರ್ಕಾರ ನಡೆಸಿದ ಕಲ್ಲಿದ್ದಲು ಗಣಿಗಳ ಹರಾಜು ಪ್ರಕ್ರಿಯೆಯಿಂದ ಸರ್ಕಾರದ ಬೊಕ್ಕಸಕ್ಕೆ 2 ಲಕ್ಷ ಕೋಟಿ ರು.ಗೂ ಹೆಚ್ಚು ನಷ್ಟವಾಗಿರಬಹುದು ಎಂಬ ಸುದ್ದಿ ಸಂಸತ್ತಿನ ಮುಂಗಾರು ಅಧಿವೇಶನಕ್ಕೆ ಬರಸಿಡಿಲಿನಂತೆ ಅಪ್ಪಳಿಸಿತ್ತು. ಅದನ್ನು ಸ್ವತಂತ್ರ ಭಾರತದ ಅತಿದೊಡ್ಡ ಹಗರಣ ಎಂದು ಕರೆದ ಜೇಟ್ಲಿ, ಆ ಬಗ್ಗೆ ಹರಿತ ವಾಗ್ಝರಿ ಹರಿಸಿದ್ದರು. ಯುಪಿಎ ನಡೆಸಿದ ಕಲ್ಲಿದ್ದಲು ಹರಾಜು ಪ್ರಕ್ರಿಯೆ ‘ನಿರಂಕುಶ’ ‘ಏಕಪಕ್ಷೀಯ’ ಹಾಗೂ ‘ಭ್ರಷ್ಟ’ ಎಂದು ಜರಿದು ‘ಕ್ರೋನಿ ಕ್ಯಾಪಿಟಲಿಸಂಗೆ ಇದೊಂದು ಸ್ಪಷ್ಟನಿದರ್ಶನ’ ಎಂದು ಪ್ರತಿಪಾದಿಸಿದ್ದರು.

ನಾನೇಕೆ ಅವರನ್ನು ಮಿಸ್‌ ಮಾಡಿಕೊಳ್ಳುವೆ?

ಅರುಣ್‌ಜಿ ಬಿಜೆಪಿಯ ಪ್ರಖರ ನಾಯಕರಲ್ಲೊಬ್ಬರು. ಯುಪಿಎ ಅವಧಿಯಲ್ಲಿ ಪ್ರಧಾನಿ ಸಚಿವಾಲಯದ ದೌರ್ಬಲ್ಯವನ್ನು ಟೀಕಿಸುತ್ತಾ ಅವರು ಸೋನಿಯಾ ಗಾಂಧಿ ಬಳಿ ಎಲ್ಲಾ ಅಧಿಕಾರವಿದೆ ಆದರೆ ಜವಾಬ್ದಾರಿಯಿಲ್ಲ, ಮನಮೋಹನ ಸಿಂಗ್‌ ಬಳಿ ಜವಾಬ್ದಾರಿಯಿದೆ ಆದರೆ ಅಧಿಕಾರವಿಲ್ಲ ಎಂದು ವಾಗ್ದಾಳಿ ನಡೆಸಿದ್ದರು. ಪ್ರಧಾನ ಮಂತ್ರಿಯೇ ಆಯಾ ಪಕ್ಷದ ಸಹಜ ನಾಯಕನೂ ಆಗಿರಬೇಕು ಎಂದು ಮೊಟ್ಟಮೊದಲಿಗೆ ಪ್ರತಿಪಾದಿಸಿದ್ದು ಅವರೇ.

ರಾಜ್ಯಸಭಾ ನಾಯಕನಾಗಿ ಜೇಟ್ಲಿಯವರನ್ನು ನಾನು ಬಹಳ ಮಿಸ್‌ ಮಾಡಿಕೊಳ್ಳುತ್ತೇನೆ. ಅವರು ಸುಲಭವಾಗಿ ಕೈಗೆ ಸಿಗುತ್ತಿದ್ದರು. ಯಾವ ವಿಷಯವನ್ನು ಬೇಕಾದರೂ ಅವರ ಬಳಿ ಚರ್ಚಿಸಬಹುದಿತ್ತು. ಸಂಸತ್‌ ಅಧಿವೇಶನದ ಕೊನೆಯ ದಿನ ಅವರ ಚೇಂಬರ್‌ನಲ್ಲಿ ನಡೆಯುತ್ತಿದ್ದ ಕಿಕ್ಕಿರಿದ ಔತಣವನ್ನು ಮರೆಯಲು ಸಾಧ್ಯವೇ ಇಲ್ಲ. ನಾನು ಸಂಸತ್ತಿಗೆ ಪ್ರತಿದಿನ ಒಯ್ಯುವ ಸಂವಿಧಾನದ ಪುಸ್ತಕವನ್ನು ಗಿಫ್ಟ್‌ ಕೊಟ್ಟಿದ್ದೇ ಅವರು.

ಮೋದಿ ಸರ್ಕಾರದಲ್ಲಿ ಹಣಕಾಸು ಸಚಿವರಾಗಿ ಜಿಎಸ್‌ಟಿ ಜಾರಿ, ಅಪನಗದೀಕರಣದಂತಹ ಕಠಿಣ ಸುಧಾರಣೆಗಳ ಹಿಂದಿನ ಶಕ್ತಿ ಜೇಟ್ಲಿಯಾಗಿದ್ದರು. ಅದರ ಸಂಸದೀಯ ಆಯ್ಕೆ ಸಮಿತಿಗೆ ನನ್ನನ್ನು ಆಯ್ಕೆ ಮಾಡಿದ್ದರು. ಜಿಎಸ್‌ಟಿಯಲ್ಲಿ ಅವರಿಗಿದ್ದ ನಂಬಿಕೆ ಅಚಲವಾಗಿತ್ತು.

ಕರ್ನಾಟಕದಲ್ಲಿ ಬಿಜೆಪಿ ಹಿಂದಿನ ಶಕ್ತಿ

ಗುಜರಾತ್‌ (2002 ಹಾಗೂ 2007), ಮಧ್ಯಪ್ರದೇಶ (2003), ಬಿಹಾರ (2005), ಪಂಜಾಬ್‌ (2007 ಹಾಗೂ 2012) ಹಾಗೂ 2014 ಮತ್ತು 2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ಪ್ರಮುಖ ಚುನಾವಣಾ ತಂತ್ರಗಾರನಾಗಿ ಜೇಟ್ಲಿ ಪ್ರಚಾರಾಂದೋಲನವನ್ನು ಮುನ್ನಡೆಸಿದ್ದರು. ಕರ್ನಾಟಕದ ರಾಜಕಾರಣದಲ್ಲಿ ನಾನು ಆಳವಾಗಿ ತೊಡಗಿಸಿಕೊಂಡಿದ್ದು 2004ರಲ್ಲಿ. ಆಗ ಜೇಟ್ಲಿ ಕರ್ನಾಟಕದ ಉಸ್ತುವಾರಿ. ಮೇಲ್ನೋಟಕ್ಕೆ ಚೆನ್ನಾಗಿಯೇ ತಳವೂರಿದ್ದ ಎಸ್‌ಎಂ ಕೃಷ್ಣ ಸರ್ಕಾರದ ವಿರುದ್ಧ ಎರಡು ರೀತಿಯಲ್ಲಿ ಜೇಟ್ಲಿ ರಣತಂತ್ರ ಹೆಣೆದಿದ್ದರು. ಒಂದು - ಕೃಷ್ಣ ಸರ್ಕಾರದ ವೈಫಲ್ಯಗಳನ್ನು ಎತ್ತಿ ತೋರಿಸಿದ್ದು. ಎರಡು - ನಮ್ಮ ಪಕ್ಷಕ್ಕೆ ಬೌದ್ಧಿಕ ನಾಯಕತ್ವ ಒದಗಿಸಿದ್ದು. ಕರ್ನಾಟಕ ಹಾಗೂ ದಕ್ಷಿಣ ಭಾರತದಲ್ಲಿ 2008ರಲ್ಲಿ ಮೊದಲ ಬಾರಿಗೆ ಬಿಜೆಪಿ ಸರ್ಕಾರವನ್ನು ಪ್ರತಿಷ್ಠಾಪಿಸುವಲ್ಲಿ ಅವರ ಪಾತ್ರ ಬಹಳ ದೊಡ್ಡದು. ಅದು ಬಿಜೆಪಿಗೆ ಜೇಟ್ಲಿ ನೀಡಿದ ಅಪ್ರತಿಮ ಕೊಡುಗೆಗಳಲ್ಲೊಂದು.

ಇದು ನಮಗೆಲ್ಲ ‘ನಾಲ್ವಡಿ ಆಘಾತ’

ಜೇಟ್ಲಿ ಮೂಲತಃ ಒಬ್ಬ ಸಂವಹನಕಾರ. ಹೊಸತಾಗಿ ಬಂದ ಸಾಮಾಜಿಕ ಜಾಲತಾಣಗಳನ್ನು ಬಹುಬೇಗ ಅಪ್ಪಿಕೊಂಡು ಅಲ್ಲಿ ಪಕ್ಷದ ಪರ ಬೌದ್ಧಿಕ ಸಂವಾದಗಳನ್ನು ಹುಟ್ಟುಹಾಕಿದರು. 2019ರ ಚುನಾವಣೆ ವೇಳೆ ಜೇಟ್ಲಿಯವರ ನಾಯಕತ್ವದಲ್ಲಿ ನಾನು ಪ್ರಚಾರ ಮತ್ತು ಸಂವಹನ ಸಮಿತಿಯಲ್ಲಿ ಕೆಲಸ ಮಾಡಿದ್ದೆ. ಅವರಾಗ ದೈಹಿಕವಾಗಿ ನಿಶ್ಶಕ್ತರಾಗಿದ್ದರು, ಆದರೆ ಆಂತರಿಕವಾಗಿ ಗಟ್ಟಿಯಾಗಿಯೇ ಇದ್ದರು. ಅವರ ಯೋಚನೆ ಹಾಗೂ ನಿರ್ಧಾರಗಳು ಸ್ಪಷ್ಟವೂ ಹರಿತವೂ ಆಗಿರುತ್ತಿದ್ದವು. ಆರೋಗ್ಯ ಕೈಕೊಟ್ಟಿದ್ದರೂ ರಾತ್ರಿ ಎಷ್ಟೋ ಹೊತ್ತಿಗೆ ಫೋನ್‌ ಮಾಡುತ್ತಿದ್ದರು ಅಥವಾ ಸಭೆ ನಡೆಸುತ್ತಿದ್ದರು. ಆ ಕೊನೆಯ ಕೆಲವು ಸಂವಾದಗಳು ನನ್ನ ನೆನಪಿನಲ್ಲಿ ಯಾವಾಗಲೂ ಉಳಿಯುತ್ತವೆ.

ಸಂಸತ್ತು 370ನೇ ಪರಿಚ್ಛೇದವನ್ನು ರದ್ದುಗೊಳಿಸಿದಾಗ ಬರೆದ ಕೊನೆಯ ಬ್ಲಾಗ್‌ನಲ್ಲಿ ಅವರು ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್‌ ಶಾ ಅಸಾಧ್ಯವಾದುದನ್ನು ಸಾಧಿಸಿದ್ದಾರೆ ಎಂದು ಹೇಳಿದ್ದರು. ಈ ಪ್ರತ್ಯೇಕ ಸ್ಥಾನಮಾನವು ಕಾಶ್ಮೀರವನ್ನು ಪ್ರತ್ಯೇಕತೆಯ ಕಡೆಗೆ ಕೊಂಡೊಯ್ಯುತ್ತಿತ್ತು ಎಂಬುದನ್ನು ಕಳೆದ ಏಳು ದಶಕಗಳ ಇತಿಹಾಸವೇ ಹೇಳುತ್ತದೆ ಎಂದು ಅದರಲ್ಲಿ ಬರೆದಿದ್ದರು. ಇದಕ್ಕಿಂತ ಚೆನ್ನಾಗಿ ಜೇಟ್ಲಿಯಲ್ಲದೆ ಇನ್ನಾರು ಹೇಳಲು ಸಾಧ್ಯ.

ಜೇಟ್ಲಿಯವರ ನಿಧನ ನನ್ನನ್ನು ಹಾಗೂ ನನ್ನಂತಹ ಅನೇಕರನ್ನು ನೋವಿಗೆ ನೂಕಿದೆ. ಮನೋಹರ ಪರ್ರಿಕರ್‌, ಅನಂತಕುಮಾರ್‌, ಸುಷ್ಮಾ ಸ್ವರಾಜ್‌ ಹಾಗೂ ಈಗ ಜೇಟ್ಲಿಯವರನ್ನು ಕಳೆದುಕೊಂಡು ನಮಗೆ ಉಂಟಾದ ಈ ‘ನಾಲ್ವಡಿ ಆಘಾತ’ ಸಣ್ಣದಲ್ಲ.

ಅರುಣ್‌ಜಿ ಈ ಭೂಮಿಯ ಮೇಲೆ ದೈತ್ಯನಂತೆ ನಡೆದರು. ನನ್ನನ್ನೂ ಸೇರಿದಂತೆ ಬಹಳಷ್ಟುಜನರನ್ನು ತಟ್ಟಿದರು. ಅವರ ಆತ್ಮೀಯತೆ ಹೊಂದಿದ್ದ ಹಾಗೂ ಅವರ ಜೊತೆ ಕೆಲಸ ಮಾಡಿದ ನಾನು ಅದೃಷ್ಟವಂತ. ಅರುಣ್‌ಜಿ, ಇದು ನಿಜಕ್ಕೂ ನನಗೊಂದು ಸೌಭಾಗ್ಯ ಹಾಗೂ ಗೌರವ. ನಿಮ್ಮನ್ನು ಮಿಸ್‌ ಮಾಡಿಕೊಳ್ಳುತ್ತೇವೆ, ಆದರೆ ಯಾವತ್ತೂ ಮರೆಯುವುದಿಲ್ಲ. ಜೈಹಿಂದ್‌. ಹೋಗಿಬನ್ನಿ ಸರ್‌

Follow Us:
Download App:
  • android
  • ios