ಭಾರತದಲ್ಲಿ ಐಫೋನ್ 18 ಪ್ರೊ ಮತ್ತು ಪ್ರೊ ಮ್ಯಾಕ್ಸ್ ಬಿಡುಗಡೆಯಾಗಿದ್ದು, ಬೆಂಗಳೂರು ಸೇರಿದಂತೆ ದೇಶಾದ್ಯಂತ ಆಪಲ್ ಸ್ಟೋರ್‌ಗಳ ಮುಂದೆ ಗ್ರಾಹಕರು ಮುಗಿಬಿದ್ದಿದ್ದಾರೆ. ನಟ ವಿಕ್ಕಿ ಕೌಶಲ್ ಕೂಡ ಮುಂಬೈನಲ್ಲಿ ಹೊಸ ಫೋನ್ ಖರೀದಿಸಿದ್ದಾರೆ. ಈ ಫೋನ್‌ಗಳು ಸುಧಾರಿತ 'A20 ಪ್ರೊ' ಚಿಪ್ ಮತ್ತು 48MP ಕ್ಯಾಮೆರಾದಂತಹ ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಹೊಂದಿವೆ.

ಬೆಂಗಳೂರು: ಪ್ರತಿ ವರ್ಷ ಹೊಸ ಐಫೋನ್ ಮಾರುಕಟ್ಟೆಗೆ ಬಂದಾಗ ಆಪಲ್ ಶೋರೂಮ್‌ಗಳ ಮುಂದೆ ಕಂಡುಬರುವ ಹಬ್ಬದ ವಾತಾವರಣ ಈ ಬಾರಿಯೂ ಮರುಕಳಿಸಿದೆ. ಆಪಲ್ ಸಂಸ್ಥೆಯ ಬಹುನಿರೀಕ್ಷಿತ ಆಪಲ್ ಐಫೋನ್ 18 ಪ್ರೊ ಮತ್ತು ಐಫೋನ್ 18 ಪ್ರೊ ಮ್ಯಾಕ್ಸ್‌ ಭಾರತೀಯ ಮಾರುಕಟ್ಟೆ ಗೆ ಅಧಿಕೃತ ಎಂಟ್ರಿ ಕೊಟ್ಟ ಹಿನ್ನೆಲೆಯಲ್ಲಿ

ಶುಕ್ರವಾರ ಭಾರತದಾದ್ಯಂತ ಗ್ರಾಹಕರು ಖರೀದಿಗೆ ಮುಗಿಬಿದ್ದರು. ಬೆಳಗಿನ ಜಾವದಿಂದಲೇ ಗ್ರಾಹಕರು ಸ್ಟೋರ್‌ಗಳ ಮುಂದೆ ಸರತಿ ಸಾಲಿನಲ್ಲಿ ನಿಂತು ಫೋನ್‌ಗಳನ್ನು ಖರೀದಿಸುತ್ತಿವುದು ಕಂಡುಬಂತು. ದೆಹಲಿ, ಮುಂಬೈ, ಬೆಂಗಳೂರು ಆಪಲ್ ಸ್ಟೋರಗಳ ಮುಂದೆ ಜನರ ಸರತಿ ಸಾಲು ಕಂಡುಬಂತು.

ಬಾಲಿವುಡ್ ನಟ ವಿಕ್ಕಿ ಕೌಶಲ್ ಕೂಡ ಆಪಲ್ ಸ್ಟೋರ್ ನಲ್ಲಿರುವ ವಿಡಿಯೋ ವೈರಲ್ ಆಗಿದೆ. ಮುಂಬೈನ ಆಪಲ್ ಬಿಕೆಸಿ ಅಂಗಡಿಯಲ್ಲಿ ಐಫೋನ್ 18 ಪ್ರೊ ಮ್ಯಾಕ್ಸ್ ಅನ್ನು ವಿಕ್ಕಿ ಕೌಶಲ್ ಪಡೆದರು. ನಟ ಸೆಲ್ಫಿ ತೆಗೆದುಕೊಳ್ಳುತ್ತಿರುವ ಮತ್ತು ಅಲ್ಲಿ ನೆರೆದಿದ್ದ ಜನರ ಫೋಟೋ ಕ್ಲಿಕ್ಕಿಸುತ್ತಿರುವ ವಿಡಿಯೋ ವೈರಲ್ ಆಗಿದೆ.

ಬೆಂಗಳೂರಿನ ‘ಫೀನಿಕ್ಸ್ ಮಾಲ್ ಆಫ್ ಏಷ್ಯಾ’ದಲ್ಲಿರುವ ಇಮ್ಯಾಜಿನ್ ಆಪಲ್ ಪ್ರೀಮಿಯಂ ರಿಸೇಲರ್ ಅಂಗಡಿಯಲ್ಲಿ ಕೂಡ ಕ್ಯೂ ಕಂಡುಬಂತು. ಜೊತೆಗೆ ಮುಂಬೈನ ಬಿಕೆಸಿ ಹಾಗೂ ದೆಹಲಿ, ನೋಯ್ಡಾ, ಗುರುಗ್ರಾಮ್‌ಗಳಲ್ಲಿರುವ ಆಪಲ್ ಮಳಿಗೆಗಳ ಮುಂದೆ ನೂರಾರು ಆಪಲ್ ಅಭಿಮಾನಿಗಳು ಗಂಟೆಗಟ್ಟಲೆ ಕಾಯ್ದು ತಮಗೆ ಬೇಕಾದ ಮಾಡೆಲ್‌ಗಳನ್ನು ಪಡೆದುಕೊಂಡರು.

ಐಫೋನ್ ಬಿಡುಗಡೆ ಹಬ್ಬದಂತೆ, ಬೆಳಿಗ್ಗೆ 5 ಗಂಟೆಯಿಂದಲೇ ನಿಂತ ಬೆಂಗಳೂರು ಯುವಕ!

ಬೆಳಿಗ್ಗೆ 5 ಗಂಟೆಯಿಂದಲೇ ಸಾಲಿನಲ್ಲಿ ನಿಂತಿದ್ದ ಬೆಂಗಳೂರಿನ ಗ್ರಾಹಕ ರಾಹುಲ್ ಎಂಬ ಮಾತನಾಡಿ, ನಾನು ಐಫೋನ್ 7 ಬಂದಾಗಿನಿಂದ ಪ್ರತಿ ವರ್ಷ ಹೊಸ ಮಾದರಿಯನ್ನು ಖರೀದಿಸುತ್ತಿದ್ದೇನೆ. ನನಗೆ ಈ ದಿನ ಒಂದು ದೊಡ್ಡ ಹಬ್ಬದಂತೆ. ನೆರೆ ರಾಜ್ಯಗಳಿಂದಲೂ ಅನೇಕರು ಈ ಫೋನ್ ಖರೀದಿಸಲು ಇಲ್ಲಿಗೆ ಬಂದಿದ್ದಾರೆ ಎಂದು ತಮ್ಮ ಸಂತಸ ಹಂಚಿಕೊಂಡರು. ಅಂತೆಯೇ, ಮುಂಬೈನಲ್ಲೊಬ್ಬ ಗ್ರಾಹಕ ತಾನು ಮೊದಲೇ ಬುಕ್ ಮಾಡಿದ್ದ ಫೋನ್ ಪಡೆಯಲು ನಾಸಿಕ್‌ನಿಂದ ಕಾರಿನಲ್ಲಿ ಬಂದಿರುವುದಾಗಿ ತಿಳಿಸಿದರೆ, ಪಂಜಾಬ್‌ನಿಂದ ಬಂದಿದ್ದ ಮತ್ತೊಬ್ಬ ಗ್ರಾಹಕ ನೋಯ್ಡಾ ಮಾಲ್‌ನಲ್ಲಿ ದೇಶದಲ್ಲೇ ಮೊದಲಿಗನಾಗಿ ಫೋನ್ ಪಡೆದುಕೊಂಡಿರುವುದಾಗಿ ಹೇಳಿದ್ದಾರೆ.

ಐಫೋನ್ 18 ಪ್ರೊ ಶ್ರೇಣಿಯ ಪ್ರಮುಖ ವೈಶಿಷ್ಟ್ಯಗಳು:

ಈ ಫೋನ್ 3 ಬಣ್ಣ ಗಳಲ್ಲಿ ಲಭ್ಯವಿದೆ ಕಪ್ಪು, ಸಿಲ್ವರ್ , ಗ್ಲೇಸಿಯರ್ (Glacier) ಮತ್ತು ನೂತನ ‘ಬರ್ಗಂಡಿ’ (Burgundy) ಬಣ್ಣಗಳಲ್ಲಿ ಲಭ್ಯವಿದೆ. ಆಪಲ್‌ನ ಅತ್ಯಂತ ಪ್ರಭಾವಿ 'A20 ಪ್ರೊ' ಚಿಪ್, ಸುಧಾರಿತ AI ವೈಶಿಷ್ಟ್ಯಗಳು ಹಾಗೂ ಉಷ್ಣತೆಯನ್ನು ನಿಯಂತ್ರಿಸುವ ಹೊಸ 'ವೇಪರ್ ಚೇಂಬರ್' ತಂತ್ರಜ್ಞಾನ ಹೊಂದಿವೆ. ವೇರಿಯಬಲ್ ಅಪರ್ಚರ್ ಮತ್ತು ಪ್ರೊ ಕ್ಯಾಮೆರಾ ನಿಯಂತ್ರಣಗಳೊಂದಿಗೆ 48MP ಫ್ಯೂಷನ್ ಮುಖ್ಯ ಕ್ಯಾಮೆರಾ ನೀಡಲಾಗಿದೆ.

ವಿವಿಧ ರೂಪಾಂತರಗಳ ಬೆಲೆ ವಿವರ:

ಐಫೋನ್ 18 ಪ್ರೊ (iPhone 18 Pro):

256GB - ₹1,64,900

512GB - ₹1,89,900

1TB - ₹2,39,900

2TB - ₹3,14,900

ಐಫೋನ್ 18 ಪ್ರೊ ಮ್ಯಾಕ್ಸ್ (iPhone 18 Pro Max):

256GB - ₹1,79,900

512GB - ₹2,04,900

1TB - ₹2,54,900

2TB - ₹3,29,900

ಸಂಸ್ಥೆಯು ಇತ್ತೀಚೆಗೆ ನಡೆದ 'ಸರ್ಪ್ರೈಸ್ ಅಂಡ್ ಶೈನ್' ಜಾಗತಿಕ ಕಾರ್ಯಕ್ರಮದಲ್ಲಿ ಈ ಸರಣಿಯನ್ನು ಅನಾವರಣಗೊಳಿಸಿತ್ತು. ಹೆಚ್ಚಿದ ಬೆಲೆಯ ಹೊರತಾಗಿಯೂ, ಆನ್‌ಲೈನ್ ಸ್ಟೋರ್‌ ಹಾಗೂ ಅಧಿಕೃತ ಚಿಲ್ಲರೆ ಮಳಿಗೆಗಳಲ್ಲಿ ಐಫೋನ್ ಖರೀದಿಸುವವರ ಉತ್ಸಾಹ ಕುಗ್ಗಿಲ್ಲ. ಮುಂಬರುವ ತಿಂಗಳಲ್ಲಿ ಬಿಡುಗಡೆಯಾಗಲಿರುವ ಆಪಲ್‌ನ ಮೊದಲ ಮಡಚಬಹುದಾದ ಫೋನ್ 'ಐಫೋನ್ ಡ್ಯುಯೊ' (iPhone Duo) ಮೇಲೆಯೂ ಗ್ರಾಹಕರು ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದ್ದಾರೆ.