ಹೋಟೆಲ್ಗಳಲ್ಲಿ ಸಿಗುವಂತಹ ರುಚಿಕರವಾದ ಕೊಬ್ಬರಿ ಚಟ್ನಿಯನ್ನು ಮನೆಯಲ್ಲಿಯೇ ತಯಾರಿಸಲು ಹಲವರು ಬಯಸುತ್ತಾರೆ, ಆದರೆ ಆ ರುಚಿ ಬರುವುದಿಲ್ಲ. ಈ ಲೇಖನದಲ್ಲಿ, ಹೋಟೆಲ್ ಶೈಲಿಯ ಹಸಿಮೆಣಸಿನಕಾಯಿ ಚಟ್ನಿ ಮಾಡಲು ಐದು ಸರಳ ಮತ್ತು ರಹಸ್ಯ ಟಿಪ್ಸ್‌ಗಳನ್ನು ನೀಡಲಾಗಿದೆ. ಕೊಬ್ಬರಿ, ಮೆಣಸು, ಮತ್ತು ರುಬ್ಬುವ ವಿಧಾನದಲ್ಲಿನ ಸಣ್ಣ ಬದಲಾವಣೆಗಳು ಚಟ್ನಿಯ ರುಚಿಯನ್ನು ಹೇಗೆ ಹೆಚ್ಚಿಸುತ್ತವೆ ಎಂದು ವಿವರಿಸಲಾಗಿದೆ.
ಮನೆಯಲ್ಲಿ ಇದ್ದಾಗ ಹೋಟೆಲ್ ಸ್ಟೈಲ್ ಟೇಸ್ಟ್ ಬೇಕು ಎನ್ನೋದು, ಹೋಟೆಲ್ಗೆ ಹೋದರೆ, ನಮ್ಮಜ್ಜಿ, ನಮ್ಮಮ್ಮ ಮಾಡ್ತಿರೋ ಟೇಸ್ಟ್ ಬೇಕು ಎನ್ನೋದು ಇವೆಲ್ಲವೂ ಇದ್ದದ್ದೇ. ಮನೆಯಲ್ಲಿ ಇರುವಾಗ ಹೋಟೆಲ್ ತಿನಿಸು ಚೆನ್ನಾಗಿ ಇದೆ ಎನ್ನಿಸಿದರೆ, ಹೋಟೆಲ್ನವರು ಜನರನ್ನು ಆಕರ್ಷಿಸಲು, ಅಮ್ಮನ ಕೈರುಚಿ, ಮನೆಯಡುಗೆ, ಅಜ್ಜಿಯ ಕೈರುಚಿ... ಹೀಗೆ ಹೋಟೆಲ್, ರೆಸ್ಟೋರೆಂಟ್ ಹೆಸರು ಇಡುತ್ತಾರೆ. ಅದೇನೇ ಇರಲಿ. ಕೆಲವೊಂದು ತಿನಿಸುಗಳು ಏನೇ ಮಾಡಿದ್ರೂ ಹೋಟೆಲ್ ಟೇಸ್ಟ್ ಬರೋದೇ ಇಲ್ಲ ಎನ್ನುವ ಕೊರಗು ಹಲವು ಮಹಿಳೆಯರದ್ದು ಇದ್ದೇ ಇರುತ್ತದೆ. ಅವರೇನೋ ಮಿಕ್ಸ್ ಮಾಡ್ತಾರೆ, ಏನೋ ಕೆಮಿಕಲ್ಸ್ ಹಾಕ್ತಾರೆ, ಏನೋ ಟೇಸ್ಟಿಂಗ್ ಪೌಡರ್ ಹಾಕ್ತಾರೆ... ಹೀಗೆ ಏನೇನೋ ಕಲ್ಪನೆ ಮಾಡಿಕೊಂಡು ಸಮಾಧಾನ ಪಟ್ಟುಕೊಳ್ಳುವುದೂ ಇದೆ.
ಕೊಬ್ಬರಿ ಚಟ್ನಿಯ ರುಚಿ
ಆದರೆ ಅಸಲಿಗೆ ಎಲ್ಲಾ ಸಮಯದಲ್ಲಿಯೂ ಹೀಗೆ ಆಗಿರುವುದಿಲ್ಲ. ಕೆಲವೊಮ್ಮೆ ಮಾಡುವ ಚಿಕ್ಕಪುಟ್ಟ ಚೇಂಜಸ್ನಿಂದ ಹೋಟೆಲ್ ಸ್ಟೈಲ್ನಲ್ಲಿ ಮನೆಯಲ್ಲಿಯೂ ಮಾಡಿಕೊಂಡು ತಿನ್ನಬಹುದು. ಅವುಗಳಲ್ಲಿ ಒಂದು ಹಸಿಮೆಣಸಿನಕಾಯಿ ಚಟ್ನಿ. ಸಾಮಾನ್ಯವಾಗಿ ಎಲ್ಲಾ ಹೋಟೆಲ್ಗಳಲ್ಲಿಯೂ, ಬಹುತೇಕ ತಿನಿಸುಗಳಿಗೆ ಈ ಚಟ್ನಿ ಇದ್ದೇ ಇರುತ್ತದೆ. ಆದರೆ ಕೆಲವೊಂದು ಹೋಟೆಲ್ಗಳು ಈ ಚಟ್ನಿಗೇ ಫೇಮಸ್ ಆಗಿದ್ದರೆ, ಅವೇ ಸಾಮಗ್ರಿ ಹಾಕಿ ಮಾಡುವ ಕೆಲವು ಕಡೆಗಳಲ್ಲಿ ಚೆನ್ನಾಗಿ ಇರುವುದೇ ಇಲ್ಲ, ಮನೆಯಲ್ಲಿಯೂ ಕೆಲವೊಮ್ಮೆ ಅದು ಟೇಸ್ಟಿ ಎನ್ನಿಸುವುದಿಲ್ಲ. ಹಾಗಿದ್ದರೆ, ಗ್ರೀನ್ ಚಟ್ನಿಯನ್ನು ಟೇಸ್ಟಿ ಟೇಸ್ಟಿ ಮಾಡಲು ಐದು ಟಿಪ್ಸ್ ಏನು ಎನ್ನೋದನ್ನು ಇಲ್ಲಿ ತಿಳಿಸಲಾಗಿದೆ.
ಐದು ಟಿಪ್ಸ್ ಇಲ್ಲಿವೆ
1. ಮೊದಲ ಸೀಕ್ರೆಟ್, ಎಂದರೆ ಕೊಬ್ಬರಿಯನ್ನು ಮಿಕ್ಸಿಗೆ ಹಾಕುವಾಗ ಅದರ ಬ್ರೌನ್ ಕಲರ್ ತೆಗೆಯಿರಿ. ಸಿಪ್ಪೆ ತೆಗೆದು ಕೇವಲ ಬಿಳಿಯ ಕೊಬ್ಬರಿ ಮಾತ್ರ ಹಾಕಿ.
2. ಎರಡನೆಯ ಸೀಕ್ರೆಟ್, ಟೇಸ್ಟ್ಗೆ ತಕ್ಕಂತೆ ಹಸಿಮೆಣಸಿನ ಕಾಯಿ ಹಾಕಿ. ಒಣ ಮೆಣಸು ಅರ್ಥಾತ್ ಕೆಂಪು ಮೆಣಸನ್ನು ಒಗ್ಗರಣೆ ಮಾತ್ರ ಬಳಸಿ.
3. ಇದಕ್ಕೆ ಸ್ವಲ್ಪವೇ ಸ್ವಲ್ಪ ಕಡಲೆಬೇಳೆಯನ್ನು ಸೇರಿಸಿ. ಹೆಚ್ಚಾದರೆ ಟೇಸ್ಟ್ ಹಾಳಾಗುತ್ತದೆ.
4. ಇದಕ್ಕೆ ಅರ್ಧ ನೀರು, ಅರ್ಧ ಹಾಲು ಸೇರಿಸಿ ಮಿಕ್ಸಿ ಮಾಡಿ.
5. ಮಿಕ್ಸಿಯನ್ನು ದೀರ್ಘ ಕಾಲ ಮಾಡಬೇಡಿ. ಸ್ವಿಚ್ ಆನ್ ಮಾಡುತ್ತಲೇ ಆಫ್ ಮಾಡಿ. ಇಲ್ಲದಿದ್ದರೆ ಜಾರ್ ಒಳಗೆ ಹೀಟ್ ಆಗಿ ಚಟ್ನಿಯ ಟೇಸ್ಟ್ ಹಾಳಾಗುತ್ತದೆ.


