ತಮ್ಮದಲ್ಲದ ಪ್ರಕರಣದಲ್ಲಿ ಮೂಗು ತೋರಿಸಿದ ಬೆಂಗಳೂರಿನ ವೈಟ್‌ಫೀಲ್ಡ್ ಪೊಲೀಸರ ವಿರುದ್ಧ ಹೈಕೋರ್ಟ್ ಗರಂ ಆಗಿದೆ. ಅಲ್ಲದೇ ಭಾರೀ ದಂಡವನ್ನು ಪೊಲೀಸರ ಜೇಬಿನಿಂದಲೇ ತೆತ್ತಬೇಕು ಎಂದು ಆದೇಶ ನೀಡಿದೆ. ಅಷ್ಟಕ್ಕೂ ಏನಿದು ಕೇಸ್ ಅನ್ನೋ ವಿವರ ಈ ಸ್ಟೋರಿಯಲ್ಲಿದ್ದೆ.
ಬೆಂಗಳೂರು: ಸಿವಿಲ್ ವ್ಯಾಜ್ಯಗಳಲ್ಲಿ ಅನಗತ್ಯವಾಗಿ ಮಧ್ಯಪ್ರವೇಶಿಸಿ ಕಾನೂನು ಬಾಹಿರವಾಗಿ ವರ್ತಿಸಿದ ಬೆಂಗಳೂರಿನ ವೈಟ್‌ಫೀಲ್ಡ್ ಪೊಲೀಸರ ವಿರುದ್ಧ ಕರ್ನಾಟಕ ಹೈಕೋರ್ಟ್ ಕೆಂಡಾಮಂಡಲವಾಗಿದೆ. ಪೊಲೀಸರ ಈ ನಡೆಯನ್ನು ತೀವ್ರವಾಗಿ ಖಂಡಿಸಿರುವ ಕೋರ್ಟ್ ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳಿಗೆ 3 ಲಕ್ಷ ರೂಪಾಯಿ ದಂಡ ವಿಧಿಸಿದೆ.
ಏನಿದು ಪ್ರಕರಣ?
ಸಿವಿಲ್ ಕೋರ್ಟ್‌ನಲ್ಲಿ ವಿಚಾರಣೆ ಹಂತದಲ್ಲಿದ್ದ ಪ್ರಕರಣವೊಂದರಲ್ಲಿ ವೈಟ್‌ಫೀಲ್ಡ್ ಪೊಲೀಸರು ಅನಗತ್ಯವಾಗಿ ಮಧ್ಯಪ್ರವೇಶಿಸಿದ್ದರು. ವಿವಾದಿತ ದಾನಪತ್ರವೊಂದಕ್ಕೆ (Gift Deed) ಸಾಕ್ಷಿಯಾಗಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದರು. ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ಆ ವ್ಯಕ್ತಿಗೆ ಆಗಸ್ಟ್ 27ಕ್ಕೆ ನೋಟಿಸ್ ನೀಡಿದ್ದರು. ನೋಟಿಸ್‌ನಲ್ಲಿ ನೀಡಿದ ಸಮಯಕ್ಕಿಂತ ಮೊದಲೇ ಅಂದರೆ ಆಗಸ್ಟ್ 25ರಂದೇ ಆತನನ್ನು ಬಂಧಿಸುವ ಮೂಲಕ ಪೊಲೀಸರು ಕಾನೂನು ಉಲ್ಲಂಘಿಸಿದ್ದರು.
ಪೊಲೀಸ್ ರಾಜ್ಯ ಆಗಲು ಬಿಡುವುದಿಲ್ಲ - ಹೈಕೋರ್ಟ್ ಎಚ್ಚರಿಕೆ
ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠವು ಪೊಲೀಸರ ಕಾರ್ಯವೈಖರಿ ಕಂಡು ತೀವ್ರ ಅಸಮಾಧಾನ ವ್ಯಕ್ತಪಡಿಸಿತು. ಇದು ಪ್ರಜಾಪ್ರಭುತ್ವವೇ ಹೊರತು ಪೊಲೀಸ್ ರಾಜ್ಯವಲ್ಲ. ರಾಜ್ಯವನ್ನು ಪೋಲೀಸ್ ರಾಜ್ಯವಾಗಲು ನಾವು ಬಿಡುವುದಿಲ್ಲ ಎಂದು ನ್ಯಾಯಪೀಠವು ಖಡಕ್ ಎಚ್ಚರಿಕೆ ನೀಡಿತು. ವಿಚಾರಣೆಯ ವೇಳೆ ನ್ಯಾಯಾಲಯಕ್ಕೆ ಖುದ್ದು ಹಾಜರಾಗಿದ್ದ ತನಿಖಾಧಿಕಾರಿ ಪಿಎಸ್ಐ ಸುನಿಲ್ ಕುಮಾರ್ ಅವರನ್ನು ನ್ಯಾಯಪೀಠ ತರಾಟೆಗೆ ತೆಗೆದುಕೊಂಡಿತು. ಎಸಿಪಿ ಹಾಗೂ ಡಿಸಿಪಿ ಸೂಚನೆ ನೀಡಿದರೆ ನೀವು ಏನು ಬೇಕಾದರೂ ಮಾಡುತ್ತೀರಾ? ಹಿರಿಯ ಅಧಿಕಾರಿಗಳು ಏನು ಮಾಡುತ್ತಿದ್ದಾರೆ? ಎಂದು ಪ್ರಶ್ನಿಸಿದ ನ್ಯಾಯಮೂರ್ತಿಗಳು, ಎಸಿಪಿ ಮತ್ತು ಡಿಸಿಪಿ ಅವರ ಹೊಣೆಗಾರಿಕೆಯ ಬಗ್ಗೆಯೂ ಕಿಡಿಕಾರಿದರು.
ಸಿವಿಲ್ ಕೇಸ್‌ನಲ್ಲಿ ಅಕ್ರಮವಾಗಿ ಮಧ್ಯಪ್ರವೇಶಿಸಿದ್ದಕ್ಕೆ ಶಿಕ್ಷೆಯಾಗಿ ನ್ಯಾಯಾಲಯವು 3 ಲಕ್ಷ ರೂಪಾಯಿ ದಂಡ ವಿಧಿಸಿದೆ. ವಿಶೇಷವೆಂದರೆ, ಈ ದಂಡದ ಮೊತ್ತವನ್ನು ಸರ್ಕಾರದ ಖಜಾನೆಯಿಂದ ಪಾವತಿಸುವಂತಿಲ್ಲ. ಬದಲಾಗಿ, ತಪ್ಪು ಮಾಡಿದ ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳೇ ತಮ್ಮ ಸ್ವಂತ ಹಣದಿಂದ ಈ ದಂಡವನ್ನು ಪಾವತಿಸಬೇಕು ಎಂದು ಕೋರ್ಟ್ ಕಟ್ಟುನಿಟ್ಟಿನ ಆದೇಶ ನೀಡಿದೆ. ಈ ಪ್ರಕರಣಕ್ಕೆ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಇಲಾಖಾ ತನಿಖೆ ನಡೆಸುವಂತೆ ಸೂಚಿಸಿರುವ ಹೈಕೋರ್ಟ್, ಇನ್ಮುಂದೆ ಸಿವಿಲ್ ಕೇಸ್‌ಗಳಲ್ಲಿ ಪೊಲೀಸರು ಮೂಗು ತೂರಿಸುವುದನ್ನು ಕೂಡಲೇ ನಿಲ್ಲಿಸಬೇಕು ಎಂದು ತಾಕೀತು ಮಾಡಿದೆ.


