ದೆಹಲಿ(ಆ.24): ಮಾಜಿ ಹಣಕಾಸು ಸಚಿವ, ಬಿಜೆಪಿ ಟ್ರಬಲ್ ಶೂಟರ್ ಅರುಣ್ ಜೇಟ್ಲಿ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಜೇಟ್ಲಿ ಮಾರ್ಗದರ್ಶನದಲ್ಲಿ ಹಲವು ಯುವ ರಾಜಕಾರಣಿಗಳು ಬೆಳೆದಿದಿದ್ದಾರೆ. ಜೇಟ್ಲಿ ಕಾರ್ಯವ್ಯಾಪ್ತಿ ಕೇವಲ ರಾಜಕೀಯಕ್ಕೆ ಮಾತ್ರ ಸಿಮೀತವಾಗಿರಲಿಲ್ಲ. ದೆಹಲಿ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರಾಗಿಯೂ ಅರುಣ್ ಜೇಟ್ಲಿ ಜವಾಬ್ದಾರಿ ನಿರ್ವಹಿಸಿದ್ದಾರೆ. ಜೇಟ್ಲಿ ಅವಧಿಯಲ್ಲಿ ಹಲವು ಯುವ ಕ್ರಿಕೆಟಿಗರು ಟೀಂ ಇಂಡಿಯಾದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಈ ಪೈಕಿ ಟೀಂ ಇಂಡಿಯಾದ ಸ್ಪೋಟಕ ಬ್ಯಾಟ್ಸ‌ಮನ್ ವಿರೇಂದ್ರ ಸೆಹ್ವಾಗ್ ಕೂಡ ಒಬ್ಬರು.

ಇದನ್ನೂ ಓದಿ: ಇದು ವಿಧಿಯಾಟ: 66ಕ್ಕೆ ಜೀವನ ಪಯಣ ಮುಗಿಸಿದ ಜೇಟ್ಲಿ ಕಾರಿನ ನಂ ಕೂಡ 6666!

ಅರುಣ್ ಜೇಟ್ಲಿ ನಿಧನಕ್ಕೆ ಸಂತಾಪ ಸೂಚಿಸಿ ಟ್ವೀಟ್ ಮಾಡಿದ ವಿರೇಂದ್ರ ಸೆಹ್ವಾಗ್, ಈ ವಿಚಾರವನ್ನು ಬಹಿರಂಗ ಪಡಿಸಿದ್ದಾರೆ. ನಾನು ಸೇರಿದಂತೆ ಹಲವು ಕ್ರಿಕೆಟಿಗರು ಭಾರತ ತಂಡ ಪ್ರತಿನಿಧಿಸಲು ಜೇಟ್ಲಿ ಕಾರಣ ಎಂದು ಸೆಹ್ವಾಗ್ ಹೇಳಿದ್ದಾರೆ.

 

ಅರುಣ್ ಜೇಟ್ಲಿ ನಿಧನ ಸುದ್ದಿಯಿಂದ ತುಂಬಾ ನೋವಾಗಿದೆ. ಸಾರ್ವಜನಿಕ ಜೀವನದಲ್ಲಿ ಮಾತ್ರವಲ್ಲ, ಕ್ರಿಕೆಟ್ ಕ್ಷೇತ್ರದಲ್ಲೂ ಜೇಟ್ಲಿ ಜಂಟ್ಲಮೆನ್‌ ಆಗಿದ್ದಾರೆ. ಒಂದು ಕಾಲದಲ್ಲಿ ದೆಹಲಿ ಕ್ರಿಕೆಟಿಗರಿಗೆ ಟೀಂ ಇಂಡಿಯಾದಲ್ಲಿ ಹೆಚ್ಚಿನ ಅವಕಾಶ ಸಿಗುತ್ತಿರಲಿಲ್ಲ. ಆದರೆ ಅರುಣ್ ಜೇಟ್ಲಿ ಅಧ್ಯಕ್ಷರಾದ ಬಳಿಕ ದೆಹಲಿ ಕ್ರಿಕಟ್ ಸಂಸ್ಥೆಯ ದಿಕ್ಕು ಬದಲಾಯಿತು. ಜೇಟ್ಲಿ ನಾಯಕತ್ವದಲ್ಲಿ ನಾನು ಸೇರಿದಂತೆ ಹಲವು ಕ್ರಿಕೆಟಿಗರು ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದರು. ಪ್ರತಿ ಆಟಗಾರರ ಸಮಸ್ಯೆ ಆಲಿಸಿ ಪರಿಹರಿಸಿದ್ದಾರೆ. ಜೇಟ್ಲಿ ಜೊತೆಗೆ ಉತ್ತಮ ಬಾಂಧವ್ಯ ಹೊಂದಿದ್ದೆ. ದುಖವನ್ನು ಭರಿಸುವ ಶಕ್ತಿ ಜೇಟ್ಲಿ ಕುಟುಂಬಕ್ಕೆ ನೀಡಲಿ ಎಂದು ಸೆಹ್ವಾಗ್ ಟ್ವೀಟ್ ಮೂಲಕ ಪ್ರಾರ್ಥಿಸಿದ್ದಾರೆ.

ಟೀಂ ಇಂಡಿಯಾ ವಿರಾಟ್ ಕೊಹ್ಲಿ ಕೂಡ ಜೇಟ್ಲಿ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಇದರ ಜೊತೆಗೆ ಕೊಹ್ಲಿ ತಂದೆ ಸಾವನ್ನಪ್ಪಿದಾಗ ಜೇಟ್ಲಿ ಆಗಮಿಸಿ ಸಾಂತ್ವನ ಹೇಳಿದ್ದರು ಎಂದು ಕೊಹ್ಲಿ ಜೇಟ್ಲಿಯನ್ನು ನೆನಪಿಸಿಕೊಂಡಿದ್ದಾರೆ.