ಸಾಮಾಜಿಕ ಜಾಲತಾಣದಲ್ಲಿ ಜನಪ್ರಿಯವಾಗಿರುವ 1980ರ ದಶಕದ ಫೋಟೋ ಎಡಿಟಿಂಗ್ ಟ್ರೆಂಡ್ ಅನ್ನು ಸೈಬರ್ ವಂಚಕರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ನಕಲಿ ಆ್ಯಪ್‌ಗಳ ಮೂಲಕ ವೈಯಕ್ತಿಕ ಮಾಹಿತಿ, ಫೋಟೋಗಳನ್ನು ಕದ್ದು, ಡೀಪ್‌ಫೇಕ್ ತಂತ್ರಜ್ಞಾನ ಬಳಸಿ ಬ್ಲಾಕ್‌ಮೇಲ್ ಮಾಡುವ ಅಪಾಯದ ಬಗ್ಗೆ ಕರ್ನಾಟಕ ಪೊಲೀಸರು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ.

ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಹಳೆಯ ನೆನಪುಗಳನ್ನು ರೂಪಿಸಿಕೊಳ್ಳುವಂತಹ 1980 ಟ್ರೆಂಡ್ ಲುಕ್ ಫೋಟೋ ಎಡಿಟಿಂಗ್ ಕ್ರೇಜ್ ಈಗ ಸೈಬರ್ ಆರೋಪಿಗಳಿಗೆ ವರವಾಗಿ ಮಾರ್ಪಾಡಾಗಿದೆ. ತಮ್ಮ ಇತ್ತೀಚಿನ ಫೋಟೋಗಳನ್ನು ಹಳೆಯ ಕಾಲದ ರೆಟ್ರೋ ಶೈಲಿಯ, 80ರ ದಶಕದ ಬ್ಲಾಕ್ ಅಂಡ್ ವೈಟ್ ಅಥವಾ ನೆಪಿಯಾ ಟೋನ್‌ಗೆ ಬದಲಾವಣೆ ಮಾಡಿಕೊಳ್ಳಲು ಯುವ ಜನತೆ ಸೇರಿದಂತೆ ಹಲವು ಜನರು ಮುಂದಾಗುತ್ತಿದ್ದಾರೆ.

1980ರ ಟ್ರೆಂಡ್: ನಿಮ್ಮ ಫೋಟೋಗೆ ಕಾದಿದೆಯೇ ಸೈಬರ್ ಕಂಟಕ?

ಇದನ್ನೇ ಬಂಡವಾಳ ಮಾಡಿಕೊಂಡ ಸೈಬರ್ ಖದೀಮರು ಥರ್ಡ್ ಪಾರ್ಟಿ ಮೊಬೈಲ್ ಆಪ್, ಎಐ ಟೂಲ್ಸ್ ಹೆಸರಿನಲ್ಲಿ ನಕಲಿ ಎಪಿಕೆ ಲಿಂಕ್‌ಗಳನ್ನು ಪರಿಚಯ ಮಾಡಿಸುತ್ತಿದ್ದಾರೆ. ಆ ಮೂಲಕ ಮೊಬೈಲ್‌ಗಳಿಗೆ ಲಗ್ಗೆ ಇಡುತ್ತಿದ್ದಾರೆ. ಫ್ರೀಯಾಗಿ ಎಐ ಇಮೇಜ್ ಮಾಡಿಕೊಡುತ್ತೇವೆ ಅಂತ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಚಾರ ಮಾಡುತ್ತಾ, ಲಿಂಕ್‌ಗಳನ್ನು ಕಳುಹಿಸಿಕೊಡುತ್ತಿದ್ದಾರೆ. ಆ ಮೂಲಕ ಸೆಂಬರ್ ವಂಚನೆ ಬಲೆಗೆ ಕೆಡವುತ್ತಿದ್ದಾರೆ.

ಇದರೊಂದಿಗೆ ಕರ್ನಾಟಕ ರಾಜ್ಯ ಪೊಲೀಸರು ಸಾರ್ವಜನಿಕರಿಗೆ ಎಚ್ಚರಿಕೆಯ ಸಂದೇಶ ರವಾನೆ ಮಾಡಿದ್ದಾರೆ. 1980ರ ಟ್ರೆಂಡ್ ಹಿಂದೆ ಬಿದ್ದು ಆನ್ಲೈನ್ ಗೆ ಫೋಟೋ ಅಪ್ಲೋಡ್ ಮುನ್ನ ಎಚ್ಚರವಾಗಿರಿ, ಟ್ರೆಂಡ್ ಗೋಸ್ಕರ ಅಪರಿಚಿತ ಆ್ಯಪ್ ಗಳಿಗೆ ಫೋಟೋ ಅಪ್‌ಲೋಡ್ ಮಾಡುವ ಮುನ್ನ ಎಚ್ಚರ ವಹಿಸಿ. ಮೊಬೈಲ್ ಗ್ಯಾಲರಿ ಅನುಮತಿಯನ್ನ ಪಡೆದುಕೊಂಡು ವೈಯುಕ್ತಿಕ ಮಾಹಿತಿ ಮತ್ತು ದಾಖಲೆ ಕದಿಯುವ ಸಾಧ್ಯತೆಗಳು ಇದೆ ಎಂದು ತಿಳಿಸಿದ್ದಾರೆ.

ಬಳಕೆದಾರರು ತಮಗೆ ಅರಿವೇ ಇಲ್ಲದಂತೆ ನೀಡುತ್ತಿರುವ ಕೆಲವು ಅನುಮತಿಗಳು ನೆಟ್ ಬ್ಯಾಂಕಿಂಗ್ ಅಪ್ಗಳ ನಿಯಂತ್ರಣಕ್ಕೆ ಸೈಬರ್ ಖದೀಮರಿಗೆ ಅನುಕೂಲವಾಗಿರುತ್ತದೆ. ಕೆಲವು ಸಂದರ್ಭದಲ್ಲಿ ಬಳಕೆದಾರರು ಅಪ್‌ಲೋಡ್ ಮಾಡಿದ ವೈಯುಕ್ತಿಕ ಫೋಟೋಗಳನ್ನು ಡೀಪ್ ಫೇಕ್ ಮಾಡಿ ತಂತ್ರಜ್ಞಾನದೊಂದಿಗೆ ಬದಲಾವಣೆ ಮಾಡಿ, ಅವರ ಸಂಬಂಧಿಕರಿಗೆ ಕಳುಹಿಸಿ ಬೆದರಿಕೆ ಹಾಕುವ ಸಾಧ್ಯತೆಗಳು ಇದೆ.

ಇಂತಹ ಯಾವುದೇ ಅನುಮಾಸ್ಪದ ಲಿಂಕ್‌ಗಳು ಕಂಡು ಬಂದರೆ ಅಥವಾ ಯಾವುದೇ ಸಮಸ್ಯೆ, ವಂಚನೆಗಳು ಆದರೆ ಕೂಡಲೇ ಸೈಬರ್ ಹೆಲ್ಪ್ ಲೈನ್ ಸಂಖ್ಯೆ 1930ಗೆ ಕರೆ ಮಾಡಲು ಮನವಿ ಕರ್ನಾಟಕ ಪೊಲೀಸರು ಮನವಿ ಮಾಡಿದ್ದಾರೆ. ಅನಗತ್ಯ ಲಿಂಕ್ ಮೇಲೆ ಕ್ಲಿಕ್ ಮಾಡಬೇಡಿ ಅಥವಾ ಅನಧಿಕೃತ ಅಪ್‌ಗಳನ್ನು ಮೊಬೈಲ್‌ನಲ್ಲಿ ಇನ್‌ಸ್ಟಾಲ್ ಮಾಡಬೇಡಿ. ಆ ಮೂಲಕ ನೀವೇ ಸೈಬರ್ ಕಳ್ಳರಿಗೆ ಸುಲಭ ದಾರಿ ಮಾಡಿಕೊಡಬೇಡಿ. ಟ್ರೆಂಡ್ ಗಿಂತ ಸುರಕ್ಷತೆ ಮುಖ್ಯ- ಎಚ್ಚರಿಕೆ ವಹಿಸಿ ಸುರಕ್ಷಿತವಾಗಿರಿ ಎಂಬ ಸಂದೇಶವನ್ನು ನೀಡಿದ್ದಾರೆ.