ಎನ್‌ಪಿಸಿಐನ ಹೊಸ ನಿಯಮದಂತೆ, ಯುಪಿಐ ಪಾವತಿ ಸಾಮಾನ್ಯ ಗ್ರಾಹಕರಿಗೆ ಸಂಪೂರ್ಣ ಉಚಿತವಾಗಿದೆ. ₹2,000 ಕ್ಕಿಂತ ಹೆಚ್ಚಿನ ವಹಿವಾಟು ನಡೆಸುವ ದೊಡ್ಡ ವ್ಯಾಪಾರಿಗಳಿಗೆ ಮಾತ್ರ ಎಂಡಿಆರ್ ಶುಲ್ಕ ಅನ್ವಯವಾಗಲಿದ್ದು, ಸಣ್ಣ ವ್ಯಾಪಾರಿಗಳು ಮತ್ತು ಗ್ರಾಹಕರ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.
ದೇಶಾದ್ಯಂತ ಕೋಟ್ಯಂತರ ಜನ ದಿನನಿತ್ಯ ಬಳಸುವ ಯುಪಿಐ (UPI) ಪಾವತಿ ವ್ಯವಸ್ಥೆಯ ನಿಯಮಗಳಲ್ಲಿ ಎನ್‌ಪಿಸಿಐ (NPCI) ದೊಡ್ಡ ಬದಲಾವಣೆಯನ್ನು ಘೋಷಿಸಿದೆ. 2026ರ ಅಕ್ಟೋಬರ್ 15ರಿಂದ ಜಾರಿಗೆ ಬರಲಿರುವ ನೂತನ ‘ಎಂಡಿಆರ್’ (MDR - Merchant Discount Rate) ಫ್ರೇಮ್‌ವರ್ಕ್ ಸಾರ್ವಜನಿಕರಲ್ಲಿ ದೊಡ್ಡ ಗೊಂದಲವನ್ನು ಸೃಷ್ಟಿಸಿದೆ. "ಇನ್ಮುಂದೆ ಗೂಗಲ್ ಪೇ, ಫೋನ್ ಪೇ ಬಳಸಿದರೆ ನಮಗೂ ಚಾರ್ಜ್ ಬೀಳುತ್ತಾ?", "ಅಂಗಡಿಯವರು ಹೆಚ್ಚುವರಿ ಹಣ ಕೇಳ್ತಾರಾ?" ಎಂಬ ಪ್ರಶ್ನೆಗಳು ಪ್ರತಿಯೊಬ್ಬರ ಮನಸ್ಸಿನಲ್ಲಿ ಮೂಡಿವೆ. ಈ ಎಲ್ಲಾ ಗೊಂದಲಗಳಿಗೆ ಲಭ್ಯವಿರುವ ಸ್ಪಷ್ಟ ಹಾಗೂ ಅಧಿಕೃತ ವಿವರ ಇಲ್ಲಿದೆ.
ಗ್ರಾಹಕರಿಗೆ ಯುಪಿಐ ಸಂಪೂರ್ಣ ಉಚಿತ!
ಮೊದಲನೆಯದಾಗಿ, ಸಾಮಾನ್ಯ ಗ್ರಾಹಕರು ಯಾವುದೇ ಕಾರಣಕ್ಕೂ ಆತಂಕ ಪಡಬೇಕಾಗಿಲ್ಲ. ನೀವು ಅಂಗಡಿಯಲ್ಲಿ QR ಕೋಡ್ ಸ್ಕ್ಯಾನ್ ಮಾಡಿ ಪಾವತಿಸಲಿ ಅಥವಾ ನಿಮ್ಮ ಸ್ನೇಹಿತರಿಗೆ ಹಣ ಕಳುಹಿಸಲಿ, ಗ್ರಾಹಕರಿಗೆ ಯುಪಿಐ ಸೇವೆ ಮೊದಲಿನಂತೆಯೇ ಸಂಪೂರ್ಣ ಉಚಿತವಾಗಿದೆ. ಯಾವುದೇ ಬ್ಯಾಂಕ್ ಅಥವಾ ಆಪ್ ನಿಮ್ಮಿಂದ ಎಂಡಿಆರ್ ಹೆಸರಿನಲ್ಲಿ ಹೆಚ್ಚುವರಿ ಶುಲ್ಕ ವಸೂಲಿ ಮಾಡುವಂತಿಲ್ಲ.
₹2,000 ವರೆಗಿನ ವಹಿವಾಟಿಗೆ ಶೂನ್ಯ ಶುಲ್ಕ!
ನೀವು ಪ್ರತಿದಿನ ಮಾಡುವ ಶೇಕಡಾ 95 ರಷ್ಟು ವಹಿವಾಟುಗಳು ₹2,000 ಕ್ಕಿಂತ ಕಡಿಮೆ ಮೊತ್ತದ್ದಾಗಿರುತ್ತವೆ. ಹೀಗಾಗಿ, ₹2,000 ವರೆಗಿನ ಯಾವುದೇ P2P (ವ್ಯಕ್ತಿಯಿಂದ ವ್ಯಕ್ತಿಗೆ) ಹಾಗೂ P2M (ವ್ಯಕ್ತಿಯಿಂದ ಅಂಗಡಿಯವನಿಗೆ) ಪಾವತಿಗಳಿಗೆ ಸಂಪೂರ್ಣ ವಿನಾಯಿತಿ ನೀಡಲಾಗಿದೆ. ಸಣ್ಣಪುಟ್ಟ ಮನೆಬಳಕೆ ಸಾಮಗ್ರಿ, ತರಕಾರಿ, ಚಹಾ-ಬಿಸ್ಕತ್ತು ಖರೀದಿಸುವಾಗ ಯಾವುದೇ ಚಾರ್ಜ್ ಇರುವುದಿಲ್ಲ.
ಸಣ್ಣ ವ್ಯಾಪಾರಿಗಳು, ತರಕಾರಿ ಮಾರಾಟಗಾರರಿಗೆ ಜೀರೋ ಎಂಡಿಆರ್!
ರಸ್ತೆ ಬದಿ ವ್ಯಾಪಾರಿಗಳು, ತರಕಾರಿ ಮಾರುವವರು ಹಾಗೂ ಸಣ್ಣ ಅಂಗಡಿಯವರ ಹಿತಕಾಪಾಡಲು P2PM (Person-to-Person Merchant) ನಿಯಮವನ್ನು ಮುಂದುವರಿಸಲಾಗಿದೆ. ಅಂದರೆ, ಯುಪಿಐ ಕ್ಯೂಆರ್ ಕೋಡ್ ಮೂಲಕ ತಿಂಗಳಿಗೆ ₹1 ಲಕ್ಷದವರೆಗೆ ನೇರವಾಗಿ ಬ್ಯಾಂಕ್ ಖಾತೆಗೆ ಹಣ ಪಡೆಯುವ ಸಣ್ಣ ವರ್ತಕರಿಗೆ ಯಾವುದೇ ಎಂಡಿಆರ್ ಇರುವುದಿಲ್ಲ. ಅಂದರೆ, ಸಣ್ಣ ವ್ಯಾಪಾರಿಗಳ ಜೇಬಿಗೂ ಯಾವುದೇ ಕನ್ನ ಬೀಳುವುದಿಲ್ಲ.
ಯಾರಿಗೆ ಈ ಶುಲ್ಕದ ಹೊರೆ?
ಹಾಗಿದ್ದರೆ ಎಂಡಿಆರ್ ಶುಲ್ಕ ಬೀಳುವುದು ಯಾರಿಗೆ? ₹2,000 ಕ್ಕಿಂತ ಹೆಚ್ಚಿನ ಮೊತ್ತದ ವ್ಯಾಪಾರ (MDR) ನಡೆಸುವ ದೊಡ್ಡ ವರ್ತಕರಿಗೆ ಮಾತ್ರ ಇದು ಅನ್ವಯಿಸುತ್ತದೆ.
1. ವಿಶೇಷ ವಲಯಗಳು; ರೈಲ್ವೇ, ಟೆಲಿಕಾಂ, ಇನ್ಶೂರೆನ್ಸ್ ಮತ್ತು ಪೆಟ್ರೋಲ್ ಬಂಕ್‌ಗಳಲ್ಲಿ ₹2,000 ಕ್ಕಿಂತ ಹೆಚ್ಚಿನ ಯುಪಿಐ ಪಾವತಿಗೆ ಪ್ರತಿಯೊಂದು ವಹಿವಾಟಿಗೆ ₹5 ಫ್ಲಾಟ್ ಎಂಡಿಆರ್ ಅನ್ವಯವಾಗುತ್ತದೆ.
2. ಇತರ ದೊಡ್ಡ ಮರ್ಚೆಂಟ್‌ಗಳು; ಇನ್ನುಳಿದ ದೊಡ್ಡ ವ್ಯಾಪಾರಿಗಳಿಗೆ ₹2,000 ಕ್ಕಿಂತ ಹೆಚ್ಚಿನ ಪಾವತಿಯ ಮೇಲೆ 0.4% ಎಂಡಿಆರ್ ಇರುತ್ತದೆ (ಗರಿಷ್ಠ ಮಿತಿ ₹300).
3. ₹75,000 ಕ್ಕಿಂತ ಹೆಚ್ಚಿನ ಪಾವತಿ; ₹75,000 ಕ್ಕಿಂತ ದೊಡ್ಡ ಮೊತ್ತದ ವಹಿವಾಟುಗಳಿಗೂ ಗರಿಷ್ಠ ಎಂಡಿಆರ್ ₹300 ಕ್ಕೆ ಸೀಮಿತಗೊಳಿಸಲಾಗಿದೆ.
ಸಣ್ಣ ನಗರಗಳಿಗೆ 'ಸ್ಪೆಷಲ್ ಫಂಡ್'!
ಸಣ್ಣ ವ್ಯಾಪಾರಿಗಳು ಮತ್ತು Tier-3 ನಗರಗಳಲ್ಲಿ ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಬಲಪಡಿಸಲು ಎನ್‌ಪಿಸಿಐ ಪ್ರತ್ಯೇಕ 'ಡೆಡಿಕೇಟೆಡ್ ಫಂಡ್' (Dedicated Fund) ಸ್ಥಾಪಿಸುತ್ತಿದೆ. ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳಿಗೆ ಹೋಲಿಸಿದರೆ ಯುಪಿಐ ಎಂಡಿಆರ್ ದರಗಳು ಇಂದಿಗೂ ಅತ್ಯಂತ ಕಡಿಮೆಯಾಗಿವೆ.
ಯಾರಿಗೆ ಅನ್ವಯ್?
ದೊಡ್ಡ ವಹಿವಾಟುಗಳಿಂದ ಸಂಗ್ರಹವಾಗುವ ಈ ಎಂಡಿಆರ್ ಹಣವನ್ನು ಯುಪಿಐ ತಂತ್ರಜ್ಞಾನದ ಭದ್ರತೆ, ಸೈಬರ್ ಸೆಕ್ಯೂರಿಟಿ ಮತ್ತು ನೆಟ್‌ವರ್ಕ್ ಸುಧಾರಣೆಗೆ ಬಳಸಲಾಗುತ್ತದೆ. ಒಟ್ಟಿನಲ್ಲಿ, ಸಾಮಾನ್ಯ ಗ್ರಾಹಕರು ಹಾಗೂ ಸಣ್ಣ ಅಂಗಡಿಯವರಿಗೆ ಯುಪಿಐ 'ಫ್ರೀ' ಆಗಿದ್ದರೆ, ದೊಡ್ಡ ಸಂಸ್ಥೆಗಳಿಗೆ 'ಶುಲ್ಕ'ದ ನಿಯಮ ಅನ್ವಯವಾಗಲಿದೆ!


