ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಸ್ನೇಹಿತೆ ಪವಿತ್ರಾ ಗೌಡ ಅವರ ಜಾಮೀನು ಅರ್ಜಿಯ ತೀರ್ಪನ್ನು ಸೆಪ್ಟೆಂಬರ್ 26ರಂದು ನ್ಯಾಯಾಲಯ ಪ್ರಕಟಿಸಲಿದೆ. ಜೈಲಿನಲ್ಲಿ ಸೆಲೆಬ್ರಿಟಿ ಸ್ಟೇಟಸ್‌ನಿಂದ ತೊಂದರೆಯಾಗುತ್ತಿದ್ದು, ಅವರಿಗೆ ಪ್ರತ್ಯೇಕ ಸೆಲ್ ಮತ್ತು ಮೂಲಸೌಕರ್ಯ ಒದಗಿಸುವಂತೆ ಕೋರ್ಟ್ ಸೂಚಿಸಿದೆ.
ಬೆಂಗಳೂರು (ಸೆ.23): ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ(Renukaswamy murder case) ಸಂಬಂಧ ಜಾಮೀನು ಕೋರಿ ಚಿತ್ರನಟ ದರ್ಶನ್ ಸ್ನೇಹಿತೆ ಪವಿತ್ರಾ ಗೌಡ(Pavitra Gowda) ಸಲ್ಲಿಸಿರುವ ಅರ್ಜಿ ಕುರಿತ ತೀರ್ಪನ್ನು ಸೆ.26ರಂದು ನಗರದ 59ನೇ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಪ್ರಕಟಿಸಲಿದೆ.
ಪವಿತ್ರಾ ಗೌಡಗೆ ಕಾರಾಗೃಹ ಕಿರಿಕಿರಿ ಒಂದೆರಡಲ್ಲ
ಅಲ್ಲದೆ, ಪವಿತ್ರಾ ಗೌಡಗೆ ಕೈದಿಗಳ ದಟ್ಟಣೆ ಕಡಿಮೆಯಿರುವ ಸೆಲ್ ನೀಡಬೇಕು. ಶೌಚಾಲಯ, ಸ್ನಾನದ ಕೋಣೆ, ಕುಡಿಯುವ ನೀರು ಸೇರಿ ಇನ್ನಿತರ ಮೂಲಸೌಕರ್ಯ ಕಲ್ಪಿಸಬೇಕು ಎಂದು ಸೂಚಿಸಿ 2026ರ ಸೆ.7ರಂದು ನೀಡಿರುವ ನಿರ್ದೇಶನಗಳನ್ನು ಪಾಲಿಸಿರುವ ಬಗ್ಗೆ ಸೆ.26ರಂದೇ ವರದಿ ಸಲ್ಲಿಸುವಂತೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಅಧಿಕಾರಿಗಳಿಗೆ ಕೋರ್ಟ್ ನಿರ್ದೇಶಿಸಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಸುಜಾತಾ ಎಂ. ಸಾಂಬ್ರಾಣಿ ಅವರು ಈ ನಿರ್ದೇಶನ ನೀಡಿದ್ದಾರೆ. ಇದೇ ವೇಳೆ ಸಹ ಆರೋಪಿಗಳಾದ ಜಗದೀಶ್ ಮತ್ತು ಅನುಕುಮಾರ್ ಅವರ ಜಾಮೀನು ಅರ್ಜಿಗಳ ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿದ್ದಾರೆ.
ಪವಿತ್ರಾಗೌಡಗೆ ಜೈಲಿನಲ್ಲಿ ತೊಂದರೆ ಎಂದ ವಕೀಲ
ಪವಿತ್ರಾ ಗೌಡ ಪರ ವಕೀಲರು ವಾದಿಸಿ, ಸೆಲೆಬ್ರಿಟಿ ಸ್ಟೇಟಸ್‌ನಿಂದ ಪವಿತ್ರಾ ಗೌಡ ಜೈಲಿನಲ್ಲಿ ಹಲವು ತೊಂದರೆಗಳನ್ನು ಎದುರಿಸುತ್ತಿದ್ದಾರೆ. ಆಕೆಯ ವರ್ಚಸ್ಸಿಗೆ ಯಾವುದೇ ರಕ್ಷಣೆ ಇಲ್ಲದಂತಾಗಿದೆ. ತನಗಿರುವ ತೊಂದರೆಗಳನ್ನು ವಿವರಿಸಿ ನ್ಯಾಯಾಲಯಕ್ಕೆ ಅವರು ಪತ್ರ ಬರೆಯಲು ಅನುಮತಿ ನೀಡಬೇಕು ಎಂದು ನ್ಯಾಯಾಲಯದ ಗಮನಕ್ಕೆ ತಂದರು. ಅದನ್ನು ಪರಿಗಣಿಸಿದ ನ್ಯಾಯಾಲಯ, ಪವಿತ್ರಾ ಗೌಡಗೆ ಪ್ರತ್ಯೇಕ ಸೆಲ್ ಕಲ್ಪಿಸುವ ಬಗ್ಗೆ ಸೆ.7ರಂದು ಹೊರಡಿಸಿರುವ ಆದೇಶದ ಅನುಪಾಲನಾ ವರದಿ ಸಲ್ಲಿಸುವಂತೆ ಜೈಲು ಜೈಲು ಅಧಿಕಾರಿಗಳಿಗೆ ಸೂಚಿಸಿತು.
ವಿಚಾರಣೆ ವೇಳೆ ದರ್ಶನ್ ಪರ ವಕೀಲರು, ಪ್ರದೂಷ್‌ನನ್ನು ಮಾಫಿ ಸಾಕ್ಷಿಯಾಗಿ ಪರಿಗಣಿಸಿ ಸೆ.16ರಂದು ಈ ನ್ಯಾಯಾಲಯ ಹೊರಡಿಸಿರುವ ಆದೇಶವನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗಿದೆ. ಅದು ಹೈಕೋರ್ಟ್ ಮುಂದೆ ಗುರುವಾರ ವಿಚಾರಣೆಗೆ ನಿಗದಿಯಾಗಲಿದೆ. ಹಾಗಾಗಿ ಸಾಕ್ಷ್ಯ ಹೇಳಿಕೆ ದಾಖಲಿಸಲು ಪ್ರದೂಷ್‌ಗೆ ಸಮನ್ಸ್ ಜಾರಿ ಮಾಡುವುದನ್ನು ತಡೆಹಿಡಿಯಬೇಕು ಎಂದು ಕೋರಿದರು.
ವಿಶೇಷ ಸರ್ಕಾರಿ ಅಭಿಯೋಜಕರು, ಪ್ರದೂಷ್ ವಿಚಾರಣೆಗೆ ದಿನಾಂಕ ನಿಗದಿಪಡಿಸುವ ಕುರಿತು ಬುಧವಾರ ಆದೇಶ ಮಾಡಬೇಕು ಎಂದು ಮನವಿ ಮಾಡಿದರು.


