ರೇಣುಕಾಸ್ವಾಮಿ ಪ್ರಕರಣದ ಆರೋಪಿ ಪವಿತ್ರಾ ಗೌಡಗೆ ಮತ್ತೊಂದು ಆಘಾತ ಆಗಿದೆ. ಅವರ ಮಾಜಿ ಪತಿ ಸಂಜಯ್ ಸಿಂಗ್ ಏಳು ತಿಂಗಳ ಹಿಂದೆಯೇ ಅನಾರೋಗ್ಯದಿಂದ ನಿಧನರಾಗಿದ್ದಾರೆ ಎಂಬ ಸುದ್ದಿ ಎಲ್ಲೆಡೆ ವೈರಲ್ ಆಗಿದೆ. ಈ ಕುರಿತ ಮಾಹಿತಿ ಇಲ್ಲಿದೆ.
ಬೆಂಗಳೂರು: ರೇಣುಕಾಸ್ವಾಮಿ ಪ್ರಕರಣದಲ್ಲಿ ಎ-1 ಆರೋಪಿಯಾಗಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ಪವಿತ್ರಾ ಗೌಡಗೆ ಈಗ ಮತ್ತೊಂದು ವೈಯಕ್ತಿಕ ಆಘಾತ ಎದುರಾಗಿದೆ. ಪವಿತ್ರಾ ಗೌಡ ಅವರ ಮಾಜಿ ಪತಿ ಸಂಜಯ್ ಸಿಂಗ್ (Sanjay Singh) ಅನಾರೋಗ್ಯದಿಂದ ಮೃತಪಟ್ಟಿದ್ದಾರೆ ಎಂಬ ಮಾಹಿತಿ ಈಗ ತಡವಾಗಿ ಬೆಳಕಿಗೆ ಬಂದಿದೆ.
7 ತಿಂಗಳ ಹಿಂದೆಯೇ ಸಂಭವಿಸಿದ ಸಾವು
ಪವಿತ್ರಾ ಗೌಡ ಅವರ ಮಾಜಿ ಪತಿ ಸಂಜಯ್ ಸಿಂಗ್ ಸುಮಾರು 7-8 ತಿಂಗಳ ಹಿಂದೆಯೇ ನಿಧನರಾಗಿದ್ದಾರೆ ಎನ್ನಲಾಗಿದೆ. ಈ ವಿಷಯ ಇಷ್ಟು ದಿನ ಗುಟ್ಟಾಗಿಯೇ ಇತ್ತು, ಆದರೆ ಈಗ ಮಾಧ್ಯಮಗಳ ಮೂಲಕ ಬಹಿರಂಗವಾಗಿದೆ. ಕಳೆದ ಹಲವು ವರ್ಷಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ರಾಜಸ್ಥಾನದಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ ಎಂದು ವರದಿಯಾಗಿದೆ.
ಸಂಜಯ್ ಸಿಂಗ್ ಮತ್ತು ಪವಿತ್ರಾ ಗೌಡ 2007-08ರ ಸುಮಾರಿಗೆ ಪ್ರೀತಿಸಿ ಮದುವೆಯಾಗಿದ್ದರು. ಇವರಿಗೆ ಒಬ್ಬ ಮಗಳಿದ್ದಾಳೆ. ಆದರೆ 2011ರಲ್ಲಿ ಈ ದಂಪತಿ ವಿಚ್ಛೇದನ ಪಡೆದು ದೂರಾಗಿದ್ದರು. ವರದಿಗಳ ಪ್ರಕಾರ ಪವಿತ್ರಾ ಗೌಡ ಅವರಿಂದ ವಿಚ್ಛೇದನ ಪಡೆದ ನಂತರ ಸಂಜಯ್ ಸಿಂಗ್ ತೀವ್ರ ಮಾನಸಿಕವಾಗಿ ಕುಗ್ಗಿ ಹೋಗಿದ್ದರು ಎನ್ನಲಾಗಿದೆ. ವಿಚ್ಛೇದನದ ಬಳಿಕ ಅವರು ಅತಿಯಾದ ಕುಡಿತಕ್ಕೆ ದಾಸರಾಗಿದ್ದರು ಮತ್ತು ಇದೇ ಅವರ ಅಕಾಲಿಕ ಮರಣಕ್ಕೆ ಕಾರಣವಾಯಿತು ಎಂದು ಹೇಳಲಾಗುತ್ತಿದೆ.
ಪವಿತ್ರಾ ಪರವಾಗಿ ಮಾತನಾಡಿದ್ದ ಮಾಜಿ ಪತಿ
ಕಳೆದ ಜೂನ್ ತಿಂಗಳಲ್ಲಿ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪವಿತ್ರಾ ಗೌಡ ಅವರನ್ನು ಪೊಲೀಸರು ಬಂಧಿಸಿದಾಗ ಸಂಜಯ್ ಸಿಂಗ್ ಅವರು ಬೆಂಗಳೂರಿಗೆ ಬಂದಿದ್ದರು. ಈ ವೇಳೆ ಖಾಸಗಿ ಸುದ್ದಿ ವಾಹಿನಿ ಜೊತೆ ಮಾತನಾಡಿದ್ದ ಅವರು, ಪವಿತ್ರಾ ಗೌಡ ಬಗ್ಗೆ ಸಹಾನುಭೂತಿ ವ್ಯಕ್ತಪಡಿಸಿದ್ದರು. ವಿಚ್ಛೇದನದ ನಂತರವೂ ಪವಿತ್ರಾ ಗೌಡ ಅವರ ಬಗ್ಗೆ ಅವರು ಗೌರವ ಇಟ್ಟುಕೊಂಡಿದ್ದರು. ಆದರೆ ಬೆಂಗಳೂರಿನಿಂದ ತೆರಳಿದ ಕೆಲವೇ ದಿನಗಳಲ್ಲಿ ಅವರ ಆರೋಗ್ಯ ಹದಗೆಟ್ಟು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಪ್ರಸ್ತುತ ಪವಿತ್ರಾ ಗೌಡ ಅವರು ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಜೈಲು ಪಾಲಾಗಿದ್ದು, ನ್ಯಾಯಾಂಗ ಬಂಧನದಲ್ಲಿದ್ದಾರೆ. ವಿಚ್ಛೇದನದ ನಂತರ ಮಾಜಿ ಪತಿಯ ಜೊತೆ ಸಂಪೂರ್ಣ ಸಂಪರ್ಕ ಕಡಿದುಕೊಂಡಿದ್ದರೂ, ಈಗ ಅವರ ಸಾವಿನ ಸುದ್ಧಿ ಕೇಳಿಬಂದಿರುವುದು ಪವಿತ್ರಾ ಗೌಡಗೆ ಮತ್ತೊಂದು ಸಂಕಷ್ಟ ತಂದೊಡ್ಡಿದಂತಾಗಿದೆ. ಸಂಜಯ್ ಸಿಂಗ್ ಅವರು ಬೆಂಗಳೂರಿನಿಂದ ರಾಜಸ್ಥಾನಕ್ಕೆ ಶಿಫ್ಟ್ ಆಗಿದ್ದರು. ಅಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದರೂ ಸಹ ಫಲಕಾರಿಯಾಗದೆ ನಿಧನರಾಗಿದ್ದಾರೆ ಎಂಬ ಸುದ್ದಿ ಈಗ ಪವಿತ್ರಾ ಗೌಡ ಅಭಿಮಾನಿಗಳು ಹಾಗೂ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿದೆ.


