ಹಾಸನ ಜಿಲ್ಲೆಯ ನವಿಲೆ-ಆದಿಹಳ್ಳಿ ಬಳಿ ಹೇಮಾವತಿ ನಾಲೆ ಕಾಮಗಾರಿ ವೇಳೆ ಪುರಾತನ ಲಕ್ಷ್ಮೀನಾರಾಯಣ ಮತ್ತು ಉಮಾಮಹೇಶ್ವರಿ ವಿಗ್ರಹಗಳು ಪತ್ತೆಯಾಗಿವೆ. ಪ್ರಾಚ್ಯವಸ್ತು ಇಲಾಖೆಯ ನಿರ್ಲಕ್ಷ್ಯ ಖಂಡಿಸಿರುವ ಗ್ರಾಮಸ್ಥರು, ತಕ್ಷಣವೇ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುವಂತೆ ಒತ್ತಾಯಿಸಿದ್ದಾರೆ.
ಹಾಸನ (ಸೆ.22): ಜಿಲ್ಲೆಯ ಬಾಗೂರು ಹೋಬಳಿಯ ನವಿಲೆ-ಆದಿಹಳ್ಳಿ ಹೇಮಾವತಿ ನಾಲೆ ಬಳಿ ನಡೆಯುತ್ತಿದ್ದ ಕಾಮಗಾರಿಯ ವೇಳೆ ಲಕ್ಷ್ಮೀನಾರಾಯಣ ಮತ್ತು ಉಮಾಮಹೇಶ್ವರಿ ದೇವರ ಐತಿಹಾಸಿಕ ಹಾಗೂ ಪುರಾತನ ವಿಗ್ರಹಗಳು ಭಾನುವಾರ ಪತ್ತೆಯಾಗಿವೆ.
ನವಿಲೆ ಹಾಗೂ ಆದಿಹಳ್ಳಿ ಗ್ರಾಮಗಳ ಬಳಿ ಇರುವ ಹೇಮಾವತಿ ಮುಖ್ಯ ನಾಲೆಯ ಸುರಂಗದ ಬ್ರಿಡ್ಜ್ ಮೇಲ್ಭಾಗದಲ್ಲಿ ಜೆಸಿಬಿ ಯಂತ್ರದ ಮೂಲಕ ಮಣ್ಣು ತೆಗೆಯುವ ಕೆಲಸ ನಡೆಯುತ್ತಿತ್ತು. ಈ ವೇಳೆ ಈ ಅಪರೂಪದ ಪುರಾತನ ವಿಗ್ರಹಗಳು ಬೆಳಕಿಗೆ ಬಂದಿದ್ದು, ಸ್ಥಳೀಯರು ಇವು ಲಕ್ಷ್ಮೀನಾರಾಯಣ ಮತ್ತು ಉಮಾ ಮಹೇಶ್ವರಿ ದೇವರ ವಿಗ್ರಹಗಳೆಂದು ಗುರುತಿಸಿದ್ದಾರೆ. ಇವು ಸಾವಿರಾರು ವರ್ಷಗಳಷ್ಟು ಹಳೆಯ ಇತಿಹಾಸವಿರುವ ವಿಗ್ರಹಗಳಿರಬಹುದು ಎಂದು ಸಾರ್ವಜನಿಕರು ಅಂದಾಜಿಸಿದ್ದಾರೆ.
ಪ್ರಾಚ್ಯವಸ್ತು ಇಲಾಖೆ ನಿರ್ಲಕ್ಷ್ಯಕ್ಕೆ ಗ್ರಾಮಸ್ಥರ ಆಕ್ರೋಶ:
ಐತಿಹಾಸಿಕ ಸ್ಮಾರಕಗಳು ಹಾಗೂ ವಿಗ್ರಹಗಳು ಪತ್ತೆಯಾಗುತ್ತಿದ್ದರೂ ಪ್ರಾಚ್ಯವಸ್ತು ಇಲಾಖೆಯು ಈ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಿದೆ ಎಂದು ನವಿಲೆ, ಆದಿಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹೇಮಾವತಿ ನಾಲೆ ಕಾಮಗಾರಿ ಸಂದರ್ಭದಲ್ಲಿ ಪತ್ತೆಯಾಗಿರುವ ಈ ವಿಗ್ರಹಗಳ ಹಿನ್ನೆಲೆ ಹಾಗೂ ಇತಿಹಾಸದ ಕುರಿತು ಅಧಿಕೃತ ಮಾಹಿತಿ ಕಲೆಹಾಕಲು ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಎಂದು ಗ್ರಾಮಸ್ಥರು ಬಲವಾಗಿ ಒತ್ತಾಯಿಸಿದ್ದಾರೆ.


