26 ವರ್ಷಗಳಿಂದ ಕೇವಲ ಕಾಗದದ ಮೇಲಿದ್ದ ಭದ್ರಾ ಮೇಲ್ದಂಡೆ ಯೋಜನೆ ಈಗ ಅಂತಿಮ ಹಂತ ತಲುಪಿದ್ದು, ಈ ವರ್ಷಾಂತ್ಯಕ್ಕೆ ಮಧ್ಯ ಕರ್ನಾಟಕಕ್ಕೆ ತುಂಗಾ ನೀರು. ಕೇಂದ್ರ ಸರ್ಕಾರ ಅನುದಾನ ನೀಡದಿದ್ದರೂ ರಾಜ್ಯ ಸರ್ಕಾರವೇ 10 ಸಾವಿರ ಕೋಟಿ ರೂ. ವೆಚ್ಚದಲ್ಲಿ ಈ ಯೋಜನೆಯನ್ನು ಪೂರ್ಣಗೊಳಿಲಿದೆ, ಕೃಷಿ ಸಚಿವ ಹೇಳಿದ್ದೇನು?.
ಮಧ್ಯ ಕರ್ನಾಟಕಕ್ಕೆ ವರ್ಷಾಂತ್ಯಕ್ಕೆ ತುಂಗಾ ನೀರು
ಗಿರೀಶ್ ಗರಗ
ದೇವರು ವರವನ್ನೂ ಕೊಡುವುದಿಲ್ಲ, ಶಾಪವನ್ನೂ ಕೊಡುವುದಿಲ್ಲ. ಅವಕಾಶ ಮಾತ್ರ ಕೊಡುತ್ತಾನೆ. ಅದನ್ನು ಸರಿಯಾಗಿ ಬಳಸಿಕೊಳ್ಳಬೇಕು.... ಇದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪದೇಪದೇ ಹೇಳುವ ಮಾತು. ಇದೀಗ ತಮಗೆ ದೊರೆತ ಅವಕಾಶವನ್ನು ಬಳಸಿಕೊಂಡು ಜಲಸಂಪನ್ಮೂಲ ಸಚಿವ ಎನ್. ಚಲುವರಾಯಸ್ವಾಮಿ ಎರಡೂವರೆ ದಶಕಗಳ ಹಿಂದಿನ ಭದ್ರಾ ಮೇಲ್ದಂಡೆ ಯೋಜನೆಗೆ ಅಂತಿಮ ರೂಪ ನೀಡುವ ದಿಸೆಯಲ್ಲಿ ದಾಪುಗಾಲು ಹಾಕಿದ್ದಾರೆ. 26 ವರ್ಷಗಳ ಹಿಂದೆ ಕೇವಲ ಕಾಗದದ ಮೇಲಿದ್ದ, ಮಧ್ಯ ಕರ್ನಾಟಕಕ್ಕೆ ಭದ್ರಾ ನದಿ ನೀರು ತರಲು ಸಾಧ್ಯವೇ ಎಂಬ ಪ್ರಶ್ನಾರ್ಥಕ ಚಿಹ್ನೆ ಮೂಡಿಸಿದ್ದ ಈ ಯೋಜನೆ ಈಗ ಅಂತಿಮ ಹಂತಕ್ಕೆ ಬಂದಿದೆ. ಹಾಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ನಿಕಟಪೂರ್ವ ಮುಖ್ಯಮಂತ್ರಿ ಸಿದ್ದರಾಮಯ್ಯ ಆದಿಯಾಗಿ ಕಾಂಗ್ರೆಸ್ ಸರ್ಕಾರ ಬರದ ನಾಡು ಚಿತ್ರದುರ್ಗ, ದಾವಣಗೆರೆ, ತುಮಕೂರು ಹಾಗೂ ಚಿಕ್ಕಮಗಳೂರಿಗೆ ಭದ್ರಾ ಮತ್ತು ತುಂಗಾ ನದಿ ನೀರು ತರಲು ಹಲವು ಕ್ರಮಗಳನ್ನು ಕೈಗೊಂಡಿದೆ. ಭದ್ರಾ ಮೇಲ್ದಂಡೆ ಯೋಜನೆಗೆ ಎದುರಾದ ಸವಾಲುಗಳು, ಯೋಜನೆ ಯಾವಾಗ ಪೂರ್ಣವಾಗಲಿದೆ ಎಂಬುದು ಸೇರಿದಂತೆ ರಾಜ್ಯದ ನೀರಾವರಿ ಯೋಜನೆಗಳ ಕುರಿತಂತೆ ಸಚಿವ ಎನ್. ಚಲುವರಾಯಸ್ವಾಮಿ ‘ಕನ್ನಡಪ್ರಭ’ದೊಂದಿಗೆ ಮುಕ್ತವಾಗಿ ಮಾತನಾಡಿದ್ದಾರೆ.
ಗುರುವಾರ ಗಂಗಾ ಪೂಜೆ ಆಯೋಜಿಸಿದ್ದೀರಿ. 26 ವರ್ಷ ಕಾಗದದ ಮೇಲಿದ್ದ ಈ ಯೋಜನೆ ಪೂರ್ಣಗೊಳ್ಳುವುದು ಯಾವಾಗ?
- ಸದ್ಯ ಚಿತ್ರದುರ್ಗಕ್ಕೆ ನೀರು ಹರಿಸಿದ್ದೇವೆ. ಇದೇ ಸೆ. 24 (ಗುರುವಾರ)ರಂದು ಮುಖ್ಯಮಂತ್ರಿ ಅವರು ಚಿತ್ರದುರ್ಗದಲ್ಲಿ ಭದ್ರಾ ನದಿ ನೀರಿಗೆ ಬಾಗಿನ ಅರ್ಪಿಸುತ್ತಿದ್ದಾರೆ. ಉಳಿದಂತೆ ತುಮಕೂರು, ಚಿಕ್ಕಮಗಳೂರು, ದಾವಣಗೆರೆಯ ತಾಲೂಕುಗಳ ಕೃಷಿ, ಕುಡಿಯುವ ಉದ್ದೇಶಕ್ಕೆ ನೀರು ಕೊಡಲಾಗುತ್ತದೆ. ಭದ್ರಾ ನೀರು ಹರಿಸುವ ಕಾರ್ಯ ಬಹುತೇಕ ಪೂರ್ಣವಾಗಿದೆ. ಆದರೆ, ತುಂಗಾ ನದಿಯಿಂದ 17.5 ಟಿಎಂಸಿ ನೀರನ್ನು ಏತ ನೀರಾವರಿ ಮೂಲಕ ಹರಿಸಿದರೆ ಆಗ ಯೋಜನೆ ಪರಿಪೂರ್ಣವಾಗಲಿದೆ. ಈ ಕಾರ್ಯವನ್ನು ಈ ವರ್ಷಾಂತ್ಯದ ವೇಳೆಗೆ ಮುಗಿಸುವಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸೂಚನೆ ನೀಡಿದ್ದಾರೆ. ನಾನು ಅಧಿಕಾರಿಗಳು ಮತ್ತು ಗುತ್ತಿಗೆದಾರರ ಸಭೆ ನಡೆಸಿ ಸ್ಪಷ್ಟ ನಿರ್ದೇಶನ ನೀಡಿದ್ದೇನೆ. ಈ ವರ್ಷದ ಡಿಸೆಂಬರ್ ವೇಳೆಗೆ ತುಂಗಾ ನದಿ ನೀರು ತರುವುದು ನಿಶ್ಚಿತ. ಆಗ ಯೋಜನೆ ಪರಿಪೂರ್ಣಗೊಳ್ಳಲಿದೆ.
ಹಾಗಾದರೆ ಬರದ ನಾಡಿನ ಜನರ ದಶಕಗಳ ಕನಸು ಈಡೇರಿದಂತಾಗುತ್ತದೆಯಲ್ಲವೆ?
- ಭದ್ರಾ ಮೇಲ್ದಂಡೆ ಯೋಜನೆ ಮಾಜಿ ಮುಖ್ಯಮಂತ್ರಿ ನಿಜಲಿಂಗಪ್ಪ ಅವರ ಕನಸು. ಮಧ್ಯ ಕರ್ನಾಟಕಕ್ಕೆ ಭದ್ರಾ ನದಿ ನೀರು ಹರಿಸಬೇಕೆಂದು ಪ್ರಯತ್ನಿಸಿದ್ದರು. ಆದರೆ, ಅದು ಸಾಧ್ಯವಾಗಿರಲಿಲ್ಲ. ಎಸ್.ಎಂ. ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದಾಗ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡಿ ಸ್ವಲ್ಪ ಪ್ರಮಾಣದ ಅನುದಾನವನ್ನೂ ನೀಡಲಾಗಿತ್ತು. ಆದಾದ ನಂತರ ಬಂದ ಸರ್ಕಾರಗಳು ಯೋಜನೆ ಬಗ್ಗೆ ಅಷ್ಟಾಗಿ ಆಸಕ್ತಿ ತೋರಿರಲಿಲ್ಲ. ಆದರೆ, 2023ರಲ್ಲಿ ಕಾಂಗ್ರೆಸ್ ಸರ್ಕಾರ ಬಂದ ನಂತರ ನಿಕಟಪೂರ್ವ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಹಾಲಿ ಮುಖ್ಯಮಂತ್ರಿ, ಅಂದಿನ ಜಲಸಂಪನ್ಮೂಲ ಸಚಿವರಾದ ಡಿ.ಕೆ. ಶಿವಕುಮಾರ್ ಅವರು ಸಂಕಲ್ಪ ಮಾಡಿ ಭದ್ರಾ ಮೇಲ್ದಂಡೆ ಯೋಜನೆಗೆ ಹೆಚ್ಚಿನ ಒತ್ತು ನೀಡಿದರು. ಅದಕ್ಕೆ ಸೂಕ್ತ ಅನುದಾನ ಒದಗಿಸಿದರು. ಈಗ ನನ್ನ ಅವಧಿಯಲ್ಲಿ ಯೋಜನೆ ಸಾಕಾರಗೊಂಡಿದೆ. ಇದು ತೃಪ್ತಿ ತರುವ ಕ್ಷಣ. 26 ವರ್ಷಗಳ ಹಿಂದೆ ಭದ್ರಾ ನದಿಯಿಂದ ಮಧ್ಯ ಕರ್ನಾಟಕಕ್ಕೆ ನೀರು ಕೊಡಲಾಗುತ್ತದೆ ಎಂದರೆ ಯಾರೂ ನಂಬಿರಲಿಲ್ಲ. ಈಗಲೂ ಚಿತ್ರದುರ್ಗಕ್ಕೆ ನೀರು ಹರಿದಾಗ ಜನರು ಇನ್ನೂ ನಂಬುತ್ತಿಲ್ಲ. ಜನರ ಸಂಭ್ರಮವನ್ನು ಅವರ ಬಳಿಯೇ ಕೇಳಬೇಕು. ಚುನಾವಣೆ ಪೂರ್ವದಲ್ಲಿ ಗ್ಯಾರಂಟಿ ಯೋಜನೆ ಘೋಷಣೆ ಮಾಡಿದಾಗ ಪ್ರಧಾನಿ ನರೇಂದ್ರ ಮೋದಿ ಆದಿಯಾಗಿ ರಾಜ್ಯ ದಿವಾಳಿಯಾಗುತ್ತದೆ ಎಂದು ಆರೋಪಿಸಿದ್ದರು. ಆದರೀಗ ಭದ್ರಾ ಮೇಲ್ದಂಡೆ ಯೋಜನೆಯನ್ನು ಅಂತಿಮ ಹಂತಕ್ಕೆ ತಂದು, ರಾಜ್ಯದಲ್ಲೇ ಅತ್ಯಂತ ಬರ ಎದುರಿಸುವ ಚಿತ್ರದುರ್ಗಕ್ಕೆ ನೀರು ಹರಿಸಿದ್ದೇವೆ. ಇದು ಗ್ಯಾರಂಟಿಗಳಿಂದ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗಿಲ್ಲ ಎಂಬುದಕ್ಕೆ ಸ್ಪಷ್ಟ ನಿದರ್ಶನ.
ಎರಡು ದಶಕಗಳ ಹಿಂದೆ ರೂಪುಗೊಂಡ ಈ ಯೋಜನೆ ಇಷ್ಟು ವಿಳಂಬವಾಗಲು ನೈಜ ಕಾರಣಗಳೇನು?
- ಕಾಂಗ್ರೆಸ್ ಸರ್ಕಾರ ಹೊರತುಪಡಿಸಿ ಇತರ ಸರ್ಕಾರಗಳು ಯೋಜನೆ ಬಗ್ಗೆ ಅಷ್ಟಾಗಿ ಆಸಕ್ತಿ ತೋರಲಿಲ್ಲ. ನಾನು ಒಬ್ಬ ಸಣ್ಣ ಸಚಿವನಾಗಿದ್ದರೂ ನನಗೆ ಗುರಿಗಳಿವೆ. ಹಾಗಿದ್ದ ಮೇಲೆ ಹಿಂದೆ ಮುಖ್ಯಮಂತ್ರಿ ಆಗಿದ್ದವರಿಗೆ ದೊಡ್ಡ ಗುರಿಯಿರಬೇಕು. ಆದರೆ, ಬಿಜೆಪಿ-ಜೆಡಿಎಸ್ ನಾಯಕರಿಗೆ ಆ ಗುರಿ ಇಲ್ಲ. ಭದ್ರಾ ಮೇಲ್ದಂಡೆ ಕುರಿತಂತೆ ಇಚ್ಛಾಶಕ್ತಿಯನ್ನೇ ತೋರಿಸಲಿಲ್ಲ. 2023ರಿಂದ ನಮ್ಮ ಸರ್ಕಾರ ಪಣ ತೊಟ್ಟು ಯೋಜನೆ ಪೂರ್ಣಗೊಳಿಸುವ ಮಟ್ಟಿಗೆ ಕೆಲಸ ಮಾಡಿದ್ದೇವೆ. ಪ್ರತಿ ವಿಚಾರಕ್ಕೂ ಟೀಕಿಸುವ ವಿರೋಧ ಪಕ್ಷಗಳು ಈ ರೀತಿಯ ಒಂದೇ ಒಂದು ಕೆಲಸವನ್ನೂ ಮಾಡಿಲ್ಲ. ಅವರು ನಮ್ಮ ಬಗ್ಗೆ ಮಾತನಾಡುವ ನೈತಿಕ ಹಕ್ಕನ್ನು ಕಳೆದುಕೊಂಡಿದ್ದಾರೆ.
ಯೋಜನೆ ವಿಳಂಬದಿಂದ ಯೋಜನಾ ವೆಚ್ಚ ಹೆಚ್ಚಳವಾಗಿದೆ. ಅನುದಾನ ಹೊಂದಾಣಿಕೆ ಹೇಗೆ ಮಾಡಿದಿರಿ?
- ಭದ್ರಾ ಮೇಲ್ದಂಡೆ ಅನುಷ್ಠಾನದ ಬಗ್ಗೆ ಸ್ಪಷ್ಟ ಚಿತ್ರಣ ಇಲ್ಲದ್ದರಿಂದಲೇ ಯೋಜನಾ ವೆಚ್ಚ ಜಾಸ್ತಿಯಾಗಿದೆ. ಆದರೂ, 2023ರಿಂದ ಈವರೆಗೆ ಯೋಜನೆಗಾಗಿ 5ರಿಂದ 6 ಸಾವಿರ ಕೋಟಿ ರು. ಖರ್ಚು ಮಾಡಿದ್ದೇವೆ. 3 ಸಾವಿರ ಕೋಟಿ ರು. ಬಾಕಿ ಬಿಲ್‌ಗಳಿವೆ. ಈ ಸರ್ಕಾರದ ಅವಧಿಯಲ್ಲಿಯೇ ಒಟ್ಟು 10 ಸಾವಿರ ಕೋಟಿ ರು. ಖರ್ಚು ಮಾಡುತ್ತೇವೆ. ಕಳೆದ 20 ವರ್ಷಗಳಲ್ಲಿ 11 ಸಾವಿರ ಕೋಟಿ ರು. ಖರ್ಚು ಮಾಡಿದ್ದರೆ, ಈ 5 ವರ್ಷಗಳಲ್ಲಿಯೇ 10 ಸಾವಿರ ಕೋಟಿ ರು. ವ್ಯಯಿಸುತ್ತಿದ್ದೇವೆ. 4 ಜಿಲ್ಲೆಗಳಿಗೆ ನೀರು ನೀಡುವ ಯೋಜನೆಗೆ 10 ಸಾವಿರ ಕೋಟಿ ರು. ವ್ಯಯಿಸಲಾಗುತ್ತಿದೆ. ಎಲ್ಲವನ್ನೂ ಸರ್ಕಾರ ಹೊಂದಿಸುತ್ತಿದೆ. ಇದನ್ನು ನೋಡಿದರೆ ಗ್ಯಾರಂಟಿ ಯೋಜನೆಗಳಿಂದ ರಾಜ್ಯದಲ್ಲಿ ಅಭಿವೃದ್ಧಿ ಕಾಮಗಾರಿ ಕುಂಠಿತವಾಗಿಲ್ಲ ಎಂಬುದು ಸ್ಪಷ್ಟವಾಗುತ್ತದೆ.
ಭದ್ರಾ ಮೇಲ್ದಂಡೆಗೆ ಅನುದಾನದ ಕೊರತೆ ಇದೆಯೇ?
- ಅನುದಾನದ ಕೊರತೆ ಇದ್ದೇ ಇರುತ್ತದೆ. ಆದ್ಯತೆ ಮೇರೆಗೆ ಕೆಲಸ ಮಾಡಲಾಗುತ್ತಿದೆ. ಹಿಂದೆ ಕೇಂದ್ರ ಸರ್ಕಾರ ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿ ರು. ಅನುದಾನ ಘೋಷಿಸಿತು. ಆದರೆ, ಅದನ್ನು ನೀಡಿಲ್ಲ. ಎಲ್ಲದರ ಬಗ್ಗೆಯೂ ಮಾತನಾಡುವ ಬಿಜೆಪಿ-ಜೆಡಿಎಸ್ ನಾಯಕರು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿ ಅನುದಾನ ತರುವ ಕೆಲಸ ಮಾಡಬೇಕಿತ್ತು. ಅದನ್ನು ಮಾಡಲಿಲ್ಲ. ರಾಜ್ಯದ ಜನರಿಗಾಗಿ ಕೆಲಸ ಮಾಡಬೇಕೆಂಬ ಗುರಿ ಇದ್ದಿದ್ದರೆ ಘೋಷಿಸಿದ ಅನುದಾನ ತರಬಹುದಿತ್ತು. ನಾವು ಕೂಡ ಕೇಂದ್ರ ಸರ್ಕಾರಕ್ಕೆ ಪದೇಪದೇ ಮನವಿ ಮಾಡಿದರೂ ಅದರ ಬಗ್ಗೆ ನಿರ್ಲಕ್ಷ್ಯ ತೋರಲಾಗಿದೆ.
ಅನುದಾನ ನೀಡುವ ವಿಚಾರದಲ್ಲಿ ಕೇಂದ್ರ ಸರ್ಕಾರ ಕರ್ನಾಟಕದ ಬಗ್ಗೆ ನಿರ್ಲಕ್ಷ್ಯ ತೋರಿಸುತ್ತಿದೆಯೇ?
- ನೀರಾವರಿ ಯೋಜನೆಗಳಷ್ಟೇ ಅಲ್ಲ, ಜಲಜೀವನ್ ಮಿಷನ್, ಹಣಕಾಸು ಆಯೋಗ ಶಿಫಾರಸು ಮಾಡಿದ ಅನುದಾನಗಳನ್ನು ಕೇಂದ್ರ ಸರ್ಕಾರ ನೀಡುತ್ತಿಲ್ಲ. ಬೇಕೆಂದೆ ಕರ್ನಾಟಕವನ್ನು ನಿರ್ಲಕ್ಷ್ಯ ಮಾಡಲಾಗುತ್ತಿದೆ. ಹೇಗೂ ಮತ ಹಾಕುತ್ತಾರೆ ಎಂಬ ಧೋರಣೆ ಇದ್ದಂತಿದೆ. ತಮಿಳುನಾಡಿನಲ್ಲಿ ಬಿಜೆಪಿಗೆ ಒಂದು ಸ್ಥಾನ ದೊರೆಯದಿದ್ದರೂ ಅವರ ಮೇಲೆ ಪ್ರೀತಿ ತೋರಿಸಲಾಗುತ್ತಿದೆ. ಅಷ್ಟನ್ನೂ ಕರ್ನಾಟಕಕ್ಕೆ ತೋರಿಸುತ್ತಿಲ್ಲ. 2018ರಲ್ಲಿ ಎನ್‌ಡಿಎ ಒಕ್ಕೂಟದ 27 ಸಂಸದರಿದ್ದರು, ಈ ಬಾರಿ 19 ಸಂಸದರಿದ್ದಾರೆ. ಘೋಷಿಸಿದ ಅನುದಾನ ನೀಡದಿದ್ದರೂ ಜನರು ಮತ ಹಾಕುತ್ತಾರೆ ಎಂಬ ಧೋರಣೆ ಕೇಂದ್ರ ಸರ್ಕಾರಕ್ಕೆ ಇರುವಂತಿದೆ.
ಕೇಂದ್ರದ ನಿರ್ಲಕ್ಷ್ಯ ಕಾಂಗ್ರೆಸ್ ಸರ್ಕಾರ ಎಂಬ ಕಾರಣಕ್ಕೋ ಅಥವಾ ಕನ್ನಡಿಗರ ಮೇಲೋ?
- ಕಾಂಗ್ರೆಸ್ ಸರ್ಕಾರವಿದೆ ಎಂಬ ಕಾರಣಕ್ಕೆ ಕೇಂದ್ರ ಸರ್ಕಾರ ನಿರ್ಲಕ್ಷ್ಯ ತೋರುತ್ತಿಲ್ಲ. ಹಾಗಿದ್ದರೆ ಕಳೆದ ಬಾರಿ ಬಿಜೆಪಿ ಸರ್ಕಾರವಿದ್ದಾಗ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದಾಗಲಾದರೂ ಕೇಂದ್ರ ಸರ್ಕಾರ ಭದ್ರಾ ಮೇಲ್ದಂಡೆಗೆ ಘೋಷಿಸಿದ ಅನುದಾನ ನೀಡಬಹುದಿತ್ತು. ಆದರೆ, ಅದನ್ನು ಕೊಡಲಿಲ್ಲ. ಕನ್ನಡಿಗರು ಮತ್ತು ಕರ್ನಾಟಕ ಎಂದರೆ ಕೇಂದ್ರ ಸರ್ಕಾರ ನಿರ್ಲಕ್ಷ್ಯ ಧೋರಣೆ ಪ್ರದರ್ಶಿಸುತ್ತಿದೆ.
ಹಾಗಾದರೆ ಕೇಂದ್ರ ಸರ್ಕಾರದಿಂದ ಭದ್ರಾ ಮೇಲ್ದಂಡೆ ಯೋಜನೆಗೆ ಅನುದಾನ ಪಡೆಯುವ ಬಗೆ ಹೇಗೆ?
- ಅದೇ ನಮಗಿರುವ ದೊಡ್ಡ ಸವಾಲು. ಬೇರೆ ಅನುದಾನಗಳಿಗಾಗಿ ಸಚಿವ ಈಶ್ವರ್ ಖಂಡ್ರೆ ದೆಹಲಿಗೆ ಭೇಟಿ ನೀಡಿದ್ದರು. ಆಗ ಸಕಾರಾತ್ಮಕವಾದ ಪ್ರತಿಕ್ರಿಯೆ ಬಂದಿರಲಿಲ್ಲ. ಮುಖ್ಯಮಂತ್ರಿ ಅವರು ಒಕ್ಕೂಟ ವ್ಯವಸ್ಥೆಯಲ್ಲಿ ತಿಕ್ಕಾಟ ಬೇಡ ಎಂದು ಹೇಳುತ್ತಿದ್ದಾರೆ. ಸರ್ವ ಪಕ್ಷ ನಿಯೋಗ ಕೊಂಡೊಯ್ಯುವ ಬಗ್ಗೆ ಚಿಂತನೆ ನಡೆಸಿದ್ದಾರೆ.
ಭದ್ರಾ ಮೇಲ್ದಂಡೆಗೆ ಅನುದಾನ ಕೊಡದಿದ್ದರೆ ಕಾನೂನು ಹೋರಾಟದ ಚಿಂತನೆಯಿದೆಯೇ?
- ಆ ವಿಚಾರವಾಗಿ ನಾನೂ ಚಿಂತನೆ ಮಾಡಿದ್ದೇನೆ. ಕಾನೂನು ತಂಡದೊಂದಿಗೆ ಚರ್ಚೆ ಮಾಡುತ್ತಿದ್ದೇನೆ. ಕಾನೂನು ಹೋರಾಟಕ್ಕೆ ಅವಕಾಶವಿದೆಯೇ ಎಂಬ ಬಗ್ಗೆ ಮಾಹಿತಿ ಕೇಳಿದ್ದೇನೆ. ಈ ಹಿಂದೆ ಬರ ಪರಿಹಾರಕ್ಕಾಗಿ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿತ್ತು. ಎಲ್ಲದಕ್ಕೂ ನ್ಯಾಯಾಲಯದ ಮೊರೆ ಹೋಗುವುದು ಸೂಕ್ತವಲ್ಲ ಎಂಬ ಅಭಿಪ್ರಾಯವೂ ಇದೆ. ಹೀಗಾಗಿ ಮತ್ತೆ ಕೇಂದ್ರ ಸರ್ಕಾರದ ಸಂಬಂಧಪಟ್ಟ ಸಚಿವರನ್ನು ಭೇಟಿ ಮಾಡಿ ಮನವಿ ಮಾಡೋಣ ಎಂದು ಮುಖ್ಯಮಂತ್ರಿ ಅವರು ಹೇಳಿದ್ದಾರೆ.
ಕೇಂದ್ರ ಸರ್ಕಾರ ಅನುದಾನ ಘೋಷಣೆಯಿಂದಾಗಿ ಭದ್ರಾ ಮೇಲ್ದಂಡೆ ಯೋಜನೆ ವಿಳಂಬವಾಗುವಂತಾಯಿತೇ?
- ಕೇಂದ್ರ ಸರ್ಕಾರ ಘೋಷಿಸಿದಂತೆ 5300 ಕೋಟಿ ರು. ಅನುದಾನ ಕೊಡುತ್ತದೆ ಎಂದು ಭಾವಿಸಿದ್ದೆವು. ಆದರೆ, ಕೊಡಲಿಲ್ಲ. ಹಾಗೆಂದ ಮಾತ್ರಕ್ಕೆ ನಾವು ಕಾಮಗಾರಿಯನ್ನು ನಿಲ್ಲಿಸಿಲ್ಲ. ನಮ್ಮ ಸ್ವಂತ ಬಲದಿಂದ ಭದ್ರಾ ಮೇಲ್ದಂಡೆ ಯೋಜನೆ ಅನುಷ್ಠಾನ ಮಾಡಿದ್ದೇವೆ. ರೈತರ ಮೊಗದಲ್ಲಿ ಸಂತಸ ಮೂಡಿಸಿದ್ದೇವೆ.
ಭದ್ರಾ ಮೇಲ್ದಂಡೆ ಯೋಜನೆಯ ಸೂಕ್ಷ್ಮ ನೀರಾವರಿ ಪ್ರಗತಿ ಹೇಗಿದೆ?
- ಕೆಲವೊಂದು ಕಡೆ ಕುಂಠಿತವಾಗಿದೆ. ಅಧಿಕಾರಿಗಳು ಮತ್ತು ಗುತ್ತಿಗೆದಾರರೊಂದಿಗೆ ಮಾತನಾಡಿದ್ದೇನೆ. 2027ರ ಮಾರ್ಚ್ ವೇಳೆಗೆ ಚಿತ್ರದುರ್ಗ ಕೆನಾಲ್ ಮೂಲಕ ಹನಿ ನೀರಾವರಿಗೆ ನೀರು ನೀಡಲಾಗುವುದು ಹಾಗೂ 2027ರ ಡಿಸೆಂಬರ್ ವೇಳೆಗೆ ತುಮಕೂರು ಕೆನಾಲ್‌ನಿಂದ ನೀರು ನೀಡುತ್ತೇವೆ. 2028ರ ಚುನಾವಣೆಗೂ ಮುನ್ನ ಭದ್ರಾ ಮೇಲ್ದಂಡೆಯ ಎಲ್ಲ ಕೆಲಸಗಳನ್ನೂ ಪೂರ್ಣಗೊಳಿಸುತ್ತೇವೆ.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ನಿಭಾಯಿಸಿದ ಖಾತೆ ನಿಮಗೆ ನೀಡಲಾಗಿದೆ. ನಿಮ್ಮೆದುರಿನ ಸವಾಲುಗಳೇನು?
- ಸವಾಲುಗಳಿದ್ದರೆ ಕೆಲಸ ಮಾಡಲು ಖುಷಿಯಾಗುತ್ತದೆ. ನಾನು ಕೂಡ ಗುರಿ ನಿಗದಿ ಮಾಡಿಕೊಂಡು ಕೆಲಸ ಮಾಡುತ್ತಿದ್ದೇನೆ. ಮೇಕೆದಾಟು, ಕೃಷ್ಣಾ ಮೇಲ್ದಂಡೆ, ಮಹದಾಯಿ, ಎತ್ತಿನಹೊಳೆಯಂತಹ ದೊಡ್ಡ ಯೋಜನೆಗಳ ಅನುಷ್ಠಾನ ನಮ್ಮ ಮುಂದಿದೆ. ಎತ್ತಿನಹೊಳೆ ಯೋಜನೆ ಕುರಿತಂತೆ ಈಗಲೂ ಕೋಲಾರ ಭಾಗದ ಜನರಿಗೆ ನಂಬಿಕೆಯಿಲ್ಲ. ತಮಗೆ ಎತ್ತಿನಹೊಳೆ ನೀರು ಬರುತ್ತದೆಯೇ ಎಂದು ನಗುತ್ತಾರೆ. ನಿಗದಿತ ಅವಧಿಯಲ್ಲಿ ಎತ್ತಿನಹೊಳೆ ಯೋಜನೆ ಮಾಡುತ್ತೇವೆ. ಕೋಲಾರ ಭಾಗಕ್ಕೆ ನೀರು ಕೊಡುವುದು ನನಗೆ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ನಿಕಟಪೂರ್ವ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಎಲ್ಲರಿಗೂ ತೃಪ್ತಿ ಕೊಡುತ್ತದೆ.
ಇಲಾಖೆಗೆ ನೀಡಲಾಗುತ್ತಿರುವ ಅನುದಾನ ತೃಪ್ತಿಕರವಾಗಿದೆಯೇ?
- ಅನುದಾನದ ಬಗ್ಗೆ ಸಮಾಧಾನ ಇರಲು ಸಾಧ್ಯವಿಲ್ಲ. ಆದರೆ, ಅನುದಾನ ಮೀಸಲಿಡದೆ ಯೋಜನೆಗಳನ್ನು ಕೈಗೆತ್ತಿಕೊಂಡಿದ್ದು ಇಲಾಖೆ ಕೆಲಸಗಳಿಗೆ ಹಿನ್ನಡೆಯಾಗುತ್ತಿದೆ. ಸದ್ಯ ಸಾರ್ವಜನಿಕರಿಗೆ ಅಗತ್ಯವಿರುವ ಯೋಜನೆಗಳನ್ನು ಮೊದಲು ಮುಗಿಸುತ್ತೇವೆ. ಸಂಪನ್ಮೂಲ ಕ್ರೋಢೀಕರಣೆಗೆ ಇರುವ ಮಾರ್ಗಗಳನ್ನು ನೋಡುತ್ತಿದ್ದೇವೆ. ಕೇಂದ್ರ ಸರ್ಕಾರದಿಂದ ಅಥವಾ ಇನ್ಯಾವುದಾದರೂ ಮೂಲಗಳಿಂದ ಹಣಕಾಸು ನೆರವು ಪಡೆದು ಯೋಜನೆ ಪೂರ್ಣಗೊಳಿಸುತ್ತೇವೆ.
ಬರ ಪರಿಸ್ಥಿತಿಯಲ್ಲಿ ಕಾವೇರಿ ನದಿ ನೀರು ಹಂಚಿಕೆ ಕುರಿತಂತೆ ಸಂಕಷ್ಟ ಸೂತ್ರ ಕಂಡುಕೊಳ್ಳುವ ಪ್ರಯತ್ನ ನಡೆಯುತ್ತಿದೆಯೇ?
- ಕಾವೇರಿ ನದಿ ನೀರಿನ ವಿಚಾರವಾಗಿ ಈ ಹಿಂದೆ ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರು ಕರ್ನಾಟಕಕ್ಕೆ ಬರಬೇಕಿತ್ತು. ಆದರೆ, ಕಾರಣಾಂತರಗಳಿಂದ ಬಂದಿಲ್ಲ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಮಿಳುನಾಡಿಗೆ ಹೋದಾಗಲೂ ಕಾವೇರಿ ವಿಚಾರವಾಗಿ ಮಾತುಕತೆ ನಡೆಸಿದ್ದಾರೆ. ಇನ್ನು, ವಿಜಯ್ ಅವರು ಕರ್ನಾಟಕಕ್ಕೆ ಬಂದು ಚರ್ಚೆ ಮಾಡಿದರೆ ಐತಿಹಾಸಿಕ ಕ್ಷಣವಾಗುತ್ತದೆ. ಹೀಗಾಗಿ ವಿಜಯ್ ಅವರು ನಮ್ಮಲ್ಲಿಗೆ ಬರುತ್ತಾರೆಯೇ ಎಂಬುದನ್ನು ಪರಿಶೀಲಿಸುತ್ತೇನೆ. ಇನ್ನು ಬರ ಪರಿಸ್ಥಿತಿಯಲ್ಲಿ ಕಾವೇರಿ ನದಿ ನೀರು ಹಂಚಿಕೆಗೆ ಮೇಕೆದಾಟು ಯೋಜನೆ ಮಾತ್ರ ಪರಿಹಾರವಾಗಲಿದೆ.
ಮೇಕೆದಾಟು ಯೋಜನೆಯ ಪರಿಷ್ಕೃತ ಡಿಪಿಆರ್‌ನಲ್ಲಿ ಏನಿದೆ?
- ಹಳೇ ಡಿಪಿಆರ್‌ಗೆ ಸಣ್ಣ ಪುಟ್ಟ ಬದಲಾವಣೆ ಮಾಡಿದ್ದೇವೆ ಅಷ್ಟೇ. ಅರಣ್ಯ ಭೂಮಿ ಬಳಕೆಗೆ ನೀಡಬೇಕಿರುವ 12500 ಎಕರೆ ಪರ್ಯಾಯ ಭೂಮಿ ಗುರುತಿಸುವ ಕೆಲಸ ಮಾಡಲಾಗುತ್ತಿದೆ. ಈಗಾಗಲೇ ಶೇ. 60ರಷ್ಟು ಭೂಮಿ ಗುರುತಿಸಲಾಗಿದೆ. ಶಿವಮೊಗ್ಗ, ಚಿಕ್ಕಮಗಳೂರು, ಮಂಡ್ಯ, ಕೋಲಾರ ಸೇರಿದಂತೆ ಅಕ್ಕಪಕ್ಕದ 13 ಜಿಲ್ಲೆಗಳನ್ನು ಭೂಮಿ ಗುರುತಿಸಲಾಗುತ್ತಿದೆ. ಉಳಿದ ಶೇ. 40ರಷ್ಟು ಭೂಮಿಯನ್ನು ಇನ್ನು ಒಂದು ತಿಂಗಳಲ್ಲಿ ಗುರುತಿಸಲಾಗುವುದು. ಆ ಭೂಮಿಯನ್ನು ಅರಣ್ಯ ಇಲಾಖೆ ನೋಡಿ ಒಪ್ಪಿಗೆ ಸೂಚಿಸಿದರೆ, ಕರ್ನಾಟಕದಿಂದ ಎಲ್ಲ ಪ್ರಕ್ರಿಯೆ ಪೂರ್ಣವಾಗುತ್ತದೆ.
ನಿಮ್ಮ ಅವಧಿಯಲ್ಲಿಯೇ ಮೇಕೆದಾಟು ಯೋಜನೆಗೆ ಚಾಲನೆ ದೊರೆಯುತ್ತದೆಯೇ?
- ಮುಂದಿನ ಚುನಾವಣೆವರೆಗೂ ಕಾಯದೇ ಬಹಳ ಬೇಗ ಮೇಕೆದಾಟು ಯೋಜನೆಗೆ ಚಾಲನೆ ನೀಡಬೇಕು ಎಂಬುದು ನಮ್ಮ ಗುರಿ. 2027ರ ಮಾರ್ಚ್ ವೇಳೆಗೆ ಮೇಕೆದಾಟು ಯೋಜನೆಗೆ ಚಾಲನೆ ನೀಡುತ್ತೇವೆ. ಮೇಕೆದಾಟು ಯೋಜನೆ ಸಿಎಂ ಡಿ.ಕೆ. ಶಿವಕುಮಾರ್ ಅವರ ಕನಸು. ನಾವು ತಮಿಳುನಾಡಿನೊಂದಿಗೆ ಗುದ್ದಾಡದೇ ಯೋಜನೆ ಅನುಷ್ಠಾನ ಮಾಡುತ್ತೇವೆ. ತಮಿಳುನಾಡು ಸರ್ಕಾರ ಕೂಡ ಸುಪ್ರೀಂಕೋರ್ಟ್ ಆದೇಶಕ್ಕೆ ಬದ್ಧರಾಗಿರುತ್ತೇವೆ ಎಂದಿದ್ದಾರೆ. ಯೋಜನೆ ಜಾರಿಯಾದರೆ ನಮಗಿಂತ ಅವರಿಯೇ ಉಪಯೋಗ ಹೆಚ್ಚು.


