Asianet Suvarna News Asianet Suvarna News

ಬಾರದ ಲೋಕಕ್ಕೆ GENTALMAN ಜೇಟ್ಲಿ: ಆಗಮನದಷ್ಟೇ ನಿರ್ಗಮನವೂ ಇತ್ತು GENTLY!

ತೀವ್ರ ಅನಾರೋಗ್ಯದಿಂದ ನಿಧನರಾದ ಬಿಜೆಪಿ ಹಿರಿಯ ನಾಯಕ ಅರುಣ್ ಜೇಟ್ಲಿ| ರಾಜಕೀಯ ಪಯಣ ಮುಗಿಸಿದ ಮಾಜಿ ಕೇಂದ್ರ ಸಚಿವ ಅರುಣ್ ಜೇಟ್ಲಿ| ರಾಷ್ಟ್ರ ರಾಜಕಾರಣ ಕಂಡ ಅಪರೂಪದ ರಾಜಕಾರಣಿಗಳಲ್ಲಿ ಜೇಟ್ಲಿಗೆ ಉನ್ನತ ಸ್ಥಾನ| ಜೇಟ್ಲಿ ನಡೆದು ಬಂದ ದಾರಿಯತ್ತ ತಿರುಗಿ ನೋಡಿದಾಗ| ವಿತ್ತ ಸಚಿವರಾಗಿ ಅರ್ಥ ವ್ಯವಸ್ಥೆಯನ್ನು ಸಂಭಾಳಿಸಿದ ಪರಿ ಅನನ್ಯ| ಪ್ರಧಾನಿ ಮೋದಿ, ಅಮಿತ್ ಶಾ ಅವರನ್ನು ರಾಷ್ಟ್ರ ರಾಜಕಾರಣಕ್ಕೆ ಪರಿಚಯಿಸಿದ ಕೀರ್ತಿ| ಬಿಜೆಪಿಯ ಸೈದ್ಧಾಂತಿಕ ನೀತಿ ನಿರೂಪಕನಾಗಿ ನಿರಂತರವಾಗಿ ದುಡಿದ ಜೇಟ್ಲಿ| ಜೇಟ್ಲಿ ನಿಧನದಿಂದ ರಾಷ್ಟ್ರ ರಾಜಕಾರಣದಲ್ಲಿ ಸೃಷ್ಟಿಯಾದ ನಿರ್ವಾತ|

Rip Arun Jaitley sculptor who shaped new age BJP
Author
Bengaluru, First Published Aug 24, 2019, 9:31 PM IST
  • Facebook
  • Twitter
  • Whatsapp

ಬೆಂಗಳೂರು(ಆ.24): ಅದು ಆ.06 2019, ಮಾಜಿ ಕೇಂದ್ರ ಸಚಿವೆ, ಬಿಜೆಪಿ ಹಿರಿಯ ನಾಯಕಿ ಸುಷ್ಮಾ ಸ್ವರಾಜ್ ಅಗಲಿದ ಸುದ್ದಿ ಕೇಳಿದ ಮಾಜಿ ಕೇಂದ್ರ ಸಚಿವ ಹಾಗೂ ಬಿಜೆಪಿ ಹಿರಿಯ ನಾಯಕ ಅರುಣ್ ಜೇಟ್ಲಿ, ಆಸ್ಪತ್ರೆಯಲ್ಲೇ ಬಿಕ್ಕಿ ಬಿಕ್ಕಿ ಅಳಲಾರಂಭಿಸಿದರು.

ಇದರಿಂದ ವಿಚಲಿತರಾದ ದೆಹಲಿಯ ಏಮ್ಸ್ ಆಸ್ಪತ್ರೆಯ ವೈದ್ಯರು, ಯಾವುದೇ ಕಾರಣಕ್ಕೂ ಅವರ ಆರೋಗ್ಯದ ಮೇಲೆ ಪರಿಣಾಮ ಬೀರಬಹುದಾದ ದು:ಖದ ಸಂಗತಿಯನ್ನು ಅವರಿಗೆ ತಿಳಿಸಬೇಡಿ ಎಂದು ಜೇಟ್ಲಿ ಕುಟುಂಬಸ್ಥರಲ್ಲಿ ಮನವಿ ಮಾಡಿದರು.

ಅದಾದ 18 ದಿನಗಳ ಬಳಿಕ ಅರುಣ್ ಜೇಟ್ಲಿ ಕೂಡ ಇಹಲೋಕದ ಯಾತ್ರೆ ಮುಗಿಸಿದ್ದಾರೆ. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅರುಣ್ ಜೇಟ್ಲಿ, ಇಂದು ಬೆಳಗ್ಗೆ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಈ ಮೂಲಕ ರಾಷ್ಟ್ರ ರಾಜಧಾನಿ ದೆಹಲಿ ತನ್ನ ಮತ್ತೋರ್ವ ಶ್ರೇಷ್ಠ ಪುತ್ರನನ್ನು ಕಳೆದುಕೊಂಡಿದೆ.

ಅಷ್ಟಕ್ಕೂ ಜೇಟ್ಲಿ ಅವರನ್ನು ಕಳೆದುಕೊಂಡ ಬಿಜೆಪಿಯಲ್ಲಿ ಏಕಿಷ್ಟು ಒಂಟಿತನ ಆವರಿಸಿದೆ ಗೊತ್ತಾ? ಜೇಟ್ಲಿ ಕೇವಲ ನಾಯಕರಾಗಿರಲಿಲ್ಲ ಬದಲಿಗೆ ಪಕ್ಷದ ನೀತಿ ನಿರೂಪಣೆಯಲ್ಲಿ ಜೇಟ್ಲಿ ಅವರದ್ದು ಎತಯ್ತಿದ ಕೈ. ಚುನಾವಣೆಗಳಿಗೆ ಆಕರ್ಷಕ ಘೋಷಣೆ ಕೊಡುವುದರಿಂದ ಹಿಡಿದು, ಪಕ್ಷಕ್ಕೆ ಸೈದ್ಧಾಂತಿಕ ನೆಲೆಗಟ್ಟನ್ನು ಒದಗಿಸುವಲ್ಲಿ ಜೇಟ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದರು.

ನರೇಂದ್ರ ಮೋದಿ ಭವಿಷ್ಯದ ಬಿಜೆಪಿಯ ಮುಖ ಎಂದು ಬಿಂಬಿಸಲು ಪ್ರಾರಂಭಿಸಿದ್ದೇ ಅರುಣ್ ಜೇಟ್ಲಿ ಅವರು. 2012ರಿಂದಲೇ ಮೋದಿ ಅವರನ್ನು ರಾಷ್ಟ್ರ ರಾಜಕಾರಣಕ್ಕೆ ಪರಿಚಯಿಸಲು ಪ್ರಾರಂಭಿಸಿದ ಜೇಟ್ಲಿ, 2014ರಷ್ಟರಲ್ಲಿ ಮೋದಿ ಅವರನ್ನು ದೇಶದ ಆಯ್ಕೆಯ ನಾಯಕನನ್ನಾಗಿ ಬದಲಾಯಿಸುವಲ್ಲಿ ಸಫಲರಾಗಿದ್ದರು.

2013ರಲ್ಲಿ ಎಲ್.ಕೆ.ಅಡ್ವಾಣಿಯೇ ಬಿಜೆಪಿಯ ಆಯ್ಕೆ ಎಂಬುದು ನಿರ್ಧಾರವಾದಾಗ, ಮುನಿಸಿಕೊಂಡಿದ್ದ ಆಗಿನ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು ಸಮಾಧಾನಪಡಿಸಿ ನವದೆಹಲಿಗೆ ಕರೆತರುವಲ್ಲಿ ಜೇಟ್ಲಿ ಯಶಸ್ವಿಯಾಗಿದ್ದರು.

2014ರಲ್ಲಿಕ ಭರ್ಜರಿ ಜಯದೊಂದಿಗೆ ಅಧಿಕಾರಕ್ಕೆರಿದ ಪ್ರಧಾನಿ ಮೋದಿ ನೇತೃತ್ವದ ಎನ್’ಡಿಎ ಸರ್ಕಾರದಲ್ಲಿ ಅರುಣ್ ಜೇಟ್ಲಿ ವಿತ್ತ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಈ ಅವಧಿಯಲ್ಲಿ ಆರ್ಥಿಕ ಕ್ಷೇತ್ರದಲ್ಲಾದ ಕ್ಷಿಪ್ರ ಬದಲಾವಣೆಗಳಿಗೆ ದೇಶ ಒಗ್ಗಿಕೊಳ್ಳುವಂತೆ ನೋಡಿಕೊಂಡ ಜೇಟ್ಲಿ ಅವರ ಕಾರ್ಯವೈಖರಿಯನ್ನು ಮೆಚ್ಚಿದವರಿಲ್ಲ.

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಸರ್ಕಾರದಲ್ಲೇ ಸಚಿವರಾಗಿ ಕಾರ್ಯನಿರ್ವಹಿಸಿದ್ದ ಅರುಣ್ ಜೇಟ್ಲಿ, ರಾಷ್ಟ್ರ ರಾಜಕಾರಣದಲ್ಲಿ ಬದಲಾದ ರಾಜಕೀಯ ಸನ್ನಿವೇಶವನ್ನು ಬಹುಬೇಗ ಅರಿಯುವಲ್ಲಿ ಮುಂಚೂಣಿಯಲ್ಲಿದ್ದರು. ಅಡ್ವಾಣಿ ನೇತೃತ್ವದಲ್ಲಿ ಪಕ್ಷದ ವರ್ಚಸ್ಸು ವೃದ್ಧಿಸತೊಡಗಿದಾಗ, ಜೇಟ್ಲಿ ಪಕ್ಷಕ್ಕೆ ಹೆಚ್ಚಿನ ಸೈದ್ಧಾಂತಿಕ ನೆಲೆಗಟ್ಟು ಒದಗಿಸುವಲ್ಲಿ ನಿರತರಾಗಿದ್ದರು.

2009-14ರ ಅವಧಿಯಲ್ಲಿ ಲೋಕಸಭೆಯ ವಿಪಕ್ಷ ನಾಯಕರಾಗಿದ್ದ ಅರುಣ್ ಜೇಟ್ಲಿ, ರಾಜಕೀಯವಾಗಿ ಹಾಗೂ ಸಂಸದೀಯಪಟುವಾಗಿ ಮತ್ತಷ್ಟು ಅನುಭವಿಯಾದರು. ಭ್ರಷ್ಟಾಚಾರ ಹಾಗೂ ಅಸಂಖ್ಯಾತ ಹಗರಣಗಳಿಂದ ನಲುಗಿದ್ದ ಯುಪಿಎ ಸರ್ಕಾರಕ್ಕೆ ಮೋದಿ-ಶಾ ಜೋಡಿಯಿಂದ ಅಂತಿಮ ಮೊಳೆ ಹೊಡೆಸುವಲ್ಲಿ ಜೇಟ್ಲಿ ಸಫಲರಾಗಿದ್ದರು.

ಈ ವೇಳೆ ಪಕ್ಷದ ಆಂತರಿಕ ವಲಯದಲ್ಲಿ ಎದ್ದ ಭಿನ್ನಮತವನ್ನು ಶಮನಗೊಳಿಸುವಲ್ಲಿಯೂ ಜೇಟ್ಲಿ ಯಶಸ್ವಿಯಾಗಿದ್ದು ಸುಳ್ಳಲ್ಲ. ಕಾರಣ ಗೋಪಿನಾಥ್ ಮುಂಡೆ, ಸುಷ್ಮಾ ಸ್ವರಾಜ್, ಅನಂತ್ ಕುಮಾರ್, ವೆಂಕಯ್ಯ ನಾಯ್ಡು ಅವರಂತಹ ತಮ್ಮ ಪೀಳಿಗೆಯ ನಾಯಕರನ್ನು ಅಡ್ವಾಣಿ ಬದಲಿಗೆ ಮೋದಿ ಅವರನ್ನು ಬೆಂಬಲಿಸುವಂತೆ ಒಪ್ಪಿಸುವಲ್ಲಿ ಜೇಟ್ಲಿ ಮಹತ್ತರವಾದ ಪಾತ್ರ ನಿರ್ವಹಿಸಿದ್ದರು

ಇದೇ ವೇಳೆ 2002ರ ಗುಜರಾತ್ ನರಮೇಧದ ಕಾರ್ಮೋಡದಿಂದ ಮೋದಿ ಅವರನ್ನು ಹೊರ ತರುವಲ್ಲಿ ಜೇಟ್ಲಿ ಹಂತ ಹಂತವಾಗಿ ಯಶಸ್ವಿಯಾದರು. ಇದೆಲ್ಲದರ ಪರಿಣಾಮ 2013ರಲ್ಲಿ ಗೋವಾದಲ್ಲಿ ನಡೆದ ಪಕ್ಷದ ಅಧಿವೇಶನದಲ್ಲಿ ಮೋದಿ ಅವರನ್ನು ಪ್ರಧಾನಮಂತ್ರಿ ಅಭ್ಯರ್ಥಿಯನ್ನಾಗಿ ಬಿಜೆಪಿ ಘೋಷಿಸಿತು.

ಇಷ್ಟೇ ಅಲ್ಲದೇ ಶೊಹ್ರಾಬುದ್ದೀನ್ ಎನ್’ಕೌಟರ್ ಪ್ರಕರಣದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಅಮಿತ್ ಶಾ ಅವರನ್ನೂ ಕಾನೂನಿನ ಕುಣಿಕೆಯಿಂದ ಹೊರತರುವಲ್ಲಿ ಜೇಟ್ಲಿ ಯಶಸ್ವಿಯಾಗಿದ್ದು ಇದೀಗ ಇತಿಹಾಸ. ಇಷ್ಟೇ ಅಲ್ಲ ತಮ್ಮ ಬೆಳಗಿನ ವಾಕಿಂಗ್’ನಲ್ಲಿ ವಕೀಲರೊಂದಿಗೆ ಸರ್ಕಾರಿ ಅಧಿಕಾರಿಗಳೊಂದಿಗೆ ಹರಟುತ್ತಾ ಪಕ್ಷಕ್ಕೆ ಬೆಂಬಲ ಗಿಟ್ಟಿಸಿಕೊಳ್ಳುವಲ್ಲಿ ಜೇಟ್ಲಿ ಸಫಲರಾದರು.

ಪಕ್ಷಕ್ಕೆ ಹೊಸ ಪೀಳಿಗೆಯ ವಕ್ತಾರರನ್ನು ಕೊಟ್ಟ ಹೆಗ್ಗಳಿಕೆ ಕೂಡ ಜೇಟ್ಲಿ ಅವರಿಗೆ ಸಲ್ಲಬೇಕು. ಮಾಧ್ಯಮಗಳಲ್ಲಿ ಪಕ್ಷದ ನೀತಿಗಳನ್ನು ಅತ್ಯಂತ ವಸ್ತುನಿಷ್ಠವಾಗಿ ಇಡಬಲ್ಲ ವಕ್ತಾರರ ಪಡೆಯನ್ನೇ ಜೇಟ್ಲಿ ಸೃಷ್ಟಿಸಿದ್ದರು. ಅಲ್ಲದೇ ನಿರ್ಮಲಾ ಸೀತಾರಾಮನ್, ಪಿಯೂಷ್ ಗೋಯೆಲ್, ಭೂಪೇಂದ್ರ ಯಾದವ್, ಧರ್ಮೇಂದ್ರ ಪ್ರಧಾನ್, ಮೀನಾಕ್ಷಿ ಲೇಖಿ, ಕಿರಣ್ ಖೇರ್ ಅವರಂತ ಹೊಸ ಪೀಳಿಗೆಯ ನಾಯಕರನ್ನೂ ಜೇಟ್ಲಿ ಬೆನ್ನು ತಟ್ಟಿ ಮುನ್ನಡೆಸಿದ್ದರು.

ಮಾಧ್ಯಮ ಜಗತ್ತಿನೊಂದಿಗೂ ಅನೋನ್ಯ ಸಂಬಂಧ ಹೊಂದಿದ್ದ ಅರುಣ್ ಜೇಟ್ಲಿ, ತಮ್ಮ ಬೆಂಗಾಲಿ  ಮಾರ್ಕೆಟ್ ಕಚೇರಿಯಲ್ಲಿ ಪತ್ರಕರ್ತರೊಂದಿಗೆ ಹರಟುತ್ತಾ, ಆಲೂ ಟಿಕ್ಕಿ, ಸಮೋಸಾ ಹಾಗೂ ಚಹಾ ಸವಿಯುವ ರೂಢಿ ಇಟ್ಟುಕೊಂಡಿದ್ದರು. ತಮ್ಮ ಶಕ್ತಿ ಮತ್ತು ದೌರ್ಬಲ್ಯವನ್ನು ಚೆನ್ನಾಗಿಉ ಅರಿತಿದ್ದ ಜೇಟ್ಲಿ, ಮಾಧ್ಯಮದವರ ಮುಂದೆ ಏನನ್ನು ಮಾತನಾಡಬೇಕು ಏನನ್ನು ಅಲ್ಲ ಎಂಬುದನ್ನು ಚೆನ್ನಾಗಿಯೇ ಬಲ್ಲವರಾಗಿದ್ದರು.

ಮೋದಿ 1.0 ಸರ್ಕಾರಕ್ಕೆ ಬೆನ್ನೆಲುಬಾಗಿ ನಿಂತಿದ್ದ ಜೇಟ್ಲಿ, ಪ್ರಧಾನಿ ಮೋದಿ ಅವರಿಗೆ ಸರ್ಕಾರದ ಕಾರ್ಯವೈಖರಿ, ಆಡಳಿತದ ಪಟ್ಟುಗಳು, ಅಧಿಕಾರಿ ವರ್ಗವನ್ನು ಹತೋಟಿಯಲ್ಲಿಡುವ ಪರಿಯ ಕುರಿತು ತರಬೇತಿ ನೀಡಿದ್ದರು ಎಂದರೆ ಅದು ಉತ್ಪ್ರೇಕ್ಷೆ ಅಲ್ಲ.

ಮುಖ್ಯಮಂತ್ರಿಯಾಗಿ ,ಮೋದಿ ಈ ಎಲ್ಲ ಅನುಭವ ಹೊಂದಿದ್ದರೂ, ದೆಹಲಿಯ ಆಡಳಿತವನ್ನು ಹತ್ತಿರದಿಂದ ತಿಳಿಯಲು ಜೇಟ್ಲಿ ಅವರು ಮೋದಿ ಅವರಿಗೆ ಸಹಾಯ ಮಾಡಿದ್ದು ಸತ್ಯ. ಮೋದಿ ಪ್ರಮಾಣವಚನ ಸಮಾರಂಭಕ್ಕೆ ಸಾರ್ಕ್ ರಾಷ್ಟ್ರಗಳ ನಾಯಕರು ಬರುವಂತೆ ನೋಡಿಕೊಂಡಿದ್ದು ಜೇಟ್ಲಿ ಅವರೇ. 

ಇಷ್ಟೇ ಅಲ್ಲ, ಜೇಟ್ಲಿ ಈ ದೇಶ ಕಂಡ ಕೆಲವೇ ಕೆಲವು ಸ್ನೇಹಪರ ರಾಜಕಾರಣಿಗಳಲ್ಲಿ ಒಬ್ಬರು. ಬಿಜೆಪಿಯ ಕಟು ಟೀಕಾಕಾರ ಪಕ್ಷವಾದ ಕಾಂಗ್ರೆಸ್ ಸೇರಿದಂತೆ ಹಲವು ವಿಪಕ್ಷಗಳ ನಾಯಕರೊಂದಿಗೂ ಜೇಟ್ಲಿ ಸ್ನೇಹಪರ ಸಂಬಂಧ ಹೊಂದಿದ್ದರು. ನಿತಿಶ್ ಕುಮಾರ್, ಶರದ್ ಯಾದವ್, ಶರದ್ ಪವಾರ್, ಕಪಿಲ್ ಸಿಬಲ್, ಶಶಿ ತರೂರ್, ಓಮರ್ ಅಬ್ದುಲ್ಲಾ ಸೇರಿದಂತೆ ಹಲವು ವಿಪಕ್ಷ ನಾಯಕರು ಜೇಟ್ಲಿ ಸ್ನೇಹ ಬಳಗದಲ್ಲಿ ಗುರುತಿಸಿಕೊಂಡಿದ್ದರು.

ತಮಿಳುನಾಡಿನ ಮಾಜಿ ಮುಖ್ಯಮಂತ್ರಿ, ದಿವಂಗತ  ಜೆ. ಜಯಲಿಲಿತಯಾ ಅವರಿಗೆ ಕಾನೂನು ಸಲಹೆ ನೀಡುವ ಮೂಲಕ ಅವರನ್ನು ರಕ್ಷಿಸಿದ್ದ ಜೇಟ್ಲಿ ಚೆನ್ನೈಗೆ ಭೇಟಿ ನೀಡಿದಾಗಲೆಲ್ಲಾ ಜಯಲಲಿತಾ ತುಂಬ ಆತ್ಮೀಯವಾಗಿ ಅವರನ್ನು ಸ್ವಾಗತಿಸುತ್ತಿದ್ದರು.

ಬಿಸಿಸಿಐ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಇದೇ ಕಾರಣಕ್ಕೆ ಕ್ರಿಕೆಟ್ ವಲುಯದಲ್ಲೂ ಜೇಟ್ಲಿ ತಮ್ಮ ಪ್ರಭಾವವನ್ನು ಹೊಂದಿದ್ದರು. ಅಲ್ಲದೇ ಕ್ರಿಕೆಟ್’ನಲ್ಲಿ ಬೆಟ್ಟಿಂಗ್ ವಿವಾದ ಕಾಣಿಸಿಕೊಂಡಾಗ ಬಹಳ ಜಾಣತನದಿಂದ ಅದರಿಂದ ಜ್ಲೇಿ ದೂರವಾದರು.

 ಮೋದಿ ನಾಯಕತ್ವವನ್ನು ಮನಸಾರೆ ಒಪ್ಪಿಕೊಂಡಿದ್ದ ಜೇಟ್ಲಿ, ಜಾರಿ ನಿರ್ದೇಶನಾಲಯವನ್ನು ಪ್ರಧಾನಿ ಕಚೇರಿ ನಿಯಂತ್ರಣಕ್ಕೆ ತಂದಾಗ ಬೇಸರಪಟ್ಟುಕೊಳ್ಳಲಿಲ್ಲ. ನೋಟು ಅಮಾನ್ಯೀಕರಣದ ಮೋದಿ ನಿರ್ಧಾರವನ್ನು ಗಟ್ಟಿಯಾಗಿ ಬೆಂಬಲಿಸಿದ್ದ ಜೇಟ್ಲಿ, ಆ ವೇಳೆ ದೇಶ ಎದುರಿಸಿದ್ದ ಸಮಸ್ಯೆಯನ್ನು ಅತ್ಯಂತ ಚಾಕಚಕ್ಯತೆಯಿಂದ ನಿಭಾಯಿಸಿದ್ದರು.

6 ಬಾರಿ ಹಣಕಾಸು ಸಚಿವರಾಗಿ ಅಧಿಕಾರ ಅನುಭವಿಸಿದ್ದ ಜೇಟ್ಲಿ, ವಿವಿಧ ಇಲಾಖೆಗಳ ಜವಾಬ್ದಾರಿ ಹೊತ್ತಿದ್ದ ಜೇಟ್ಲಿ ಮೋದಿ ಅವರ ನಾಯಕತ್ವಕ್ಕೆ ಬೆಂಬಲ ಮತ್ತು ಅಧೀನರಾಗಿದ್ದು ಅವರ ಪಕ್ಷ ನಿಷ್ಠೆಗೆ ಸಾಕ್ಷಿ. 

ಜೇಟ್ಲಿ ಅವರ ಪ್ರಮುಖ ಸಾಧನೆಗಳ ಪೈಕಿ ಒನ್ ರ್ಯಾಂಕ್ ಒನ್ ಪೆನ್ಶನ್(OROP) ಹಾರಿ ಹಾಗೂ ದೇಶದ ತೆರಿಗೆ ವ್ಯವಸ್ಥೆಯನ್ನೇ ಅಮೂಲಾಗ್ರವಾಗಿ ಬದಲಾಯಿಸಿದ GST ಜಾರಿ ಅತ್ಯಂತ ಪ್ರಮುಖವಾದವು.

2017ರಿಂದ ಜೇಟ್ಲಿ ಆರೋಗ್ಯದಲ್ಲಿ ಏರುಪೇರು ಕಾಣಿಸಲು ಪ್ರಾರಂಭಿಸಿತು. ತಮ್ಮ ಕೊನೆಯ ಬಜೆಟ್’ನ್ನು ಅವರು ಕುಲತುಕೊಂಡೇ ಮಂಡಿಸಿದಾಗ ಅವರು ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂಬುದು ಸ್ಪಷ್ಟವಾಗೊ ಹೋಗಿತ್ತು. 2014ರಲ್ಲೇ ಅತೀ ತೂಕದ ಕಾರಣಕ್ಕೆ ಬಾರಿಯಾಟ್ರಿಕ್ ಶಸ್ತ್ರಚಿಕಿತ್ಸೆಗೆ ಜೇಟ್ಲಿ ಒಳಗಾಗಿದ್ದರು.

ಮುಂದೆ ಬೈಪಸ್ ಸರ್ಜರಿ, ಕಿಡ್ನಿ ಕಸಿಯ ಶಸ್ತ್ರಚಿಕಿತ್ಸೆ, ಹಾಗೂ ಕೊನೆಗೆ ಕ್ಯಾನ್ಸರ್ ಅವರನ್ನು ಬಲಿ ಪಡೆಯಿತು. ಇದೇ ಕಾರಣಕ್ಕೆ 2019ರ ಮೋದಿ 2.0 ಸರ್ಕಾರದಲ್ಲಿ ಯಾವುದೇ ಹುದ್ದೆ ಬೇಡ ಎಂದು ನೇರವಾಗಿ ಪ್ರಧಾನಿ ಮೋದಿ ಅವರಿಗೆ ಜೇಟ್ಲಿ ಪತ್ರ ಬರೆದರು.

ಅಲ್ಲದೇ ತಮ್ಮ ಸರ್ಕಾರಿ ಬಂಗಲೆಯನ್ನು ತೆರವುಗೊಳಿಸಿ ಎಲ್ಲರಿಗೂ ಮಾದರಿಯಾಗಿದ್ದರು ಜೇಟ್ಲಿ. ಕೊನೆಗೆ ಇಂದು(ಆ.24) ತಮ್ಮ ಉಸಿರು ನಿಲ್ಲಿಸಿರುವ ಜೇಟ್ಲಿ, ತಮ್ಮ ಮಾದರಿ ಬದುಕಿಗೆ ಅಧಿಕೃತವಾಗಿ ಅಂತ್ಯ ಹಾಡಿದ್ದಾರೆ.

ಅನಾರೋಗ್ಯದ ಕಾರಣಕ್ಕೆ ಸಕ್ರೀಯ ರಾಜಕಾರಣದಿಂದ ದೂರ ಸರಿದಿದ್ದ ಅರುಣ್ ಜೇಟ್ಲಿ, ತೀರ ಇತ್ತೀಚಿಗೆ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ್ದ ಕೇಂದ್ರ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿದ್ದು ಗಮನಾರ್ಹವಾಗಿತ್ತು.

ಬಿಜೆಪಿ ಮತ್ತು RSS ಮೂಲ ಸಿದ್ಧಾಂತವಾದ ಹಿಂದುತ್ವದಿಂದ ಜೇಟ್ಲಿ ತುಸು ಅಂತರವನ್ನು ಕಾಯ್ದುಕೊಂಡಿದ್ದರು. ಪಕ್ಷದಲ್ಲಿ ಉದಾರವಾದಿ ಮನೋಭಾವದ ನಾಯಕರೆಂದೇ ಗುರುತಿಸಿಕೊಂಡಿದ್ದ ಜೇಟ್ಲಿ, ಇದೇ ಕಾರಣಕ್ಕೆ ನಾಗ್ಪುರ ಕೇಂದ್ರ ಕಚೇರಿಯ ಜೊತೆ ಅಷ್ಟೇನು ಭಾವನಾತ್ಮಕ ನಂಟು ಹೊಂದಿರಲಿಲ್ಲ.

ಅದೆನೆ ಇರಲಿ, ತಮ್ಮ ಬುದ್ದಿಮತ್ತೆಯಿಂದಲೇ ಮೇಲೆದ್ದು ಬಂದ ಅರುಣ್ ಜೇಟ್ಲಿ, ದೇಶದ ಅರ್ಥ ವ್ಯವಸ್ಥೆಯ ಮಹಾಪಲ್ಲಟನೆಗೆ ಕಾರಣೀಭೂತರಾದರು. ಸಜ್ಜನ ರಾಜಕಾರಣಿಯಾಗಿ ಪಕ್ಷ, ವಿಪಕ್ಷ ನಾಯಕರಿಂದಲೂ ಬೇಷ್ ಎನಿಸಿಕೊಂಡರು.

ಬಿಜೆಪಿಯ ಥಿಂಕ್ ಟ್ಯಾಂಕ್ ನಾಯಕರಾಗಿ ಮೂಡಿ ಬಂದ ಅವರ ಪರಿ ನಿಜಕ್ಕೂ ಅನನ್ಯ. ಅವರ ಅಕಾಲಿಕ ಸಾವಿನಿಂದಾಗಿ ರಾಷ್ಟ್ರ ರಾಜಕಾರಣದಲ್ಲಿ ಬಹುದೊಡ್ಡ ನಿರ್ವಾತ ಸೃಷ್ಟಿಯಾಗಿರುವುದು ಸತ್ಯ. ಜೇಟ್ಲಿ ಓರ್ವ ವಿರಳ, ಸಜ್ಜನ, ಸೌಮ್ಯ, ಚಾಣಕ್ಯ ರಾಜಕಾರಣಿ ಎಂಬುದನ್ನು ಈ ದೇಶದ ರಾಜಕಾರಣ ಸದಾ ನೆನಪಿನಲ್ಲಿಡುತ್ತದೆ.

Follow Us:
Download App:
  • android
  • ios