ಮೂರು ದಿನಗಳ ಕಾಲ ಇಂಡೋನೇಷ್ಯಾ ಪ್ರವಾಸದಲ್ಲಿದ್ದ ಪ್ರಧಾನಿ ನರೇಂದ್ರ ಮೋದಿ ಆ ದೇಶಕ್ಕೆ 100 ಟನ್‌ ಉತ್ಕೃಷ್ಟ ದರ್ಜೆಯ ‘ಡಿಡಬ್ಲ್ಯುಆರ್‌ 162’ ತಳಿಯ ಗೋದಿ ಬಿತ್ತನೆ ಬೀಜ ಪೂರೈಸುವುದಾಗಿ ಘೋಷಿಸಿದ್ದಾರೆ. ವಿಶೇಷ ಎಂದರೆ, ಈ  ತಳಿಯನ್ನು ಅಭಿವೃದ್ಧಿಪಡಿಸಿದ್ದು ಕರ್ನಾಟಕದ ಧಾರವಾಡದ ಕೃಷಿ ವಿಶ್ವವಿದ್ಯಾಲಯ!

 ಧಾರವಾಡ (ಜು.9): ಮೂರು ದಿನಗಳ ಕಾಲ ಇಂಡೋನೇಷ್ಯಾ ಪ್ರವಾಸದಲ್ಲಿದ್ದ ಪ್ರಧಾನಿ ನರೇಂದ್ರ ಮೋದಿ ಆ ದೇಶಕ್ಕೆ 100 ಟನ್‌ ಉತ್ಕೃಷ್ಟ ದರ್ಜೆಯ ‘ಡಿಡಬ್ಲ್ಯುಆರ್‌ 162’ ತಳಿಯ ಗೋದಿ ಬಿತ್ತನೆ ಬೀಜಗಳನ್ನು ಪೂರೈಸುವುದಾಗಿ ಘೋಷಿಸಿದ್ದಾರೆ. ವಿಶೇಷ ಎಂದರೆ, ಈ ‘ಡಿಡಬ್ಲ್ಯುಆರ್‌ 162’ ತಳಿಯನ್ನು ಅಭಿವೃದ್ಧಿಪಡಿಸಿದ್ದು ಕರ್ನಾಟಕದ ಧಾರವಾಡದ ಕೃಷಿ ವಿಶ್ವವಿದ್ಯಾಲಯ!

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಪ್ರಧಾನಿ ನರೇಂದ್ರ ಮೋದಿ ಅವರು ಇಂಡೋನೇಷ್ಯಾಗೆ ಭೇಟಿ ನೀಡಿದ ಸಂದರ್ಭದಲ್ಲಿ ಪ್ರಾದೇಶಿಕ ಆಹಾರ ಭದ್ರತೆ ಮತ್ತು ಕೃಷಿ ಸಹಕಾರ ಬಲಪಡಿಸುವ ನಿಟ್ಟಿನಲ್ಲಿ ಉಭಯ ದೇಶಗಳ ನಡುವೆ ಗೋಧಿ ಬೀಜ ಪೂರೈಕೆಗೆ ಸಂಬಂಧಿಸಿದಂತೆ ಒಪ್ಪಂದ ಆಗಿದ್ದು, ಇದರ ಭಾಗವಾಗಿ ಧಾರವಾಡದ ಕೃಷಿ ವಿವಿ ಅಭಿವೃದ್ಧಿಪಡಿಸಿದ ಬೀಜಗಳನ್ನು ಪೂರೈಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ಗೋದಿಯನ್ನು ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ವ್ಯಾಪಕವಾಗಿ ಬೆಳೆಯುತ್ತಿದ್ದು, ಈ ಪ್ರದೇಶಗಳಲ್ಲಿ ಗೋದಿ ಬೆಳೆಯುವ ಅವಧಿಯುದ್ದಕ್ಕೂ ಉಷ್ಣಾಂಶ ಹೆಚ್ಚಾಗಿರುತ್ತದೆ. ಬೆಳೆ ಅವಧಿ ಕಡಿಮೆ ಇರಬೇಕು ಹಾಗೂ ಹವಾಮಾನ ಪರಿಸ್ಥಿತಿಗಳಿಗೆ ಹೊಂದಿಕೊಳ್ಳುವ ಗೋದಿ ತಳಿಗಳ ಅಭಿವೃದ್ಧಿಯಾಗಬೇಕು ಎಂಬುದು 1980ರ ದಶಕದಲ್ಲಿ ಪ್ರಮುಖ ಸಂಶೋಧನಾ ಗುರಿಯಾಗಿತ್ತು. ಆಗ ಧಾರವಾಡ ಕೃಷಿ ವಿವಿಯು ಅಂದಿನ ಗೋದಿ ತಳಿ ಶಾಸ್ತ್ರಜ್ಞರು, ಕೃಷಿ ವಿವಿ ವಿಶ್ರಾಂತ ಕುಲಪತಿಗಳೂ ಆದ ಡಾ.ಆರ್.ಆರ್.ಹಂಚಿನಾಳ ನೇತೃತ್ವದಲ್ಲಿ ಗೋದಿ ಸುಧಾರಣಾ ಕಾರ್ಯಕ್ರಮವನ್ನು ಆರಂಭಿಸಿತ್ತು.

ಶಟಲ್ ಬ್ರೀಡಿಂಗ್ ವಿಧಾನ ಬಳಸಿಕೊಂಡು ಅಭಿವೃದ್ಧಿಪಡಿಸಲಾದ ‘ಡಿಡಬ್ಲ್ಯುಆರ್ 162’ ಚಪಾತಿ ಗೋದಿ ತಳಿಯನ್ನು 1993ರಲ್ಲಿ ಭಾರತ ಅಧಿಕೃತವಾಗಿ ಬಿಡುಗಡೆ ಮಾಡಿತ್ತು. ಈ ತಳಿಯು ಎಲೆ ತುಕ್ಕು ಹಾಗೂ ಕಾಂಡ ತುಕ್ಕು ರೋಗಗಳಿಗೆ ಪ್ರತಿರೋಧಕವಾಗಿದ್ದು, ಹೆಚ್ಚಿನ ಇಳುವರಿ ಸಾಮರ್ಥ್ಯ, ಉತ್ತಮ ಧಾನ್ಯದ ಗುಣಮಟ್ಟ ಹಾಗೂ ಬೆಳೆ ಬೆಳವಣಿಗೆಯ ಅವಧಿಯಲ್ಲಿ ಉಷ್ಣ ಒತ್ತಡವನ್ನು ಸಹಿಸಿಕೊಳ್ಳುವ ಸಾಮರ್ಥ್ಯ ಹೊಂದಿದೆ. ಈ ವಿಶೇಷ ಗುಣಲಕ್ಷಣಗಳಿಂದಾಗಿ ಈ ತಳಿಯು ಉಷ್ಣ ಹವಾಮಾನದಲ್ಲಿಯೂ ಬೆಳೆಯುವ ಸಾಮರ್ಥ್ಯ ಹೊಂದಿದೆ. 3 ದಶಕದ ಹಿಂದೆ ಬಿಡುಗಡೆಯಾದರೂ, ‘ಡಿಡಬ್ಲ್ಯುಆರ್ 162’ ಇಂದಿಗೂ ರೈತರ ಅತ್ಯಂತ ಮೆಚ್ಚಿನ ತಳಿಗಳಲ್ಲಿ ಒಂದಾಗಿದೆ.

ಪರೀಕ್ಷೆಯಲ್ಲಿ ಯಶಸ್ವಿ:

ರಾಷ್ಟ್ರೀಯ ಆಹಾರ ಭದ್ರತೆ ಬಲಪಡಿಸುವ ಉದ್ದೇಶದಿಂದ ಇಂಡೋನೇಷ್ಯಾ ಸರ್ಕಾರ ಭಾರತೀಯ ಸಂಶೋಧನಾ ಸಂಸ್ಥೆಗಳು ಹಾಗೂ ಅಂತಾರಾಷ್ಟ್ರೀಯ ಮೆಕ್ಕೆಜೋಳ ಮತ್ತು ಗೋದಿ ಸುಧಾರಣಾ ಕೇಂದ್ರ ಅಭಿವೃದ್ಧಿಪಡಿಸಿದ ವಿವಿಧ ಗೋದಿ ತಳಿಗಳನ್ನು ತನ್ನ ಉಷ್ಣವಲಯದ ಹವಾಮಾನಕ್ಕೆ ಹೊಂದಾಣಿಕೆ ಪರೀಕ್ಷಿಸಲು ಆಮದು ಮಾಡಿಕೊಂಡಿತ್ತು. ಈ ಪರೀಕ್ಷೆಗಳಲ್ಲಿ ಧಾರವಾಡ ಕೃಷಿ ವಿಶ್ವವಿದ್ಯಾಲಯ ಅಭಿವೃದ್ಧಿಪಡಿಸಿದ ಡಿಡಬ್ಲ್ಯುಆರ್ 162 ತಳಿಯು ಇತರ ಎಲ್ಲ ತಳಿಗಳಿಗಿಂತ ಉತ್ತಮ ಇಳುವರಿ ಹಾಗೂ ಗುಣಮಟ್ಟವನ್ನು ಪ್ರದರ್ಶಿಸಿದೆ. ಈ ಅತ್ಯುತ್ತಮ ಫಲಿತಾಂಶ ಗುರುತಿಸಿದ ಇಂಡೋನೇಷ್ಯಾ ಸರ್ಕಾರ 2000ರಲ್ಲಿ ದೊಡ್ಡ ಪ್ರಮಾಣದ ಕ್ಷೇತ್ರ ಪರೀಕ್ಷೆಗಳಿಗಾಗಿ ಈ ತಳಿಯ ಬೀಜಗಳನ್ನು ಆಮದು ಮಾಡಿಕೊಂಡಿತ್ತು. ಜತೆಗೆ, ಈ ತಳಿಯ ಕೃಷಿ ತಂತ್ರಜ್ಞಾನ ಮತ್ತು ನಿರ್ವಹಣೆ ಕುರಿತು ತಾಂತ್ರಿಕ ಮಾರ್ಗದರ್ಶನ ನೀಡಲು ಡಾ.ಆರ್.ಆರ್.ಹಂಚಿನಾಳ ಅವರನ್ನು ಸಲಹೆಗಾರರಾಗಿ ಆಹ್ವಾನಿಸಿತ್ತು.

ಕಾನೂನು ತೊಡಕು ನಿವಾರಣೆ:

ಭಾರತದಲ್ಲಿ ಸಸ್ಯ ತಳಿಗಳು ಮತ್ತು ರೈತರ ಹಕ್ಕುಗಳ ಸಂರಕ್ಷಣಾ ಕಾಯ್ದೆ ಹಾಗೂ ಜೈವಿಕ ವೈವಿಧ್ಯ ಕಾಯ್ದೆ ಜಾರಿಗೆ ಬಂದ ಪರಿಣಾಮ, ಇಂಡೋನೇಷ್ಯಾಗೆ ಉತ್ತಮ ಗುಣಮಟ್ಟದ ಡಿಡಬ್ಲ್ಯುಆರ್ 162 ಬೀಜಗಳನ್ನು ಪೂರೈಸುವಲ್ಲಿ ಕೆಲವು ಅಡೆತಡೆ ಎದುರಾದವು. ಇದರಿಂದ ಇಂಡೋನೇಷ್ಯಾ ಸರ್ಕಾರ ಭಾರತ ಸರ್ಕಾರದೊಂದಿಗೆ ನಿರಂತರವಾಗಿ ಸಮಾಲೋಚನೆ ನಡೆಸಿ, ಕಾನೂನುಬದ್ಧ ಹಾಗೂ ಸಾಂಸ್ಥಿಕ ವ್ಯವಸ್ಥೆಗಳ ಮೂಲಕ ಬೀಜಗಳ ಪೂರೈಕೆಗೆ ಅವಕಾಶ ಕಲ್ಪಿಸಲು ಪ್ರಯತ್ನಿಸಿತ್ತು. ಇದರ ಭಾಗವಾಗಿ ನರೇಂದ್ರ ಮೋದಿ ಅವರು ಇಂಡೋನೇಷ್ಯಾಗೆ ಭೇಟಿ ವೇಳೆ ಒಪ್ಪಂದಕ್ಕೆ ಸಹಿಯಾಗಿದೆ.

ಕೃಷಿ ವಿವಿಗೆ ಹೆಮ್ಮೆ 

ಧಾರವಾಡ ಕೃಷಿ ವಿಶ್ವವಿದ್ಯಾಲಯದಿಂದ ಉತ್ಪಾದಿಸಲಾದ 100 ಟನ್ ಉನ್ನತ ಗುಣಮಟ್ಟದ ಡಿಡಬ್ಲ್ಯುಆರ್ 162 ಗೋದಿ ಬೀಜಗಳನ್ನು ಇಂಡೋನೇಷ್ಯಾಗೆ ಪೂರೈಸಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ. ಈ ಕ್ರಮವು ಇಂಡೋನೇಷ್ಯಾದ ಆಹಾರ ಭದ್ರತಾ ಕಾರ್ಯಕ್ರಮಗಳಿಗೆ ಮಹತ್ವದ ಬೆಂಬಲ ಒದಗಿಸಲಿದೆ. ಭಾರತ ಮತ್ತು ಇಂಡೋನೇಷ್ಯಾ ನಡುವಿನ ದೀರ್ಘಕಾಲೀನ ಕೃಷಿ ಸಹಭಾಗಿತ್ವದಲ್ಲಿ ಮಹತ್ವದ ಮೈಲಿಗಲ್ಲು ಹಾಗೂ ಕೃಷಿ ವಿವಿಗೆ ಹೆಮ್ಮೆಯ ಸಂಗತಿಯು ಹೌದು.

ಡಾ.ಎಂ.ವಿ.ಮಂಜುನಾಥ, ಪ್ರಭಾರಿ ಕುಲಪತಿ, ಧಾರವಾಡ ಕೃಷಿ ವಿವಿ

--