ಟ್ರಬಲ್ ಶೂಟರ್‌ನ್ನು ಕಳೆದುಕೊಂಡ ಮೋದಿ ಸರ್ಕಾರ!
ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ಟ್ರಬಲ್ ಶೂಟರ್ ಎಂದೇ ಗುರುತಿಸಿಕೊಂಡಿದ್ದ ಹಿರಿಯ ರಾಜಕಾರಣಿ, ಮಾಜಿ ಹಣಕಾಸು ಸಚಿವ ಅರುಣ್ ಜೇಟ್ಲಿ ಅನಾರೋಗ್ಯದಿಂದ ಬದುಕಿನ ಪಯಣ ಅಂತ್ಯಗೊಳಿಸಿದ್ದಾರೆ. ಜೇಟ್ಲಿ ನಿಧನ ಇದೀಗ ಬಿಜೆಪಿ ಪಾಳಯಕ್ಕೆ ಆಘಾತ ನೀಡಿದೆ. ಸಮಸ್ಯೆಗೆ ಪರಿಹಾರ, ಹಾಗೂ ದೂರದೃಷ್ಟಿ ಆಲೋಚನೆ ಹೊಂದಿದ್ದ ಜೇಟ್ಲಿ, ಮೋದಿ ಸರ್ಕಾರದ ಬೆನ್ನೆಲುಬಾಗಿದ್ದರು. ಇದೀಗ ಸುಷ್ಮಾ ಸ್ವರಾಜ್ ಬೆನ್ನಲ್ಲೇ ಬೇಟ್ಲಿ ನಿಧನ ವಾರ್ತೆ ಬಿಜೆಪಿಯನ್ನು ಶೋಕಸಾಗರದಲ್ಲಿ ಮುಳುಗಿಸಿದೆ.
ನವದೆಹಲಿ(ಆ.24): ಕೇಂದ್ರ ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ನಿಧನದ ಆಘಾತದಿಂದ ಹೊರಬರುವ ಮುನ್ನವೇ ಇದೀಗ ಮತ್ತೊಬ್ಬ ಹಿರಿಯ ರಾಜಕಾರಣಿ, ಬಿಜೆಪಿಯ ಟ್ರಬಲ್ ಶೂಟರ್ ಎಂದೇ ಗುರುತಿಸಿಕೊಂಡಿದ್ದ ಮಾಜಿ ಹಣಕಾಸು ಸಚಿವ ಅರುಣ್ ಜೇಟ್ಲಿ ನಿಧನರಾಗಿದ್ದಾರೆ. ಉಸಿರಾಟದ ಸಮಸ್ಯೆಯಿಂದ ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದ ಜೇಟ್ಲಿ ಕೊನೆಯುಸಿರೆಳೆದಿದ್ದಾರೆ.
ಇದನ್ನೂ ಓದಿ: ವಿತ್ತ ವಿದ್ಯಾ ಪಾರಂಗತ: ಬಿಜೆಪಿಯ 'ಅರುಣ' ಅಸ್ತಂಗತ!
ವೃತ್ತಿಯಲ್ಲಿ ವಕೀಲರಾಗಿದ್ದ ಅರುಣ್ ಜೇಟ್ಲಿ, ಮೋದಿ ಸರ್ಕಾರದ ಪ್ರಮುಖ ಹಾಗೂ ಹಿರಿಯ ರಾಜಕಾರಣಿ. ಮೊದಲ ಅವಧಿಯ ಮೋದಿ ಸರ್ಕಾರದಲ್ಲಿ ಜೇಟ್ಲಿ, ಹಣಕಾಸು ಸಚಿವನಾಗಿ ಕಾರ್ಯನಿರ್ವಹಿಸಿದ್ದರು. ಇದರ ಜೊತೆಗೆ ಕಾರ್ಪೋರೇಟ್ ಅಫೈರ್ಸ್, ರಕ್ಷಣಾ ಸಚಿವಾಲಯದ ಜವಾಬ್ದಾರಿ, ಮಾಹಿತಿ ಮತ್ತು ತಂತ್ರಜ್ಞಾನ ವಿಭಾಗವನ್ನೂ ನಿಭಾಯಿಸಿದ ಹೆಗ್ಗಳಿಕೆಗೆ ಜೇಟ್ಲಿಗಿದೆ. ಬಿಜೆಪಿ ಸರ್ಕಾರದಲ್ಲಿ ಯಾವುದೇ ಸಮಸ್ಯೆಗಳಿಗೆ ಪರಿಹಾರ ಹುಡುಕುವ ಟ್ರಬಲ್ ಶೂಟರ್ ಆಗಿ ಮೆಚ್ಚುಗೆ ಗಳಿಸಿದ್ದರು.
ಇದನ್ನೂ ಓದಿ: ಸುಷ್ಮಾ ಬದುಕಿಸಲು ವೈದ್ಯರಿಂದ 70 ನಿಮಿಷಗಳ ಹರಸಾಹಸ!
ಕೇಂದ್ರ ಸರ್ಕಾರದ ಡಿಮೋನಿಟೈಸೇಶನ್ ಸೇರಿದಂತೆ ಹಲವು ಮಹತ್ವದ ನಿರ್ಧಾರಗಳು ಜೇಟ್ಲಿ ಹಣಕಾಸು ಸಚಿವರಾಗಿದ್ದಾಗಲೇ ನಡೆದಿತ್ತು. ಭಾರತೀಯ ಆರ್ಥಿಕತೆಯಲ್ಲಿನ ಬದಲಾವಣೆ, ಡಿಜಿಲೀಟಕರಣ ಸೇರಿದಂತೆ ಸರ್ಕಾರದ ಹಲವು ಬದಲಾವಣೆಯ ಘಟ್ಟಗಳಲ್ಲಿ ಜೇಟ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ.
ಇದನ್ನೂ ಓದಿ:ಸುಷ್ಮಾ ಗೌರವಾರ್ಥ ದೇಗುಲದಲ್ಲಿ ಸಾವಿರ ದೀಪ ಬೆಳಗಿಸಿದ ಭೂತಾನ್ ದೊರೆ!
ಮೋದಿ ಸರ್ಕಾರಕ್ಕಿಂತ ಮೊದಲು 1999ರಿಂದ 2004ರವರೆಗಿನ ಅಟಲ್ ಬಿಹಾರಿ ವಾಜಪೇಯಿ ಸರ್ಕಾರದಲ್ಲಿ ಅರುಣ್ ಜೇಟ್ಲಿ , ಮಾಹಿತಿ ಮತ್ತು ತಂತ್ರಜ್ಞಾನ ಹಾಗೂ ಕಾನೂನು ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದಾರೆ. 1974ರಲ್ಲಿ ಪ್ರಧಾನಿ ಇಂದಿರಾ ಗಾಂಧಿ ಹೇರಿದ ತುರ್ತು ಪರಿಸ್ಥಿತಿ ವೇಳೆ, ದೆಹಲಿ ಸೈಂಟ್ ಕ್ಸೇವಿಯರ್ ಸ್ಕೂಲ್‌ನಲ್ಲಿ ಎಬಿವಿಪಿ ಲೀಡರ್ ಆಗಿದ್ದ ಜೇಟ್ಲಿ ಜೈಲುವಾಸ ಅನುಭವಿಸಿದ್ದರು. ಬರೋಬ್ಬರಿ 19 ತಿಂಗಳುಗಳ ಕಾಲ ಜೇಟ್ಲಿ ಜೈಲು ಶಿಕ್ಷೆ ಅನುಭವಿಸಿದ್ದರು.
1974ರ ತುರ್ತು ಪರಿಸ್ಥಿತಿಯಿಂದಲೇ ಅರುಣ್ ಜೇಟ್ಲಿ ರಾಜಕೀಯ ಅಧ್ಯಾಯ ಆರಂಭಗೊಂಡಿತ್ತು. ನರೇಂದ್ರ ಮೋದಿ ನೇತೃತ್ವದ ಮೊದಲ ಬಾರಿಯ ಸರ್ಕಾರದಲ್ಲಿ ಸಕ್ರಿಯರಾಗಿದ್ದ ಜೇಟ್ಲಿ, 2019ರಲ್ಲಿನ 2ನೇ ಬಾರಿ ನರೇಂದ್ರ ಮೋದಿ ಸರ್ಕಾರದಿಂದ ದೂರ ಉಳಿದಿದ್ದರು. ಅನಾರೋಗ್ಯದ ಕಾರಣದಿಂದ ಜೇಟ್ಲಿ ತನಗೆ ಯಾವುದೇ ಜವಾಬ್ದಾರಿ ವಹಿಸಿದಂತೆ ಮನವಿ ಮಾಡಿದ್ದರು. ಇದೀಗ ಜೇಟ್ಲಿ ಬದುಕಿನ ಪಯಣ ಅಂತ್ಯಗೊಂಡಿದ್ದು, ಬಿಜೆಪಿಗೆ ತೀವ್ರ ಆಘಾತವಾಗಿದೆ.