ಗಣೇಶ ಹಬ್ಬಕ್ಕೆ ಕ್ಷಣಗಣನೆ ಆರಂಭವಾಗುತ್ತಿದ್ದಂತೆ ಗಂಗಾವತಿ ನಗರದಲ್ಲಿ ಹಬ್ಬದ ಸಂಭ್ರಮ ಕಳೆಗಟ್ಟಿದೆ. ಗಣೇಶ ವಿಗ್ರಹಗಳು, ಹೂವು, ಹಣ್ಣು ಹಾಗೂ ಪೂಜಾ ಸಾಮಗ್ರಿಗಳ ಖರೀದಿಗೆ ಜನರು ಮುಗಿಬಿದ್ದಿದ್ದು, ಬೇಡಿಕೆ ಹೆಚ್ಚಾದ ಹಿನ್ನೆಲೆಯಲ್ಲಿ ವಿಗ್ರಹ ಸೇರಿದಂತೆ ಹಲವು ವಸ್ತುಗಳ ಬೆಲೆ ಏರಿಕೆಯಾಗಿದೆ.

ರಾಮಮೂರ್ತಿ ನವಲಿ

ಗಂಗಾವತಿ (ಸೆ.13): ಗೌರಿ-ಗಣೇಶ ಹಬ್ಬಕ್ಕೆ ಕ್ಷಣಗಣನೆ ಆರಂಭವಾಗುತ್ತಿದ್ದಂತೆ ಗಂಗಾವತಿ ನಗರದಲ್ಲಿ ಹಬ್ಬದ ಸಂಭ್ರಮ ಕಳೆಗಟ್ಟಿದೆ. ಗಣೇಶ ವಿಗ್ರಹಗಳು, ಹೂವು-ಹಣ್ಣುಗಳು ಸೇರಿದಂತೆ ಹಬ್ಬಕ್ಕೆ ಅಗತ್ಯವಿರುವ ವಸ್ತುಗಳ ಖರೀದಿಗೆ ಜನರು ಮುಗಿಬಿದ್ದಿದ್ದು, ನಗರದ ಪ್ರಮುಖ ಮಾರುಕಟ್ಟೆ ಪ್ರದೇಶಗಳಲ್ಲಿ ವ್ಯಾಪಾರ ಚಟುವಟಿಕೆಗಳು ಗರಿಗೆದರಿವೆ. ಇದರ ಬೆನ್ನಲ್ಲೇ ಗಣೇಶ ವಿಗ್ರಹಗಳು ಸೇರಿದಂತೆ ವಿವಿಧ ವಸ್ತುಗಳ ಬೆಲೆ ಕೂಡ ಏರಿಕೆಯಾಗಿದೆ.

ವಿವಿಧ ಜಿಲ್ಲೆಗಳಿಂದ ಆಗಮಿಸಿದ ಕಲಾವಿದರು

ಗಣೇಶ ವಿಗ್ರಹಗಳ ಮಾರಾಟಕ್ಕಾಗಿ ಕಿನ್ನಾಳ, ಭಾಗ್ಯನಗರ, ಕನಕಗಿರಿ ಹಾಗೂ ಹೊಸಪೇಟೆ ಸೇರಿದಂತೆ ವಿವಿಧ ಪ್ರದೇಶಗಳಿಂದ ಕಲಾವಿದರು ಗಂಗಾವತಿಗೆ ಆಗಮಿಸಿದ್ದಾರೆ. ಸ್ಥಳೀಯ ಕಲಾವಿದರು ಕೂಡ ವಿವಿಧ ವಿನ್ಯಾಸ ಮತ್ತು ಗಾತ್ರದ ಗಣೇಶ ಮೂರ್ತಿಗಳನ್ನು ತಯಾರಿಸಿ ಮಾರಾಟಕ್ಕೆ ಇಟ್ಟಿದ್ದಾರೆ.

ನಗರದ ಗಾಂಧಿ ವೃತ್ತ, ಬಸವಣ್ಣ ವೃತ್ತ ಹಾಗೂ ಗುಂಡಮ್ಮ ಕ್ಯಾಂಪ್ ಸೇರಿದಂತೆ ಪ್ರಮುಖ ಪ್ರದೇಶಗಳಲ್ಲಿ ಗಣೇಶ ವಿಗ್ರಹಗಳ ಮಾರಾಟ ನಡೆಯುತ್ತಿದೆ. ಗಾತ್ರ ಹಾಗೂ ವಿನ್ಯಾಸಕ್ಕೆ ಅನುಗುಣವಾಗಿ ಗಣೇಶ ಮೂರ್ತಿಗಳಿಗೆ ಬೆಲೆ ನಿಗದಿಯಾಗಿದ್ದು, ಸುಮಾರು ₹300ರಿಂದ ₹3 ಸಾವಿರದವರೆಗೆ ವಿಗ್ರಹಗಳು ಮಾರಾಟವಾಗುತ್ತಿವೆ. ಬೆಲೆ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಗ್ರಾಹಕರು ವ್ಯಾಪಾರಿಗಳೊಂದಿಗೆ ಬೆಲೆ ಚೌಕಾಸಿ ನಡೆಸುತ್ತಿರುವ ದೃಶ್ಯ ಸಾಮಾನ್ಯವಾಗಿದೆ.

ಆಂಧ್ರ, ತೆಲಂಗಾಣದಿಂದಲೂ ಗಣೇಶ ಮೂರ್ತಿಗಳಿಗೆ ಬೇಡಿಕೆ

ಗಂಗಾವತಿ ನಗರದಲ್ಲಿ ವಿವಿಧ ಸಂಘ-ಸಂಸ್ಥೆಗಳು ಪ್ರತಿಷ್ಠಾಪಿಸುವ ಬೃಹತ್ ಗಣೇಶ ಮೂರ್ತಿಗಳಿಗೆ ಈ ಬಾರಿ ಆಂಧ್ರ ಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಿಂದಲೂ ಬೇಡಿಕೆ ಬಂದಿದೆ. ದೊಡ್ಡ ಗಾತ್ರದ ಗಣೇಶ ವಿಗ್ರಹಗಳನ್ನು ಮುಂಗಡವಾಗಿ ಬುಕ್ ಮಾಡಲಾಗಿದ್ದು, ಕೆಲವರು ಹಬ್ಬಕ್ಕೂ ಮುನ್ನವೇ ₹20 ಸಾವಿರದಿಂದ ₹50 ಸಾವಿರದವರೆಗೆ ಮುಂಗಡ ಹಣ ನೀಡಿದ್ದಾರೆ. ಕೆಲವು ಸಂಘ-ಸಂಸ್ಥೆಗಳು ಕನಿಷ್ಠ ₹1 ಲಕ್ಷದಿಂದ ₹2 ಲಕ್ಷದವರೆಗೆ ಬೆಲೆಬಾಳುವ ಗಣೇಶ ವಿಗ್ರಹಗಳನ್ನು ಖರೀದಿಸಿರುವುದು ವಿಶೇಷ. ಹೀಗಾಗಿ ದೊಡ್ಡ ಗಣೇಶ ಮೂರ್ತಿಗಳ ತಯಾರಿ ಮತ್ತು ಮಾರಾಟಕ್ಕೂ ಉತ್ತಮ ಬೇಡಿಕೆ ಕಂಡುಬಂದಿದೆ.

ಹೂವು, ಹಣ್ಣು ಸೇರಿದಂತೆ ಪೂಜಾ ಸಾಮಗ್ರಿಗಳ ಬೆಲೆ ಏರಿಕೆ

ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಹೂವು, ಹಣ್ಣು, ಬಾಳೆಕಂಬ ಸೇರಿದಂತೆ ಪೂಜೆಗೆ ಅಗತ್ಯವಿರುವ ವಸ್ತುಗಳ ಮಾರಾಟವೂ ಜೋರಾಗಿದೆ. ಹಬ್ಬದ ಸಂದರ್ಭದಲ್ಲಿ ಬೇಡಿಕೆ ಹೆಚ್ಚಿರುವುದರಿಂದ ಬೆಲೆ ಕೂಡ ಏರಿಕೆಯಾಗಿದೆ. ಗಂಗಾವತಿ ನಗರದಲ್ಲಿ ವರ್ಷವಿಡೀ ಹೂವು, ಹಣ್ಣು ಹಾಗೂ ಬಾಳೆಕಂಬಗಳ ಬೆಲೆ ತುಸು ಹೆಚ್ಚಾಗಿಯೇ ಇರುತ್ತದೆ. ಇದೀಗ ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಬೇಡಿಕೆ ಮತ್ತಷ್ಟು ಹೆಚ್ಚಿರುವುದರಿಂದ ಗ್ರಾಹಕರು ಹೆಚ್ಚಿನ ಬೆಲೆ ನೀಡಿ ಅಗತ್ಯ ವಸ್ತುಗಳನ್ನು ಖರೀದಿಸುವಂತಾಗಿದೆ.

ಹಬ್ಬದ ಖರೀದಿಯಿಂದ ಪ್ರಮುಖ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್

ಗಣೇಶ ಹಬ್ಬದ ಖರೀದಿಗಾಗಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ನಗರಕ್ಕೆ ಆಗಮಿಸುತ್ತಿರುವುದರಿಂದ ಪ್ರಮುಖ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಉಂಟಾಗಿದೆ. ಗಾಂಧಿ ವೃತ್ತ, ಬಸವಣ್ಣ ವೃತ್ತ ಹಾಗೂ ನಗರೇಶ್ವರ ದೇವಸ್ಥಾನದ ಮುಂಭಾಗ ವಾಹನ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ. ಈ ಪ್ರದೇಶಗಳಲ್ಲಿ ರಸ್ತೆ ಕಿರಿದಾಗಿರುವುದರಿಂದ ಹಬ್ಬದ ಖರೀದಿಗೆ ಆಗಮಿಸುವ ಜನರು ಮತ್ತು ವಾಹನಗಳ ಸಂಖ್ಯೆ ಹೆಚ್ಚಾದಾಗ ಸಂಚಾರ ಅಸ್ತವ್ಯಸ್ತವಾಗುತ್ತಿದೆ.

ಗಣೇಶ ಹಬ್ಬಕ್ಕೆ ಕ್ಷಣಗಣನೆ ಆರಂಭವಾಗಿರುವ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಮಾರುಕಟ್ಟೆ ಪ್ರದೇಶಗಳಲ್ಲಿ ಜನದಟ್ಟಣೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಗಂಗಾವತಿ ನಗರದಲ್ಲಿ ಗಣೇಶ ಹಬ್ಬದ ಸಂಭ್ರಮ ಕಳೆಗಟ್ಟಿದ್ದು, ಒಂದೆಡೆ ವಿವಿಧ ವಿನ್ಯಾಸದ ಗಣೇಶ ಮೂರ್ತಿಗಳು ಜನರನ್ನು ಆಕರ್ಷಿಸುತ್ತಿದ್ದರೆ, ಮತ್ತೊಂದೆಡೆ ಬೆಲೆ ಏರಿಕೆ ಹಾಗೂ ಸಂಚಾರ ದಟ್ಟಣೆ ಸಾರ್ವಜನಿಕರಿಗೆ ಕೊಂಚ ತಲೆನೋವಾಗಿ ಪರಿಣಮಿಸಿದೆ.

ಕಳೆದ ಮೂರು ತಿಂಗಳಿನಿಂದ ಗಣೇಶ ವಿಗ್ರಹಗಳನ್ನು ತಯಾರು ಮಾಡುತ್ತಿದ್ದೇವೆ. ಈಗ ಬಣ್ಣದ ಬೆಲೆ ಹೆಚ್ಚಾಗಿದ್ದರಿಂದ ಮಾಡಿದ ಕೆಲಸಕ್ಕೆ ಕೂಲಿ ಸಿಗದಂತಾಗಿದೆ. ಮನೆಯ ಕುಟಂಬದವರು ಸೇರಿ ಗಣೇಶನ ವಿಗ್ರಹ ತಯಾರಿಸಿದ್ದೇವೆ. ನಾಲ್ಕು ರುಪಾಯಿ ಉಳಿಯುವಗೋಸ್ಕರ ಮತ್ತು ವಂಶ ಪಾರಂಪರಿಕವಾಗಿ ಕೈ ಕಸಬು ಬಿಡಬಾರದೆಂಬ ಕಾರಣಕ್ಕೆ ಗಣೇಶ ವಿಗ್ರಹಗಳನ್ನು ತಯಾರಿಸುವುದಕ್ಕೆ ಕಾರಣವಾಗಿದೆ.
-ಪ್ರಕಾಶ, ಗಂಗಾವತಿ ಚಿತ್ರಗಾರ