ಕೆಪಿಎಸ್‌ಸಿಯಲ್ಲಿ ಹಗರಣಗಳು ಹೆಚ್ಚಾಗಿದ್ದು, ಸಂಸ್ಥೆಯನ್ನು ಮುಚ್ಚುವ ಬಗ್ಗೆ ತಜ್ಞರೊಂದಿಗೆ ಚರ್ಚಿಸಲಾಗುತ್ತಿದೆ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಹೈಕೋರ್ಟ್ ಸೂಚಿಸಿರುವ ಎಸ್‌ಐಟಿ ತನಿಖೆಯನ್ನು ಸ್ವಾಗತಿಸಿರುವ ಅವರು, ಸೌಜನ್ಯಾ ಪ್ರಕರಣದ ಮರು ತನಿಖೆ ಬಗ್ಗೆಯೂ ಮಾಹಿತಿ ಪಡೆಯುವುದಾಗಿ ಹೇಳಿದ್ದಾರೆ.

 ಬೆಂಗಳೂರು (ಸೆ.23): ಕೆಪಿಎಸ್‌ಸಿಯಲ್ಲಿ ಹಗರಣಗಳು ಹೆಚ್ಚಿವೆ. ಹೀಗಾಗಿ ಆ ಸಂಸ್ಥೆಯನ್ನು ಕಾನೂನು ಚೌಕಟ್ಟಿನಲ್ಲಿ ಮುಚ್ಚುವ ಬಗ್ಗೆ ತಜ್ಞರ ಜೊತೆ ಚರ್ಚೆ ಮಾಡುತ್ತಿರುವುದಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.

ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಕೆಪಿಎಸ್‌ಸಿಯಲ್ಲಿ ಖದೀಮರು ಸೇರಿಕೊಂಡಿದ್ದಾರೆ. ನಾವು ನಂಬಿಕೆ ಇಟ್ಟು ಆಯ್ಕೆ ಮಾಡಿದ ಅಧಿಕಾರಿಗಳು ಹೀಗೆಲ್ಲಾ ಮಾಡುತ್ತಿದ್ದಾರೆ. ಅಲ್ಲಿರುವ ಸದಸ್ಯರು ಅಂಗಡಿಯನ್ನೇ ತೆರೆದಿದ್ದಾರೆ. ನಮ್ಮ ಪೊಲೀಸ್ ಅಧಿಕಾರಿಗಳು ದಾಖಲೆಗಳನ್ನು ಸಂಗ್ರಹಿಸಿದ್ದಾರೆ. ಒಂದು ದಿನ ಎಲ್ಲವೂ ಹೊರಗೆ ಬರುತ್ತದೆ ಎಂದರು.

KPSC ಗೆ ಸ್ವಾತಂತ್ರ್ಯ ಕೊಡಬೇಕಿತ್ತು:

ಕೆಪಿಎಸ್‌ಸಿ ಹಗರಣ ಸಂಬಂಧ ರಾಜ್ಯ ಹೈಕೋರ್ಟ್ ಎಸ್ಐಟಿ ರಚನೆಗೆ ನಿರ್ದೇಶನ ನೀಡಿರುವುದನ್ನು ಸ್ವಾಗತಿಸುತ್ತೇನೆ. ಇ.ಡಿ. ಕೂಡ ತನಿಖೆ ಮಾಡುತ್ತಿದೆ. ಆದರೆ, ನಮ್ಮ ಪೊಲೀಸ್ ಇಲಾಖೆಯೂ ತನಿಖೆಯನ್ನು ಬಹಳ ಚೆನ್ನಾಗಿ ನಡೆಸುತ್ತಿದೆ. ನ್ಯಾಯಾಲಯ ಅಗತ್ಯವಿದ್ದರೆ ನಮ್ಮ ಪೊಲೀಸ್ ಇಲಾಖೆಯ ತನಿಖೆಯ ವೈಖರಿಯ ಉಸ್ತುವಾರಿ ನೋಡಬಹುದಿತ್ತು. ನ್ಯಾಯಾಲಯ ಎಸ್ಐಟಿ ತನಿಖೆಗೆ ನಿರ್ದೇಶಿಸಿರುವುದು ಸರಿ. ಆದರೆ, ತನಿಖಾಧಿಕಾರಿಗಳ ನೇಮಕದ ಸ್ವಾತಂತ್ರ್ಯವನ್ನು ರಾಜ್ಯ ಸರ್ಕಾರಕ್ಕೆ ಕೊಡಬೇಕಿತ್ತು. ಈ ಬಗ್ಗೆ ದೆಹಲಿ, ಬೇರೆ ಬೇರೆ ರಾಜ್ಯಗಳಿಂದ ನಮಗೆ ಕರೆ ಬಂದಿತ್ತು. ಈ ಬಗ್ಗೆ ಕಾನೂನು ತಜ್ಞರ ಅಭಿಪ್ರಾಯ ಪಡೆಯುತ್ತೇನೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ನಮಗೆ ಮಕ್ಕಳ ಭವಿಷ್ಯ ಮುಖ್ಯ. ಇದೇ ಕಾರಣಕ್ಕೆ ಸಿದ್ದರಾಮಯ್ಯನವರು ತಮ್ಮ ಅವಧಿಯಲ್ಲಿ ಕೆಪಿಎಸ್‌ಸಿಯಲ್ಲಿದ್ದ ಸದಸ್ಯರ ಸಂಖ್ಯೆಯನ್ನು ಕಡಿತಗೊಳಿಸಿದ್ದರು. ನಾವು ನಂಬಿಕೆ ಇಟ್ಟು, ಪಾರದರ್ಶಕವಾಗಿ ಆಯ್ಕೆ ಮಾಡಿ ಅಧಿಕಾರಿಗಳನ್ನು ಕಳುಹಿಸಿದರೆ ಅವರೂ ಹೀಗೆ ಮಾಡುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸೌಜನ್ಯ ಪ್ರಕರಣದ ಬಗ್ಗೆ ಸಿಎಂ ಡಿಕೆ ಶಿವಕುಮಾರ್ ಹೇಳಿದ್ದೇನು?

ಸೌಜನ್ಯಾ ಪ್ರಕರಣದ ಮರು ತನಿಖೆ ಬಗ್ಗೆ ಕೇಳಿದಾಗ, ಆ ಕುರಿತು ಮಾಹಿತಿ ಪಡೆಯುತ್ತೇನೆ. ತನಿಖೆಗೆ ಯಾರೂ ಹಸ್ತಕ್ಷೇಪ ಮಾಡುವುದಿಲ್ಲ. ಕಾನೂನು ಪ್ರಕಾರ ಎಲ್ಲವೂ ನಡೆಯುತ್ತದೆ ಎಂದರು.