ಟಿ.ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಯು ಮಸೀದಿ ಮುಂಭಾಗ ಸಾಗಬಾರದು ಮತ್ತು ಪಟಾಕಿ ಸಿಡಿಸಬಾರದು ಎಂದು ಪೊಲೀಸ್ ಇನ್‌ಸ್ಪೆಕ್ಟರ್ ನೀಡಿದ ಎಚ್ಚರಿಕೆಯು ತೀವ್ರ ವಿವಾದಕ್ಕೆ ಕಾರಣವಾಗಿದೆ. ಈ ಹೇಳಿಕೆಯನ್ನು ಖಂಡಿಸಿರುವ ಸಂಸದ ಯದುವೀರ್ ಒಡೆಯರ್ ಮತ್ತು ಮಾಜಿ ಸಂಸದ ಪ್ರತಾಪ್ ಸಿಂಹ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ಇದು ದೊಡ್ಡ ರಾಜಕೀಯ ಜಟಾಪಟಿಗೆ ಕಾರಣವಾಗಿದೆ.

ಮೈಸೂರು: ಜಿಲ್ಲೆ ಟಿ.ನರಸೀಪುರದ ಗಣೇಶೋತ್ಸವ ಮೆರವಣಿಗೆ ವಿಚಾರ ಇದೀಗ ತೀವ್ರ ರಾಜಕೀಯ ಜಟಾಪಟಿಗೆ ಕಾರಣವಾಗಿದೆ. ಲಿಂಕ್ ರಸ್ತೆಯಲ್ಲಿ, ಮಸೀದಿ ಮುಂಭಾಗ ಮೆರವಣಿಗೆ ಹೋಗಬಾರದು ಹಾಗೂ ಪಟಾಕಿ ಸಿಡಿಸಬಾರದು ಎಂದು ಇನ್‌ಸ್ಪೆಕ್ಟರ್ ಧನಂಜಯ ನೀಡಿದ್ದ ಎಚ್ಚರಿಕೆ ವಿಡಿಯೋ ವೈರಲ್ ಆಗಿದೆ. ಅಧಿಕಾರಿ ಧಮ್ಕಿ ಬೆನ್ನಲ್ಲೇ ಬಿಜೆಪಿ ನಾಯಕರು ಸಿಡಿದಿದ್ದು, ಸಂಸದ ಯದುವೀರ್ ಒಡೆಯರ್, ಮಾಜಿ ಸಂಸದ ಪ್ರತಾಪ್ ಸಿಂಹ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಟಿ.ನರಸೀಪುರ ಗಣೇಶೋತ್ಸವ

ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಟಿ.ನರಸೀಪುರ ಪೊಲೀಸ್ ಠಾಣೆಯಲ್ಲಿ ನಡೆದ ಶಾಂತಿ ಸಭೆಯಲ್ಲಿ ಇನ್‌ಸ್ಪೆಕ್ಟರ್ ಧನಂಜಯ ಆಡಿದ ಮಾತುಗಳು ಭಾರೀ ಚರ್ಚೆಗೆ ಗ್ರಾಸವಾಗಿವೆ. ನಾವು ಸೂಚಿಸಿದ ಮಾರ್ಗದಲ್ಲೇ ಮೆರವಣಿಗೆ ಸಾಗಬೇಕು. ಮಸೀದಿ ಮುಂಭಾಗ ಪಟಾಕಿ ಹೊಡೆದರೆ ಗ್ರಹಚಾರ ಬಿಡಿಸುತ್ತೇನೆ ಎಂದು ಎಚ್ಚರಿಕೆ ನೀಡಿದ್ದರು. ಸಾರ್ವಜನಿಕ ಸಭೆಯಲ್ಲಿ ಅಧಿಕಾರಿ ಈ ರೀತಿ ಏಕವಚನ ಹಾಗೂ ಹದ್ದುಮೀರಿ ಮಾತನಾಡಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಪೊಲೀಸ್ ಅಧಿಕಾರಿಯ ನಡೆಯನ್ನು ಮೈಸೂರು-ಕೊಡಗು ಸಂಸದ ಯದುವೀರ್ ಒಡೆಯರ್ ತೀವ್ರವಾಗಿ ಖಂಡಿಸಿದ್ದಾರೆ. ರಾಜ್ಯ ಸರ್ಕಾರ ಹಿಂದೂ ವಿರೋಧಿಯಾಗಿದ್ದು, ಕಳೆದ ಮೂರು ವರ್ಷಗಳಿಂದ ಹಿಂದೂಗಳ ಹಬ್ಬಗಳಿಗೆ ನಿರಂತರವಾಗಿ ಕಠಿಣ ಷರತ್ತುಗಳನ್ನು ಹೇರುತ್ತಿದೆ. ದೇವಸ್ಥಾನ ಅಥವಾ ಮಸೀದಿ ಇದೆ ಎಂದು ಸಾರ್ವಜನಿಕ ರಸ್ತೆಯಲ್ಲಿ ಮೆರವಣಿಗೆ ನಿರ್ಬಂಧಿಸುವುದು ತಪ್ಪು. ಸರ್ಕಾರವೇ ಸಾರ್ವಜನಿಕರಲ್ಲಿ ಭೇದಭಾವ ಹುಟ್ಟುಹಾಕುತ್ತಿದೆ ಎಂದು ಕಿಡಿಕಾರಿದ್ದಾರೆ.

ಅಧಿಕಾರಿಯ ಎಚ್ಚರಿಕೆಯಿಂದ ರಾಜಕೀಯ ಕಿಡಿ

ಇನ್ನೊಂದೆಡೆ ಮಾಜಿ ಸಂಸದ ಪ್ರತಾಪ್ ಸಿಂಹ ಇನ್‌ಸ್ಪೆಕ್ಟರ್ ಧನಂಜಯ ವಿರುದ್ಧ ಬೆಂಕಿ ಉಗುಳಿದ್ದಾರೆ. ಬ್ರಿಟಿಷರ ಕಾಲದ ದರ್ಪವನ್ನು ಪೊಲೀಸರು ತಮ್ಮ ಮನೆಯಲ್ಲಿ ಇಟ್ಟುಕೊಳ್ಳಲಿ. ಯುವಕರಿಗೆ ಧಮ್ಕಿ ಹಾಕಲು ನೀವ್ಯಾರು? ಇನ್ನೊಮ್ಮೆ ಈ ರೀತಿ ಮಾತನಾಡಿದರೆ ನಾನೇ ನೇರವಾಗಿ ಠಾಣೆಗೆ ನುಗ್ಗುತ್ತೇನೆ. ಮಸೀದಿಗಳಲ್ಲಿ ದಿನಕ್ಕೆ ಐದು ಬಾರಿ ಕೂಗುವ ಕೂಗಿಗೆ ಇಲ್ಲದ ನಿಯಮ, ಹಿಂದೂಗಳ ಹಬ್ಬಕ್ಕೆ ಮಾತ್ರ ಏಕೆ? ಎಂದು ಪ್ರಶ್ನೆ ಮಾಡಿದ್ದಾರೆ.

ಮತ್ತೊಂದೆಡೆ ಸ್ಥಳೀಯ ಬಿಜೆಪಿ ಮುಖಂಡ ಅರ್ಜುನ್ ರಮೇಶ್ ಕೂಡ ಆಡಳಿತ ವರ್ಗದ ವಿರುದ್ಧ ತೀವ್ರ ಪ್ರತಿರೋಧ ವ್ಯಕ್ತಪಡಿಸಿದ್ದಾರೆ. ಟಿ.ನರಸೀಪುರದ ಇತಿಹಾಸದಲ್ಲೇ ಕೋಮು ಗಲಭೆಯಾಗಿಲ್ಲ. ಲಿಂಕ್ ರಸ್ತೆಯನ್ನು ಬೇಕೆಂದೇ ಮಸೀದಿ ರಸ್ತೆ ಎಂದು ಬಿಂಬಿಸಿ ಅಧಿಕಾರಿಗಳು ಕಾಂಗ್ರೆಸ್ ಏಜೆಂಟರಂತೆ ವರ್ತಿಸುತ್ತಿದ್ದಾರೆ. ಹಿಟ್ಲರ್ ನೀತಿಯನ್ನು ಜನರ ಮೇಲೆ ಹೇರಲು ಮುಂದಾದರೆ. ಲಿಂಕ್ ರಸ್ತೆಯಲ್ಲೇ ಸಾಮೂಹಿಕ ಗಣೇಶ ವಿಸರ್ಜನೆ ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

​ಒಟ್ಟಾರೆ ಶಾಂತಿ ಸಭೆಯಲ್ಲಿ ಪೊಲೀಸ್ ಅಧಿಕಾರಿ ಬಳಸಿದ ಭಾಷೆ ಹಬ್ಬಕ್ಕೂ ಮುನ್ನವೇ ತಾಲೂಕಿನಲ್ಲಿ ಭಾರೀ ಬಿರುಗಾಳಿ ಎಬ್ಬಿಸಿದ್ದು, ಪರಿಸ್ಥಿತಿ ಸೂಕ್ಷ್ಮ ಹಂತಕ್ಕೆ ತಲುಪಿದೆ. (ವರದಿ: ಮಧು.ಎಂ.ಚಿನಕುರಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಮೈಸೂರು) 

YouTube video player