ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದಲ್ಲಿ ಪಿಎಸ್‌ಐ ಪೋಸ್ಟಿಂಗ್‌ಗೆ ಸಂಬಂಧಿಸಿದ ಲಂಚದ ವ್ಯವಹಾರದ ಆಡಿಯೋ ವೈರಲ್ ಆದ ಹಿನ್ನೆಲೆಯಲ್ಲಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ತನಿಖೆಗೆ ಆದೇಶಿಸಿದ್ದರು. ತನಿಖೆಯಲ್ಲಿ ಕರ್ತವ್ಯಲೋಪ ಸಾಬೀತಾದ ಕಾರಣ, ಪಿಎಸ್‌ಐಗಳಾದ ಕಿರಣ್ ಪಾಟೀಲ್, ಕೃಷ್ಣ ಹಾಗೂ ವಿನೋದ್ ರೆಡ್ಡಿ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ.

ಉತ್ತರ ಕನ್ನಡ (ಆ.31): ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ಪೊಲೀಸ್ ಠಾಣೆಯ ಪಿಎಸ್‌ಐಗಳ ಪೋಸ್ಟಿಂಗ್ ಹಾಗೂ ಲಂಚದ ವ್ಯವಹಾರಕ್ಕೆ ಸಂಬಂಧಿಸಿದಂತೆ ವೈರಲ್ ಆಗಿದ್ದ ಆಡಿಯೋ ಪ್ರಕರಣವು ದೊಡ್ಡ ಸ್ಫೋಟವನ್ನೇ ಸೃಷ್ಟಿಸಿತ್ತು. ಇದರ ಬೆನ್ನಲ್ಲಿಯೇ ಮೂವರು ಪಿಎಸ್‌ಐಗಳನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.

ಲಂಚದ ಪೋಸ್ಟಿಂಗ್ ಬಗ್ಗೆ ಪೊಲೀಸ್ ಇನ್ಸ್‌ಪೆಕ್ಟರ್‌ಗಳು ಮಾತನಾಡಿದ ಆಡಿಯೋ ಏಷ್ಯಾನೆಟ್ ಸುವರ್ಣ ನ್ಯೂಸ್ ಸೇರಿದಂತೆ ಹಲವು ಮಾಧ್ಯಮಗಳಲ್ಲಿ ಪ್ರಸಾರವಾದ ವರದಿಗಳ ಪರಿಣಾಮವಾಗಿ ಎಚ್ಚೆತ್ತಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಗಂಭೀರ ಆರೋಪ ಎದುರಿಸುತ್ತಿದ್ದ ಮೂರು ಮಂದಿ ಪಿಎಸ್‌ಐಗಳನ್ನು ಅಮಾನತುಗೊಳಿಸಿ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ.

ಆಡಿಯೋದಲ್ಲೇನಿತ್ತು?

ಹಳಿಯಾಳ ಠಾಣೆಯ ಕಾನೂನು ಮತ್ತು ಸುವ್ಯವಸ್ಥೆ (L&O) ಪಿಎಸ್‌ಐ ಕಿರಣ್ ಪಾಟೀಲ್, ಕ್ರೈಂ ಪಿಎಸ್‌ಐ ಕೃಷ್ಣ ಹಾಗೂ ಈ ಹಿಂದೆ ಹಳಿಯಾಳದಲ್ಲಿ ಪಿಎಸ್‌ಐ ಆಗಿ ಕಾರ್ಯನಿರ್ವಹಿಸಿ ವರ್ಗಾವಣೆಗೊಂಡಿದ್ದ ವಿನೋದ್ ರೆಡ್ಡಿ ಎಂಬುವವರು ಮಾತನಾಡಿಕೊಂಡಿದ್ದ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿತ್ತು. ಠಾಣೆಯ ಎಲ್‌ಆಂಡ್‌ಒ ಪಿಎಸ್‌ಐ ಸ್ಥಾನಕ್ಕಾಗಿ ನಡೆದ ಹಣದ ಭಾರಿ ವ್ಯವಹಾರ, ಸ್ಟೇಷನ್ ಹಪ್ತಾ ಹಾಗೂ ಪೊಲೀಸ್ ಇಲಾಖೆಯಲ್ಲಿ ಮೇಲಾಧಿಕಾರಿಗಳಿಗೆ ಮುಟ್ಟಿಸಬೇಕಾದ 'ಮಂತ್ಲಿ' (Monthly) ಮಾಮೂಲಿ ಬಗ್ಗೆ ಈ ಮೂವರು ಪಿಎಸ್‌ಐಗಳು ಮುಕ್ತವಾಗಿ ಚರ್ಚೆ ನಡೆಸಿದ್ದರು. ಈ ಆಡಿಯೋ ಸಂಭಾಷಣೆ ಪೊಲೀಸ್ ಇಲಾಖೆಯಲ್ಲಿ ತೀವ್ರ ಸಂಚಲನ ಮೂಡಿಸಿತ್ತು.

ತನಿಖೆ ನಡೆಸಿ ಕ್ರಮ ಕೈಗೊಂಡ ಎಸ್ಪಿ:

ಪೊಲೀಸ್ ಇಲಾಖೆಯ ಘನತೆಗೆ ಕುತ್ತು ತಂದಿರುವ ಈ ಆಡಿಯೋ ವೈರಲ್ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು (SP), ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೃಷ್ಣಮೂರ್ತಿ ಅವರ ನೇತೃತ್ವದಲ್ಲಿ ಸಮಗ್ರ ತನಿಖೆಗೆ ಆದೇಶಿಸಿದ್ದರು.

ಎಡಿಎಸ್ಪಿ ನೇತೃತ್ವದ ತನಿಖಾ ತಂಡವು ನಡೆಸಿದ ತನಿಖೆಯಲ್ಲಿ ಪಿಎಸ್‌ಐಗಳ ಅಕ್ರಮ ಮತ್ತು ಕರ್ತವ್ಯಲೋಪ ಮೇಲ್ನೋಟಕ್ಕೆ ಸಾಬೀತಾಗಿದೆ. ತನಿಖಾ ವರದಿಯ ಆಧಾರದ ಮೇಲೆ ಎಚ್ಚೆತ್ತ ಉತ್ತರ ಕನ್ನಡ ಜಿಲ್ಲಾ ಎಸ್‌ಪಿ ದೀಪನ್ ಎಂ.ಎನ್. ಅವರು, ಕರ್ತವ್ಯ ಲೋಪ ಹಾಗೂ ಇಲಾಖೆಗೆ ಕಳಂಕ ತಂದ ಹಿನ್ನೆಲೆಯಲ್ಲಿ ಹಳಿಯಾಳ ಪಿಎಸ್‌ಐ ಕಿರಣ್ ಪಾಟೀಲ್, ಕ್ರೈಂ ಪಿಎಸ್‌ಐ ಕೃಷ್ಣ ಹಾಗೂ ವಿನೋದ್ ರೆಡ್ಡಿ ಅವರನ್ನು ಅಮಾನತು (Suspension) ಮಾಡಿ ಆದೇಶ ಹೊರಡಿಸಿದ್ದಾರೆ. ಅಕ್ರಮ ಎಸಗುವ ಪೊಲೀಸ್ ಅಧಿಕಾರಿಗಳಿಗೆ ಈ ಕ್ರಮ ಎಚ್ಚರಿಕೆಯಾಗಲಿದೆ.